- ಉಪಚುನಾವಣೆಯಲ್ಲಿ ಕ್ಷೇತ್ರದ ಗ್ರೌಂಡ್ ರಿಯಾಲಿಟಿ ಅರಿತುಕೊಳ್ಳುವಲ್ಲಿ ಕಾಂಗ್ರೆಸ್ ಫೇಲ್ ಆಗಿದೆ
ಮೈಸೂರು: ಹಸಿರು ಪಟಾಕಿ ಎಂದರೇನು ಎಂಬ ಮಾಧ್ಯಮದವರ ಪ್ರಶ್ನೆಗೆ ಗೊತ್ತಿಲ್ಲ ಎಂದು ಉತ್ತರಿಸಿದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಈ ಬಗ್ಗೆ ಸವಿವರವಾಗಿ ತಿಳಿದುಕೊಂಡು ಹೇಳುತ್ತೇನೆ ಎಂದಿದ್ದಾರೆ.
ದೀಪಾವಳಿ ಹಿನ್ನೆಲೆಯಲ್ಲಿ ಸರ್ಕಾರ ಹಸಿರು ಪಟಾಕಿ ಬಳಸಲು ಅನುಮತಿ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಟಾಕಿ ನಿಷೇಧದ ಬಗ್ಗೆ ನಮ್ಮ ಇಲಾಖೆಯಿಂದ ಮಾರ್ಗಸೂಚಿ ವರದಿ ಬಂದಿದೆ. ಅದನ್ನು ಸಿಎಂ ಗಮನಕ್ಕೆ ತಂದು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಿದ್ದೇನೆ. ಆ ನಂತರ ಸಿಎಂ ಹಸಿರು ಪಟಾಕಿ ಹೊಡೆಯಲು ಅನುಮತಿ ನೀಡಿದ್ದಾರೆ. ಆದರೆ, ಹಸಿರು ಪಟಾಕಿ ಎಂದರೇನು ಎಂಬ ಬಗ್ಗೆ ನನಗೆ ಗೊತ್ತಿಲ್ಲ. ಈ ಬಗ್ಗೆ ನಾನು ತಿಳಿದುಕೊಂಡು ಮಾತನಾಡುತ್ತೇನೆ ಎಂದು ಪ್ರತಿಕ್ರಿಯೆ ನೀಡಿ ಸುಧಾಕರ್ ಅಚ್ಚರಿ ಮೂಡಿಸಿದ್ದಾರೆ.
ಇದೇ ವೇಳೆ, ಸಚಿವ ಸಂಪುಟ ಪುನರ್ ರಚನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸುಧಾಕರ್, ಇದರ ಉಸಾಬರಿ ನಮಗೇತಕ್ಕೆ? ಸಂಪುಟ ವಿಸ್ತರಣೆಯೋ, ಪುನರ್ ರಚನೆಯೋ ಏನು ಮಾಡಬೇಕೆಂಬುದು ಸಿಎಂ ಪರಮಾಧಿಕಾರ. ಆ ವಿಚಾರದಲ್ಲಿ ನಾವು ನೀವು ಮಾತನಾಡುವುದು ಏನಿಲ್ಲ. ಮುಖ್ಯಮಂತ್ರಿಗಳು ಈಗಾಗಲೇ ಸಂಪುಟ ಪುನರ್ ರಚನೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಅಲ್ಲದೆ ದೆಹಲಿಗೆ ತೆರಳುವ ವಿಚಾರವನ್ನೂ ಬಹಿರಂಗಪಡಿಸಿದ್ದಾರೆ. ಸೂಕ್ತ ಸಂದರ್ಭದಲ್ಲಿ ಅವರು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.
ಉಪಚುನಾವಣೆಯಲ್ಲಿ ಬಿಜೆಪಿ ಗೆಲುವಿನ ವಿಚಾರಕ್ಕೆ ಪ್ರತಿಕ್ರಿಯಿಸಿದ ಸುಧಾಕರ್, ಆ ಕ್ಷೇತ್ರದ ಗ್ರೌಂಡ್ ರಿಯಾಲಿಟಿ ಅರಿತುಕೊಳ್ಳುವಲ್ಲಿ ಕಾಂಗ್ರೆಸ್ ಫೇಲ್ ಆಗಿದೆ ಎಂದರು. ಡಿಕೆಶಿ ಹಾಗೂ ಅವರ ತಮ್ಮ ಕಷ್ಟಪಟ್ಟು ಚುನಾವಣೆಯಲ್ಲಿ ಓಡಾಡಿದ್ದಾರೆ. ಚುನಾವಣೆ ಸೋಲು ಹಿನ್ನೆಲೆ ಅವರಿಬ್ಬರನ್ನೇ ಹೊಣೆ ಮಾಡುವುದು ಸರಿಯಲ್ಲ. ಇಡೀ ಕಾಂಗ್ರೆಸ್ ಪಕ್ಷ ಆರ್ ಆರ್ ನಗರ ಉಪಚುನಾವಣೆಯಲ್ಲಿ ಎಡವಿದೆ ಎಂದರು. ಬಾಗಲಕೋಟೆಯಲ್ಲಿ ಬಿಜೆಪಿ ಶಾಸಕರಿಂದ ಮಹಿಳಾ ಸದಸ್ಯೆ ಎಳೆದಾಟ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಸುಧಾಕರ್, ಘಟನೆ ಬಗ್ಗೆ ನನಗೆ ಮಾಹಿತಿ ಇಲ್ಲ. ಮಾಹಿತಿ ತಿಳಿದುಕೊಂಡು ಮಾತನಾಡುತ್ತೇನೆ ಎಂದರು.