- ಸಾಮಾಜಿಕ ಜಾಲತಾಣಗಳ ಮೂಲಕ ನೇರ ಪ್ರಸಾರ
ಹಾಸನ: ಅಧಿದೇವತೆ ಹಾಸನಾಂಬೆ ದರ್ಶನೋತ್ಸವ ಗುರುವಾರದಿಂದ ಆರಂಭವಾಗಲಿದ್ದು, ನಗರದ ಪ್ರಮುಖ ರಸ್ತೆಗಳು ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸುತ್ತಿವೆ.
ನಗರಸಭೆ ವತಿಯಿಂದ ದೇವಾಲಯವನ್ನು ಸ್ಯಾನಿಟೈಸ್ ಮಾಡಲಾಗಿದೆ. ಪೌರಕಾರ್ಮಿಕರು, ಅಗ್ನಿಶಾಮಕ ಸಿಬ್ಬಂದಿ ದೇವಾಲಯ ಗೋಪುರ, ಸಿದ್ಧೇಶ್ವರ ಸ್ವಾಮಿ ಹಾಗೂ ಹಾಸನಾಂಬೆ ದೇವಾಲಯದ ಸ್ವಚ್ಛತಾ ಕಾರ್ಯ ಕೈಗೊಂಡಿದ್ದಾರೆ. ಅಂತಿಮ ಹಂತದ ಸಿದ್ಧತೆ ಭರದಿಂದ ಸಾಗಿದೆ. ದೇಗುಲದ ಆವರಣ, ರಾಜಗೋಪುರ, ಬಿ.ಎಂ ರಸ್ತೆ, ಎನ್.ಆರ್. ವೃತ್ತ, ಡಿಸಿ ಕಚೇರಿ ಮುಂಭಾಗದ ಬಿ.ಎಂ ರಸ್ತೆಯಿಂದ ರೈಲ್ವೆ ನಿಲ್ದಾಣದವರೆಗೂ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ದೇಗುಲ ಸುತ್ತಲೂ ಬ್ಯಾರಿಕೇಡ್ ಅಳವಡಿಸಲಾಗಿದೆ.
ಸಪ್ತ ಮಾತೃಕೆಯರಲ್ಲಿ ಒಬ್ಬಳಾದ ಹಾಸನಾಂಬ ಜಾತ್ರಾ ಮಹೋತ್ಸವ ಈ ಬಾರಿ ನ. 5 ರಿಂದ 16ರವರೆಗೆ ನಡೆಯುತ್ತಿದ್ದರೂ ಕೋವಿಡ್ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಇಲ್ಲ. ಹಾಸನಾಂಬೆ ದೇವಿಯನ್ನು ನೇರವಾಗಿ ನೋಡಲಾಗುತ್ತಿಲ್ಲವೆಂಬ ಕೊರಗು ಲಕ್ಷಾಂತರ ಭಕ್ತರನ್ನು ಕಾಡತೊಡಗಿದೆ.
ಆನ್‌ಲೈನ್ ಮೂಲಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಮಧ್ಯಾಹ್ನ ಎರಡು ತಾಸು ನೈವೇದ್ಯ ಸಮಯ ಹೊರತು ಪಡಿಸಿ ಉಳಿದ ವೇಳ ದೇವಿಯನ್ನು ಜನರು ಕಣ್ತುಂಬಿಕೊಳ್ಳಬಹುದು. ಗರ್ಭಗುಡಿ ಬಾಗಿಲು ತೆರೆಯುವ ಹಾಗೂ ಮುಚ್ಚುವ ದಿನ ಆಹ್ವಾನಿತ ಗಣ್ಯರು ಹೊರತುಪಡಿಸಿ ಬೇರೆ ಯಾರಿಗೂ ಪ್ರವೇಶ ಇರುವುದಿಲ್ಲ.
ನಗರದ ಆಯಕಟ್ಟಿನ ಹತ್ತು ಸ್ಥಳಗಳಲ್ಲಿ ಎಲ್‌ಇಡಿ ಪರದೆ ವ್ಯವಸ್ಥೆ ಮಾಡಲಾಗಿದೆ. ತಣ್ಣೀರುಹಳ್ಳ, ಹೊಸ ಬಸ್ ನಿಲ್ದಾಣ, ಹೇಮಾವತಿನಗರ, ವಿದ್ಯಾನಗರ ಲೇಡಿಸ್ ಹಾಸ್ಟೆಲ್, ಉಪನೋಂದಣಾಧಿಕಾರಿ ಕಚೇರಿ, ರೈಲ್ವೆ ನಿಲ್ದಾಣ ಸಮೀಪ ಹಾಗೂ ಹಾಸನಾಂಬ ದೇವಾಲಯ ಸುತ್ತಲೂ ನಾಲ್ಕು ಕಡೆ ಎಲ್‌ಇಡಿ ಪರದೆ ವ್ಯವಸ್ಥೆ ಮಾಡಲಾಗಿದೆ.
ಸಂಪ್ರದಾಯದಂತೆ ಅಶ್ವಯುಜ ಮಾಸದ ಮೊದಲ ಗುರುವಾರ ಮಧ್ಯಾಹ್ನ 12 ಗಂಟೆಗೆ ಮೈಸೂರು ಅರಸು ಮನೆತನದ ನರಸಿಂಹ ರಾಜ್ ಅವರು ಬಾಳೆ ಕಂದು ಕಡಿದ ಬಳಿಕ ಅಮ್ಮನವರ ಗರ್ಭಗುಡಿ ಬಾಗಿಲು ಶಾಸ್ತ್ರೋಕ್ತವಾಗಿ ತೆರೆಯಲಾಗುತ್ತದೆ. ಮೊದಲ ದಿನ ದೇವಿಯ ಗರ್ಭಗುಡಿ ಸ್ವಚ್ಛತೆ, ಸುಣ್ಣ ಧಾರಣೆ ಮತ್ತು ಜಿಲ್ಲಾ ಖಜಾನೆಯಿಂದ ತೆಗೆದುಕೊಂಡು ಹೋಗುವ ಆಭರಣ ಧಾರಣೆ ನಂತರ ಪೂಜಾ ಕಾರ್ಯ ನಡೆಯುತ್ತದೆ.
ದೇವಸ್ಥಾನದಲ್ಲಿ ಪ್ರಸಾದ ವ್ಯವಸ್ಥೆ ಇಲ್ಲ. ಕರ್ತವ್ಯ ನಿರತ ಸಿಬ್ಬಂದಿಗೆ ಮಾತ್ರ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಊಟ, ಉಪಾಹಾರ ವ್ಯವಸ್ಥೆ ಮಾಡಲಾಗಿದೆ.
ದೇವಿಗೆ ವಸ್ತ್ರಾಭರಣ: ದರ್ಶನೋತ್ಸವದ ಆರಂಭದ ದಿನ ಮಾತ್ರವೇ ಅಲಂಕಾರಗಳಿಲ್ಲದ ದೇವಿಯ ವಿಶ್ವರೂಪ ದರ್ಶನ ನೋಡಬಹುದು. ಬಾಗಿಲು ತೆರೆಯುವ ದಿನ ಸಂಜೆ ದೇವಿಗೆ ವಸ್ತ್ರಾಭರಣಗಳನ್ನು ಧರಿಸಿ, ಅಲಂಕರಿಸಿ ಪೂಜೆ ಆರಂಭಿಸಲಾಗುತ್ತದೆ. ವಿಶ್ವರೂಪ ದರ್ಶನದಿಂದ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆ ಹಿನ್ನೆಲೆಯಲ್ಲಿ ಬಾಗಿಲು ತೆರೆದ ತಕ್ಷಣ ದರ್ಶನ ಪಡೆಯಲು ಭಕ್ತರು ಮುಗಿಬೀಳುತ್ತಾರೆ. ಆದರೆ ಅಂದು ಅಧಿಕೃತವಾಗಿ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶವಿಲ್ಲ.
‘ಕೋವಿಡ್ ಪ್ರಕರಣ ಹೆಚುತ್ತಿರುವುದರಿಂದ ದೇವಿ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಇಲ್ಲ. 12 ದಿನವೂ ಪೂಜಾ ಕಾರ್ಯಕ್ರಮಗಳನ್ನು ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕವೂ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗುತ್ತಿದ. ದೇಗುಲ ಬಾಗಿಲು ತೆರೆಯುವ ಹಾಗೂ ಮುಚ್ಚುವ ದಿನ ಆಹ್ವಾನಿತ ಜನಪ್ರತಿನಿಧಿಗಳಿಗೆ ಮಾತ್ರವೇ ಅವಕಾಶ. ಕರ್ತವ್ಯ ನಿರತ ಸಿಬ್ಬಂದಿ ಹೊರತು ಪಡಿಸಿ ಬೇರೆ ಯಾರಿಗೂ ದೇವಸ್ಥಾನದ ಒಳಕ್ಕೆ ಅವಕಾಶ ಇಲ್ಲ’ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಸ್ಪಷ್ಟಪಡಿಸಿದರು.