ಕಾಡುವ ಬೆಟ್ಟಗುಡ್ಡಗಳು

ರಹಮತ್ ತರೀಕೆರೆ
ತರೀಕೆರೆಯಲ್ಲಿ ನಾವಿದ್ದ ಮನೆಯ ಕದ ತೆರೆದೊಡನೆ ಪಶ್ಚಿಮಘಟ್ಟದ ಸೆರಗಿನಲ್ಲಿರುವ ಕೆಮ್ಮಣ್ಣುಗುಂಡಿ ಕಲ್ಹತ್ತಗಿರಿಯ ಶ್ರೇಣಿ ಮುಖದೋರುತ್ತಿತ್ತು. ಶಿವಮೊಗ್ಗೆ ಸಹ್ಯಾದ್ರಿ ಕಾಲೇಜಿನಲ್ಲಿ ಕಲಿಯುವಾಗ, ತರಗತಿಯ ಕಿಟಕಿಯಿಂದಲೇ ಪಶ್ಚಿಮದ ಘಟ್ಟಗಳನ್ನು ದಾಟಿ ಆಷಾಢದ ಮಳೆ ಮಂಜಿನ ಸೈನ್ಯವಾಗಿ ದಂಡೆತ್ತಿ ಬರುವ ದೃಶ್ಯ ಕಾಣುತ್ತಿತ್ತು. ಮೈಸೂರಿನಲ್ಲಿ ಇರುವಾಗ್ಯೆ ಹಾಸ್ಟೆಲಿನಿಂದ ಚಾಮುಂಡಿ ಬೆಟ್ಟ ನೆಟ್ಟಕಂಬದಂತೆ ಗೋಚರಿಸುತ್ತಿತ್ತು. ಮದುವೆಯಾದ ಹೊಸತರಲ್ಲಿ ನನ್ನ ಬಾನುವಿನ ಮದುಮಹೋತ್ಸವದ ಓಡಾಟಗಳು ಚಿತ್ರದುರ್ಗದ ಜೋಗಿಮಟ್ಟಿಗಳಲ್ಲಿ ನಡೆದವು. ಕಾಡುವ

ಕನ್ನಡ ವಿಶ್ವವಿದ್ಯಾಲಯದಲ್ಲಿ ನಾನಿದ್ದ ಕೋಣೆಯಿಂದ ಹೊರಬಂದರೆ, ತುಂಗಭದ್ರೆಯ ಕಿನಾರೆಯುದ್ದಕ್ಕೂ ಹಂಪಿಯ ಬಂಡೆಗಲ್ಲ ಬೆಟ್ಟಗಳು ಪಂಪಾಪತಿ ಬೇಸರದಿಂದ ಕೊರಳಿಂದ ತೆಗೆದಿರಿಸಿದ ಶಿಲಾಹಾರದಂತೆ ತೋರುತ್ತಿದ್ದವು. ಈಗಿರುವ ಹೊಸಪೇಟೆಯಲ್ಲಾದರೂ ಅಷ್ಟೆ, ಮನೆಬಾಗಿಲು ತೆರೆದರೆ ಸಾಕು, ಗಾಯಗೊಂಡ ಪ್ರಾಣಿ ಮಲಗಿದಂತೆ ಗಣಿಗಾರಿಕೆಯ ಜಂಬುನಾಥನ ಬೆಟ್ಟ ಧುತ್ತನೆ ಮೈದೋರುತ್ತದೆ; ನನಗೂ ಬೆಟ್ಟಗಳಿಗೂ ಬಿಟ್ಟೇನೆಂದೊಡೆ ಬಿಡದ ಯಾವುದೊ ಮಾಯೆ.

ಸೂಫಿ ನಾಥ ಶಾಕ್ತ ಆರೂಢ ಪಂಥಗಳ ಅಧ್ಯಯನ ಮಾಡುವಾಗ, ಬಹುತೇಕ ಗುಡ್ಡಬೆಟ್ಟಗಳಲ್ಲಿ ಕ್ಷೇತ್ರಕಾರ್ಯ ಮಾಡಬೇಕಾಯಿತು. ಬಾಬಾಬುಡನಗಿರಿ, ಮುಳ್ಳಯ್ಯನಗಿರಿ, ಕೊಡಚಾದ್ರಿ, ಕಾಮಾಖ್ಯ, ಶ್ರೀಶೈಲ, ಕೌಳಪರ್ವತ, ಚುಂಚನಗಿರಿ, ಹಂಡಿಬಡಗನಾಥ, ಲುಂಕೆಮಲೆ, ಕದ್ರಿಗುಡ್ಡೆಗಳು ನನ್ನ ಪ್ರಮುಖ ಕಾರ್ಯಕ್ಷೇತ್ರಗಳಾಗಿದ್ದವು. ಆದರೂ ಅಧ್ಯಯನ ಉದ್ದೇಶವಿಲ್ಲದ ಸಹಜ ಚಾರಣದಲ್ಲೇ ಹೆಚ್ಚು ಸುಖ. ಅಂತಹ ಚಾರಣಕ್ಕೆ ಹಿಮಾಲಯವೇ ಆಗಬೇಕಿಲ್ಲ. ನಂದಿಬೆಟ್ಟ, ಲುಂಕೆಮಲೈ, ಜೋಗಿಮಟ್ಟಿ, ಮಿಣಕನಗುರ್ಕಿ, ತೇರಹಳ್ಳಿಬೆಟ್ಟ, ರಾಮದೇವರಬೆಟ್ಟ, ಅವನಿಬೆಟ್ಟ, ಸಾವನದುರ್ಗ, ಸಂಗನಕಲ್ಲು, ಸಿದ್ಧರಕಲ್ಲಿ, ನಿಜಗಲ್ಲು, ಸಿದ್ಧರಬೆಟ್ಟ, ಮತಂಗಪರ್ವತ, ಶಿವಗಂಗೆ, ಸಿಡಿಲಮಲ್ಲಿಕಾರ್ಜುನ, ಕುಂತಿಬೆಟ್ಟ ಇಂತಹ ಬಯಲುಸೀಮೆ ಬೆಟ್ಟಗಳೇ ಸಾಕು. ತುಮಕೂರು ಬೆಂಗಳೂರು ಮಂಡ್ಯ ಸೀಮೆಯು ಇಂತಹ ಸುಂದರ ಬೆಟ್ಟಗಳಿಗೆ ಖ್ಯಾತವಾಗಿವೆ. ಮಕಾಡೆ ಹಾಕಿದ ಕೊಬ್ಬರಿ ಚಿಪ್ಪಿನಂತಿರುವ ಜೈನರ ಧವಳಗಿರಿ ಎಷ್ಟು ಮೋಹಕವಾಗಿದೆ. ಕಾಡುವ

ಇದನ್ನೂ ಓದಿ: ವಲಸೆ ಕಾರ್ಮಿಕನ ಮೇಲೆ ಗುಂಪು ಹಲ್ಲೆ: ತನಿಖೆಗೆ ಸಿಪಿಐಎಂ ಆಗ್ರಹ

ಗುಡ್ಡಬೆಟ್ಟಗಳನ್ನು ಏರುವ ಹೊತ್ತು ಅದರ ಚೆಲುವನ್ನೂ ನಮ್ಮ ಅನುಭವವನ್ನೂ ನಿರ್ಧರಿಸುತ್ತದೆ. ನಸುಕಿನಲ್ಲಿ, ಸಂಜೆಯಲ್ಲಿ, ಮಂಜಿನಲ್ಲಿ, ಮಳೆಯಲ್ಲಿ ಬೆಳುದಿಂಗಳಲ್ಲಿ ಅವು ವಿಶಿಷ್ಟ ರೂಪಧಾರಣೆ ಮಾಡುತ್ತವೆ. ಸುಡು ಬಿಸಿಲಿನಲ್ಲಿ ಏರಿದ್ದಕ್ಕೊ ಏನೊ ಹಂಪಿ ಸೀಮೆಯ ಕುಮ್ಮಟದುರ್ಗ ಬೆವರಿಳಿಸಿ ದಣಿಸಿತು. ಗುಡ್ಡಬೆಟ್ಟಗಳು ನೈಸರ್ಗಿಕ ಆಕಾರವು ನಸುಕಿನಲ್ಲಿ, ಸಂಜೆಯಲ್ಲಿ, ಮಂಜಿನಲ್ಲಿ, ಮಳೆಯಲ್ಲಿ ಬೆಳುದಿಂಗಳಲ್ಲಿ ಬಗೆಬಗೆಯಾಗಿ ರೂಪಧಾರಣೆ ಮಾಡುತ್ತವೆ. ಸುಡು ಬಿಸಿಲಿನಲ್ಲಿ ಏರಿದ್ದಕ್ಕೊ ಏನೊ ಹಂಪಿ ಸೀಮೆಯ ಕುಮ್ಮಟದುರ್ಗ ಬೆವರಿಳಿಸಿ ದಣಿಸಿತು. ನಟರಾಟ ಬೂದಾಳು-ಲತಾರಾಣಿ ದಂಪತಿಗಳ ಜತೆ ದೇವರಾಯದುರ್ಗದ ನರಸಿಂಹಬೆಟ್ಟವನ್ನು ನಾಮದ ಚಿಲುಮೆಯಿಂದ ಹೊರಟು ನಸುಕಿನಲ್ಲಿ ಹತ್ತಾರು ಸಲ ಏರಿದ್ದೇನೆ. ಅದೀಗ ಮಧ್ಯಮವರ್ಗದ ವಾಕಿಂಗಿಗರ ಗಲಭೆಗ್ರಸ್ತ ಹಾದಿಯಾಗಿದೆ. ಕಾಡುವ

ಆದರೆ ಇದೇ ಬೆಟ್ಟವನ್ನು ಬೆಳಗಿನ ಜಾವ ಕೆಳಗಿನ ಜೇನುಗುಂಡು ಕಣಿವೆಯ ಮೂಲಕ ಏರಿದ್ದುಂಟು. ಚಿರತೆಗಳ ಆವಾಸವಾಗಿರುವ ಪೊದೆಗಳಿರುವ ಕಡಿದಾದ ನಿರ್ಜನ ಹಾದಿಯದು. ಬೆಳಕಿರದ ಹೊತ್ತಲ್ಲಿ ಬೆಟ್ಟಗಳನ್ನೇರುವಾಗ ಒಂದಿರುವುದು ಮತ್ತೇನೊ ಆಗಿ ಕಾಣುವುದು. ಬೆಳುದಿಂಗಳಲ್ಲಿ ಸಿದ್ಧರಬೆಟ್ಟವನ್ನು, ಅಮಾವಾಸ್ಯೆಯಂದು ಅರಸೀಕೆರೆಯ ಜೇನುಕಲ್ಲು ಬೆಟ್ಟವನ್ನೂ ಏರಿದ್ದು ನೆನಪಾಗುತ್ತಿದೆ. ಈ ಬೆಟ್ಟಗಳಿಗೆ ಲಗತ್ತಾಗಿರುವ ಜೇನಿಗೂ ಹೂವಿಗೂ ಸಿದ್ಧರಿಗೂ ಯಾತರ ಸಂಬಂಧವೊ ಕಾಣೆ. ಸಿದ್ಧರಬೆಟ್ಟಕ್ಕೆ ಹೋದಾಗ ಜಾಲಾರ ಹೂವಿನ ಕಾಲ. ತಂಗಾಳಿ ಬೆಳುದಿಂಗಳು ಈ ಹೂಗಂಪಿನೊಡನೆ ಸೇರಿ ರಾತ್ರಿಯನ್ನು ಗಂಧಮಯಗೊಳಿಸಿದ್ದವು. ಅಂದು ಹುಣ್ಣಿಮೆ. ಬಾನ ತುಂಬ ಹಾಲಿನಂತಹ ಬೆಳುದಿಂಗಳು ನೆಲಕ್ಕೂ ಪ್ರವಾಹದಂತೆ ಹರಿದಿತ್ತು. ಹೂಗಂಪು ಬೆಳುದಿಂಗಳು ಎರಡೂ ಮಾಯೆಗಳೇ. ಕಾಡುವ

ಆದರೂ ರಾತ್ರಿಗಾಲದಲ್ಲಿ ಬೆಟ್ಟಗಳ ಏರಾಟದ ಸಾಹಸ ಕ್ಷೇಮಕರವಲ್ಲ. ಅದು ಚಿರತೆ ಹುಲಿ ಕರಡಿಗಳು ಆಹಾರಕ್ಕಾಗಿ ಅಲೆದಾಡುವ ಹೊತ್ತು. ನಾವು ಮಾಲೆಕಲ್ಲು ಸಿದ್ಧರಬೆಟ್ಟದಲ್ಲಿ ದಟ್ಟವಾದ ಒಂದೆಡೆ ಸಂಜೆಯ ಹೊತ್ತಲ್ಲಿ ಇಳಿವಾಗ, ಮಜ್ಜಿಗೆಹಳ್ಳದ ಬಳಿ ನಟರಾಜ ಅವರಿಗೆ ಏನನಿಸಿತೊ, `ಸಾ ಬ್ಯಾಡ ಸಾ, ಮುಂದಕ್ಕೆ ಹೋಗದು’ ಎಂದು ಮುನ್ನಡೆಯುವುದನ್ನು ತಡೆದು ಕೆಳಗಿಳಿಸಿಕೊಂಡು ಬಂದರು. ನನಗೊ ಚಾರಣದಲ್ಲಿ ಸಾಯವುದಕ್ಕೂ ಸಿದ್ಧತೆ. ಹಾಗೆ ಮಾಡಿ ಒಮ್ಮೆ ಬೆಳುದಿಂಗಳಲ್ಲಿ ಕೊಡಚಾದ್ರಿಯನ್ನು ಹತ್ತಲು ಹೋಗಿ ಹಾದಿತಪ್ಪಿ, ಮತ್ಯಾವುದೊ ಬೆಟ್ಟದ ನೆತ್ತಿಮುಟ್ಟಿ ಆತಂಕದಲ್ಲೇ ರಾತ್ರಿ ಕಳೆದಿದ್ದು ನೆನಪಾಗುತ್ತಿದೆ. ಅದೊಂದು ಮರೆಯಲಾಗದ ಪ್ರಮಾದಕರ ಸಾಹಸದ ರುದ್ರಸುಂದರ ರಾತ್ರಿ. ದಟ್ಟವಾಗಿದ್ದ ಒಣಮರದ ಎಲೆಗಳಲ್ಲಿ ಅಡಗಿದ್ದ ಮಲಬಾರ್‌ಪಿಟ್ ಹಾವು ನಮ್ಮನ್ನು ಕಚ್ಚಬಹುದಿತ್ತು. ಹುಲಿ ಕವಳವಾಗಿ ಮೆಲ್ಲಬಹುದಿತ್ತು. ಕಾಡುವ

ಮತ್ತೊಮ್ಮೆ ಕೊಡಚಾದ್ರಿಯನ್ನು ಮಳೆಗಾಲದಲ್ಲಿ ಏರಲು ಹೋಗಿ, ಮೈಕೈಯೆಲ್ಲ ಇಂಬಳಮಯ. ಮೊದಲನೇ ಬಾರಿ ಮಂಗಳೂರಿನ ಕದ್ರಿಗುಡ್ಡೆಯನ್ನು ಮಂಜುನಾಥ ಗುಡಿಯ ಕಡೆಯಿಂದ ಹತ್ತುವಾಗ ಗಾಢಾಂಧಕಾರ. ನಿರ್ಜನವಾಗಿದ್ದ ನಾಥಮಠದಲ್ಲಿ ನಿಶ್ಯಬ್ದ ಕಲಕುತ್ತಿದ್ದ ಘಂಟಾನಾದ ಮತ್ತು ಭೈರವನ ಪೂಜೆಯ ರೋಮಾಂಚಕ ಅನುಭವ ಈಗಲೂ ನೆನಪಿದೆ. ನಂತರ ಹಗಲಲ್ಲಿ ಎಷ್ಟೊ ಸಲ ಏರಿರುವೆ. ಮೊದಲ ಆರೋಹಣದ ರೋಮಾಂಚನ ಸಿಗಲಿಲ್ಲ. ಕಾಡೆಲ್ಲ ಕಡಿದು ಕಟ್ಟಡಗಳೂ ಆಗಿವೆ. ಆಗುಂಬೆ ಸೀಮೆಯ ಕುಂದಾದ್ರಿಯನ್ನು ಡಿಸೆಂಬರಿನಲ್ಲಿ ಏರಿದ್ದುಂಟು. ರಾತ್ರಿ ವಸ್ತಿಗೆ ಮಲೆನಾಡಿನ ಶೀತವೆಲ್ಲ ಘನೀಭೂತವಾಗಿ ಅಲ್ಲೇ ಸೇರಿದಂತೆ ತನುಮನವನ್ನು ಅಲ್ಲಾಡಿಸಿಬಿಟ್ಟಿತು. ಕಾಡುವ

ನಮ್ಮ ಮನೆಗೆ ಕಾಣುವ ಜೋಳದರಾಶಿ ಬೆಟ್ಟವನ್ನಾದರೂ ಬಾನು ನಾನು, ನಮ್ಮ ಚಿಕ್ಕಮಕ್ಕಳ ಜತೆ ಬೆಳುದಿಂಗಳಲ್ಲಿ ಹತ್ತಿದ್ದೇವೆ. ಇದರ ಹೆಸರೇ ಚೆಂದ. ಕಣದಲ್ಲಿ ರಾಶಿಹಾಕಿದ ಜೋಳದಂತೆ ದುಂಡಗೆ ಹರಡಿಕೊಂಡಿದೆ. ರೈತಾಪಿ ಜನ ಪರಿಚಿತ ಪರಿಭಾಷೆಯಲ್ಲಿಯೇ ಹೊಳೆ ಬೆಟ್ಟಗಳ ಆಕೃತಿ ಕಲ್ಪಿಸಿಕೊಳ್ಳುವರು. ಡ್ಯಾಮಿನಕಟ್ಟೆ ಬಂದ ಬಳಿಕ ಕಬ್ಬು ನೆಲ್ಲು ಬಾಳೆ ಬೆಳೆಯುತ್ತ ಈಗ ಈ ಸೀಮೆಯಲ್ಲಿ ಜೋಳವು ಕಾಣೆಯಾಗಿದೆ. ಬೆಟ್ಟದ ಹೆಸರಲ್ಲಿ ಮಾತ್ರ ಉಳಿದುಕೊಂಡಿದೆ. ನಾನು ಅತಿಹೆಚ್ಚು ಏರಾಡಿದ ಬೆಟ್ಟವೆಂದರೆ ಹಂಪಿಯ ಮತಂಗವೇ ಇರಬೇಕು. ಅದಕ್ಕೆ ಮೂರು ದಿಕ್ಕಿನಿಂದ ದಾರಿಗಳು. ಅಲ್ಲಿನ ಚಾರಣದಲ್ಲಿ ಸಿಗುವ ಗುಹೆ ಸಸ್ಯ ಬಳ್ಳಿ ಓತಿಕ್ಯಾತ ಮೊಲ, ಕಠೋರ ನಿರ್ಜೀವ ಬಂಡೆಗಲ್ಲುಗಳನ್ನು ನಾಗರಬೆತ್ತ ಮುಟ್ಟಿಸಿದ ಜೀವಂತಗೊಳಿಸಿದಂತೆ ಬದಲಿಸುತ್ತವೆ. ಕಾಡುವ

ಕಠೋರ ಬಿಸಿಲನ್ನು ತಿಂಗಳ ಬೆಳಕಾಗಿಸುತ್ತವೆ. ಅಲ್ಲಿ ವಿದೇಶಿಗರು, ಪ್ರೇಮಿಗಳು, ಯಾತ್ರಿಕರು ಸೂರ್ಯಾಸ್ತಕ್ಕೆ ದಂಡುಸೇರುವರು. ಪಂಪಾಯಾತ್ರೆ ಮಾಡಿದ ವಿಸೀಯವರು ಬಹುಶಃ ಈ ಪರ್ವತ ಏರಿದಂತಿಲ್ಲ. ಮತಂಗದ ತುದಿಯಿಂದ ಪೂರ್ವಮುಖಿಯಾಗಿ ಬರುವ ಹೊಳೆ ಚಕ್ರತೀರ್ಥದಲ್ಲಿ ತಟ್ಟನೆ ತಿರುಗಿ ಉತ್ತರಮುಖಿ ಆಗುವುದನ್ನು ನೋಡಬಹುದು. ಕಾಡುವ

ವಾಹನದಲ್ಲಿ ಬೆಟ್ಟದ ತುದಿಯವರೆಗೂ ಮಾಡಿದ ರಸ್ತೆಯಲ್ಲಿ ಹೋದರೆ ಸಿಗಲಾರದ ಆನಂದ, ಚಾರಣದ ಮೂಲಕ ಹೋದರೆ ಸಿಗುವುದು. ಚಾಮುಂಡಿಬೆಟ್ಟಕ್ಕೂ ಮುಳ್ಳಯ್ಯನಗಿರಿಗೂ ಕಾಲ್ನಡಿಗೆಯಲ್ಲಿ ಏರುವುದರಲ್ಲಿ ತ್ರಾಸಾನಂದವಿದೆ. ತುಮಕೂರು ಸೀಮೆಯ ಬೆಟ್ಟಗಳನ್ನು ಜಾಲಾರದ ಹೂವುಬಿಟ್ಟಾಗ ಏರಬೇಕು. ಪರಿಮಳದ ಸಂತೆ. ಚಾಮುಂಡಿಯನ್ನು ಏರುವಾಗ ಮೆಟ್ಟಿಲು ಗುಡಿಸುತ್ತಿದ್ದ ಒಬ್ಬ ಮುದುಕನ ಜತೆ ಮಾತಾಡಿದೆ. ಅವನ ಕನ್ನಡವು ಚಳಿಗಾಲದ ಅವರೆಕಾಯಿಯ ಸೊಗಡಿನಂತಿತ್ತು. ಚಾರಣ ಯಾರ ಜತೆ ಎನ್ನುವುದೂ ಅನುಭವವನ್ನು ನಿರ್ಧರಿಸುತ್ತದೆ. ಚನ್ನರಾಯನ ದುರ್ಗವನ್ನು ಸಮಾನಮನಸ್ಕ ಸ್ನೇಹಿತರ ಕುಟುಂಬಗಳ ಜತೆ ಏರಿದ್ದೆವು. ಹರಟುತ್ತ ಏರಿಳಿವಾಗ ಆಯಾಸ ಕಾಣಲಿಲ್ಲ. ಆದರೆ ದನಗಾಹಿಗಳು ಹಾಕಿದ ಬೆಂಕಿಗೆ ಬೆಟ್ಟದ ಹುಲ್ಲುತಂಡೆಗಳೆಲ್ಲ ಸುಟ್ಟು ಕಾಲಿಟ್ಟಾಗ ಏಳುತ್ತಿದ್ದ ಬೂದಿಯು, ಮನವನ್ನು ಖಿನ್ನಗೊಳಿಸಿತು. ಕಾಡುವ

ಬೆಟ್ಟದ ಮೇಲೇರಿ ಬರೆದ ಚಿತ್ರದಂತೆ ಕಾಣುವ ಕೆಳಗಿನ ಊರು ಹೊಳೆ ತೋಟ ಕೆರೆಗಳನ್ನು ನೋಡುವುದು ನನಗೆ ಸದಾ ಖುಶಿ ಕೊಡುತ್ತದೆ. ತಾರುಣ್ಯದಲ್ಲಿ ನಮ್ಮ ತೋಟದಮನೆಯಿದ್ದ ಗೇರಮರಡಿ ಗ್ರಾಮದಲ್ಲಿ ಮರಡಿಗಳನ್ನು ಏರುತ್ತಿದ್ದೆ. ಅಕ್ಕಿನುಚ್ಚು ಚೆಲ್ಲಿದಂತೆ ಕಾಣುವ ಹಳ್ಳಿಗಳನ್ನು ಕನ್ನಡಿಯಂತಹ ಕೆರೆಗಳನ್ನು ಹಸಿರಗಡಲಿನಂತಹ ತೋಟಗಳನ್ನು ಅಲ್ಲಿಂದ ವೀಕ್ಷಿಸುತ್ತಿದ್ದೆ. ನಾವು ಕೆಮ್ಮಣ್ಣುಗುಂಡಿಯ ಝಡ್ ಪಾಯಿಂಟ್ ಶಿಖರವನ್ನು ಏರಿದಾಗಲೂ ಅಷ್ಟೆ. ಅಲ್ಲಿಂದ ಲಕ್ಕವಳ್ಳಿ ಡ್ಯಾಮನ್ನು ಹುಡುಕುತ್ತಿದ್ದೆವು. ಅದು ದಿಗಂತದಲ್ಲಿ ಒಮ್ಮೆ ನೀರಿನಿಂದ ಫಳ್ಳೆಂದು ಬೆಳಗಿ ಮೋಡಗಳಲ್ಲಿ ಮರೆಯಾಗುತ್ತಿತ್ತು. ಮಂಜಿನಲ್ಲಿ ಕಾಣದಾಗುವ ನಮ್ಮೂರಲ್ಲಿ ನಮ್ಮ ಬೀದಿಯನ್ನೂ ಮನೆಯನ್ನೂ ಗುರುತಿಸುವುದಕ್ಕೆ ಯತ್ನಿಸುತ್ತಿದ್ದೆವು. ನಮ್ಮೂರ ಸಮೀಪದ ರಾಮಗಿರಿಯ ಬೆಟ್ಟ ದೊಡ್ಡದಿಲ್ಲ. ಆದರೆ ಅದರ ತುದಿಯಿಂದ ಕೆಂಪು ಹೆಂಚಿನ ಮನೆಗಳೂ ಊರೂ ಹೊಲಗಳೂ ಕೆರೆಯೂ ದಾವಣಗೆರೆ ಕಡೆ ಸಾಗುವ ರೈಲುಹಳಿಯೂ ಬಣ್ಣಬಣ್ಣದ ದಾರದಲ್ಲಿ ಬಟ್ಟೆಯ ಮೇಲೆ ಹೂವುಮೊಗ್ಗು ಎಲೆಗಳ ಕ್ರಾಸ್‌ಸ್ಟಿಚ್ ಚಿತ್ರಬಿಡಿಸಿದಂತೆ ತೋರುತ್ತವೆ. ಕಾಡುವ

ನಾವಿರುವ ಹೊಸಪೇಟೆಯ ಜೋಳದರಾಶಿಯ ತುದಿಯಲ್ಲಿ ನಿಂತು ನೋಡಿದರೆ ಎರಡು ಬೆಟ್ಟಸಾಲುಗಳ ನಡುವೆ ಹೊಳೆ. ಅದರ ಆಸುಪಾಸಿನಲ್ಲಿ ಕಬ್ಬು ಬಾಳೆ ನೆಲ್ಲಿನ ಹಸಿರುಹಾಸು; ತೊಟ್ಟಿಲೊಳಗೆ ಮಲಗಿರುವ ಕೂಸಿನಂತೆ ನದೀ ಕಣಿವೆಯಲ್ಲಿ ನಾನು ನನ್ನ ಬಾಳಿನ ಹೆಚ್ಚು ಆಯಸ್ಸು ಕಳೆದ ಹೊಸಪೇಟೆ. ಕೆಳಗಿನ ತೆಂಗಿನತೋಟದ ಕಡಲನ್ನು ಅದರ ನಡುವಿನ ಕೆಂಪುಹೆಂಚಿನ ಊರನ್ನು ಕಾಣಿಸುವ ಬೆಟ್ಟಗಳೆಂದರೆ, ಕೂಟಗಲ್ಲು ಮತ್ತು ಸಿಡಿಲಮಲ್ಲಿಕಾರ್ಜುನ. ಶಿವಗಂಗೆ, ಮೇರುತಿ, ತೇರಳ್ಳಿಬೆಟ್ಟ, ಕುದುರೆಮುಖ, ಮುಳ್ಳಯ್ಯನಗಿರಿ ಏರುವುದೆಂದರೆ, ಹೆಲಿಕ್ಯಾಪ್ಟರಿನಲ್ಲಿ ಕೂತು ಮಂತ್ರಿಗಳು ವೈಮಾನಿಕ ಸಮೀಕ್ಷೆ ನಡೆಸಿದಂತೆ. ಅಲ್ಲಿಂದ ಮುಳುಗುವ ಸೂರ್ಯನನ್ನು, ಹರಿವ ಹೊಳೆಯನ್ನು, ದೂರದಲ್ಲಿ ಕಾಣುವ ಊರು, ಹೊಲಮನೆಯನ್ನು ನೋಡುವಾಗ ಹಕ್ಕಿಯಂತೆ ಹಾರಿಹೋಗಲೇ ಅನಿಸುತ್ತದೆ.

ನಂದಿಬೆಟ್ಟದಿಂದ ಬೆಂಗಳೂತೂ ರಾತ್ರಿಯ ಹೊತ್ತು ಉರಿಯುವ ಚಿತೆ. ಮುಳ್ಳಯ್ಯನಗಿರಿಯಿಂದ ಕಾಣುವ ಚಿಕ್ಕಮಗಳೂರು, ತೇರಳ್ಳಿ ಬೆಟ್ಟದಿಂದ ಕೋಲಾರವು ತಾರೆಗಳನ್ನು ಚೆಲ್ಲಾಡಿದ ಅಂಗಳಗಳು. ಚಾಮುಂಡಿ ಬೆಟ್ಟದಿಂದ ಮೈಸೂರು ಕಾರ್ತೀಕ ಮಾಸದ ಗುಡಿಯಂತೆ ತೋರುತ್ತದೆ. ಕಾಡುವ

ಶಿಖರದಿಂದ ಹೊಳೆಕಾಣಿಸುವ ಬೆಟ್ಟಗಳು ಕೆಲವಿವೆ. ಹೊನ್ನಾವರದ ಬಳಿಯಿರುವ ಕರಿಕಾಲಮ್ಮೆಯ ಬೆಟ್ಟದಿಂದ ಅಘನಾಶಿನಿಯ ಡೊಂಕಾದ ಹರಿವು; ಜಟಿಂಗರಾಮೇಶ್ವರ ಬೆಟ್ಟದಿಂದ ಹಗರಿ ಹೊಳೆಯ ಬಯಲ ಹರಿವು; ಹಂಪಿಯ ಮತಂಗ ಪರ್ವತದಿಂದ ತುಂಗಭದ್ರೆಯು ಚಕ್ರತೀರ್ಥದಲ್ಲಿ ಎಲ್ ಆಕಾರಕ್ಕೆ ಉತ್ತರಕ್ಕೆ ತಿರುಗಿ ಮತ್ತೆ ಬಲಕ್ಕೆ ಪಡುವಣಕ್ಕೆ ಹೊರಳಿ ವಿಠಲಗುಡಿಯತ್ತ ಸರಿದುಹೋಗುತ್ತ ನಿರ್ಮಿಸುವ ಝಡ್ ಹರಿವು. ಅದರಾಚೆ ಆನೆಗೊಂದಿ ಪಂಪಾಸರೋವರ ಅಂಜನಾದ್ರಿ ಪರ್ವತಗಳು. ಗುಡಿಮಂಟಪಗಳ ಚರಿತ್ರೆಯ ನಡುವೆ ಕಲ್ಲುಬಂಡೆಗಳ ನಡುವಣ ಬಯಲಿನಲ್ಲಿ ಕಬ್ಬು ಬಾಳೆ ಬತ್ತಗಳ ಹಸಿರು ವರ್ತಮಾನ ಕೈಕೈಹಿಡಿದು ಜೀವಿಸುತ್ತಿವೆ. ಬೆಟ್ಟದ ನೇರ ಕೆಳಗೆ ಸಕ್ಕರೆಪಾಕ ಅಚ್ಚುಹೊಯ್ದಂತೆ ಸೂಳೆಬಜಾರಿನ ಮಂಟಪಗಳು. ಕಾಡುವ

ಬೆಟ್ಟಗುಡ್ಡಗಳನ್ನು ಏರುವಾಗ ಇತಿಹಾಸವೂ ನಮ್ಮ ಜತೆಗೆರುತ್ತ ಗತಕಾಲದ ಕತೆಗಳಿಗೆ ಕರೆದೊಯ್ಯುತ್ತದೆ. ದೇವರಾಯನದುರ್ಗ, ಚನ್ನರಾಯನದುರ್ಗ, ಸಾವನದುರ್ಗ, ನಂದಿದುರ್ಗ ಕವಲೆದುರ್ಗ, ಕಮ್ಮಟದುರ್ಗ, ಗಜೇಂದ್ರಗಢ, ನಿಜಗಲ್ಲು, ಉಚ್ಚಂಗಿದುರ್ಗ, ಚಿತ್ರದುರ್ಗ, ಜಲದುರ್ಗ-ತಮ್ಮ ನಿಸರ್ಗ ಚೆಲುವಿನಿಂದಲೂ ಗರ್ಭಸ್ತ ಚರಿತ್ರೆಯ ಸ್ಮೃತಿಯಿಂದಲೂ ಸೆಳೆಯುತ್ತವೆ. ಚರಿತ್ರೆಯ ದುರಂತ ಪುಟಗಳನ್ನು ತೆರೆಯುತ್ತವೆ. ರಾಣಿವಾಸದ ಜಾಗ, ಸೈನಿಕರ ವಸತಿ, ಕೆಲಸದವರ ಜಾಗ, ರಾಣಿಸ್ನಾನದ ಜಾಗ, ದೊರೆ ಮಡಿದ ಜಾಗ, ಕುದುರೆ ಕಟ್ಟುವ ಜಾಗ, ಮಡದಿಯನ್ನೊ ತಮ್ಮನನ್ನೊ ತಳ್ಳಿ ಕೊಂದ ಜಾಗ-ಗತಕಾಲದ ನೆನಪುಗಳನ್ನು ಮರುಕೊಳಿಸುತ್ತವೆ. ಇಳಿಜಾರು ಇರುವ ಕಡೆಯಲ್ಲೆಲ್ಲ ದೂಡಿಬೀಳಿಸಿ ಕೊಲ್ಲುವ ಕತೆಗಳನ್ನು ಕೇಳಿದರೆ, ಗಿರಿದುರ್ಗಗಳು ವಧಾಸ್ಥಂಭಗಳೂ ಆಗಿರುವುದು ತಿಳಿಯುತ್ತದೆ.

ಕೆಲವು ಬೆಟ್ಟಗಳ ಮೇಲೆ ಕೋಟೆಗಳಿವೆ. ಗುಡಿಗಳಿವೆ. ಕೊಳಗಳಿವೆ. ಬೆಟ್ಟಗಳ ಮೇಲೆ ಜನವಸ್ತಿಯಿದ್ದ ಕಾರಣ, ಬಾವಿ ತೋಡದೆಯೂ ಮಳೆನೀರು ಸಂಗ್ರಹಿಸಿ ಬಳಸುವ ದೊಣೆಗಳಿವೆ. ಇವುಗಳಲೆಲ್ಲ ಚೆಲುವಾದ ದೊಣೆ ಕುಮ್ಮಟದುರ್ಗ ಮತ್ತು ಕುಂತಿಬೆಟ್ಟಗಳಲ್ಲಿವೆ. ಸಾಮಾನ್ಯವಾಗಿ ಬೆಟ್ಟದ ಮೇಲಿನ ದೊಣೆಯ ಜಲ ಮಲೆತು ಪಾಚಿಗಟ್ಟಿರುತ್ತದೆ. ಇಲ್ಲಿನವು ಬೊಗಸೆಯಲ್ಲಿ ಎತ್ತಿ ಕುಡಿಯುವಂತೆ ತಾಜಾ ನೀರಿನವು.

ತಾಕತ್ತಿದ್ದರೆ ಏರುವೆಯಾ ಎಂದು ಸವಾಲು ಹಾಕುವ ಎಲ್ಲ ಬೆಟ್ಟ ಪರ್ವತಗಳು, ಬಯಲ ಬದುಕು ಸಾಕೆನಿಸಿದಾಗ ಕನಸಿಗೆ ಬಂದು ಕಾಡುತ್ತವೆ. ನಮ್ಮೊಳಗಿನ ಯಾವುದೊ ಅರಕೆಯನ್ನು ತಣಿಸುವುದಕ್ಕೆಂದೇ ನೆಲದಿಂದ ಮೇಲೆದ್ದು ಆಗಸಕ್ಕೆ ಬೆಳೆದಿರುವಂತಿದೆ. ತುದಿಯಲ್ಲಿ ನಿಂತಾಗ ಸಂತೋಷ ಉಕ್ಕಿಸುತ್ತವೆ. ನೆಲಕ್ಕಿಳಿದ ಬಳಿಕ ಅಷ್ಟೆತ್ತರ ಏರಿದ್ದುಂಟೆ ಎಂದು ವಿಸ್ಮಯ ಬರಿಸುತ್ತವೆ. ತಮ್ಮ ಅಚಲತೆ ಮತ್ತು ಬೃಹದಾಕಾರಗಳಿಂದ ನಮ್ಮ ಅಹಮನ್ನು ಹುಡಿಗೊಳಿಸುತ್ತವೆ. ಭಗ್ನಗೊಂಡ ಅಹಂಕಾರದ ಚೂರುಗಳನ್ನು ಹೆಕ್ಕಿಕೊಂಡು ಆತ್ಮವಿಶ್ವಾಸದ ಚಿಪ್ಪನ್ನು ಕಟ್ಟಿಕೊಳ್ಳುವುದಕ್ಕೂ ಪ್ರೇರಿಸುತ್ತವೆ. ಇದು ಕುಮಾರಪರ್ವತ, ಶರಾವತಿ ಕಣಿವೆಯ ಏಡಿಗುಡ್ಡ ಮತ್ತು ಕೋನೂರು ಗುಡ್ಡಗಳನ್ನು ಹತ್ತಿಳಿದಾಗ ಮುದ್ದಾಮಾಗಿ ಅನುಭವಕ್ಕೆ ಬರುತ್ತದೆ. ಹೂಕಣಿವೆಯಲ್ಲಿರುವ ಹೇಮಕುಂಡ ಸಾಹೇಬ್ ಮತ್ತು ಭೂತಾನದ ಟೈಗರ್‌ನೆಸ್ಟ್ ಪರ್ವತವಿಳಿದ ಬಳಿಕ ನನಗೀ ಅನುಭವವಾಗಿದೆ. ಎಲ್ಲ ಬಗೆಯ ಆರೋಹಣಗಳು ಅಪಾಯ ಸಾಹಸ ರೋಮಾಂಚನ ಆನಂದಗಳ ಕಲಬೆರಕೆ. ಬಯಲು, ಕಣಿವೆ, ಬೆಟ್ಟಗಳು, ಲೌಕಿಕದೊಳಗಿನ ಅಲೌಕಿದಂತೆ, ಸುಖದೊಳಗಿನ ದುಗುಡದಂತೆ, ಒಂದರೊಳಗೊಂದು ಹೆಣೆದುಕೊಂಡಿವೆ. ಚಾರಣವೆಂದರೆ ಏರಿಳಿತದ ದೈಹಿಕ ಶ್ರಮವಲ್ಲ. ಅದೊಂದು ಅನುಭೂತಿ. ಕಾಡುವ

ಸ್ಥಳೀಯ ಗುಡ್ಡಬೆಟ್ಟಗಳ ಏರಾಟದ ಹವ್ಯಾಸಕ್ಕೆ ಹೊಸ ಚಾಚು ಸಿಕ್ಕಿದ್ದು ಹಿಮಾಲಯದಿಂದ. ಹಿಮಾಲಯವನ್ನು ಮೊದಲ ಸಲ ಕಂಡಾಗ ಬೆಟ್ಟಗುಡ್ಡಗಳಿಗೂ ಪರ್ವತಗಳಿಗೂ ಇರುವ ಫರಕು ತಿಳಿಯುತ್ತದೆ. ಆದರೆ ನಮ್ಮ ಬಯಲು ಮತ್ತು ಮಲೆಸೀಮೆಯ ಬೆಟ್ಟಗಳಿಗೆ ಹೋಲಿಸಿದರೆ, ಕೇದಾರ ಯಮನೋತ್ರಿ ಬದರಿಯ ಪರ್ವತ ಮತ್ತು ಕಣಿವೆಗಳು, ಯಾತ್ರಿಕ ಜಂಗುಳಿಯಿಂದ ಸುಸ್ತು ಹೊಡೆಸುತ್ತವೆ. ಚಾರಣಸುಖಕ್ಕೆ ಹಿಮಾಲಯ ಅನಿವಾರ್ಯವಲ್ಲ. ನಮ್ಮ ಗುಂಡ್ಲುಪೇಟೆಯ ಹಿಮವದ್ಗೋಪಾಲ ಬೆಟ್ಟವೂ ಕೊಡಚಾದ್ರಿ ಮುಳ್ಳಯ್ಯನಗಿರಿಗಳು ಚಳಿಗಾಲದಲ್ಲಿ ಹಿಮದ ಪೇಟ ಕಟ್ಟಿಕೊಂಡು ಹಿಮಾಲಯದಂತೆ ವೇಷಧಾರಣೆ ಮಾಡುತ್ತವೆ. ಆದರೆ ಹಿಮಾಲಯದ ಭವ್ಯತೆಯೇ ಅಲಾಯಿದ.

ಇದನ್ನೂ ನೋಡಿ: ಚಾಮರಾಜನಗರಕ್ಕೆ ಬರುವುದರಿಂದ ಅಧಿಕಾರ ಮತ್ತಷ್ಟು ಗಟ್ಟಿಯಾಗ್ತಿದೆ – ಸಿಎಂ ಸಿದ್ದರಾಮಯ್ಯ Janashakthi Media

Donate Janashakthi Media

Leave a Reply

Your email address will not be published. Required fields are marked *