ದೇಶದಲ್ಲಿ ಉಕ್ಕೇರುತ್ತಿರುವ ಮಹಾಸೋಂಕು ಉಂಟು ಮಾಡುತ್ತಿರುವ ವಿನಾಶದ ಬಗ್ಗೆ ಸಿಪಿಐ(ಎಂ) ಪೊಲಿಟ್ ಬ್ಯುರೋ ಗಂಭೀರ ಆತಂಕವನ್ನು ವ್ಯಕ್ತಪಡಿಸಿದೆ.
ಇಂತಹ ಗಂಭೀರ ಆರೋಗ್ಯ ತುರ್ತು ಸನ್ನಿವೇಶದಲ್ಲಿ ಕೇಂದ್ರ ಸರ್ಕಾರ ಕನಿಷ್ಠ ಈ ಕೆಲಸಗಳನ್ನು ಮಾಡಬೇಕಾಗಿದೆ:
ತಕ್ಷಣವೇ ಸಾರ್ವಜನಿಕ ವಲಯದ ಔಷಧಿ ತಯಾರಕಾ ಸೌಕರ್ಯಗಳನ್ನೆಲ್ಲವನ್ನೂ ಲಸಿಕೆ ಉತ್ಪಾದನೆಗೆ ಕಲೆ ಹಾಕಬೇಕು. ತಮಿಳುನಾಡಿನಲ್ಲಿ ಸಾರ್ವಜನಿಕ ವಲಯದಲ್ಲಿರುವ ಸೌಕರ್ಯಗಳಲ್ಲಿ ಒಂದಾದ ‘ಸಮಗ್ರ ಲಸಿಕೆ ಸಂಕೀರ್ಣ'(ಇಂಟಿಗ್ರೇಟೆಡ್ ವ್ಯಾಕ್ಸೀನ್ ಕಾಂಪ್ಲೆಕ್ಸ್-ಐವಿಸಿ) ವನ್ನು ೬೦೦ ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿದ್ದರೂ, ಅದಿನ್ನೂ ಬಳಕೆಯಾಗದೆ ಬಿದ್ದಿದೆ ಎಂದು ವರದಿಯಾಗಿದೆ. ಲಸಿಕೆಗಳ ಬೇಡಿಕೆ ಮತ್ತು ಪೂರೈಕೆಯಲ್ಲಿನ ಅಂತರವನ್ನು ತುಂಬಲು ಇಂತಹ ಎಲ್ಲ ಸೌಲಭ್ಯಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಬೇಕಾಗಿದೆ.
ಸಾಕಾರ ಲಸಿಕೆ ತಯಾರಿಕೆಗೆ ಬಜೆಟಿನಲ್ಲಿ ನಮೂದಿಸಿರುವ ಹಣ ೩೫,೦೦೦ ಕೋಟಿ ರೂ. ಗಳನ್ನು ತಕ್ಷಣವೇ ವೆಚ್ಚ ಮಾಡುವುದು ಅಗತ್ಯವಾಗಿದೆ.
ಕೋವಿಡ್-೧೯ ಚಿಕಿತ್ಸೆಯಲ್ಲಿ ಬಳಸುವ ಲಸಿಕೆಗಳು ಮತ್ತು ಔಷಧಿಗಳ ಲಭ್ಯತೆ ಮತ್ತು ಹಂಚಿಕೆಯ ಬಗ್ಗೆ ಸಾರ್ವಜನಿಕರಲ್ಲಿ ವಿವಿಧ ಸಂದೇಹಗಳು ಮತ್ತು ಆತಂಕಗಳು ಎದ್ದಿರುವುದರಿಂದ ಅವುಗಳ ಲಭ್ಯತೆ ಮತ್ತು ಹಂಚಿಕೆಯನ್ನು ಪಾರದರ್ಶಕವಾಗಿ ಮಾಡಬೇಕು ಎಂದು ಸಿಪಿಐ(ಎಂ) ಹೇಳಿದೆ.
ಅಗತ್ಯ ಔಷಧಿಗಳ ಕಳ್ಳ ದಾಸ್ತಾನು ಮತ್ತು ಕಾಳಸಂತೆಯ ವಿರುದ್ಧ ಕಟ್ಟುನಿಟ್ಟಾದ ಕ್ರಮಗಳನ್ನು ಜಾರಿ ಮಾಡಬೇಕು.
ಭಾರತದಲ್ಲಿ ಲಸಿಕೆ ಉತ್ಪಾದನೆಗೆ ಬೇಕಾಗುವ ಕಚ್ಚಾ ಸಾಮಗ್ರಿಗಳ ಪೂರೈಕೆಯನ್ನು ಖಾತ್ರಿ ಪಡಿಸುತ್ತೇನೆಂಬ ತನ್ನ ವಚನವನ್ನುಅಮೇರಿಕ ಆಡಳಿತ ಪಾಲಿಸಬೇಕೆಂದು ಅದರ ಮೇಲೆ ಕೇಂದ್ರ ಸರಕಾರ ಒತ್ತಡ ಹಾಕಬೇಕು. ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೋ ಆಗ್ರಹಿಸಿದೆ.
ಆರೋಗ್ಯ ತುರ್ತು ಸನ್ನಿವೇಶವನ್ನು ಅದಕ್ಕೆ ತಕ್ಕುದಾದ ಗಂಭೀರತೆಯೊಂದಿಗೆ ನೋಡಬೇಕು ಎಂದು ಮನವಿ ಮಾಡಿಕೊಂಡಿರುವ ಸಿಪಿಐ(ಎಂ), ಎಲ್ಲ ಸಾಮೂಹಿಕ ಜಮಾವಣೆಗಳನ್ನು ಮತ್ತು ದೊಡ್ಡ ಪ್ರಮಾಣದಲ್ಲಿ ಸೋಂಕು ಹರಡಿಸುವ ಸಮಾರಂಭಗಳನ್ನು ನಿಷೇಧಿಸಬೇಕು ಎಂದು ಹೇಳಿದೆ.
ಜನಗಳನ್ನು ದೂಷಿಸುವ, ಮತ್ತು ದೂಷಣೆಗಳನ್ನು ರಾಜ್ಯ ಸರ್ಕಾರಗಳ ಹೆಗಲಿಗೆ ದಾಟಿಸುವ ಅಲ್ಪತನದ ರಾಜಕೀಯವನ್ನು ಕೇಂದ್ರ ಸರಕಾರ ನಿಲ್ಲಿಸಬೇಕು. ಮಹಾ ಸೋಂಕನ್ನು ಮೀರಿ ನಿಲ್ಲಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಒಟ್ಟಿಗೆ ಕೆಲಸ ಮಾಡಬೇಕಾದ್ದು ಬಹಳ ಮುಖ್ಯ ಎಂದಿರುವ ಸಿಪಿಐ(ಎಂ) ಪೊಲಿಟ್ ಬ್ಯುರೋ, ಹೇಳತೀರದ ದುರಂತಗಳನ್ನು ಹೇರುತ್ತಿರುವ ಈ ಸವಾಲನ್ನು ಎದುರಿಸಲು ದೇಶ ಒಟ್ಟಾಗಿ ಎದ್ದು ನಿಲ್ಲಬೇಕಾಗಿದೆ ಎಂದು ಹೇಳಿದೆ.