ಬೆಂಗಳೂರು : ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರ ಪತ್ನಿ ಗೀತಾ ಶಿವರಾಜ್‌ಕುಮಾರ್ ಅವರು ಶುಕ್ರವಾರ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಗೀತಾ ಶಿವರಾಜ್‌ಕುಮಾರ್ ಕಾಂಗ್ರೆಸ್ ಸೇರಲಿದ್ದಾರೆ.
ಈ ಮೂಲಕ ಜೆಡಿಎಸ್‌ನ ಮತ್ತೊಂದು ವಿಕೆಟ್ ಪತನವಾಗಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಜೆಡಿಎಸ್‌ನಿಂದ ಗೀತಾ ಶಿವರಾಜ್‌ಕುಮಾರ್ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. 2008ರಲ್ಲಿ ಜೆಡಿಎಸ್ ಅನ್ನು ಗೀತಾ ಶಿವರಾಜ್‌ಕುಮಾರ್ ಸ್ಪರ್ಧಿಸಿದ್ದರು. ಮಾಜಿ ಸಿಎಂ ಬಂಗಾರಪ್ಪ ಅವರ ಪುತ್ರಿಯಾಗಿರುವ ಗೀತಾ ಶಿವರಾಜ್‌ಕುಮಾರ್ ಇದೀಗ ಸೊರಬ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಸಹೋದರ ಮಧು ಬಂಗಾರಪ್ಪ ಅವರ ಪರವಾಗಿ ಸೊರಬದಲ್ಲಿ ಪ್ರಚಾರ ನಡೆಸುತ್ತಿದ್ದಾರೆ.
ಮಧು ಬಂಗಾರಪ್ಪ ಸೊರಬದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಅವರಿಗೆ ಎದುರಾಳಿಯಾಗಿ ಗೀತಾ ಶಿವರಾಜ್‌ಕುಮಾರ್ ಅವರ ಮತ್ತೊಬ್ಬ ಸಹೋದರ ಕುಮಾರ್ ಬಂಗಾರಪ್ಪ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ. ಮಧು ಬಂಗಾರಪ್ಪ ಈ ಹಿಂದೆ ಅವರು ಜೆಡಿಎಸ್ ಯುವ ಘಟಕದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಆದರೆ, ಕಳೆದ ವರ್ಷ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆ ಆಗಿದ್ದರು. ಅದಾದ ಬಳಿಕ ಕಾಂಗ್ರೆಸ್‌ನ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ನೀಡಲಾಗಿದೆ.
ಇದನ್ನೂ ಓದಿ : ಜನಮತ 2023 : ಕೈ ಪಕ್ಷಕ್ಕೆ ಸೇರ್ಪಡೆಯಾದ ಬೆನ್ನಲ್ಲೇ ಬಿ ಫಾರಂ ಪಡೆದ ಜಗದೀಶ್ ಶೆಟ್ಟರ್
ಈಡಿಗ ಮತಗಳ ಮೇಲೆ ಕಣ್ಣು : ಶಿವಮೊಗ್ಗ ಜಿಲ್ಲೆಯಲ್ಲಿ ಈಡಿಗ ಸಮುದಾಯದ ಮತ ದೊಡ್ಡ ಪ್ರಮಾಣದಲ್ಲಿ ಇದೆ. ಗೀತಾ ಶಿವರಾಜ್ ಕುಮಾರ್ ಅವರು ಮಾಜಿ ಸಿಎಂ ಬಂಗಾರಪ್ಪ ಅವರ ಪುತ್ರಿಯಾಗಿದ್ದು, ಡಾ ರಾಜ್‌ಕುಮಾರ್ ಕುಟುಂಬದ ಸೊಸೆಯಾಗಿದ್ದಾರೆ. ಈ ಎಲ್ಲಾ ಲೆಕ್ಕಾಚಾರದಡಿ ಕಾಂಗ್ರೆಸ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡುವ ಪ್ರಯತ್ನ ನಡೆಸಿತ್ತು. ಇದೀಗ ಮಧು ಬಂಗಾರಪ್ಪ ಸಲಹೆಯಂತೆ ಅವರು ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆ. ಈ ಮೂಲಕ ಸೊರಬದಲ್ಲಿ ಅಧಿಕೃತವಾಗಿ ಪಕ್ಷದ ಮೂಲಕವೇ ಸಹೋದರನ ಪರವಾಗಿ ಪ್ರಚಾರ ಗೀತಾ ಶಿವರಾಜ್‌ಕುಮಾರ್ ಪ್ರಚಾರ ನಡೆಸಲಿದ್ದಾರೆ. ಈ ಹಿಂದೆಯೇ ಮಧು ಬಂಗಾರಪ್ಪ ಗೀತಾ ಶಿವರಾಜ್‌ಕುಮಾರ್ ಕೂಡ ಕಾಂಗ್ರೆಸ್ ಸೇರಲಿದ್ದಾರೆ ಎಂದು ಹೇಳಿದ್ದರು.