ಹಾವೇರಿ: ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಮಾರ್ಚ್ 21ರಂದು ನಡೆದ ‘ರೈತ ಮಹಾ ಪಂಚಾಯತ್’ನಲ್ಲಿ ಭಾಗವಹಿಸಿದ ರಾಕೇಶ್ ಟಿಕಾಯತ್ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ರೈತರು ಟ್ರ್ಯಾಕ್ಟರ್‌ಗಳ ಮೂಲಕ ಹೋರಾಟವನ್ನು ತೀವ್ರಗೊಳಿಸಬೇಕು. ದೆಹಲಿಯಲ್ಲಿ ಹೋರಾಟಕ್ಕೆ ಮೂರು ಲಕ್ಷ ಟ್ರ್ಯಾಕ್ಟರ್ ತಂದಿದ್ದೆವು. ರೈತರು ಬ್ಯಾರಿಕೇಡ್‌ಗಳನ್ನು ಮುರಿಯುವಂತಹ ತೀವ್ರತರವಾದ ಹೋರಾಟ ಮಾಡಿ, ದೆಹಲಿ ಮಾದರಿಯಲ್ಲೇ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿ ಎಂದು ರೈತರಿಗೆ ಕರೆ ನೀಡಿದ್ದರು. ಎಂಬ ಅಂಶವನ್ನು ಉಲ್ಲೇಖಿಸಿ ಐಪಿಸಿ ಕಲಂ 154ರ ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನು ಓದಿ : ರಾಜ್ಯದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ರೈತ ಮಹಾ ಪಂಚಾಯತ್
‘ರೈತಪರ ಹೋರಾಟಗಾರರಿಗೆ ಇಂತಹ ಪ್ರಕರಣಗಳು ಹೊಸದೇನಲ್ಲ. ರಾಕೇಶ್ ಟಿಕಾಯತ್ ಜನರನ್ನು ಉದ್ರೇಕಿಸುವಂತಹ ಭಾಷಣ ಏನು ಮಾಡಿಲ್ಲ. ರೈತರ ಹೋರಾಟವನ್ನು ಹತ್ತಿಕ್ಕಲು ಸರ್ಕಾರ ಹುನ್ನಾರ ನಡೆಸಿದೆ.’ ಎಂದು ರೈತ ಸಂಘದ ಜಿಲ್ಲಾ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ಹೇಳಿದರು.
ಇದನ್ನು ಓದಿ : ದೆಹಲಿ ರೈತ ಬಂಡಾಯ ಕಣದಲ್ಲಿ ಎರಡು ದಿನಗಳ ಒಕ್ಕಲು…
‘ಮಾರ್ಚ್ 20, 21, 22ರಂದು ಶಿವಮೊಗ್ಗ, ಹಾವೇರಿ, ಬೆಂಗಳೂರಿನಲ್ಲಿ ರೈತ ಮಹಾ ಪಂಚಾಯತ್ ನಡೆದಿದೆ. ಬೆಂಗಳೂರಿನಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ ರಾಕೇಶ್ ಟಿಕಾಯತ್ ಭಾಷಣದ ಸಂದರ್ಭದಲ್ಲಿ ರೈತರ ಬೇಡಿಕೆಗಳ ಬಗ್ಗೆ ಮನವಿ ಸ್ವೀಕರಿಸಲು ಕೃಷಿ ಸಚಿವ ಬಿ.ಸಿ.ಪಾಟೀಲ್ ಸಹ ಅದೇ ಸಂದರ್ಭದಲ್ಲಿ ಹಾಜರಿದ್ದರು. ಆದರೆ ಮರುದಿನ (ಮಾರ್ಚ್ 23) ಎಫ್‌ಐಆರ್ ಹಾಕುತ್ತಾರೆ ಅಂದರೆ, ಇದು ಉದ್ದೇಶಪೂರ್ವಕ ಅಂತ ಸ್ಪಷ್ಟವಾಗಿ ಗೊತ್ತಾಗುತ್ತೆ. ಇದು ಸ್ಪಷ್ಟವಾಗಿ ರಾಜ್ಯ ಸರ್ಕಾರವೇ ಪೊಲೀಸರ ಮೇಲೆ ಒತ್ತಡ ಹೇರಿ ಹಾಕಿಸಿರುವ ಪ್ರಕರಣವಾಗಿದೆ. ಇಂಥ ತಂತ್ರಗಳಿಂದ ರೈತರ ಹೋರಾಟ ಮಣಿಸಲು ಸಾಧ್ಯವಿಲ್ಲ.’’ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಮಾರ್ಚ್ 26ರಂದು ರಾಜ್ಯದಾದ್ಯಂತ ಬೃಹತ್ ಪ್ರತಿಭಟನೆ ನಡೆಸುತ್ತೇವೆ’ ಎಂದು ಹಾವೇರಿ ಜಿಲ್ಲಾ ರೈತ ಮುಖಂಡರಾದ ಮಲ್ಲಿಕಾರ್ಜುನ ಬಳ್ಳಾರಿ, ಮಾಲತೇಶ ಪೂಜಾರ ತಿಳಿಸಿದ್ದಾರೆ.