ಬೆಂಗಳೂರು: ಉಪ ಚುನಾವಣೆಗಳ ಬೆನ್ನಲ್ಲೇ ಶುರುವಾಗಿರುವ ಮಾಜಿ ಮುಖ್ಯಮಂತ್ರಿಗಳ ನಡುವಿನ ವಾಕ್ಸಮರ ಮುಂದುವರಿದಿದೆ. ಸಿಂದಗಿ ಮತ್ತು ಹಾನಗಲ್ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ವಿಚಾರವಾಗಿ ಜೆಡಿಎಸ್ ವಿರುದ್ಧ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮಾಡಿರುವ ಆರೋಪಗಳಿಗೆ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಅಲ್ಪಸಂಖ್ಯಾತರನ್ನು ಪೇಟೆಂಟ್ ತೆಗೆದುಕೊಂಡವರಂತೆ ಬಿಂಬಿಸಿಕೊಳ್ಳುವ ಸಿದ್ದರಾಮಯ್ಯ, ತಮ್ಮದೇ ಪಕ್ಷದಲ್ಲಿ ಮುಸ್ಲಿಂ ನಾಯಕರನ್ನು ಮುಳುಗಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಚಕ್ರ ತಿರುಗುತ್ತಿದೆ, ನಿಮ್ಮ ಅಂತ್ಯಕಾಲವೂ ಆರಂಭವಾಗಿದೆ. ಅಲ್ಪಸಂಖ್ಯಾತ ಬಾಂಧವರಿಗೆ ನಿಮ್ಮ ನಿಜಬಣ್ಣ ಗೊತ್ತಾಗಿದೆ ಸಿದ್ದಹಸ್ತರೇ. ನಿಮಗೆ ಪಾಠ ಕಲಿಸುವ ಜನತಾಪರ್ವ ಈಗಷ್ಟೇ ಆರಂಭವಾಗಿದೆ. ಕಾದು ನೋಡಿ ಎಂದು ‘ಕಾಂಗ್ರೆಸ್ ಅಲ್ಪಸಂಖ್ಯಾತ ನಾಯಕರ ಟರ್ಮಿನೇಟರ್ ಸಿದ್ದಹಸ್ತ ಸಿದ್ದಸೂತ್ರಧಾರ’ ಎಂಬ ಹ್ಯಾಶ್‌ಟ್ಯಾಗ್ ಬಳಸಿ, ಸರಣಿ ಟ್ವೀಟ್ ಮೂಲಕ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಅಲ್ಪಸಂಖ್ಯಾತರ ಕಲ್ಯಾಣದ ಪೇಟೆಂಟ್ ತೆಗೆದುಕೊಂಡಂತೆ ಪೋಸು ಕೊಡುವ ‘ಸಿದ್ದಹಸ್ತ’ ಶೂರನ ನಿಜಬಣ್ಣ ಬಯಲು ಮಾಡುವ ಸಂದರ್ಭ ಬಂದಿದೆ. ಸ್ವಾರ್ಥ, ಸ್ವಜನ ಪಕ್ಷಪಾತ, ತಮ್ಮ ಬೆಂಬಲಿಗರ ರಾಜಕೀಯ ಅಭಿವೃದ್ಧಿಗಾಗಿ ಪಕ್ಷಕ್ಕಾಗಿ ಅಹರ್ನಿಷಿ ದುಡಿದ ಅಲ್ಪಸಂಖ್ಯಾತ ನಾಯಕರನ್ನು ಗುರಿ ಇಟ್ಟು ಮುಗಿಸಲಾಗುತ್ತಿದೆ! ಎಂದು ಎಚ್ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಅಲ್ಪಸಂಖ್ಯಾತರ ಕಲ್ಯಾಣದ ಪೇಟೆಂಟ್ ತೆಗೆದುಕೊಂಡಂತೆ ಪೋಸು ಕೊಡುವ ʼಸಿದ್ದಹಸ್ತʼ ಶೂರನ ನಿಜಬಣ್ಣ ಬಯಲು ಮಾಡುವ ಸಂದರ್ಭ ಬಂದಿದೆ. ಸ್ವಾರ್ಥ, ಸ್ವಜನ ಪಕ್ಷಪಾತ, ತಮ್ಮ ಬೆಂಬಲಿಗರ ರಾಜಕೀಯ ಅಭಿವೃದ್ಧಿಗಾಗಿ ಪಕ್ಷಕ್ಕಾಗಿ ಅಹರ್ನಿಷಿ ದುಡಿದ #ಅಲ್ಪಸಂಖ್ಯಾತ ನಾಯಕರನ್ನು ಗುರಿ ಇಟ್ಟು ಮುಗಿಸಲಾಗುತ್ತಿದೆ! 1/12
— H D Kumaraswamy (@hd_kumaraswamy) October 16, 2021
ತನ್ನೆಲ್ಲ ಸಿದ್ದಕಲೆ, ಸಿದ್ದಸೂತ್ರಗಳೆನ್ನೆಲ್ಲ ಪೋಣಿಸಿ ‘ಅಹಿಂದ’ ಎಂದು ಜನರನ್ನು ‘ಅಡ್ಡದಾರಿ’ ಹಿಡಿಸಿದ ‘ಸಿದ್ದಹಸ್ತ ಶೂರರು’ ತಮ್ಮ ಸ್ವಪಕ್ಷದಲ್ಲೇ ಮುಸ್ಲಿಂ ನಾಯಕರನ್ನು ಒಬ್ಬೊಬ್ಬರನ್ನಾಗಿಯೇ ಟಾರ್ಗೆಟ್ ಮಾಡುತ್ತಾ ‘ಅಲ್ಪಸಂಖ್ಯಾತರ ಅಂತ್ಯ ರಾಜಕಾರಣ’ದ ಟರ್ಮಿನೇಟರ್ ಆಗಿ ಹೊರಹೊಮ್ಮಿದ್ದಾರೆ. ನಂಬಿ ಅಧಿಕಾರ ಕೊಟ್ಟ ಪಕ್ಷದ ಕತ್ತನ್ನೇ ಕುಯ್ಯುವ, ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುವ ‘ಸಿದ್ದಹಸ್ತ ಸೂತ್ರಧಾರಿ’ಯ ಒಳ ರಾಜಕೀಯಕ್ಕೆ ಬಲಿಯಾಗುತ್ತಿರುವ ಅಲ್ಪಸಂಖ್ಯಾತ ನಾಯಕರ ದೊಡ್ಡ ಪಟ್ಟಿಯೇ ಇದೆ. ಕಾಂಗ್ರೆಸ್‌ನಲ್ಲಿ ನಡೆದಿರುವ ಅಲ್ಪಸಂಖ್ಯಾತ ನಾಯಕರ ‘ರಾಜಕೀಯ ನರಮೇಧ’ಕ್ಕೆ ಯಾರು ಕಾರಣ ಎಂದು ಜನರಿಗೆ ಗೊತ್ತಾಗಲಿ ಎಂದು ಎಚ್‌ಡಿಕೆ ಹೇಳಿದ್ದಾರೆ.