– ಎಚ್.ಆರ್.ನವೀನ್ ಕುಮಾರ್, ಹಾಸನ
ಬೆಂಗಳೂರು ಬೆಳಿತಿದೆ. ಇಲ್ಲಿ ಕಷ್ಟಪಟ್ಟರೆ ಹೇಗಾದರೂ ಜೀವನ ಸಾಗಿಸಬಹುದು, ಎಂತದ್ದಾದರೂ ಒಂದು ಕೆಲಸ ಸಿಕ್ಕೇ ಸಿಗುತ್ತದೆ. ಆದರೆ, ಊರಲ್ಲಿದ್ದರೆ ಕೆಲಸವೂ ಇಲ್ಲಾ, ಮರ್ಯಾದೆಯೂ ಇಲ್ಲಾ, ಜೀವನವೂ ಇಲ್ಲಾ ಅನ್ನೊಂಗಾಗುತ್ತೆ… ಕಷ್ಟವೋ ಸುಖವೋ ದೂರಕ್ಕೆ ಬಂದು ಬದುಕಬೇಕಾಗಿದೆ.ಊರಲ್ಲಿ
ಬದುಕ ಅರಸಿ ಬೆಂದಕಾಳೂರಿಗೆ ಬಂದ ಒಬ್ಬೊಬ್ಬರ ಕಥೆ ಒಂದೊಂದು ರೀತಿಯದು. ಸುಮಾರು 40 ವರ್ಷಗಳ ಹಿಂದೆ ತುಮಕೂರಿನಿಂದ ಬೆಂಗಳೂರಿಗೆ ಬಂದ ಈ ಚಿತ್ರದಲ್ಲಿರುವ ವ್ಯಕ್ತಿ ಈಗ ಬೆಂಗಳೂರಿನಲ್ಲೇ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಊರಲ್ಲಿ
ಬೆಂಗಳೂರಿನ ಶಿವಾನಂದ ವೃತ್ತದಲ್ಲಿರುವ ಗಾಂಧಿ ಭವನದಲ್ಲಿ ರೈತ ಸಂಘದ ಸಭೆಯೊಂದರಲ್ಲಿ ಭಾಗವಹಿಸಲು ತೆರಳಿದ್ದಾಗ ಸ್ನೇಹಿತರೊಂದಿಗೆ ಟೀ ಕುಡಿಯೋಣವೆಂದು ಅಲ್ಲೇ ಪಕ್ಕದ ರಸ್ತೆಯಲ್ಲಿರುವ ಒಂದು ಸಣ್ಣ ಹೋಟೆಲ್‌ಗೆ ಬಂದೆವು. ಹೋಟೆಲ್ ಹೆಸರಿಗೆ ಮಾತ್ರ ಸಣ್ಣದಲ್ಲಾ; ನಿಜವಾಗಲೂ ಸಣ್ಣದೇ ಆಗಿದೆ. ನಾಲ್ಕು ಜನ ಸರಿಯಾಗಿ ನಿಂತುಕೊಳ್ಳಲಾಗದಷ್ಟು ಜಾಗ, ಬಹುತೇಕ ಎಲ್ಲರೂ ರಸ್ತೆಯ ಬದಿಯಲ್ಲೇ ನಿಂತುಕೊಳ್ಳುವಂತಹ ಸ್ಥಿತಿ. ಅದೇ ರಸ್ತೆಯ ಬದಿಯಲ್ಲಿ ಒಂದು ಗ್ಯಾಸ್ ಒಲೆಯನ್ನು ಇಟ್ಟುಕೊಂಡು ಒಬ್ಬ ಟೀ, ಕಾಫಿ ಮಾಡುತ್ತಿದ್ದ. ಸಾಧಾರಣ ವಯಸ್ಸು 60 ರ ಆಸು ಪಾಸು.
ನಾವು ಸ್ನೇಹಿತರು ಮಾತನಾಡಿಕೊಳ್ಳುತ್ತಿದ್ದದ್ದನ್ನು ಕೇಳಿಸಿಕೊಂಡು ಯಾವ ಊರು ಸರ್ ನಿಮ್ಮದೆಲ್ಲಾ ಎಂದು ಕೇಳಿದರು. ನಾವು ಹಾಸನ, ಮಂಡ್ಯ, ಶಿವಮೊಗ್ಗ, ಕೊಪ್ಪಳದವರಿದ್ದೆವು. ನಮ್ಮ ನಮ್ಮ ಊರುಗಳನ್ನು ಹೇಳಿದೆವು. ನಮ್ಮ ಬಗ್ಗೆ ಇಷ್ಟೊಂದು ವಿಚಾರಿಸಿಕೊಳ್ಳುತ್ತಿರುವ ಈತನ ಊರು ಯಾವುದು ಎಂಬ ಕುತೂಹಲ ಸಹಜವಾಗಿಯೇ ಮೂಡಿತು. ಯಾಕೆಂದರೆ ಸಾಮಾನ್ಯವಾಗಿ ಹೋಟೆಲ್‌ಗಳಲ್ಲಿ ಕೆಲಸ ಮಾಡುವವರು ಅದರಲ್ಲೂ ಬೆಂಗಳೂರಿನಂತಹ ಮಹಾ ನಗರಗಳಲ್ಲಿ ಕೆಲಸ ಮಾಡುವವರಿಗೆ ಯಾರನ್ನಾದರೂ ಮಾತನಾಡಿಸುವ ಪುರಸೊತ್ತು ಸಿಗುತ್ತದೆಯೇ.? ಹಾಗಾಗಿ ಈತನ ಮಾತು ನಮ್ಮ ಕುತೂಹಲವನ್ನು ಕೆರಳಿಸಿತು.
ಇದನ್ನೂ ಓದಿ: ಏರು ಮಹಡಿಗಳ ಕೆಳಗೆ ಸೋಲದ ಜೀವ
ನಾನು ತಕ್ಷಣವೇ ಕೇಳಿದೆ ನಿಮ್ಮದು ಯಾವ ಊರು ಎಂದು. ಅವರು ನಮ್ಮದು ತುಮಕೂರು ಸರ್ ಎಂದರು. ಎರಡನೇ ಪ್ರಶ್ನೆ ಹಿಂದೆಯೇ ಹೊರಟಿತು ಯಾವಾಗ ಇಲ್ಲಿಗೆ ಬಂದ್ರಿ ಎಂದೆ. ಅದೊಂದು ದೊಡ್ಡ ಕಥೆ ಬಿಡಿ ಸರ್ ಎಂದರು.. ಮಧ್ಯದಲ್ಲೇ ಸರ್ ನಿಮ್ಮೆಲ್ಲರಿಗೂ ಶುಗರ್ ಲೆಸ್ ಟೀ ಹೇಳಿದ್ರಲ್ಲ.. ನಾನು ನೋಡಿ ಅಭ್ಯಾಸ ಬಲ ಈಗ ಸಕ್ಕರೆ ಡಬ್ಬಿಗೆ ಕೈಹಾಕಿದೆ ಎಂದು ಹೇಳಿ ಸಕ್ಕರೆ ಡಬ್ಬಿಯನ್ನು ಪಕ್ಕಕ್ಕಿಟ್ಟರು.. ಮಾತು ಮುಂದುವರೆಯಿತು… ನಾನು ಮತ್ತೊಂದು ಪ್ರಶ್ನೆ ಕೇಳಿದೆ ನಿಮಗೆ ಊರಲ್ಲಿ ಜಮೀನು ಎಷ್ಟಿದೆ ಎಂದು.. ಅದಕ್ಕೆ ಆತ ಒಮ್ಮೆ ನನ್ನ ಮುಖವನ್ನು ನೋಡಿ ಒಳಗೇ ಮುಗುಳ್ನಗುತ್ತಾ ನಮಿಗೆ ಜಮೀನಿದ್ದಿದ್ರೆ ನಾವು ಇಲ್ಲಿಗ್ಯಾಕೆ ಸರ್ ಬಂದು ಕಷ್ಟ ಪಡಬೇಕಾಗಿತ್ತು ಎಂದರು..
ಅಷ್ಟರಲ್ಲಿ ಅಲ್ಲಿಗೆ ಕನ್ನಡ ಗೊತ್ತಿಲ್ಲದ ಒಬ್ಬ ಯುವಕ ಟೀ ಪಾರ್ಸಲ್ ತೆಗೆದುಕೊಂಡು ಹೋಗಲು ಬಂದ. ಹಿಂದಿಯಲ್ಲಿ ತೀನ್ ಚಾಯ್ ಪಾರ್ಸಲ್ ಎಂದ. ಆತನಿಗೆ ಅಂಗಡಿಗಳಲ್ಲಿ ಸಾಮಾನುಗಳನ್ನು ಪೊಟ್ಟಣ ಮಾಡಿಕೊಡುವ ಪ್ಲಾಸ್ಟಿಕ್ ಕವರ್‌ನಲ್ಲಿ ಮೂರು ಲೋಟ ಟೀ ಹಾಕಿ ಅದನ್ನು ಅದೇ ಕವರಿನ ತುದಿಯನ್ನು ಬಳಸಿ ಗಂಟು ಹಾಕಿ ಅದರ ಜೊತೆ ಮೂರು ಪೇಪರ್ ಲೋಟಗಳನ್ನು ಕೊಟ್ಟರು. ನಮ್ಮ ಜೊತೆಯಲ್ಲಿದ್ದ ಹಿರಿಯರೊಬ್ಬರು ಅಲ್ಲ ಈ ಪ್ಲಾಸ್ಟಿಕ್ ಕವರ್‌ನಲ್ಲಿ ಟೀ ಕೊಡ್ತಿರಾ ಎಂದಾಗ ಹೌದು ಸರ್ ಇಲ್ಲಿ ಸುತ್ತಮುತ್ತ ಕಟ್ಟಡ ಕಟ್ಟುವ ಕೆಲಸಗಳಲ್ಲಿ ತೊಡಗಿರುವ ಉತ್ತರ ಭಾರತದ ಕಡೆಯವರು ಇದೇ ರೀತಿ ಟೀ ತೊಗೊಂಡು ಹೋಗೋದು. ಎಲ್ಲರಿಗೂ ಕೆಲಸ ಬಿಟ್ಟು ಬಂದು ಟೀ ಕುಡಿದು ಹೋಗಲು ಸಾಧ್ಯವಿಲ್ಲ. ಮಾತ್ರವಲ್ಲ, ಅವರಿಗೆ ಪ್ಲಾಸ್ಕ್‌ಗಳನ್ನು ಇಟ್ಟುಕೊಳ್ಳುವ ಸ್ಥಿತಿಯಲ್ಲೂ ಇರುವುದಿಲ್ಲ ಹಾಗಾಗಿ ಇದೆ ಗತಿ ಎಂದರು.
ನಮ್ಮ ಮಾತು ಮತ್ತೆ ಅವರ ಊರಿನತ್ತ ಹೋಯಿತು. ನೀವು ಎಷ್ಟು ಜನ ಮಕ್ಕಳು ಎಂದು ಕೇಳಿದೆ. ಆಗ ಅವರು ತಮ್ಮ ಬದುಕಿನ ಬಂಡಿ ಸಾಗಿದ ಪಯಣದ ಕೆಲವು ತುಣುಕುಗಳನ್ನು ನಾವು ಟೀ ಕುಡಿಯುವವರೆಗೆ ಹೇಳಿದರು… ನಾವು 5 ಜನ ಮಕ್ಕಳ ನಮ್ಮ ಅಪ್ಪನಿಗೂ ಭೂಮಿ ಇಲ್ಲ, ನಮಗೂ ಭೂಮಿ ಇಲ್ಲ. ಜೀವನ ಸಾಗಿಸೋದು ತುಂಬಾನೆ ಕಷ್ಟವಾಗಿತ್ತು. ಹಳ್ಳಿಯಲ್ಲಿ ಸರಿಯಾಗಿ ಕೂಲಿ ಕೆಲಸವೂ ಸಿಗುತ್ತಿರಲಿಲ್ಲ.. ಅಪರೂಪಕ್ಕೆ ಕೆಲಸ ಸಿಕ್ಕರೂ ಅವರು ಕೊಡುವ ಕೂಲಿಯಲ್ಲಿ ಜೀವನ ಸಾಗಿಸುವುದು ಕಷ್ಟವಾಗುತ್ತಿತ್ತು. ಅದಕ್ಕಾಗಿ ಬೆಂಗಳೂರಿಗೆ ಬಂದರೆ ಏನಾದರೂ ಒಂದು ಕೆಲಸ ಮಾಡಬಹುದು, ಹೇಗಾದರೂ ಮಾಡಿ ಜೀವನ ತಳ್ಳಬಹುದೆಂದು ಇಲ್ಲಿಗೆ ಬಂದೆ. ಇಲ್ಲಿಗೆ ಬಂದು 40 ವರ್ಷಗಳಾಗಿವೆ ಇಲ್ಲಿಯವರೆಗೂ ಪರ್ಮನೆಂಟ್ ಕೆಲಸ ಅಂತ ಯಾವುದೂ ಇಲ್ಲ, ಇದುವರೆಗು ಹತ್ತಾರು ಕೆಲಸಗಳನ್ನು ಮಾಡಿದ್ದೇನೆ. ಈಗ ಕೊನೆಗೆ ಈ ಹೊಟೆಲ್‌ನಲ್ಲಿ ಟೀ ಮಾಡುವ ಕೆಲಸ ಮಾಡುತ್ತಿದ್ದೇನೆ ಎಂದರು.
ಬೆಂಗಳೂರು ಬೆಳಿತಿದೆ. ಇಲ್ಲಿ ಕಷ್ಟಪಟ್ಟರೆ ಹೇಗಾದರೂ ಜೀವನ ಸಾಗಿಸಬಹುದು, ಎಂತದ್ದಾದರೂ ಒಂದು ಕೆಲಸ ಸಿಕ್ಕೇ ಸಿಗುತ್ತದೆ. ಆದರೆ, ಊರಲ್ಲಿದ್ದರೆ ಕೆಲಸವೂ ಇಲ್ಲಾ, ಮರ್ಯಾದೆಯೂ ಇಲ್ಲಾ, ಜೀವನವೂ ಇಲ್ಲಾ ಅನ್ನೊಂಗಾಗುತ್ತೆ… ಕಷ್ಟವೋ ಸುಖವೋ ದೂರಕ್ಕೆ ಬಂದು ಬದುಕಬೇಕಾಗಿದೆ.
ನಮ್ಮೂರಲ್ಲೇ ನಮಿಗೆ ಜಮೀನಿದ್ದಿದ್ರೆ ಅಥವಾ ನಮಗೂ ಅಲ್ಲೇ ಒಂದು ಕೆಲಸ ಕೊಟ್ಟಿದಿದ್ರೆ ನಾವು ನಮ್ಮದಲ್ಲದ ಊರಿಗೆ ಬಂದು ಅಪರಿಚಿತರ ತರಹ ಬದುಕಬೇಕಾಗಿ ಬರುತ್ತಿರಲಿಲ್ಲಾ ಅಲ್ವಾ ಸರ್…? ನನಗೆ ಮತ್ತೆ ಪ್ರಶ್ನೆ ಕೇಳಲು ಏನೂ ಉಳಿದಿರಲಿಲ್ಲ. ಏಕೆಂದರೆ, ನನ್ನ ಪ್ರಶ್ನೆಗೆ ಆತನಿಂದ ಪ್ರತ್ಯುತ್ತರವಾಗಿ ಬಾಣದಂತೆ ಬಂದ ಮರುಪ್ರಶ್ನೆ ಈ ವ್ಯವಸ್ಥೆಯನ್ನು ತಿವಿದಿತ್ತು. ಅವನ ಪರಿಸ್ಥಿತಿಗೆ ಕಾರಣವಾದ ಈ ಸನ್ನಿವೇಶ ನನ್ನನ್ನು ನಿರುತ್ತರನನ್ನಾಗಿಸಿತು.
ವಿಡಿಯೋ ನೋಡಿ: ಸಂವಿಧಾನ ರಕ್ಷಣೆಯ ಹೊಣೆ ನಮ್ಮೆಲ್ಲರ ಮೇಲಿದೆ – ಪಿ.ಸಾಯಿನಾಥ್ Janashakthi Media