ಹಾವೇರಿ : ಮಸೀದಿ, ಶಾಲೆ ಹಾಗೂ ಮನೆಗಳ ಮೇಲೆ ಸಂಘಪರಿವಾರದ ಕಾರ್ಯಕರ್ತರು ಕಲ್ಲು ತೂರಾಟ ಮಾಡಿದ ಘಟನೆ ಹಾವೇರಿ ಜಿಲ್ಲೆಯ ರಟ್ಟೀಹಳ್ಳಿಯಲ್ಲಿ ಮಂಗಳವಾರ ನಡೆದಿದೆ.
ಸಂಗೊಳ್ಳಿ ರಾಯಣ್ಣ ಪ್ರತಿಮೆ ಲೋಕಾರ್ಪಣೆ ಹಿನ್ನೆಲೆಯಲ್ಲಿ ಮಾರ್ಚ್ 14 ರಂದು ರಟ್ಟೀಹಳ್ಳಿಯಲ್ಲಿ ಸಂಘಪರಿವಾರದ ಕಾರ್ಯಕರ್ತರು ಪ್ರಮುಖ ಬೀದಿಯಲ್ಲಿ ಬೈಕ್ ರ‍್ಯಾಲಿ ಏರ್ಪಡಿಸಿದ್ದರು.
ಈ ವೇಳೆ ಕಾರ್ಯಕರ್ತರು ಮಸೀದಿ, ಮನೆಗಳು ಹಾಗೂ ಉರ್ದು ಶಾಲೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆನ್ನಲಾಗಿದೆ. ಅಲ್ಲದೇ, ಆಟೋ ಚಾಲಕರೊಬ್ಬರಿಗೆ ಥಳಿಸಿರುವ ಘಟನೆಯೂ ವರದಿಯಾಗಿದೆ. ಕೆಲ ಮಕ್ಕಳು ಹಾಗೂ ಮಹಿಳೆಯರಿಗೆ ಕಲ್ಲು ತೂರಾಟದಿಂದ ಗಾಯವಾಗಿದ್ದು, ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು 20 ಮಂದಿಯನ್ನು ವಶಕ್ಕೆ ಪಡೆದಿದ್ದು, ಹೈ ಆಲರ್ಟ್ ಘೋಷಿಸಿದ್ದಾರೆ.
ನಾಲ್ಕು ದಿನಗಳ ಹಿಂದೆ ಸಂಗೊಳ್ಳಿ ರಾಯಣ್ಣ ಮೂರ್ತಿ ಮೆರವಣಿಗೆ ವೇಳೆ ಎರಡು ಕೋಮುಗಳ ನಡುವೆ ಗಲಾಟೆ ನಡೆದಿತ್ತು. ಈಗ ಗಲಾಟೆ ಮುಂದುವರೆದಿದೆ. ಕೆಲವರು ರಾಜಕೀಯ ಲಾಭಕ್ಕಾಗಿ ಈ ರೀತಿಯ ಕೋಮುಗಲಭೆ ಸೃಷ್ಟಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.