ಇನ್ಸ್‌ಪೆಕ್ಟರ್‌ ನಂದೀಶ್ ಸಾವು; `ಇನ್‌ಸ್ಪೆಕ್ಟರ್‌ ಹುದ್ದೆಗೆ 70- 80 ಲಕ್ಷ ಕೊಟ್ಟರೆ ಇನ್ನೇನಾಗುತ್ತೆ?’ ಸಚಿವ ಎಂಟಿಬಿ ಮಾತು ವೈರಲ್‌

ಬೆಂಗಳೂರು: ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಸೇವೆಯಿಂದ ಅಮಾನತುಗೊಂಡಿದ್ದ ಕೃಷ್ಣರಾಜಪುರ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್ ಎಚ್‌.ಎಲ್‌.ನಂದೀಶ್ ಹೃದಯಘಾತದಿಂದ ನಿಧನರಾಗಿದ್ದಾರೆ. ಅವರು, ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದ್ದು, ಇದೀಗ ನಂದೀಶ್ ಸಾವು ರಾಜಕೀಯ ಸ್ವರೂಪ ಪಡೆದುಕೊಂಡಿದೆ.

ಲಕ್ಷಾಂತರ ಹಣ ನೀಡಿ ಎರಡು ತಿಂಗಳ ಹಿಂದೆ ಕೃಷ್ಣರಾಜಪುರ ಠಾಣೆಗೆ ವರ್ಗವಾಗಿದ್ದ ಇನ್ಸ್‌ಪೆಕ್ಟರ್‌ ಎಚ್‌.ಎಲ್‌.ನಂದೀಶ್‌ ದಿಢೀರ್‌ ಅಮಾನತುಗೊಂಡು ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಅಮಾನತು ವಾಪಸ್ಸು ಪಡೆಯಬೇಕೆಂದು ದುಂಬಾಲು ಬಿದ್ದಿದ್ದರು. ಆದರೂ, ಪ್ರಯೋಜನವಾಗಿಲ್ಲ. ಇದೀಗ ಸಚಿವ ಎಂಬಿಟಿ ನಾಗರಾಜ್‌ ಪೋಸ್ಟಿಂಗ್‍ಗೆ 60-70 ಲಕ್ಷ ರೂ. ಕೊಟ್ಟು ಬಂದ್ರೆ ಹೃದಯಾಘಾತ ಆಗದೆ ಇನ್ನೇನಾಗುತ್ತೆ ಎಂದು ಹೇಳಿರುವುದು ಭಾರೀ ಚರ್ಚೆ ಕಾರಣವಾಗಿದೆ.

ಕೃಷ್ಣರಾಜಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿರುವ ಟಾನಿಕ್ ಬಾರ್ ರಾತ್ರಿ 2 ಗಂಟೆಯವರೆಗೂ ತೆರೆದಿತ್ತು. ಬೆಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ರಾತ್ರಿ ಒಂದು ಗಂಟೆಯವರೆಗೂ ಬಾರ್ ತೆರೆಯಲು ಅವಕಾಶವಿದೆ. ಆದರೆ ಈ ಬಾರ್ ಮಾತ್ರ ರಾತ್ರಿ ಎರಡು ಗಂಟೆಯವರೆಗೂ ಕಾರ್ಯನಿರ್ವಹಿಸುತ್ತಿತ್ತು. ಇನ್ಸ್ಪೆಕ್ಟರ್ ನಂದೀಶ್ ಅವರ ಗಮನಕ್ಕೆ ಬಂದಿದ್ದರೂ ಕೂಡ ಯಾವುದೇ ಕ್ರಮಕೈಗೊಂಡಿರಲಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಸಿಸಿಬಿ ಅಧಿಕಾರಿಗಳು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರಿಗೆ ವರದಿ ನೀಡಿದ್ದರು. ವರದಿ ಪರಿಶೀಲಿಸಿದ ಆಯುಕ್ತರು ಇನ್ಸ್‌ಪೆಕ್ಟರ್ ನಂದೀಶ್ ಅವರನ್ನು ಅಮಾನತ್ತುಗೊಳಿಸಿ ಆದೇಶ ಹೊರಡಿಸಿದ್ದರು.

ಇನ್ಸ್‌ಪೆಕ್ಟರ್‌ ಎಚ್‌.ಎಲ್‌.ನಂದೀಶ್ ಹೃದಯಾಘಾತದಿಂದ ಸಾವನ್ನಪ್ಪಿರುವುದು ಭ್ರಷ್ಟಾಚಾರದಿಂದಾಗಿ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದೀಗ ಇನ್ಸ್‌ಪೆಕ್ಟರ್‌ ಹುದ್ದೆ ಪಡೆದುಕೊಳ್ಳಲು ಅಥವಾ ನಿಗದಿತ ಸ್ಥಳಕ್ಕೆ ವರ್ಗಾವಾಗಲು ಲಕ್ಷಾಂತರ ಹಣ ಲಂಚ  ನೀಡಬೇಕಾಗುತ್ತದೆ ಎಂಬ ವಿಚಾರ ಮತ್ತೆ ಬಹಿರಂಗಗೊಂಡಿದೆ.

ಇನ್ಸ್‌ಪೆಕ್ಟರ್‌ ಎಚ್‌.ಎಲ್‌.ನಂದೀಶ್‌ ಅವರನ್ನು ಅವಧಿ ಮೀರಿ ಪಬ್ ಓಪನ್ ಮಾಡಲು ಅವಕಾಶ ಕೊಟ್ಟಿದ್ದಾರೆ ಅಂತಾ ಅಮಾನತು ಶಿಕ್ಷೆ ವಿಧಿಸಲಾಗಿತ್ತು. ಕೇವಲ ಎರಡು ತಿಂಗಳ ಹಿಂದಷ್ಟೆ ಕೆಆರ್‌ಪುರ ಇನ್ಸ್‌ಪೆಕ್ಟರ್‌ ಆಗಿ ವರ್ಗಾವಣೆಯಾಗಿದ್ದರು.

ಎಚ್‌.ಎಲ್‌.ನಂದೀಶ್‌ ಅವರ ಪಾರ್ಥಿವ ಶರೀರದ ದರ್ಶನಕ್ಕೆ ಬಂದಿದ್ದ ಸಚಿವ ಎಂಟಿಬಿ ನಾಗರಾಜ್ ಹೇಳಿದ ಮಾತುಗಳು ಸಾಕಷ್ಟು ವೈರಲ್‌ ಆಗಿದೆ. ಈ ಬಗ್ಗೆ ಜೆಡಿಎಸ್ ನಾಯಕ ಹೆಚ್‍.ಡಿ ಕುಮಾರಸ್ವಾಮಿ ಟ್ವೀಟ್ ಮೂಲಕ ಸರ್ಕಾರದ ಮೇಲೆ ಮುಗಿಬಿದ್ದಿದ್ದಾರೆ.

ಪೋಸ್ಟಿಂಗ್‌ ದಂಧೆಗೆ ಹಿಡಿದ ಕನ್ನಡಿ

ಎಚ್.ಡಿ ಕುಮಾರಸ್ವಾಮಿ ಟ್ವೀಟ್‌ ಮಾಡಿದ್ದು, ‘ಈಗ ಸರ್ಕಾರವೇ ಸತ್ಯ ಹೇಳಿದೆ! ಸದ್ಯ, ಸಾವಿನಲ್ಲೂ ಸತ್ಯ ಹೇಳುವ ಧೈರ್ಯವನ್ನು ಸರ್ಕಾರ ಮಾಡಿದೆ. ಬಸವರಾಜ ಬೊಮ್ಮಾಯಿ ಸಂಪುಟದ ಸಚಿವರೇ ವಿಷಯ ಬಹಿರಂಗಪಡಿಸಿದ್ದಾರೆ. ಸಚಿವ ಎಂ.ಟಿ.ಬಿ. ನಾಗರಾಜ್ ಅವರ ಹೇಳಿಕೆಯು ಈ ಸರ್ಕಾರದ ಕಾಸಿಗಾಗಿ ಪೋಸ್ಟಿಂಗ್ ದಂಧೆಗೆ ಹಿಡಿದ ಕನ್ನಡಿ’ ಎಂದು ತಿಳಿಸಿದ್ದಾರೆ.

ಸಚಿವರೇ ಹೇಳಿದಂತೆ 70-80 ಲಕ್ಷಗಳನ್ನು ನಂದೀಶ್ ಅವರು ಯಾರಿಗೆ ಕೊಟ್ಟರು? ಇದರಲ್ಲಿ ಅವರ ಮೇಲಿನ ಉನ್ನತ ಅಧಿಕಾರಿಗಳು, ಗೃಹ ಸಚಿವರು ಮತ್ತು ಮುಖ್ಯಮಂತ್ರಿಗೆ ಪರ್ಸಂಟೇಜ್ ಹೋಗಿದೆಯಾ? ಅಥವಾ ಕಾಣದ ರಿಮೋಟ್ ಯಾವುದಾದರೂ ಇದೆಯಾ? ಸಚಿವರಂತೆ ನೀವೂ ಸತ್ಯ ಹೇಳಿ ಸಿ.ಎಂ. ಸಾಹೇಬರೇ’ ಎಂದು ಟ್ವೀಟ್‌ ಮಾಡಿದ್ದಾರೆ.‌

‘ಸಂಘ ಸಂಸ್ಕಾರದ ಗೃಹ ಸಚಿವರು ಉತ್ತರ ನೀಡಲೇಬೇಕು. ಧಮ್ಮಿದ್ರೆ, ತಾಕತ್ತಿದ್ರೆ ಎನ್ನುವ ಮುಖ್ಯಮಂತ್ರಿ ಅವರು ಈ ಬಗ್ಗೆ ಮೌನ ಮುರಿಯುವ ತಾಕತ್ತು ತೋರಬೇಕು’ ಎಂದು ಹೇಳಿದ್ದಾರೆ.

ಬಿಜೆಪಿ ಸರ್ಕಾರವು ಕರ್ನಾಟಕ ಪೊಲೀಸ್ ವ್ಯವಸ್ಥೆಯ ನೈತಿಕಸ್ಥೈರ್ಯ ಕುಗ್ಗಿಸಿದೆ. ಬಿಜೆಪಿ ಹೈಕಮಾಂಡ್ ಏಜೆಂಟ್‍ರಂತೆ ವರ್ತಿಸುತ್ತಿರುವ ಉತ್ತರ ಭಾರತದ ಕೆಲ ಹಿರಿಯ ಹಿಂದಿ ಪೊಲೀಸ್ ಅಧಿಕಾರಿಗಳು, ಕನ್ನಡ ಅಧಿಕಾರಿಗಳನ್ನು ಗುಲಾಮರಂತೆ ನೋಡುತ್ತಿದ್ದಾರೆ. ನಮ್ಮ ಕಿರಿಯ ಮಟ್ಟದ ಅಧಿಕಾರಿಗಳು ಅವರಿಗೆ ಊಳಿಗ ಮಾಡುವಂತಹ ಸ್ಥಿತಿ ಇದೆ. ಅಲ್ಲದೆ, ಸಾವಿನ ಮನೆಗೆ ಸಾಂತ್ವನ ಹೇಳಲು ಹೋದ ಸಚಿವರೇ ಸತ್ತ ಜೀವದ ಬಗ್ಗೆ ಎಗ್ಗಿಲ್ಲದೇ ನಿರ್ಲಜ್ಜವಾಗಿ ಮಾತನಾಡಿದ್ದು ಸರಿಯೋ ತಪ್ಪೋ, ಆ ತರ್ಕ ಬೇಡ. ಆದರೆ, ರಾಜ್ಯದ ಜನತೆಗೆ ಸತ್ಯ ಗೊತ್ತಾಗಬೇಕಿದೆ. ಸಂಘ ಸಂಸ್ಕಾರದ ಸರ್ಕಾರಕ್ಕೆ ಸತ್ಯ ಹೇಳದೇ ದಾರಿ ಇಲ್ಲ ಎಂದು ಸರಣಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *