ಹಾಸನ: ಹಾಸನಾಂಬ ಕಲಾಕ್ಷೇತ್ರದಲ್ಲಿ ಪಾಂಚಜನ್ಯ ಹಿಂದೂ ಗಣಪತಿ ಪ್ರತಿಷ್ಠಾಪನೆ ಸಂವಿಧಾನ ವಿರೋಧಿ ಕೃತ್ಯ ಎಂದು ದಲಿತ ಹಾಗೂ ಜನಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.
ಈ ಅವಧಿಯಲ್ಲಿ ಹೊಮ-ಹವನ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮ ಮತ್ತು ಶೋಭಾಯಾತ್ರೆ ನಡೆಸುತ್ತಿದ್ದಾರೆ. ಸರ್ಕಾರಿ ಕಟ್ಟಡವಾದ ಕಲಾಕ್ಷೇತ್ರದಲ್ಲಿ ಸರ್ಕಾರೇತರ ಸಂಸ್ಥೆಗೆ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿ ಹೋಮ-ಹವನ ಮತ್ತಿತರೆ ಧಾರ್ಮಿಕ ಕಾರ್ಯಕ್ರಮ ನಡೆಸಲು ಅವಕಾಶ ನೀಡಿರುವುದನ್ನು ಮುಖಂಡರು ಖಂಡಿಸಿದ್ದಾರೆ.
ಇದು ಸಂವಿಧಾನದ ಮತಧರ್ಮ ನಿರಪೇಕ್ಷ ತತ್ವದ ಉಲ್ಲಂಘನೆಯಾಗಿದೆ. ಸರ್ಕಾರ ಮತ್ತು ಸರ್ಕಾರದ ಸಂಸ್ಥೆಗಳು ಯಾವುದೇ ಮತ ಧರ್ಮದ ಭಾಗವಾಗಿರಬಾರದು ಎನ್ನುವ ಸಂವಿಧಾನದ ನಿಯಮಗಳಿಗೆ ವಿರುದ್ಧವಾಗಿದೆ. ಒಂದು ಧರ್ಮದ ಧಾರ್ಮಿಕ ಆಚರಣೆಗೆ ಅವಕಾಶ ಮಾಡಿಕೊಟ್ಟಿರುವ ಜಿಲ್ಲಾಡಳಿತದ ಕ್ರಮವನ್ನು ವಿರೋಧಿಸಿದ್ದಾರೆ.
ಸರ್ಕಾರ ಮತ್ತು ಜಿಲ್ಲಾಡಳಿತವೇ ನಿರ್ದಿಷ್ಟವಾದ ಧರ್ಮದ ಓಲೈಕೆಗೆ ನಿಂತರೆ ಸಮಾಜದಲ್ಲಿ ಜಾತ್ಯಾತೀತ ವಾತಾವರಣ ಹಾಳಾಗಿ ಧಾರ್ಮಿಕ ಅಶಾಂತಿ ಸೃಷ್ಟಿಯಾಗುತ್ತದೆ. ಜಿಲ್ಲಾಡಳಿತ ಸರ್ಕಾರದ ಯಾವ ನಿಯಮಗಳ ಅಡಿಯಲ್ಲಿ ಪಾಂಚಜನ್ಯ ಹಿಂದೂ ಗಣಪತಿ ಪ್ರತಿಷ್ಠಾಪನೆಗೆ ಅವಕಾಶ ನೀಡಲಾಗಿದೆ ಎನ್ನುವುದನ್ನು ಜಿಲ್ಲಾಧಿಕಾರಿ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ವಿರೋಧದ ನಡುವೆಯೂ ಅವಕಾಶ ನೀಡಿದರೆ ತೀವ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ದಲಿತ ಮುಖಂಡರಾದ ಎಚ್.ಕೆ. ಸಂದೇಶ್, ರಾಜಶೇಖರ್, ಎಂ. ಸೋಮಶೇಖರ್, ಎಸ್.ಎನ್.ಮಲ್ಲಪ್ಪ, ಅಂಬುಗ ಮಲ್ಲೇಶ್, ಟಿ.ಆರ್.ವಿಜಯ ಕುಮಾರ್, ಹೆತ್ತೂರು ನಾಗರಾಜ್, ಆರ್‌ಪಿಐ ಸತೀಶ್, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಧರ್ಮೇಶ್, ಕೆಪಿಆರ್‌ಎಸ್ ಜಿಲ್ಲಾಧ್ಯಕ್ಷ ಎಚ್.ಆರ್. ನವೀನ್‌ಕುಮಾರ್, ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಎಂ.ಜಿ. ಪೃಥ್ವಿ ತಿಳಿಸಿದ್ದಾರೆ.