- ಉತ್ತರ ಪ್ರದೇಶದ ಮಾದರಿಯಲ್ಲೇ ರಾಜ್ಯದಲ್ಲೂ ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೆ
ಕೊಡಗು : ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡು ಪಕ್ಷವೂ ಸಂಪೂರ್ಣ ಮುಳುಗಡೆಯಾಗುತ್ತಿರುವುದರಿಂದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹತಾಶರಾಗಿದ್ದಾರೆ. ಈ ಹತಾಶ ಮನೋಭಾವದಿಂದಲೇ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಏನೇನೋ ಮಾತನಾಡುತ್ತಿದ್ದಾರೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಮಡಿಕೇರಿಯಲ್ಲಿ ಪೊಲೀಸ್ ಇಲಾಖೆಯೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಅವರು, ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಬಿಜೆಪಿ ಮುಖಂಡ ಯೋಗೇಶ್ ಗೌಡ ಹತ್ಯೆ ವಿಚಾರದಲ್ಲಿ ಸಿಬಿಐ ಬಂಧಿಸಿರುವ ವಿಚಾರಕ್ಕೆ ಸಂಬಂಧಿಸಿ ಅವರು ಪ್ರತಿಕ್ರಿಯಿಸಿದರು. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಯೋಗೇಶ್ ಗೌಡ ಅವರ ಹತ್ಯೆಯಾಗಿತ್ತು. ನಮ್ಮ ಕಾರ್ಯಕರ್ತರು ಹತ್ಯೆಯಾಗಿದ್ದರಿಂದ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ಸಿಬಿಐ ಒಂದು ಸ್ವಾಯತ್ತ ಸಂಸ್ಥೆಯಾಗಿ ಅದು ಕಾನೂನು ಬದ್ಧವಾಗಿ ವಿಚಾರಣೆ ಮಾಡುತ್ತಿದೆ. ಅದು ವಿಚಾರಣೆ ಮಾಡಿದ್ದನ್ನು ನ್ಯಾಯಾಲಯ ಕೂಡ ಪರಿಶೀಲನೆ ಮಾಡುತ್ತದೆ. ರಾಜಕೀಯ ದುರುದ್ದೇಶದಿಂದ ಸಿಬಿಐ ತನಿಖೆ ಆಗುತ್ತಿದ್ದರೆ ಅದೆಲ್ಲವೂ ಬಯಲಾಗುವುದಿಲ್ಲವೇ ಎಂದು ಪ್ರಶ್ನಿಸಿದರು. ಹೀಗಾಗಿ ಇದರಲ್ಲಿ ರಾಜಕೀಯ ದುರುದ್ದೇಶ ಎನ್ನೋದು ಹೇಗೆ ಇರುತ್ತದೆ ಎಂದರು.
ಇನ್ನು ಡಿಜೆ ಹಳ್ಳಿ, ಕೆ.ಜಿ. ಹಳ್ಳಿ ಗಲಾಟೆ ಪ್ರಕರಣದಲ್ಲಿ ಮಾಜಿ ಮೇಯರ್ ಸಂಪತ್ ರಾಜ್ ಅವರನ್ನು ಇನ್ನೂ ಬಂಧಿಸದ ವಿಷಯಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ಈಗಾಗಲೇ ನಾಲ್ಕು ತಂಡಗಳು ಸಂಪತ್ ರಾಜ್ ಅವರನ್ನು ಹುಡುಕಾಡುತ್ತಿವೆ. ಆದಷ್ಟು ಶೀಘ್ರವೇ ಸಂಪತ್ ರಾಜ್ ಬಂಧನವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನು:
ಉತ್ತರ ಪ್ರದೇಶದ ಮಾದರಿಯಲ್ಲೇ ರಾಜ್ಯದಲ್ಲೂ ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೆ ತರಲಾಗುವುದು. ಮದುವೆಯಾಗುವವರೆಗೆ ಪ್ರೀತಿಸುವ ನಾಟಕವಾಡುತ್ತಾರೆ. ಆನಂತರ ಮದುವೆ ವೇಳೆ ಮತಾಂತರ ಕಡ್ಡಾಯ ಮಾಡುತ್ತಾರೆ. ಅಂದರೆ ಮದುವೆ ಮೂಲಕ ಮತಾಂತರ ಮಾಡುತ್ತಿರುವುದು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡಲಾಗುತ್ತಿದೆ. ಎಂದರು.
ಅಲಹಾಬಾದ್ ಹೈಕೋರ್ಟ್ ಕೂಡ ಮದುವೆ ಮೂಲಕ ಮತಾಂತರ ಮಾಡುವುದು ತಪ್ಪು ಎಂದು ಹೇಳಿದೆ. ಹೀಗಾಗಿಯೇ ಉತ್ತರ ಪ್ರದೇಶ ಸರ್ಕಾರ ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನು ಜಾರಿಗೆ ಮುಂದಾಗಿದೆ. ಇದೇ ಮಾದರಿಯಲ್ಲೇ ರಾಜ್ಯದಲ್ಲೂ ಕಾನೂನು ಜಾರಿ ಮಾಡಲಾಗುವುದು ಎಂದಿದ್ದಾರೆ.
ರಾಜ್ಯದಲ್ಲೂ ಲವ್ ಜಿಹಾದ್ ನಿಂದಾಗಿ ಸಮಾಜದ ಸ್ವಾಸ್ಥ್ಯ ಶಾಂತಿ ಹಾಳಾಗುತ್ತಿದೆ. ಆದ್ದರಿಂದ ರಾಜ್ಯದಲ್ಲೂ ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನು ಜಾರಿಗೆ ತರಲಾಗುವುದು ಎಂದಿದ್ದಾರೆ.