ಹಾಸನ: ವಿಶ್ವವಿದ್ಯಾಲಯ ಉಳಿಸಿ ಸ್ವತಂತ್ರವಾಗಿ ಅಭಿವೃದ್ಧಿ ಪಡಿಸುವಂತೆ ಒತ್ತಾಯಿಸಿ ವಿವಿ ಉಳಿಸಿ ಹೋರಾಟ ಸಮಿತಿ ವತಿಯಿಂದ ಇಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರಿಗೆ ಮನವಿ ಸಲ್ಲಿಸಿದರು.
ಮೈಸೂರು ವಿವಿ ಜೊತೆಗೆ ಹಾಸನ ವಿವಿ ವಿಲೀನಗೊಳಿಸುವ ನಿರ್ಧಾರಕ್ಕೆ ನಮ್ಮ ವಿರೋಧ ಇದೆ. ಇಲ್ಲೇ ಉಳಿಸಬೇಕು ಎಂಬುದು ನಮ್ಮ ಆಗ್ರಹವಾಗಿದೆ. ಜಿಲ್ಲೆಯ ಸಂಸದರು, ಶಾಸಕರು, ರಾಜಕೀಯ ಪಕ್ಷಗಳ ಪ್ರಮುಖ ಮುಖಂಡರು, ಜನಪರ ಸಂಘಟನೆಗಳ ಮುಖಂಡರು, ಸಾಹಿತಿಗಳು, ವಿಚಾರವಾದಿಗಳು, ಪತ್ರಕರ್ತರು ಮತ್ತು ಶಿಕ್ಷಣ ಪ್ರೇಮಿಗಳು ಭಾಗವಹಿಸಿ ದುಂಡು ಮೇಲಿನ ಸಭೆ ನಡೆಸಿ ವಿವಿ ಇಲ್ಲೇ ಉಳಿಸಬೇಕು ಎಂದು ಆಗ್ರಹಿಸಿದರು.
ಇಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಲ್ಲಿ ಬಹುತೇಕರು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಮತ್ತು ದಲಿತ ಹಾಗೂ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳೇ ಅಧಿಕ ಸಂಖ್ಯೆಯಲ್ಲಿದ್ದಾರೆ. ವಿವಿ ಮುಚ್ಚಿದರೆ ಇವರಿಗೆ ಅನ್ಯಾಯ ಆಗಲಿದೆ. ವಿದ್ಯಾರ್ಥಿನಿಯರು ಉನ್ನತ ಶಿಕ್ಷಣ ಪಡೆಯುವ ಅವಕಾಶಗಳಿಂದ ವಂಚಿತರಾಗಲಿದ್ದಾರೆ ಹಾಗಾಗಿ ವಿವಿ ಮುಚ್ಚಬಾರದು ಎಂದು ಆಗ್ರಹಿಸಿದರು.
ಇದನ್ನು ಓದಿ :-ಖೋಟಾನೋಟು ದಂಧೆಯ ಅಡ್ಡೆ ಮೇಲೆ ಪೊಲೀಸರು ದಾಳಿ; ನಾಲ್ವರ ಬಂಧನ
ಹಾಸನ ವಿಶ್ವವಿದ್ಯಾಲಯ ಕ್ಯಾಂಪಸ್ 76.08 ಎಕರೆ ಪ್ರದೇಶ ಮಾತ್ರ ಹೊಂದಿದೆ. ಅಗತ್ಯ ಪ್ರಮಾಣದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕೊರತೆ, ಮೂಲಭೂತ ಸೌಕರ್ಯದ ಕೊರತೆ, ಅಗತ್ಯ ಅನುದಾನದ ಕೊರತೆ ನಡುವೆಯೂ ಉತ್ತಮವಾಗಿ ಕೆಲಸ ಮಾಡುತ್ತಿದೆ. ಇದರಿಂದಾಗಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಸ್ಥಳೀಯವಾಗಿ ಉನ್ನತ ಶಿಕ್ಷಣ ಪಡೆಯುವ ಮತ್ತು ಅಧ್ಯಯನ ಹಾಗೂ ಸಂಶೋಧನೆ ನಡೆಸುವ ಅವಕಾಶವೂ ಸಿಕ್ಕಿದೆ. ಇದರಿಂದಾಗಿ ಜಿಲ್ಲೆಯ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿಗೆ ತುಂಬಾ ಸಹಾಯವಾಗಲಿದೆ.
ಭವಿಷ್ಯದಲ್ಲಿ ನಮ್ಮ ವಿಶ್ವವಿದ್ಯಾಲಯವು ಉತ್ತಮವಾಗಿ ಅಭಿವೃದ್ಧಿ ಹೊಂದಲು ಬಹಳ ಅವಕಾಶಗಳಿದ್ದು ಇದು ಹಾಸನ ಜಿಲ್ಲೆಯ ಹೆಮ್ಮೆಯೂ ಆಗಿದೆ ಎಂದರು. ರಾಜ್ಯ ಸರ್ಕಾರ ತಾನೇ ಆರಂಭಿಸಿರುವ ಹಾಸನ ವಿಶ್ವವಿದ್ಯಾಲಯಕ್ಕೆ ಅಗತ್ಯ ಭೂಮಿ, ಸಿಬ್ಬಂದಿ, ಮೂಲಭೂತ ಸೌಕರ್ಯ ಮತ್ತು ಅನುದಾನ ನೀಡದೆ ಮುಚ್ಚಲು ಹೊರಟಿರುವುದು ಜಿಲ್ಲೆಯ ವಿದ್ಯಾರ್ಥಿಗಳಿಗೆ ಮಾಡುತ್ತಿರುವ ಅತಿದೊಡ್ಡ ಅನ್ಯಾಯ. ಈ ಹಿಂದೆ ರಾಜ್ಯ ಸರ್ಕಾರ ಯಾವುದೇ ಅಗತ್ಯ ಮೂಲಭೂತ ಸೌಕರ್ಯ, ಅನುದಾನ ಮತ್ತು ಸಿಬ್ಬಂದಿ ಒದಗಿಸದೆ ಪೂರ್ವ ಷರತ್ತು ವಿಧಿಸಿ ತರಾತುರಿಯಲ್ಲಿ ಹಾಸನ ವಿಶ್ವವಿದ್ಯಾಲಯ ಸ್ಥಾಪಿಸಿತು.
ಈಗ ಮರಳಿ ರಾಜ್ಯ ಸರ್ಕಾರ ಹಿಂದಿನ ಕೊರತೆಗಳನ್ನು ಸರಿಪಡಿಸಿ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಲು ಅಗತ್ಯ ಕ್ರಮ ಕೈಗೊಳ್ಳುವ ಬದಲಿಗೆ ಅದನ್ನು ಮುಚ್ಚಲು ಹೊರಟಿದೆ. ಇದು ಸರ್ಕಾರಕ್ಕೆ ಉನ್ನತ ಶಿಕ್ಷಣ ಆದ್ಯತೆಯ ವಿಷಯವಾಗಿಲ್ಲ ಎನ್ನುವುದನ್ನು ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಹಾಸನ ವಿಶ್ವವಿದ್ಯಾಲಯವನ್ನು ಉಳಿಸಿ ಅದಕ್ಕೆ ಅಗತ್ಯವಿರುವ ಭೂಮಿ, ಅನುದಾನ, ಖಾಯಂ ಸಿಬ್ಬಂದಿ ಮತ್ತು ಮೂಲಭೂತ ಸೌಕರ್ಯ ಕಲ್ಪಿಸುವಂತೆ ಸರ್ಕಾರವನ್ನು ಒತ್ತಾಯಿಸಲು ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದೆ ಎಂದರು.