ಹಾಸನ: ತಾಲ್ಲೂಕಿನ ಕಸಬಾ ಹೋಬಳಿಯ ಲಕ್ಷ್ಮೀಸಾಗರ ಗ್ರಾಮದ ಸರ್ವೆ ನಂಬರ್ 35 ರಲ್ಲಿ ಸರ್ಕಾರದಿಂದ ಮಂಜೂರಾಗಿರುವ ಬಗರ್ ಹುಕುಂ ಸಾಗುವಳಿ ಭೂಮಿಯನ್ನು ಸರ್ವೆ ಮಾಡಿ ಪೋಡಿ ಮಾಡಿಕೊಡುವ ಬಗ್ಗೆ ತಹಸಿಲ್ದಾರ್ ಕಛೇರಿ ಮುಂದೆ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್)ದ ಹಾಸನ ಜಿಲ್ಲಾ ಸಮಿತಿ ಮಂಗಳವಾರ ಪ್ರತಿಭಟನೆ ನಡೆಸಿತು.
ಪ್ರತಿಭಟನೆಯಲ್ಲಿ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಅಧ್ಯಕ್ಷರಾದ ಎಚ್.ಆರ್. ನವೀನ್ ಕುಮಾರ್ ಅವರು, “ಕಸಬಾ ಹೋಬಳಿಯ ಲಕ್ಷ್ಮೀಸಾಗರ ಗ್ರಾಮದ ಸರ್ವೆ ನಂಬರ್ 35 ರಲ್ಲಿ 26 ಬಡ ದಲಿತ ಮತ್ತು ಹಿಂದುಳಿದ ಕುಟುಂಬಗಳಿಗೆ ತಲಾ 0.26 ಎಕ್ಕರೆ ಭೂಮಿಯನ್ನು 1977 ರಲ್ಲಿ ಬಗರ್ ಹುಕುಂ ಸಾಗುವಳಿಯ ಆಧಾರದಲ್ಲಿ ಮಂಜೂರು ಮಾಡಲಾಗಿತ್ತು. ಈ ವೇಳೆ ಹಂಗಾಮಿ ಸಾಗುವಳಿ ಜೀಟಿಯನ್ನು ನೀಡಲಾಗಿತ್ತು. ಅಲ್ಲಿಂದ ನಿರಂತರವಾಗಿ ಈ ಎಲ್ಲಾ ಕುಟುಂಬಗಳು ಈ ಭೂಮಿಯನ್ನು ಸಾಗುವಳಿ ಮಾಡಿ ಬೆಳೆ ಬೆಳೆದು ಸ್ವಾಧೀನಾನುಭವದಲ್ಲಿದ್ದಾರೆ. ಆದರೂ ಅವರಿಗೆ ಸರ್ವೆ ಮಾಡಿ ಪೋಡಿ ಮಾಡಿಕೊಟ್ಟಿಲ್ಲ” ಎಂದು ಹೇಳಿದರು.
ಇದನ್ನೂ ಓದಿ: ರೈತ ಪ್ರತಿಭಟನೆಗೆ ಬೆದರಿದ ದೆಹಲಿ ಪ್ರಭುತ್ವ; ಒಂದು ತಿಂಗಳು 144 ಸೆಕ್ಷನ್ ಜಾರಿ | ಹರಿಯಾಣದಲ್ಲಿ ಇಂಟರ್‌ನೆಟ್ ಸ್ಥಗಿತ!
“ಪಹಣಿಗಳಲ್ಲೂ ಈ ರೈತ ಕುಟುಂಬದ ಹೆಸರುಗಳು ಬರುತ್ತಿವೆ. 1997 ರಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ಹಾಸನದ ವಿಮಾನ ನಿಲ್ದಾಣಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ನಡೆಸಿ ರೈತರು ಅನುಭವದಲ್ಲಿರುವ ಭೂಮಿಯಲ್ಲಿ ಸ್ವಲ್ಪ ಭಾಗವನ್ನು ಸ್ವಾಧೀನ ಪಡಿಸಿಕೊಂಡು ಪರಿಹಾರವನ್ನು ನೀಡಿದ್ದಾರೆ. ಆದರೆ 26 ಕುಟುಂಬಗಳಿಗೆ ಮಂಜೂರಾಗಿದ್ದ ತಲಾ 0.26 ಎಕ್ಕರೆ ಜಾಗದಲ್ಲಿ ಕೆಐಡಿಬಿಯವರು ಭೂಸ್ವಾದೀನ ಮಾಡಿಕೊಂಡು ಉಳಿದಿರುವ ಭೂಮಿಯಲ್ಲಿ ರೈತರು ಈಗಲೂ ಅನುಭವದಲ್ಲಿದ್ದು ಕೃಷಿ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ” ಎಂದು ನವೀನ್ ಕುಮಾರ್ ಹೇಳಿದರು.
ರೈತರು ಈಗಲೂ ಅನುಭವದಲ್ಲಿದ್ದು ಕೃಷಿ ಚಟುವಟಿಕೆಗಳನ್ನು ನಡೆಸುತ್ತಿರುವ ಈ ಉಳಿಕೆ ಭೂಮಿಯನ್ನು ಸರ್ವೆ ಮಾಡಿ, ಗಡಿಗಳನ್ನು ಗುರುತಿಸಿ, ಅದ್ದು ಬಸ್ತ್ ಮೂಲಕ ಪೋಡಿ ಮಾಡಿಕೊಡಬೇಕಿದೆ ಎಂದು ತಹಸಿಲ್ದಾರ್ ಅವರಿಗೆ ಕರ್ನಾಟಕ ಪ್ರಾಂತ ರೈತ ಸಂಘ ಮನವಿ ಮಾಡಿದೆ.
ಪ್ರತಿಭಟನೆಯಲ್ಲಿ ದಲಿತ ಹಕ್ಕುಗಳ ಸಮಿತಿ ಮತ್ತು ಡಿವೈಎಫ್ಐ ಮುಖಂಡ ಪೃಥ್ವಿ ಎಂಜಿ, ಸಿಐಟಿಯು ಕಾರ್ಯದರ್ಶಿ ಅರವಿಂದ, ಲಕ್ಷ್ಮೀ ಸಾಗರ ಗ್ರಾಮಸ್ಥರಾದ ಜಯಲಕ್ಷ್ಮಿ, ರಾಜೇಶ್, ಶ್ರೀನಿವಾಸ್, ಜಯಮ್ಮ, ಮೂರ್ತಿ, ಸ್ವಾಮಿ ಮುಂತಾತವರು ಭಾಗವಹಿಸಿದ್ದರು.
ವಿಡಿಯೊ ನೋಡಿ: ಹಿಟ್ ಅಂಡ್ ರನ್ ತಿದ್ದುಪಡಿ : ಕೇಂದ್ರದ ವಿರುದ್ಧ ಸಿಡಿದೆದ್ದ ಚಾಲಕರು Janashakthi Media