ಬೆಂಗಳೂರು: ಲೋಕಾಯುಕ್ತ ಪೊಲೀಸರಿಗೆ ಭಾರೀ ಹಿನ್ನಡೆಯಾಗಿದ್ದು, ಬಿಜೆಪಿಯ ಮಾಜಿ ಶಾಸಕ ಮತ್ತು ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ (ಕೆಎಸ್‌ಡಿಎಲ್) ಮಾಜಿ ಅಧ್ಯಕ್ಷ ಕೆ. ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧ ದಾಖಲಾಗಿದ್ದ ಭ್ರಷ್ಟಾಚಾರ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ಬುಧವಾರ ರದ್ದುಗೊಳಿಸಿದೆ. ಅವರ ವಿರುದ್ಧದ ಪ್ರಕರಣವನ್ನು ಮುಂದುವರಿಸಲು ಅವರು ಲಂಚದ ಬೇಡಿಕೆ ಇಟ್ಟಿದ್ದಾಗಲಿ ಅಥವಾ ಸ್ವೀಕರಿಸಿದ ಪ್ರಾಥಮಿಕ ಅಂಶವೂ ಇಲ್ಲ ಎಂದು ನ್ಯಾಯಾಲಯ ಹೇಳಿದೆ.
“ಅರ್ಜಿದಾರು ಲಂಚಕ್ಕೆ ಬೇಡಿಕೆ ಇಟ್ಟಿರುವುದಾಗಲಿ ಅಥವಾ ಲಂಚ ಸ್ವೀಕಾರಿಸಿರುವ ಬಗ್ಗೆ ಯಾವುದೆ ಅಂಶವಿಲ್ಲ. ಹೀಗಿದ್ದರೂ ಅವರ ವಿರುದ್ಧ ವಿಚಾರಣೆ ಮುಂದುವರಿಸಲು ಹೇಗೆ ಅನುಮತಿ ನೀಡಲು ಸಾಧ್ಯ ಎಂಬುದು ಅರ್ಥವಾಗುತ್ತಿಲ್ಲ. ಕ್ರಿಮಿನಲ್ ಮೊಕದ್ದಮೆಗಳನ್ನು ಮುಂದುವರಿಸಲು ಅನುಮತಿ ನೀಡಿದರೆ ಕಾನೂನಿನ ಪ್ರಕ್ರಿಯೆಯ ದುರುಪಯೋಗವಾಗುತ್ತದೆ ಮತ್ತು ನ್ಯಾಯದ ತಪ್ಪಿಗೆ ಕಾರಣವಾಗುತ್ತದೆ” ಎಂದು ನ್ಯಾಯಾಲಯ ಹೇಳಿದೆ. ಮಾಡಾಳ್
ಇದನ್ನೂ ಓದಿ: ಬೆಳಗಾವಿ | ಶಿವಾಜಿ ಪ್ರತಿಮೆ ಬಳಿ ಕನ್ನಡ ಧ್ವಜ ನೆಟ್ಟ ಯುವಕರಿಗೆ ಥಳಿತ
‘ಮಗನೇ ಮೇಲ್ನೋಟಕ್ಕೆ ತಪ್ಪಿತಸ್ಥ’
“ದೂರಿನಲ್ಲಿ ಹೇಳಿರುವಂತೆ ಇಡೀ ಆರೋಪವು ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್ ಮಾಡಲ್ ಅವರ ವಿರುದ್ಧವಾಗಿದೆ, ಅವರು ಲಂಚಕ್ಕಾಗಿ ಬೇಡಿಕೆ ಇಟ್ಟಿರುವ ಬಗ್ಗೆ ಮತ್ತು ಲಂಚ ಸ್ವೀಕರಿಸಿರುವ ಬಗ್ಗೆ ಪ್ರಾಥಮಿಕವಾಗಿ ತಪ್ಪಿತಸ್ಥರು. ಹೀಗಿರುವಾಗ ಪೂರ್ಣ ಪ್ರಮಾಣದ ವಿಚಾರಣೆಯಲ್ಲಿ ಅವರ ಮಗ ಆರೋಪಗಳಿಗೆ ಉತ್ತರಿಸಬೇಕಾಗಿದೆ” ಎಂದು ನ್ಯಾಯಾಲಯ ಹೇಳಿದೆ. ಪ್ರಶಾಂತ್ ಅವರು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಹಣಕಾಸು ಸಲಹೆಗಾರ ಮತ್ತು ಮುಖ್ಯ ಲೆಕ್ಕಾಧಿಕಾರಿ ಆಗಿದ್ದರು.
ಲೋಕಾಯುಕ್ತ ಪೊಲೀಸರು ತಮ್ಮ ವಿರುದ್ಧ ಎಫ್‌ಐಆರ್ ದಾಖಲಿಸಿರುವುದನ್ನು ಪ್ರಶ್ನಿಸಿ ವಿರೂಪಾಕ್ಷಪ್ಪ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಈ ತೀರ್ಪು ನೀಡಿದ್ದಾರೆ. ಕೆಮಿಕಲ್ ಕಾರ್ಪೊರೇಷನ್ ಎಂಬ ಖಾಸಗಿ ಸಂಸ್ಥೆಯ ಪಾಲುದಾರ ಶ್ರೇಯಸ್ ಕಶ್ಯಪ್ ಎಂಬಾತ ದೂರುದಾರರಿಂದ ₹ 40 ಲಕ್ಷ ಪಡೆಯುತ್ತಿದ್ದಾಗ ಅವರ ಮಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ನಂತರ ಎಫ್‌ಐಆರ್ ದಾಖಲಿಸಲಾಗಿತ್ತು.
ಇದನ್ನೂ ಓದಿ: ತಮಿಳುನಾಡು ನೆರೆ | 2,000 ಕೋಟಿ ಮಧ್ಯಂತರ ಪರಿಹಾರ ಕೋರಿದ ಸಿಎಂ ಸ್ಟಾಲಿನ್
ತಂದೆ ವಿರೂಪಾಕ್ಷಪ್ಪ ಅವರು ಮಗನ ಕೃತ್ಯಗಳಲ್ಲಿ ಭಾಗಿಯಾಗಿಲ್ಲ, ಆದ್ದರೆ ಕೆಲವು ನೈತಿಕ ಹೊಣೆಗಾರಿಕೆಗಳ ಕಾರಣ ಮುಂದಿನ ವಿಚಾರಣೆಯನ್ನು ಮುಂದುವರಿಸಲು ಅನುಮತಿ ನೀಡಬೇಕು ಎಂಬ ಲೋಕಾಯುಕ್ತ ಪೊಲೀಸರ ವಾದವನ್ನು ಮನ್ನಿಸದ ನ್ಯಾಯಾಲಯ “ಇದು ಕ್ರಿಮಿನಲ್ ಮೊಕದ್ದಮೆಯಾಗಿದ್ದು, ಅರ್ಜಿದಾರರ ವಿರುದ್ಧ ಕನಿಷ್ಠ ಪ್ರಾಥಮಿಕ ಅಂಶವಾದರೂ ಇರಬೇಕು. ನೈತಿಕ ಹೊಣೆಗಾರಿಕೆಯ ವಿಚಾರದಲ್ಲಿ ವಿಚಾರಣೆ ನಡೆಸಲು ಸಾಧ್ಯವಿಲ್ಲ” ಎಂದು ನ್ಯಾಯಾಲಯ ಹೇಳಿದೆ.
“ಅರ್ಜಿದಾರರ ಮಗ ನಿಸ್ಸಂದೇಹವಾಗಿ ಲಂಚದ ಬೇಡಿಕೆ, ಸ್ವೀಕರಿಸಿರುವ ಬಗ್ಗೆ ಪ್ರಾಥಮಿಕವಾಗಿ ತಪ್ಪಿತಸ್ಥನಾಗಿದ್ದಾನೆ. ಆತ ಅವನ ಮನೆ ಅಥವಾ ಅವನ ಕಚೇರಿಯಲ್ಲಿ ಕಂಡುಬರುವ ನಗದಿಗೆ ಜವಾಬ್ದಾರನಾಗಿರುತ್ತಾನೆ. ಆದರೆ ಅರ್ಜಿದಾರ ವಿರುಪಾಕ್ಷಪ್ಪ ಯಾವುದೇ ಪ್ರಕರಣಗಳಲ್ಲಿ ಪತ್ತೆಯಾಗದಿದ್ದಲ್ಲಿ, ಅವರು ಆರೋಪಿಯ ತಂದೆ ಎಂಬ ಕಾರಣಕ್ಕಾಗಿ, ಅವರನ್ನು ವಿಚಾರಣೆಗೆ ಒಳಪಡಿಸಲು ಅನುಮತಿಸಲಾಗುವುದಿಲ್ಲ” ಎಂದು ನ್ಯಾಯಾಲಯವು ಹೇಳಿದೆ.
ದೂರಿನಲ್ಲಿನ ಆರೋಪಗಳು ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧ 1988 ರ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 7 (ಎ) ಮತ್ತು (ಬಿ) ಅಡಿಯಲ್ಲಿ ಯಾವುದೇ ಅಪರಾಧದ ಅಂಶಗಳನ್ನು ಹೊಂದಿಲ್ಲ ಎಂದು ಅದು ಸೂಚಿಸಿದೆ.
ವಿಡಿಯೊ ನೋಡಿ: ತಾಳ ಮದ್ದಳೆ | ರಾಮ ಧಾನ್ಯ ಚರಿತ್ರೆ Janashakthi Media