- ಭಾರತದ ಹಾಕಿ ತಂಡದ ನಾಯಕರಾಗಿದ್ದ ಸಂದೀಪ್ ಸಿಂಗ್
- ಇನ್‌ಸ್ಟಾಗ್ರಾಮ್‌ನಲ್ಲಿ ಸಂದೇಶ ಕಳುಹಿಸಿ ಮನೆಗೆ ಕರೆಸಿಕೊಂಡಿದ್ದ ಸಚಿವ
- ಸಂದೀಪ್ ಜೀವನಾಧಾರಿತ ಸಿನಿಮಾ 2018ರಲ್ಲಿ ಬಿಡುಗಡೆಯಾಗಿತ್ತು
ಚಂಡೀಗಢ: ಮಹಿಳಾ ಜೂನಿಯರ್ ಅಥ್ಲೆಟಿಕ್ಸ್ ಕೋಚ್ ನೀಡಿದ ದೂರಿನ ಮೇರೆಗೆ ಹರಿಯಾಣ ಕ್ರೀಡಾ ಸಚಿವ ಸಂದೀಪ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಅಕ್ರಮ ಬಂಧನದ ಆರೋಪದಡಿ ಚಂಡೀಗಢ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಹಿನ್ನೆಲೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಂದೀಪ್ ಸಿಂಗ್ ಅವರು, ಇದು ನನ್ನ ಹೆಸರಿಗೆ ಮಸಿ ಬಳಿಯಲು ಮಾಡಿರುವ ಪ್ರಯತ್ನವಾಗಿದೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಈ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿ, ತನಿಖೆಯ ವರದಿ ಬರುವವರೆಗೂ ಕ್ರೀಡಾ ಇಲಾಖೆಯ ಜವಾಬ್ದಾರಿಯನ್ನು ಮುಖ್ಯಮಂತ್ರಿಗಳಿಗೆ ಹಸ್ತಾಂತರಿಸುತ್ತೇನೆ ಎಂದು ತಿಳಿಸಿದ್ದಾರೆ.
ಸ್ಥಳೀಯ ಮಹಿಳಾ ಕೋಚ್ ನೀಡಿದ ದೂರಿನ ಮೇರೆಗೆ, ಹರಿಯಾಣದ ಕ್ರೀಡಾ ಸಚಿವರ ವಿರುದ್ಧ 2022ರ ಡಿಸೆಂಬರ್ 31ರಂದು ರಂದು ಐಪಿಸಿ ಸೆಕ್ಷನ್ 354 (ಕ್ರಿಮಿನಲ್ ಉದ್ದೇಶದಿಂದ ಬಲವಂತವಾಗಿ ಮಹಿಳೆಯ ಗೌರವಕ್ಕೆ ಧಕ್ಕೆ ತರುವುದು), 354A (ಲೈಂಗಿಕ ಕಿರುಕುಳ), 354B (ಮಹಿಳೆಯನ್ನು ಬೆತ್ತಲಾಗುವಂತೆ ಒತ್ತಾಯಿಸುವುದು), 342 (ತಪ್ಪು ಉದ್ದೇಶದಿಂದ ನಿರ್ಬಂಧಿಸುವುದು) , 506 (ಕ್ರಿಮಿನಲ್ ಬೆದರಿಕೆ) ರ ಅಡಿಯಲ್ಲಿ ಎಫ್‌ಐಆರ್ ಅನ್ನು ಚಂಡೀಗಢದ ಪೊಲೀಸ್ ಠಾಣೆ ಸೆಕ್ಟರ್ 26 ರಲ್ಲಿ ದಾಖಲಿಸಲಾಗಿದೆ.
ಇದನ್ನೂ ಓದಿ : ಬಿಜೆಪಿ ಆಂತರಿಕ ಕಲಹ: ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ದೇಬ್ ರಾಜೀನಾಮೆ
ಬಿಜೆಪಿ ಶಾಸಕ ಸಂದೀಪ್ ಸಿಂಗ್ ಅವರು ಮೊದಲು ನನ್ನನ್ನು ಜಿಮ್‌ನಲ್ಲಿ ನೋಡಿದ್ದರು. ನಂತರ ಇನ್‌ಸ್ಟಾಗ್ರಾಮ್ ಮೂಲಕ ನನ್ನನ್ನು ಸಂಪರ್ಕಿಸಿದರು. ಬಳಿಕ ತಮ್ಮನ್ನು ಭೇಟಿಯಾಗುವಂತೆ ಒತ್ತಾಯಿಸುತ್ತಿದ್ದರು ಎಂದು ಲೇಡಿ ಕೋಚ್ ಆರೋಪಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಮೇಸೆಜ್ ಮಾಡಿ ನನ್ನ ನ್ಯಾಷನಲ್ ಗೇಮ್ಸ್ ಸರ್ಟಿಫಿಕೇಟ್ ತಮ್ಮ ಬಳಿ ಇದ್ದು, ಅವುಗಳನ್ನು ತೆಗೆದುಕೊಂಡು ಹೋಗಲು ಭೇಟಿಯಾಗುವಂತೆ ಸೂಚಿಸಿದರು. ದುರದೃಷ್ಟವಶಾತ್ ಫೆಡರೇಷನ್ ಕಡೆಯಿಂದ ನನ್ನ ಸರ್ಟಿಫಿಕೇಟ್ ಕಾಣೆಯಾಗಿದೆ. ಆ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ನಂತರ ಈ ಎಲ್ಲಾ ಕಾರಣದಿಂದಾಗಿ ಕೊನೆಗೆ ಸಚಿವರನ್ನು ಭೇಟಿಯಾಗಲು ಒಪ್ಪಿಕೊಂಡೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ನಂತರ ಕೆಲವು ದಾಖಲೆಗಳನ್ನು ತೆಗೆದುಕೊಂಡು ಅವರ ಮನೆ ಹಾಗೂ ಕಚೇರಿಯಲ್ಲಿ ಹೋದಾಗ ಸಚಿವರು ಲೈಂಗಿಕ ದುರ್ನಡತೆ ತೋರಿದರು ಎಂದು ಆರೋಪಿಸಿದ್ದಾರೆ. ಈ ಪ್ರಕರಣ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿರುವ ಮಹಿಳೆ, ಹಿರಿಯ ಪೊಲೀಸ್ ಮುಖ್ಯಾಧಿಕಾರಿಗೆ ನಾನು ದೂರು ನೀಡಿದ್ದೇನೆ. ಚಂಡೀಗಢ ಪೊಲೀಸರು ತನಿಖೆ ನಡೆಸಿ ನನಗೆ ನ್ಯಾಯ ಕೊಡಿಸುವ ವಿಶ್ವಾಸವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ವಿಚಾರದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡ ಸಹ ಒತ್ತಾಯಿಸಿದ್ದಾರೆ.
ಕುರುಕ್ಷೇತ್ರದ ಪೆಹವಾ ಕ್ಷೇತ್ರದ ಬಿಜೆಪಿ ಶಾಸಕ ಸಂದೀಪ್ ಸಿಂಗ್ ಅವರು ವೃತ್ತಿಪರ ಹಾಕಿ ಆಟಗಾರ. ಅವರು ಭಾರತದ ಹಾಕಿ ತಂಡದ ನಾಯಕರಾಗಿದ್ದವರು. ಅವರ ಜೀವನಾಧಾರಿತ ಸಿನಿಮಾ 2018ರಲ್ಲಿ ‘ಸೂರ್ಮಾ’ ಹೆಸರಿನಲ್ಲಿ ಬಿಡುಗಡೆಯಾಗಿದೆ. ಆ ಸಿನಿಮಾದಲ್ಲಿ ಪಂಜಾಬಿ ಗಾಯಕ ಮತ್ತು ನಟ ದಿಲ್ಜಿತ್ ದೊಸಾಂಜ್ ಅವರು ಸಂದೀಪ್ ಪಾತ್ರದಲ್ಲಿ ನಟಿಸಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ