ಹಾವೇರಿ: ಗಣಪತಿ ವಿಸರ್ಜನೆ ವೇಳೆ ಮುಸ್ಲಿಂ ವ್ಯಕ್ತಿಯ ಪಾರ್ಥೀವ ಶರೀರದ ಮೆರವಣಿಗೆ ಕಂಡು ಡಿಜೆ ಬಂದ್ ಮಾಡಿದ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ನಗರದಲ್ಲಿ ನಡೆದಿದ್ದು, ಹಿಂದೂ-ಮುಸ್ಲಿಮರ ಸೌಹಾರ್ದ ಮನೋಭಾವಕ್ಕೆ ಸಾಕ್ಷಿಯಾಗಿದೆ.
ಗಜಾನನ ಯುವಕ ಮಂಡಳಿಯ ಸದಸ್ಯರು ಇಲ್ಲಿನ ಉಮಾಶಂಕರ ನಗರದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದರು. ಗಣೇಶ ವಿಸರ್ಜನೆಯ ಮೆರವಣಿಗೆ ಎಂಜಿ ರಸ್ತೆಗೆ ಬಂದಾಗ ಅದೇ ಮಾರ್ಗದಲ್ಲಿ ಮುಸ್ಲಿಂ ವ್ಯಕ್ತಿಯ ಪಾರ್ಥೀವ ಶರೀರವನ್ನು ಕಬರಸ್ತಾನ ಕಡೆಗೆ ಹೊತ್ತೊಯ್ಯುತ್ತಿದ್ದರು.
ಯುವಕ ಮಂಡಳಿಯವರು ಮುಸ್ಲಿಂ ವ್ಯಕ್ತಿಯ ಶವಯಾತ್ರೆ ದಾಟಿ ಹೋಗೋವರೆಗೂ ತಾವಾಗಿಯೇ ಡಿಜೆ ಬಂದ್ ಮಾಡಿದರು. ಮುಸ್ಲಿಂ ವ್ಯಕ್ತಿಯ ಪಾರ್ಥೀವ ಶರೀರದ ಮೆರವಣಿಗೆ ಹೋದ ನಂತರ ಮತ್ತೆ ಗಣೇಶ ವಿಸರ್ಜನೆ ಮೆರವಣಿಗೆ ಪ್ರಾರಂಭಿಸಿದರು.
ದೇಶದಲ್ಲಿ ರಾಜಕಾರಣಕ್ಕಾಗಿ ಧರ್ಮ- ಜಾತಿಗಳ ನಡುವೆ ಸಂಘರ್ಷ ಎಬ್ಬಿಸಿ ಮೈ ಚಳಿ ಕಾಯಿಸಿಕೊಳ್ಳುವ ನೀಚ ಕೆಲಸ ಹಿಂದಿನಿಂದಲೂ ನಡೆದೇ ಇದೆ. ಸದ್ಯದ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಕರ್ನಾಟಕದ ಕರಾವಳಿಯಲ್ಲಿ ಯಾರೂ ಊಹಿಸದ ಧರ್ಮ ಸಂಘರ್ಷಗಳು ನಡೆಯುತ್ತಲೇ ಇವೆ. ಇವುಗಳ ನಡುವೆ ಈ ಘಟನೆ ಹಿಂದೂ-ಮುಸ್ಲಿಮರ ಆತ್ಮೀಯತೆಗೆ ಸಾಕ್ಷಿಯಾಗಿದ್ದು, ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.