ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರನ್ನು ನಿರ್ಲಕ್ಷ್ಯಿಸುವ ಧೋರಣೆಗಳನ್ನು ಅನುಸರಿಸುತ್ತಿವೆ. ಕೃಷಿಕರ ಆದಾಯ ನಿರಂತರವಾಗಿ ಕುಸಿಯುತ್ತಿದೆ. ಹತ್ತಿ ಬೆಳೆ ಉತ್ಪಾದನಾ ವೆಚ್ಚ ವಿಪರೀತವಾಗಿ ಏರಿಕೆಯಾಗುತ್ತಿದ್ದರೂ ಕನಿಷ್ಠ ಬೆಂಬಲ ಬೆಲೆ ನಿಗದಿಯಲ್ಲಿ ಮೀನಮೇಷ ಮಾಡಲಾಗುತ್ತಿದೆ ಎಂದು ಎಐಕೆಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ.ವಿಜು ಕೃಷ್ಣನ್ ಕಳವಳ ವ್ಯಕ್ತಪಡಿಸಿದರು.
ಯಾದಗಿರಿ ಜಿಲ್ಲೆ,ಶಹಾಪುರ ತಾಲ್ಲೂಕಿನ ಭೀಮರಾಯನ ಗುಡಿ ಕೃಷಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಕರ್ನಾಟಕ ಪ್ರಾಂತರೈತ ಸಂಘ ಆಯೋಜಿಸಿದ್ದ ಹತ್ತಿ ಬೆಳೆಗಾರರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಾ, ಹಿಂದಿನ ಬಿಜೆಪಿ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರದ ಕೃಷಿ ಇಲಾಖೆ ಹತ್ತಿಗೆ ಲಾಭದಾಯಕ ಬೆಂಬಲ ಬೆಲೆ ಯಾಗಿ 14 ಸಾವಿರ ರೂ ನೀಡುವಂತೆ ಶಿಪಾರಸ್ಸು ಮಾಡಿದ್ದರೆ ,ಅದೇ ಪಕ್ಷದ ಕೇಂದ್ರ ಸರ್ಕಾರ ಬೆಂಬಲ ಬೆಲೆಯಾಗಿ ಕೇವಲ 6600 rs ಘೋಷಣೆ ಮಾಡಿದೆ. ಉತ್ಪಾದನಾ ವೆಚ್ಚ ಕ್ಕಿಂತ ಕಡಿಮೆ ಬೆಂಬಲ ಬೆಲೆ ನಿಗದಿ ರೈತರನ್ನು ದಿವಾಳಿ ಮಾಡುವ ದುರುದ್ದೇಶದ್ದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮಗ್ರ ಉತ್ಪಾದನಾ ವೆಚ್ಚ ಆಧರಿಸಿ ಬೆಂಬಲ ಬೆಲೆ ಇಲ್ಲದೇ ಇರುವುದರಿಂದ ಕರ್ನಾಟಕದ ಹತ್ತಿ ಬೆಳೆಗಾರರು ಕಳೆದ ವರ್ಷ ಒಂದರಲ್ಲೇ ಸುಮಾರು ಐದು ಸಾವಿರ ಕೋಟಿ ರೂಗಳ ನಷ್ಟ ಅನುಭವಿಸಿದ್ದಾರೆ ಎಂದು ದೂಷಿಸಿದರು.
ಮುಖ್ಯ ಆತಿಥಿಯಾಗಿ ಪಾಲ್ಗೊಂಡಿದ್ದ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ ಯಶವಂತ ಮಾತನಾಡಿ, ಕೇಂದ್ರ ಸರ್ಕಾರದ ಆಮದು ನೀತಿ ಹತ್ತಿ ಬೆಳೆಗಾರರಿಗೆ ವಿರುದ್ದವಾಗಿದೆ. ಯಾವುದೇ ಪ್ರಮಾಣ ನಿರ್ಬಂದ ಇಲ್ಲದೇ ಸುಂಕ ರಹಿತವಾಗಿ ಆಮದು ಮಾಡಿಕೊಳ್ಳಲಾಗುತ್ತಿದೆ. ಈ ಆಮದು ಕಾರಣದಿಂದಲೇ ವರ್ಷಗಟ್ಟಲೆ ಹತ್ತಿ ದಾಸ್ತಾನು ಮಾಡಿ ಕಾದರೂ ಬೆಲೆ ಸಿಗುತ್ತಿಲ್ಲ. ಇದರಿಂದ ಹತ್ತಿ ಬೆಳೆಗಾರರು ಸಾಲಭಾಧೆಗೆ ಸಿಲುಕಿತ್ತಿದ್ದಾರೆ. ಬೆಲೆ ಕುಸಿತದಿಂದ ಕಂಗೆಟ್ಟ ರೈತರ ಉತ್ಪನ್ನಗಳ ಖಾತರಿ ಖರೀದಿಗೆ ಜುಲೈ ನಲ್ಲಿ ಮಂಡಿಸುವ ಬಜೆಟ್ ನಲ್ಲಿ ಕನಿಷ್ಠ ಹತ್ತು ಸಾವಿರ ಕೋಟಿ ಆವರ್ಥ ನಿಧಿ ಮೀಸಲಿಡಬೇಕು ಎಂದು ಆಗ್ರಹಿಸಿದರು.
ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಅನುಕೂಲ ಮತ್ತು ಲಾಭಕ್ಕಾಗಿ ಸಂಶೋಧನೆಗಳನ್ನು ನಡೆಸುತ್ತಿವೆ .ರೈತ ಕೇಂದ್ರಿತ ಸಂಶೋದನೆ ಗಳು ನಡೆಯುತ್ತಿಲ್ಲ. ಎಲ್ಲಾ ಕೃಷಿ ತಂತ್ರಜ್ಞಾನ ಸಂಬಂಧಿಸಿದ ಸಂಶೋಧನೆಗಳು ಸಾರ್ವಜನಿಕ ಕ್ಷೇತ್ರಗಳಲ್ಲಿ ನಡೆಯಬೇಕು. ಸಂಶೋಧನಾ ಖಾಸಗೀಕರಣ ದೇಶದ ಸ್ವಾವಲಂಬನೆ ಗೆ ಆಪಾಯ ಉಂಟು ಮಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ರಾಜ್ಯ ಸಮಾವೇಶದಲ್ಲಿ ಯಾದಗಿರಿ, ವಿಜಯಪುರ, ರಾಯಚೂರು, ಕಲ್ಬುರ್ಗಿ ಜಿಲ್ಲೆಗಳು ಸೇರಿದಂತೆ ಹತ್ತಿ ಬೆಳೆಯುವ ಪ್ರದೇಶದ ಜಿಲ್ಲೆಗಳ ,ದೊಡ್ಡ ಸಂಖ್ಯೆಯ ಮಹಿಳೆಯರು ಸೇರಿದಂತೆ ಸುಮಾರು 300 ಕ್ಕೂ ರೈತರು ಭಾಗವಹಿಸಿ, ಕ್ವಿಂಟಾಲ್ ಹತ್ತಿಗೆ ಕನಿಷ್ಠ 12000rs ಕನಿಷ್ಟ ಬೆಂಬಲ ಬೆಲೆ ನೀಡಬೇಕು,ಸಾರ್ವಜನಿಕ ಕ್ಷೇತ್ರ ಹತ್ತಿ ಸಂಶೋಧನೆಗೆ ಹೆಚ್ಚಿನ ಅನುದಾನ ನೀಡಬೇಕು. ನಕಲಿ ಹತ್ತಿ ಬೀಜ,ಕ್ರಿಮಿನಾಶಕ, ರಸಗೊಬ್ಬರ ಉತ್ಪಾದಕರ,ಮಾರಾಟಾಗಾರರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು, ಹತ್ತಿ ಬೀಜ ಕಾಳಸಂತೆ ಮಾರಾಟ ತಡೆಗಟ್ಟಬೇಕು ಎಂದು ಆಗ್ರಹಿಸಿ ನಿರ್ಣಯ ಅಂಗೀಕರಿಸಿದರು ಹಾಗೂ ಈ ನಿರ್ಣಯಗಳ ಜಾರಿಗೆ ಒತ್ತಾಯಿಸಿ ಜುಲೈ 3,2023 ರಂದು ಹತ್ತಿ ಬೆಳೆಯುವ ಪ್ರದೇಶಗಳ ಜಿಲ್ಲಾ ,ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟಿಸುವುದಾಗಿ ಘೋಷಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘ ಯಾದಗಿರಿ ಜಿಲ್ಲಾ ಅಧ್ಯಕ್ಷ ಚನ್ನಪ್ಪ ಆನೇಗುಂದಿ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ಕಲ್ಬುರ್ಗಿ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ,ಜಿಲ್ಲಾ ಕಾರ್ಯದರ್ಶಿ ಡಾ.ಸಾಯಬಣ್ಣ ಗುಡುಬಾ, ರಾಯಚೂರು ಜಿಲ್ಲಾ ಅಧ್ಯಕ್ಷ ವೀರನಗೌಡ ಪಾಟೀಲ್ ,ಜಿಲ್ಲಾ ಕಾರ್ಯದರ್ಶಿ ನರಸಣ್ಣ ನಾಯಕ, ವಿಜಯಪುರ ಜಿಲ್ಲಾ ಅಧ್ಯಕ್ಷ ಅಣ್ಣರಾಯ ಈಳೀಗೇರ ,ಜಿಲ್ಲಾ ಕಾರ್ಯದರ್ಶಿ ಬೀಮರಾಯ ಪೂಜಾರಿ, ಯಾದಗಿರಿ ಜಿಲ್ಲಾ ಮುಖಂಡರುಗಳಾದ ಎಸ್ ಎಂ ಸಾಗರ್ , ಬೀಮರಾಯ ಪೂಜಾರ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.