ಸಿಡಿ ಮೌಢ್ಯಾಚರಣೆಯು ತಪ್ಪಿತು. ಜಾತ್ರೆಯೂ ಸುಗಮವಾಗಿ ನಡೆಯಿತು

ಹಾಸನ : 22 ಮಾರ್ಚ್ 2025ರಂದು ಹೊಳೆನರಸೀಪುರ ತಾಲ್ಲೂಕಿನ ಹರಿಹರಪುರದ ಉಡಿಸಲಮ್ಮ ಜಾತ್ರೆಗೆ ಸಿದ್ಧತೆಯಾಗಿದ್ದ ಅಮಾನವೀಯ ಸಿಡಿ ಏರಿಸುವುದನ್ನು ತಡೆಯಲಾಗಿದ್ದು ಸಂತಸದ ಸಂಗತಿ ಎಂದು ದಲಿತ ಹಕ್ಕುಗಳ ಹಾಸನ‌ ಜಿಲ್ಲಾ ಸಮಿತಿ ಸಂಚಾಲಕ ಪೃಥ್ವಿ ಎಂ.ಜಿ. ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ್ದು, ಯಾವುದೋ ಕಾರಣವೊಡ್ಡಿ, ಅದೆಷ್ಟೋ ವರ್ಷಗಳಿಂದ ಚಾಕೇನಹಳ್ಳಿ ದಲಿತರ ಬೆನ್ನಿಗೆ ಕಬ್ಬಿಣದ ಕೊಂಡಿ ಸಿಕ್ಕಿಸಿ, ಮರದ ಕಂಬಕ್ಕೆ ಜೋತು ಹಾಕಿ, ಗಿರಕಿ ಹೊಡೆಸುವ ಮೂಲಕ ಹರಿಹರಪುರದ‌ ಜಾತ್ರೆಯಲ್ಲಿ ನೆರೆದಿದ್ದ ಜನರನ್ನು ರಂಜಿಸಿ ಮತ್ತು ಮಹಿಳೆಯರು ಬಾಯಿಗೆ ದಬ್ಬಳದಂತಹ ಸರಳನ್ನು ಚುಚ್ಚಿಕೊಂಡು (ಬಾಯಿಬೀಗ) ಮೌಢ್ಯದ ಪರಮಾವಧಿ ಮೆರೆಸಲಾಗುತ್ತಿತ್ತು. ಈ ಅಮಾನವೀಯ ಪದ್ದತಿಯನ್ನು ನಿಲ್ಲಿಸಬೇಕೆಂದು 2017 ರಿಂದಲೂ ‘ದಲಿತ ಹಕ್ಕುಗಳ ಸಮಿತಿ – ಕರ್ನಾಟಕ (DHS), ಸಂಘಟನೆಗಳ ಮುಖಂಡರು‌ ಮತ್ತು ಹಲವು ಪ್ರಜ್ಙಾವಂತರು ಸೇರಿ ಜಿಲ್ಲಾ ತಾಲ್ಲೂಕು ಆಡಳಿತ ಹಾಗು ಸರ್ಕಾರದ ಮೇಲೆ ಒತ್ತಾಯಿಸುತ್ತಾ ಬಂದಿವೆ ಎಂದರು.

ಚಾಕೇನಹಳ್ಳಿ ಗ್ರಾಮದ ಪ್ರಜ್ಙಾವಂತ ಯುವಕರೂ ಸಿಡಿ ವಿರುದ್ಧ ಧ್ವನಿ ಎತ್ತಿ, ಇನ್ನು ಮುಂದೆ ಇಂತಹ ಅನಿಷ್ಟ ಆಚರಣೆ ಮಾಡಬಾರದೆಂದು ತೀರ್ಮಾನಿಸಿದ್ದು ಎಲ್ಲರ ಹೋರಾಟಕ್ಕೆ ಬಲ ಸಿಕ್ಕಿತು. ನಂತರ ಕರ್ನಾಟಕದಲ್ಲಿ ಮೌಢ್ಯ ನಿಷೇಧ ಕಾಯ್ದೆ 2020 ರಲ್ಲಿ ಜಾರಿಗೆ ಬಂದು. ಈ ಕಾಯ್ದೆ ಪ್ರಕಾರ ಸಿಡಿ ಮತ್ತು ಬಾಯಿಬೀಗ ರೀತಿಯ ಅಮಾನವೀಯ ಆಚರಣೆ ನಿಷಿದ್ಧ ಎಂದಾಯಿತು. ಆದಾಗ್ಯೂ ಕಾಯ್ದೆಗೆ ಕೇರ್ ಮಾಡದ‌ ಅಲ್ಲಿಯ ಪಟ್ಟಭದ್ರ ಹಿತಾಸಕ್ತಿಗಳು 2021ರ ಜಾತ್ರೆಯಲ್ಲಿ ಸಿಡಿ ಆಡಿಸಲು ಭರ್ಜರಿ ತಯಾರಿ ಮಾಡಿಕೊಂಡು ದಲಿತರನ್ನು ಸಿಡಿಗೆ ಏರಿಸಲು ಮುಂದಾಗಿದ್ದರು ಎಂದರು.

ಇದನ್ನೂ ಓದಿ : ಬೆಂಗಳೂರು| ಪರೀಕ್ಷೆಗಳ ಅಕ್ರಮ ತಡೆಗೆ ರಾಜ್ಯ ಪರೀಕ್ಷಾ ಪ್ರಾಧಿಕಾರ ಮಹತ್ವದ ಕ್ರಮ

ಇದನ್ನು ವಿರೋಧಿಸಿ ಮತ್ತೆ ಜಿಲ್ಲಾ, ತಾಲ್ಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆಗೆ ಒತ್ತಾಯಿಸಿ ಸಿಡಿ ಆಚರಣೆಯನ್ನು ರದ್ದು‌ ಮಾಡುವಂತೆ ಆಗ್ರಹಿಸಿ ಮಾಧ್ಯಮ ಗೋಷ್ಠಿಯನ್ನೂ ನಡೆಸಿದ ಪರಿಣಾಮ, ಸಿಡಿಯನ್ನು ನಡೆಯುವುದನ್ನು ಹಿಂಪಡೆಯಲಾಗಿದೆ. ಇದು ಹೊರಾಟಕ್ಕೆ ಸಿಕ್ಕ ಜಯ ಎಂದರು.

ಮತ್ತೆ ಈಗ ನಾಲ್ಕು ವರ್ಷಗಳ ತರುವಾಯ ಈ ವರ್ಷ 22-03-2025ರ ಜಾತ್ರಾ ಮಹೋತ್ಸವಕ್ಕೆ ಒಳಗಿಂದೊಳಗೆ ದಲಿತ ಕುಟುಂಬಗಳಿಗೆ ಸಿಡಿ ಆಡದಿದ್ದರೆ ನಿಮಗೆ ಒಳ್ಳೆಯದಾಗುವುದಿಲ್ಲ ಎಂದು ಭಯ ಹುಟ್ಟಿಸಿ, ಸಿಡಿ ಏರಿಸಲು ಸಕಲ‌ ಸಿದ್ಧತೆ ಮಾಡಿಕೊಂಡಿದ್ದರು. ಚಾಕೇನಹಳ್ಳಿ ದಲಿತರನ್ನು ಹೇಗಾದರೂ ಮಾಡಿ ಸಿಡಿ ಕಂಬಕ್ಕೆ ಕರೆತರಲೇಬೇಕೆಂಬ ಪ್ರಯತ್ನಗಳು ನಡೆದಿದ್ದವು. ಅಲ್ಲದೇ ಅಲ್ಲೊಬ್ಬ ಮೈಮೆಲೆ‌‌ ದೇವರು ಬರಿಸಿಕೊಂಡು ಸಿಡಿ ಏರದಿದ್ದರೆ ಚಾಕೇನಹಳ್ಳಿ ದಲಿತ ಕುಟುಂಬಗಳಿಗೆ ದೇವರ ಪೂಜೆಗೂ ಅವಕಾಶ ನಿರಾಕರಿಸುವಂತೆ ಫಾರುಮಾನು ಹೊರಡಿಸಿದ್ದ ಎಂದರು.

ಕೊನೆಗೆ ಹೇಗಾದರೂ ಸಿಡಿ ಆಚರಣೆ ತಡೆಯಬೇಕೆಂಬ ಆ ಊರಿನ ಜಾಗೃತ ಗ್ರಾಮಸ್ಥರು ಯುವಕರ ಒತ್ತಾಸೆ,
ಪ್ರಜ್ಞಾವಂತರ ಹೋರಾಟಗಾರರ ಶ್ರಮ, ಎಲ್ಲರ ಪ್ರಯತ್ನ‌ ಮತ್ತು ಒತ್ತಾಯದಿಂದಾಗಿ ಜಿಲ್ಲಾ ಮತ್ತು ತಾಲ್ಲೂಕು ಆಡಳಿತ ಕ್ರಮವಹಿಸಿದರ ಭಾಗವಾಗಿ ಅಮಾನವೀಯ ಅನಿಷ್ಟ ಸಿಡಿ ಮತ್ತು ಬಾಯಿಬೀಗ ಮೌಡ್ಯಾಚರಣೆಯನ್ನು ನಡೆಯದಂತೆ ತಡೆಯಲು ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.

ಕೊನೆಗೆ ಜಾತ್ರೆಯಲ್ಲಿ ಸಿಡಿ ಮರಕ್ಕೆ ಹೂವಿನ ಹಾರ ಹಾಕಿ ಗಿರಕಿ ಹೊಡೆಸಿದ್ದಾರೆ ಅಷ್ಟೇ. ಇನ್ನೂ ಅದೆಷ್ಟೋ ಕಡೆಗಳಲ್ಲಿ ಅಮಾನವೀಯ ಸಿಡಿಯಂತಹ ಮೌಡ್ಯಾಚರಣೆಗಳಿಗೆ ದಲಿತ ತಳ ಸಮುದಾಗಳ ಜನರನ್ನು ಗುರಿಮಾಡಲಾಗುತ್ತಿದೆ.
ಇವುಗಳನ್ನು ದಿಟ್ಟತನದಿಂದ ತಡೆಯುವಂತಹ ಪ್ರಜ್ಙಾವಂತರು ಹೆಚ್ಚಾಗಬೇಕು ಎಂದರು.

ಅಮಾನವೀಯ ಅನಿಷ್ಟ ಆಚರಣೆಗಳು ಕೊನೆಗೊಳ್ಳಲಿ. ಜಾತ್ರೆ, ಹಬ್ಬ, ಸಾಂಸ್ಕೃತಿಕ ಆಚರಣೆಗಳು ಮಾನವೀಯಗೊಳ್ಳಬೇಕು ಎಂದು ಪೃಥ್ವಿ ತಿಳಿಸಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *