ಹತ್ತಿಯ ಮೇಲೆ ಆಮದು ಸುಂಕಗಳ ರದ್ಧತಿ-ಹತ್ತಿ ರೈತರಿಗೆ ವಿನಾಶಕಾರಿ: ಕಿಸಾನ್‍ ಸಭಾ ಖಂಡನೆ

ಈ ಸಂವೇದನಾಹೀನ ನಿರ್ಧಾರದ ಬದಲು ರೈತರಿಗೆ ಉತ್ತೇಜನೆ ನೀಡುವ  ಕ್ರಮ ಕೈಗೊಳ್ಳಬೇಕು

ಕೇಂದ್ರ ಸರಕಾರ 2022 ರ ಏಪ್ರಿಲ್ 14 ರಿಂದ ಸೆಪ್ಟೆಂಬರ್ 30 ರವರೆಗೆ ಎಲ್ಲಾ ಹತ್ತಿ ಆಮದುಗಳಿಗೆ ಕಸ್ಟಮ್ಸ್ ಸುಂಕದಿಂದ ವಿನಾಯಿತಿ ನೀಡಲು ನಿರ್ಧರಿಸಿದೆ.ಇದು ನರೇಂದ್ರ ಮೋದಿ ಸರಕಾರ ಕಾರ್ಪೊರೇಟ್ ಜವಳಿ ಕಂಪನಿಗಳ ಆದೇಶದ ಮೇರೆಗೆ ಕೈಗೊಂಡಿರುವ  ಏಕಪಕ್ಷೀಯ ನಿರ್ಧಾರ ಎಂದು ಅಖಿಲ ಭಾರತ ಕಿಸಾನ್‍ ಸಭಾ(ಎಐಕೆಎಸ್‍) ಖಂಡಿಸಿದೆ. ಹತ್ತಿ ಆಮದಿನ ಮೇಲೆ ಸೆಸ್ ಮತ್ತು ಸರ್‍ಚಾರ್ಜ್‍ಗಳು  ಸೇರಿದಂತೆ ಸುಮಾರು 11% ತೆರಿಗೆ ವಿಧಿಸಲಾಗುತ್ತಿದೆ. ಇತ್ತ  ಭಾರತದಲ್ಲಿ ಹತ್ತಿ ಬೆಳೆವ ರೈತರಿಗೆ ಅಗತ್ಯ ರಕ್ಷಣೆಯಿಲ್ಲ. ಅವರು  ಬೆಳೆದ ಹತ್ತಿಗೆ ಫಲದಾಯಕ ಬೆಲೆಗಳನ್ನಾಗಲೀ,  ಸರಕಾರದಿಂದ ಖರೀದಿಯನ್ನಾಗಲೀ ಖಾತ್ರಿಪಡಿಸಿಲ್ಲ. ಸ್ವಾಮಿನಾಥನ್ ಆಯೋಗ ಶಿಫಾರಸು ಮಾಡಿರುವ ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟು ಬೆಲೆಯ ಖಾತ್ರಿಯನ್ನು ನೀಡಲು ಮುಂದಾಗದ ಸರಕಾರ ಈ ಕ್ರಮವನ್ನು ಕೈಗೊಂಡಿದೆ.  ಇದರಿಂದ ಚೀನಾ, ಬ್ರೆಜಿಲ್, ಅಮೇರಿಕಾ ಸಂಯುಕ್ತ ಸಂಸ್ಥಾನಗಳು ಮತ್ತು ಇತರ ಸ್ಥಳಗಳಿಂದ ಅಗ್ಗದ ಹತ್ತಿ ಒಳಬರುವಂತಾಗಬಹುದು. ಇದರ ವ್ಯತಿರಿಕ್ತ ಪರಿಣಾಮವನ್ನು ತಡೆಯಲು ಪರಿಣಾಮಕಾರಿ ಸಂಗ್ರಹಣೆ ಮತ್ತು ಬೆಲೆ ಸ್ಥಿರೀಕರಣ ನಿಧಿ ಇಲ್ಲದಿರುವುದರಿಂದ, ಭಾರತದ ಹತ್ತಿ ರೈತರಿಗೆ  ಸಿಗುವ ಬೆಲೆಗಳು ಮತ್ತಷ್ಟು ಕುಸಿಯಬಹುದು. ಇದು ಈಗಾಗಲೇ ಬಿಕ್ಕಟ್ಟಿನ ಸ್ಥಿತಿಯಲ್ಲಿರುವ ನಮ್ಮ ದೇಶದ ಹತ್ತಿ ರೈತರ ಮೇಲೆ ಮತ್ತಷ್ಟು ಹೊರೆಗೆ ಕಾರಣವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿರುವ ಎಐಕೆಎಸ್ ಸಂಕಷ್ಟದಲ್ಲಿರುವ ರೈತರು ಅತಿ ಹೆಚ್ಚು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಈ ಹತ್ತಿ ವಲಯದಲ್ಲೇ ಎಂಬುದನ್ನು ಮರೆಯುವಂತಿಲ್ಲ ಎಂದಿದೆ.

ಜವಳಿ ಉದ್ಯಮಕ್ಕೆ ಕಚ್ಚಾ ವಸ್ತುಗಳ ಕೊರತೆಯನ್ನು ನಿಭಾಯಿಸಲು ಸಹಾಯ ಮಾಡಲಿಕ್ಕಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಬಿಜೆಪಿ ಸರ್ಕಾರ ಹೇಳಿಕೊಂಡಿದೆ. ದೇಶದಲ್ಲಿ ಹತ್ತಿ ಇಳುವರಿ ನಿರೀಕ್ಷಿತ ಪ್ರಮಾಣಕ್ಕಿಂತ ಕಡಿಮೆಯಾಗಿರುವುದು ಮತ್ತು ದೇಶೀಯ ಹತ್ತಿ ಬೆಲೆಯಲ್ಲಿನ ಏರಿಕೆಯಿಂದಾಗಿ ಆಮದು ಸುಂಕವನ್ನು ರದ್ದುಗೊಳಿಸುವುದು ಅನಿವಾರ್ಯವಾಗಿದೆ ಎಂದು ಹಣಕಾಸು ಸಚಿವಾಲಯ ಹೇಳುತ್ತದೆ. ದೇಶೀಯ ಜವಳಿ ಉದ್ಯಮಗಳ ರಫ್ತು ಸ್ಪರ್ಧಾತ್ಮಕತೆಗೆ ಉಂಟಾಗಿರುವ ತೊಡಕನ್ನು ಕಡಿಮೆ ಮಾಡಲು ಈ ನಡೆ ಎಂಬ ನೆವವನ್ನು ಒಡ್ಡುತ್ತಲೇ ಸರಕಾರ , ಇದು ಗ್ರಾಹಕರಿಗೆ ಪರಿಹಾರವನ್ನು ನೀಡುತ್ತದೆ ಎಂಬ ಆಧಾರರಹಿತ ಹೇಳಿಕೆಯನ್ನೂ ಕೊಟ್ಟಿದೆ. ದೊಡ್ಡ ಕಾರ್ಪೊರೇಟ್ ಜವಳಿ ಉದ್ಯಮಗಳು ಅಗ್ಗದ ಕಚ್ಚಾ ವಸ್ತುಗಳ ಪ್ರಯೋಜನಗಳನ್ನು ಗ್ರಾಹಕರಿಗೆ ಎಂದಿಗೂ ವರ್ಗಾಯಿಸುವುದಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ. ಏಕೆಂದರೆ ಲಾಭವನ್ನುಗರಿಷ್ಟಗೊಳಿಸಿಕೊಳ್ಳುವುದೇ ಅವರ ಏಕೈಕ ಉದ್ದೇಶ ಎಂದು ಎಐಕೆಎಸ್ ಅಭಿಪ್ರಾಯ ಪಟ್ಟಿದೆ.

ಈ ಮೊದಲು ಕಚ್ಚಾ ರೇಷ್ಮೆಯ ಮೇಲಿನ ಆಮದು ಸುಂಕವನ್ನು ತೆಗೆದು ಹಾಕಿದ್ದರ ಕಹಿ ಅನುಭವದ ಹಿನ್ನೆಲೆಯಲ್ಲಿ ಇದನ್ನು ನೋಡಬೇಕಾಗಿದೆ. ನಮ್ಮ ದೇಶದ ರೈತರಿಗೆ ವಿನಾಶ ತರುವ ಈ ನಿರ್ಧಾರವನ್ನು  ಬಿಜೆಪಿ ಸರಕಾರ ಹಿಂತೆಗೆದುಕೊಳ್ಳಬೇಕು, ಹತ್ತಿಯ ಮೇಲೆ ಆಮದು ಸುಂಕಗಳನ್ನು ಮತ್ತೆ ಹಾಕಬೇಕು ಮತ್ತು ರೈತರ ಬೆಳೆಗಳನ್ನು ಫಲದಾಯಕ ಬೆಲೆಗಳಲ್ಲಿ ಖರೀದಿಸಿಲು ವ್ಯವಸ್ಥೆ ಏರ್ಪಡಿಸಬೇಕು ಎಂದು ಆಗ್ರಹಿಸಿರುವ ಎಐಕೆಎಸ್, ಆಮದು ಸುಂಕಗಳನ್ನು ರದ್ದು ಪಡಿಸಿ ಆದಾಯವನ್ನು ಕಳೆದುಕೊಳ್ಳುವ ಬದಲು, ರೈತರಿಗೆ ಉತ್ತೇಜನೆ ನೀಡುವ ಕ್ರಮ ಕೈಗೊಳ್ಳಬೇಕು ಎಂದು ಹೇಳಿದೆ. ಈ ಸಂವೇದನಾಹೀನ ನಿರ್ಧಾರದ ವಿರುದ್ಧ ಪ್ರತಿಭಟಿಸಬೇಕು ಎಂದು ಅದು ಹತ್ತಿಬೆಳೆವ ರಾಜ್ಯಗಳ ತನ್ನ ಘಟಕಗಳಿಗೆ ಅದು ಕರೆ ನೀಡಿದೆ.

Donate Janashakthi Media

Leave a Reply

Your email address will not be published. Required fields are marked *