ಬೆಂಗಳೂರು: ಕನ್ನಡ ಚಿತ್ರರಂಗದ ಹಾಸ್ಯನಟ ಮೋಹನ್ ಜುನೇಜಾ (54 ವರ್ಷ) ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮೇ 6ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಲಿವರ್ ಸಮಸ್ಯೆಯಿಂದ ತೀವ್ರವಾಗಿ ಅನಾರೋಗ್ಯಕ್ಕೆ ತುತ್ತಾದ ಮೋಹನ್ ಜುನೇಜಾ ಹೆಸರಘಟ್ಟ ಸಪ್ತಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.
ಬೆಂಗಳೂರು ಉತ್ತರ ತಾಲೂಕಿನ ತಮ್ಮೇನಹಳ್ಳಿಯಲ್ಲಿ ಹೆಂಡತಿ, ತಾಯಿ ಹಾಗೂ ಇಬ್ಬರು ಗಂಡು ಮಕ್ಕಳೊಂದಿಗೆ ವಾಸವಿದ್ದರು. ಚಲನಚಿತ್ರ ಹಾಗೂ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದ ಮೋಹನ್ ಯಾವುದೇ ಪಾತ್ರಕ್ಕೂ ಸೈ ಎನ್ನುತ್ತಿದ್ದರು. ಇತ್ತೀಚೆಗೆ ಸುದ್ದಿ ಮಾಡುತ್ತಿರುವ ಕೆಜಿಎಫ್-2 ಚಿತ್ರದಲ್ಲಿಯೂ ಅವರು ನಟಿಸಿದ್ದರು.
ನೂರಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದ ಮೋಹನ್ ಜುನೇಜ ಚೆಲ್ಲಾಟ ಚಿತ್ರದ ಮಧುಮಗ ಪಾತ್ರ ಅವರಿಗೆ ಹೆಚ್ಚು ಖ್ಯಾತಿ ಕೊಟ್ಟಿತ್ತು. ಇದಾದ ನಂತರ ಸಾಲು ಸಾಲು ಕನ್ನಡ ಸಿನಿಮಾಗಳಲ್ಲಿ ಮೋಹನ್ ಹಾಸ್ಯ ನಟನಾಗಿ ಮಿಂಚಿದ್ದರು.
ಅದ್ಭುತವಾದ ಕಲಾವಿದ ನೀನು ದೊಡ್ಡ ಹೀರೋ ಆಗ್ತೀಯಾ ಎಂದು ತನ್ನ ಮೊಬೈಲ್‌ನಲ್ಲಿ ನನ್ನ ಹೆಸರನ್ನ ಹೀರೋ ಅಂತಾನೆ, 20 ವರ್ಷದ ಹಿಂದೆ ನಮ್ಮ ಮೊದಲನೇ ಭೇಟಿಯಲ್ಲೇ ಸೇವ್ ಮಾಡಿಕೊಂಡಿದ್ದ ಪ್ರೀತಿಯ ಗೆಳಯ. ಎಲ್ಲರನ್ನು ನಗಿಸಿ ತಾನು ನಗುತ್ತಿದ್ದ ಜುನೇಜ ಇನಿಲ್ಲ. ದೇವರು ಅವರ ಆತ್ಮಕ್ಕೆ ಶಾಂತಿ ಕೊಡಲಿ. ಅವರ ಮನೆಯವರಿಗೆ ಈ ದುಃಖವನ್ನು ಭರಿಸೋ ಶಕ್ತಿ ಕೊಡಲಿ ಎಂದು ಬಿಗ್ ಬಾಸ್ ಕನ್ನಡ ಸೀಸನ್-7 ಖ್ಯಾತಿಯ ನಟ ಹರೀಶ್ ರಾಜ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ.