ಹಾಸನ: ಸರ್ಕಾರಿ ಆಸ್ಪತ್ರೆಯ ದಾದಿಯೊಬ್ಬರು ಮೂಳೆ ಮುರಿದ ವೃದ್ಧನ ನೋವಿಗೆ ಮೆಹಂದಿ ಹಚ್ಚುವಂತೆ ಸಲಹೆ ನೀಡಿರುವುದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯ ಟೀಕೆಗೆ ಗುರಿಯಾಗಿದೆ.
ಕಾಲು ಮುರಿದು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಬಂದ ವೃದ್ಧರೊಬ್ಬರಿಗೆ ಆಸ್ಪತ್ರೆಯ ದಾದಿಯೊಬ್ಬರು ಮೆಡಿಕಲ್ ಸ್ಟೋರ್‌ನಲ್ಲಿ ಮೆಹಂದಿ ಕೋನ್ ಅನ್ನು ತೆಗೆದುಕೊಳ್ಳುವಂತೆ ಬರೆದುಕೊಟ್ಟಿರುವ ವಿಚಿತ್ರ ಘಟನೆ ಹಾಸನದಲ್ಲಿ ನಡೆದಿದೆ.
ಸುಮಾರು 65 ವಯಸ್ಸಿನ ಕಾಲು ಮುರಿದುಕೊಂಡಿದ್ದ ಹಳ್ಳಿಯ ವಯೋವೃದ್ಧರೊಬ್ಬರು ಮಂಗಳವಾರ ಬ್ಯಾಂಡೇಜ್ ಹಾಕಿಸಿಕೊಳ್ಳಲು ಹಾಸನದ ಚಾಮರಾಜೇಂದ್ರ ಜಿಲ್ಲಾ ಆಸ್ಪತ್ರೆಗೆ ಆಗಮಿಸಿದ್ದರು. ಅಲ್ಲಿ ಅವರನ್ನು ಪರಿಶೀಲಿಸಿದ ದಾದಿ ಆರು ಇಂಚಿನ ಕ್ರೇಪ್ ಬ್ಯಾಂಡೇಜ್ ಹಾಗೂ ಒಂದು ಮೆಹಂದಿ ಕೋನ್ ತೆಗೆದುಕೊಂಡು ಬರುವಂತೆ ಬರೆದು ಕೊಟ್ಟಿದ್ದಾರೆ. ಜೊತೆಗೆ ಆ ಎರಡೂ ವಸ್ತುಗಳು ಆಸ್ಪತ್ರೆಯಲ್ಲಿ ಸಿಗುವುದಿಲ್ಲ, ಹೊರಗಡೆ ತೆಗೆದುಕೊಳ್ಳಿ ಎಂದು ಹೇಳಿ ಕಳುಹಿಸಿದ್ದಾರೆ.
ಮುರಿದ ಕಾಲನ್ನೇ ವೃದ್ಧ ಎಳೆದಾಡಿಕೊಂಡು ಆಸ್ಪತ್ರೆಯ ಸುತ್ತ ಮುತ್ತಲಿನ ಮೆಡಿಕಲ್‌ಗಳಲ್ಲಿ ವಿಚಾರಿಸಿದ್ದಾರೆ. ಬ್ಯಾಂಡೇಜ್ ಕ್ರೇಪ್ ಸಿಕ್ಕರೂ ಮತ್ತೊಂದು ಔಷಧಿ ಮಾತ್ರ ಸಿಕ್ಕಿಲ್ಲ. ಮೆಡಿಕಲ್ ಸಿಬ್ಬಂದಿ ಅದು ಔಷಧಿ ಅಲ್ಲ, ಮೆಹಂದಿ ಕೋನ್ ಎಂದು ಹೇಳಿ ಕಳುಹಿಸಿದ್ದಾರೆ. ಬಳಿಕ ಯಾವುದೋ ಮೆಡಿಕಲ್ ಶಾಪ್‌ನವರು ಬ್ಯಾಂಗಲ್ ಸ್ಟೋರ್‌ಗೆ ಹೋಗಿ ವಿಚಾರಿಸಿ ಎಂದು ಸಲಹೆ ನೀಡಿದ್ದಾರೆ. ಅದರಂತೆಯೇ ಮಾಡಿದ ವೃದ್ಧನಿಗೆ ಬ್ಯಾಂಗಲ್ ಸ್ಟೋರ್‌ನವರು ಇದು ಔಷಧಿಯ ಚೀಟಿ, ನಮ್ಮಲ್ಲಿನ ಮೆಹಂದಿ ಕೋನ್ ಕೊಡಲಾಗುವುದಿಲ್ಲ ಎಂದಿದ್ದಾರೆ.
ಅಷ್ಟರಲ್ಲಿ ವೃದ್ಧನಿಗೆ ಹಾಸನದ ಸಾಮಾಜಿಕ ಹೋರಾಟಗಾರ್ತಿ ಹಾಗೂ ಲೇಖಕಿ ಸುನೀತಾ ಹೆಬ್ಬಾರ್ ಎದುರಾಗಿದ್ದು, ಆಸ್ಪತ್ರೆಯಲ್ಲಿ ನೀಡಿದ ಚೀಟಿಯಲ್ಲಿ ಏನಿದೆ ಎಂದು ಸ್ವಲ್ಪ ಓದಿ ಹೇಳುವಂತೆ ಕೇಳಿಕೊಂಡಿದ್ದಾರೆ. ಆಗ ಅವರು ಇದು ಮೆಹಂದಿ ಕೋನ್, ಇದನ್ನು ಚಿಕಿತ್ಸೆಗೆ ಏಕೆ ಬಳಸುತ್ತಾರೆ? ನಿಮ್ಮನ್ನು ಸುಮ್ಮನೆ ಅಂಗಡಿ ಅಂಗಡಿ ಅಲೆಸಿದ್ದಾರೆ. ನೀವು ನರ್ಸ್ ಅವರನ್ನೇ ಹೋಗಿ ಕೇಳಿ ಎಂದಿದ್ದಾರೆ. ಮಾತ್ರವಲ್ಲದೇ ಈ ವಿಚಾರವನ್ನು ಹೆಬ್ಬಾರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.