ಬೆಂಗಳೂರು: ಕೋವಿಡ್ ಸಂಕಷ್ಟದ ವೇಳೆ ಬಿಜೆಪಿ ಸರಕಾರದ ಹೊಣೆಗೇಡಿತನದಿಂದ ಜನರು ಸಾವು ನೋವಿಗೆ ಕಾರಣವಾಗಿರುವಾಗ ಅವರ ಸಂಕಟವನ್ನು ಕೋಮುವಾದಿ ರಾಜಕೀಯಕ್ಕೆ ದುರುಪಯೋಗ ಮಾಡಿಕೊಳ್ಳುವ ಹುನ್ನಾರಕ್ಕೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ನಡೆಸಿದ್ದಾರೆ. ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಸಂಘಟನೆ ಆರೋಪಿಸಿದೆ.
ಕೋವಿಡ್ ವಾರ್ ರೂಂ ನಲ್ಲಿ ಕೆಲಸ ಮಾಡುತ್ತಿರುವ 200 ಹೊರಗುತ್ತಿಗೆ ನೌಕರರಲ್ಲಿ ಕೇವಲ 17 ಜನ ಮುಸ್ಲಿಂ ಜನಾಂಗದ ನೌಕರರ ಹೆಸರನ್ನು ಮಾತ್ರ ಉಲ್ಲೇಖಿಸುತ್ತಾ ಜನತೆಯಲ್ಲಿ ಅವರ ಬಗ್ಗೆ ಅನುಮಾನ ಸೃಷ್ಟಿಸುವ ಮೂಲಕ ದ್ವೇಷ ಮತ್ತು ಶತೃತ್ವ ಬಿತ್ತುವ ಕೆಲಸದಲ್ಲಿ ಬಿಜೆಪಿ ಸಂಸದರು, ಶಾಸಕರು ನಿರತರಾಗಿದ್ದಾರೆ. ಕೆಲವು ಸಚಿವರು ಅದಕ್ಕೆ ಪುಷ್ಠಿ ನೀಡುವ ಹೇಳಿಕೆಗಳನ್ನು ತನಿಖೆಗೂ ಮುನ್ನವೇ ನೀಡುತ್ತಿದ್ದಾರೆ.
ಇದನ್ನು ಓದಿ: ದುಡ್ಡು ಕೊಟ್ಟರೆ ಹಾಸಿಗೆ: ದಂಧೆಯ ರುವಾರಿ ಸತೀಶ್ ರೆಡ್ಡಿ ಬಂಧನಕ್ಕೆ ಕಾಂಗ್ರೆಸ್ ಆಗ್ರಹ
ವಾರ್ ರೂಂ ಜವಾಬ್ದಾರಿ ಹೊಂದಿರದ ಬಿಬಿಎಂಪಿ ಜಂಟಿ ಆಯುಕ್ತ ಸರಫರಾಜ್ ಖಾನ್ ರವರನ್ನು ಅಲ್ಪಸಂಖ್ಯಾತರು ಎಂಬ ಕಾರಣಕ್ಕೆ ಗುರಿಯಾಗಿಸಲಾಗುತ್ತಿದೆ. ಬಿಜೆಪಿ ಐಟಿ ಸೆಲ್ ಮೂಲಕ ಇದನ್ನು ಹರಿಬಿಡಲಾಗುತ್ತಿದೆ ಎಂದು ಎಸ್ಎಫ್ಐ ಕರ್ನಾಟಕ ರಾಜ್ಯ ಸಮಿತಿ ರಾಜ್ಯಾಧ್ಯಕ್ಷ ಅಮರೇಶ ಕಡಗದ, ರಾಜ್ಯ ಕಾರ್ಯದರ್ಶಿ ವಾಸುದೇವರೆಡ್ಡಿ. ಕೆ ರವರು ಪತ್ರಿಕಾ ಹೇಳಿಕೆಯಲ್ಲಿ ಖಂಡಿಸಿದ್ದಾರೆ.
ಕೋವಿಡ್ ನಿರ್ವಹಣೆಯಲ್ಲಿ ಬಿಜೆಪಿ ಸರಕಾರದ ಸಾಲು ಸಾಲು ವೈಫಲ್ಯಗಳಿಂದ ಆಕ್ಸಿಜನ್ ಸಿಗದೆ ಕೋಲಾರದಲ್ಲಿ 4 ಜನ, ಚಾಮರಾಜನಗರದಲ್ಲಿ 24 ಜನರ ಸಾವುಗಳು ಸಂಭವಿಸಿವೆ. ಇದೇ ರೀತಿ ರಾಜ್ಯದೆಲ್ಲೆಡೆ ಸಾವುಗಳು ಸಂಭವಿಸಿವೆ ಇದರ ಬಗ್ಗೆ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಕುತಂತ್ರದ ಭಾಗವಾಗಿ ಇಂತಹ ಯತ್ನವನ್ನು ಬಿಜೆಪಿ ನಡೆಸಿದೆ.
ಆದರೆ ಕೆಲ ಖಾಸಗಿ ಮಾಧ್ಯಮಗಳ ತನಿಖೆಯಲ್ಲಿ ಕೋವಿಡ್ ಹಾಸಿಗೆ ಹಂಚಿಕೆ ದಂಧೆಯಲ್ಲಿ ಸಂಸದ ತೇಜಸ್ವಿ ಸೂರ್ಯ ಜೊತೆಗೂಡಿ ಬಿಬಿಎಂಪಿ ದಕ್ಷಿಣ ವಯಲ ವಾರ್ ರೂಂನಲ್ಲಿ ನಡೆಯುತ್ತಿದೆ ಎನ್ನಲಾದ ಹಾಸಿಗೆ ಅವ್ಯವಹಾರ ಬಗ್ಗೆ ದಾಳಿ ನಡೆಸಿದ ತಂಡದ ಜೊತೆಗೆ ಭಾಗಿಯಾದ ಬೊಮ್ಮನಹಳ್ಳಿ ಶಾಸಕ ಎಂ. ಸತೀಶ್ ರೆಡ್ಡಿ ಅವರೇ ಹಗರಣದ ಪ್ರಮುಖ ಆರೋಪಿಯಾಗಿ ಮೇಲ್ನೋಟಕ್ಕೆ ಕಂಡುಬಂದಿದ್ದು ಕೂಡಲೇ ಅವರನ್ನು ಬಂಧಿಸಿ ಸಂಪೂರ್ಣವಾಗಿ ವಿಚಾರಣೆಗೆ ಒಳಪಡಿಸಬೇಕೆಂದು ಎಸ್ಎಫ್ಐ ಆಗ್ರಹಿಸುತ್ತದೆ.
ಇದನ್ನು ಓದಿ: ತೇಜಸ್ವಿ ಸೂರ್ಯ ಹೇಳುವಂತೆ ಬೆಂಗಳೂರಲ್ಲಿ ಹಾಸಿಗೆ ಲಭ್ಯತೆ ಶೂನ್ಯಕ್ಕೆ ಇಳಿದಿಲ್ಲ
ಮತ್ತಷ್ಟು ತನಿಖೆ ನಡೆದರೆ ತೇಜಸ್ವಿ ಸೂರ್ಯನೂ ಸಿಕ್ಕಿ ಬೀಳುವ ಸಾಧ್ಯತೆ ಇದೆ. ಬಿಜೆಪಿಯವರು ಯಾವುದಕ್ಕೂ ಹೇಸದವರು ಎಂಬುದು ಇದರಿಂದ ಮತ್ತೊಮ್ಮೆ ಸಾಬೀತಾಗಿದೆ.
ಸಮಗ್ರ ನ್ಯಾಯಾಂಗ ತನಿಖೆಗೆ ನಿರಾಕರಿಸಿದ ರಾಜ್ಯ ಸರಕಾರ ಈ ಪ್ರಕರಣವನ್ನು ಸಿಸಿಬಿ ತನಿಖೆಗೆ ಆದೇಶಿಸಿದೆ. ಆ ಮೂಲಕ ತನ್ನ ರಾಜಕೀಯಕ್ಕಾಗಿ ಬೆಡ್ ಬ್ಲಾಕಿಂಗ್ ಹಗರಣ ಬಳಸಿ ಕೋಮು ವಿಭಜನೆಗೆ ಬಿಜೆಪಿ ನಡೆಸಿರುವ ಯತ್ನ ಖಂಡನೀಯ. ಐಪಿಸಿ ಕಲಂ153A ಮತ್ತು 505(2) ರಡಿ ಇವರ ಮೇಲೆ ಎಫ್ ಐ ಆರ್ ಹಾಕಬೇಕು. ಇಡೀ ಬೆಡ್ ಬ್ಲಾಕಿಂಗ್ ಹಗರಣ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸಲು ಎಸ್ಎಫ್ಐ ಒತ್ತಾಯಿಸಿದೆ.
ಖಾಸಗಿ ಆಸ್ಪತ್ರೆ ಬೆಡ್ ದರ ಪರಿಷ್ಕರಣೆಗೆ ವಿರೋಧ
ಕೋವಿಡ್ ಕಾರ್ಯಪಡೆ ಅಧ್ಯಕ್ಷರಾದ ಕೂಡಲೇ ಮೊದಲ ಸಭೆಯಲ್ಲಿ ಖಾಸಗಿ ಆಸ್ಪತ್ರೆ ಬೆಡ್ ದರ ಪರಿಷ್ಕರಣೆ ಮಾಡುವಂತೆ ನಿರ್ಣಯಿಸುವ ಮೂಲಕ ಉಪ ಮುಖ್ಯಮಂತ್ರಿ ಡಾ.ಅಶ್ವತ್ ನಾರಾಯಣ ಖಾಸಗಿ ಆಸ್ಪತ್ರೆಗಳ ಲಾಭಿಯ ಹಿತಾಸಕ್ತಿ ಕಾಪಾಡಿಕೊಳ್ಳಲು ಮುಂದಾಗಿದ್ದಾರೆ. ಸ್ವತಃ ವೈದ್ಯಕೀಯ ಸಂಸ್ಥೆಯ ಮಾಲೀಕರಾದ ಅವರಿಗೆ ಜನತೆಯ ಹಿತಕ್ಕಿಂತ ಖಾಸಗಿ ಆಸ್ಪತ್ರೆಗಳ ಹಿತವೆ ಪ್ರಧಾನವಾಗಿದೆ. ಎಂದು ಎಸ್‌ಎಫ್‌ಐ ಆರೋಪಿಸಿದೆ.
ಖಾಸಗಿ ಇತಾಸಕ್ತಿಗಳ ಬಂಧಿಯಾಗಿರುವ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡುವಾಗಲೇ ಬಿಜೆಪಿ ಸರಕಾರ ಖಾಸಗಿ ಲಾಭಿಗೆ ಮಣಿದಿದೆ ಎಂದು ದರ ಪರೀಕ್ಷರಣೆ ಶಿಫಾರಸ್ಸನ್ನು ಎಸ್ಎಫ್ಐ ವಿರೋಧಿಸಿದೆ. ಅದನ್ನು ಒಪ್ಪಬಾರದೆಂದು ರಾಜ್ಯ ಸರಕಾರವನ್ನು ಒತ್ತಾಯಿಸಿದೆ. ಸರಕಾರಿ ಕೋಟಾ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ತಾರತಮ್ಯ ಮಾಡುತ್ತಿರುವ ಹಲವು ಸಂಸ್ಥೆಗಳ ಮೇಲೆ ಕ್ರಮವಹಿಸದೆ ಅವರಿಗೆ ದರ ಹೆಚ್ಚಳದ ಉಡುಗೊರೆ ನೀಡಲು ಬಿಜೆಪಿ ಸರಕಾರ ಮುಂದಾಗಿರುವುದು ಅಕ್ಷಮ್ಯ ಎಂದಿದೆ ಸಂಘಟನೆ ಆರೋಪಿಸಿದೆ.