ಹರಿಯಾಣ ಹಿಂಸಾಚಾರ: 44 ಎಫ್‌ಐಆರ್‌ಗಳು ಮತ್ತು 139 ಬಂಧನ

ಗಲಭೆಯಿಂದಾಗಿ ಗೃಹ ರಕ್ಷಕ ದಳದ ಸಿಬ್ಬಂದಿ, ಮಸೀದಿಯ ಇಮಾಂ ಸೇರಿದಂತೆ ಒಟ್ಟು ಏಳು ಜನರು ಮೃತಪಟ್ಟಿದ್ದಾರೆ ಹರಿಯಾಣ

ಹರಿಯಾಣ: ರಾಜ್ಯದ ನೂಹ್ ಮತ್ತು ಗುರುಗ್ರಾಮ್ ಜಿಲ್ಲೆಗಳಲ್ಲಿ ಭುಗಿಲೆದ್ದ ಕೋಮುಗಲಭೆಗಳ ತನಿಖೆಗಾಗಿ ಹರಿಯಾಣ ಪೊಲೀಸರು 44 ಎಫ್‌ಐಆರ್‌ಗಳನ್ನು ದಾಖಲಿಸಿದ್ದು, 139 ಆರೋಪಿಗಳನ್ನು ಬಂಧಿಸಿದ್ದಾರೆ. ಎರಡೂ ಜಿಲ್ಲೆಗಳಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು, ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಡಲು ಪೊಲೀಸರು ಮತ್ತು ಕೇಂದ್ರ ಪಡೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ.

ಜುಲೈ 31 ರಂದು ಭುಗಿಲೆದ್ದ ಹಿಂಸಾಚಾರದಲ್ಲಿ ತೊಡಗಿರುವ ಮತ್ತು ಹರಡಿದವರ ವಿರುದ್ಧ ಪೊಲೀಸ್ ಕ್ರಮ ನಡೆಯುತ್ತಿದೆ. ಇದುವರೆಗೆ 44 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಬುಧವಾರ ರಾತ್ರಿ ಬಂಧಿಸಲಾಗಿರುವ 23 ಜನರನ್ನು ಸೇರಿದಂತೆ ನೂಹ್ ಗಲಭೆಗೆ ಸಂಬಂಧಿಸಿದಂತೆ 139 ಆರೋಪಿಗಳನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಹರಿಯಾಣ ಹಿಂಸಾಚಾರ: ವಿಎಚ್‌ಪಿ, ಬಜರಂಗದಳದ ರ‍್ಯಾಲಿ ನಿಲ್ಲಿಸುವಂತೆ ಸುಪ್ರೀಂಕೋರ್ಟ್‌ಗೆ ಅರ್ಜಿ

ನೂಹ್‌ನಲ್ಲಿ, ಕರ್ಫ್ಯೂವನ್ನು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ಸಡಿಲಿಸಲಾಗಿದೆ. ಘರ್ಷಣೆಯ ಸಂಪೂರ್ಣ ತನಿಖೆಯನ್ನು ಖಚಿತಪಡಿಸಿಕೊಳ್ಳಲು, ನುಹ್‌ನಲ್ಲಿ ದಾಖಲಾದ ಪ್ರಕರಣಗಳ ತನಿಖೆಗಾಗಿ 10 ವಿಶೇಷ ತನಿಖಾ ತಂಡಗಳನ್ನು (ಎಸ್‌ಐಟಿ) ರಚಿಸಲಾಗುವುದು. ಈ ಎಸ್‌ಐಟಿಗಳು ತಲಾ ಐದು ಎಫ್‌ಐಆರ್‌ಗಳನ್ನು ತನಿಖೆ ನಡೆಸುತ್ತವೆ.

ದನಗಳ ರಕ್ಷಣೆಯ ಹೆಸರಿನಲ್ಲಿ ದ್ವೇಷ ಬಿತ್ತುವ ಮೋನು ಮಾನೇಸರ್ ಅವರಂತವರು ಪೋಸ್ಟ್ ಮಾಡಿದ ಪ್ರಚೋದನಕಾರಿ ವೀಡಿಯೊಗಳ ಬಗ್ಗೆಯೂ ಅವರು ತನಿಖೆ ನಡೆಸಲಿದ್ದಾರೆ. ನೂಹ್ ಜನಸಮೂಹವನ್ನು ಪ್ರಚೋದಿಸಿದ ಆರೋಪದ ಮೇಲೆ ಮೋನು ಮತ್ತು ಇತರ ದಷ್ಕರ್ಮಿಗಳು ಘರ್ಷಣೆಯ ನಂತರ ತಲೆಮರೆಸಿಕೊಂಡಿದ್ದಾರೆ.

ನೂಹ್‌ನ ಉಪ ಆಯುಕ್ತ ಪ್ರಶಾಂತ್ ಪನ್ವಾರ್ ಮಾತನಾಡಿ, ”ನೂಹ್‌ನಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಹಿರಿಯ ಅಧಿಕಾರಿಗಳನ್ನು ನೂಹ್‌ನಲ್ಲಿ ನಿಯೋಜಿಸಲಾಗಿದೆ. ಕಾನೂನು ಉಲ್ಲಂಘಿಸುವವರೊಂದಿಗೆ ಕಟ್ಟುನಿಟ್ಟಾಗಿ ವ್ಯವಹರಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ. ತಲೆಮರೆಸಿಕೊಂಡಿರುವ ಜನರನ್ನು ಬಂಧಿಸಲು ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹರಿಯಾಣ | ಮಸೀದಿಗೆ ಬೆಂಕಿ ಹಚ್ಚಿ, ಇಮಾಂ ಅನ್ನು ಗುಂಡಿಕ್ಕಿ ಕೊಂದ ಹಿಂದುತ್ವ ಗುಂಪು

ನೂಹ್‌ನಲ್ಲಿ ಭುಗಿಲೆದ್ದ ಘರ್ಷಣೆಯ ನಂತರ ಇಬ್ಬರು ಗೃಹ ರಕ್ಷಕ ದಳದ ಸಿಬ್ಬಂದಿ, ಮಸೀದಿಯ ಇಮಾಂ ಸೇರಿದಂತೆ ಏಳು ಜನರು ಸಾವನ್ನಪ್ಪಿದ್ದಾರೆ. ಜುಲೈ 31 ರಂದು ನೂಹ್‌ನಲ್ಲಿ ನಡೆದ ಮೆರವಣಿಗೆಯಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಅದು ಗುರುಗ್ರಾಮ್‌ಗೆ ಹರಡಿದೆ. ಆ ಪ್ರದೇಶದಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಇದರೊಂದಿಗೆ ಇಂಟರ್‌ನೆಟ್ ಕೂಡ ಬ್ಯಾನ್ ಮಾಡಲಾಗಿತ್ತು.

ನೂಹ್, ಗುರುಗ್ರಾಮ್, ಫರಿದಾಬಾದ್, ಪಲ್ವಾಲ್ ಮತ್ತು ಜಜ್ಜರ್ ಜಿಲ್ಲೆಗಳಲ್ಲಿ ಸೆಕ್ಷನ್-144 ಇನ್ನೂ ಜಾರಿಯಲ್ಲಿದೆ. ಯಾವುದೇ ಅಹಿತಕರ ಘಟನೆಗಳನ್ನು ಎದುರಿಸಲು ಪೊಲೀಸ್ ಪಡೆಯ 14 ಕಂಪನಿಗಳು ಸಜ್ಜಾಗಿವೆ ಎಂದು ನೂಹ್‌ನ ಉಪ ಆಯುಕ್ತ ಪ್ರಶಾಂತ್ ಪನ್ವಾರ್ ಹೇಳಿದ್ದಾರೆ. ಜಿಲ್ಲೆಯಲ್ಲಿ ಮುಂದಿನ ಆದೇಶದವರೆಗೆ ಶಿಕ್ಷಣ ಸಂಸ್ಥೆಗಳು ಮುಚ್ಚಲ್ಪಟ್ಟಿರುವತ್ತದೆ.

ಇದಲ್ಲದೆ, ನೂಹ್‌ನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು, 10 ಡ್ಯೂಟಿ ಮ್ಯಾಜಿಸ್ಟ್ರೇಟ್‌ಗಳು ಮತ್ತು ಆರು ವಿಶೇಷ ಡ್ಯೂಟಿ ಮ್ಯಾಜಿಸ್ಟ್ರೇಟ್‌ಗಳನ್ನು ಜಿಲ್ಲಾಡಳಿತ ನೇಮಿಸಿದೆ. “14 ಕಂಪನಿಗಳ ಪೊಲೀಸರು ಸಜ್ಜಾಗಿದ್ದು, ದಿನವಿಡೀ ಪ್ರಮುಖ ಸ್ಥಳಗಳಲ್ಲಿ ಗಸ್ತು ತಿರುಗುತ್ತಿದ್ದಾರೆ. ಪ್ರಮುಖ ಪ್ರದೇಶಗಳನ್ನು ಬ್ಯಾರಿಕೇಡ್ ಮಾಡಲಾಗಿದೆ. ಸೈಬರ್ ಕ್ರೈಮ್ ಪೊಲೀಸ್ ಠಾಣೆಗಳ ತಂಡಗಳು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಮೇಲೆ ಕಣ್ಣಿಟ್ಟಿವೆ. ಯಾರಾದರೂ ತಪ್ಪು ಮಾಹಿತಿ ಹರಡುವಲ್ಲಿ ತೊಡಗಿಸಿಕೊಂಡಿದ್ದರೆ ಕಟ್ಟುನಿಟ್ಟಾಗಿ ಶಿಕ್ಷಿಸಲಾಗಿವುದು” ಎಂದು ನೂಹ್ ಎಸ್ಪಿ ನರೇಂದ್ರ ಸಿಂಗ್ ಬಿಜರ್ನಿಯಾ ಹೇಳಿದ್ದಾರೆ.

 

ವಿಡಿಯೊ ನೋಡಿ: SEP TSP : ದಲಿತರಿಗೆ ಮೀಸಲಿಟ್ಟ ಹಣದ ಮೇಲೆ ಗ್ಯಾರಂಟಿ ಕಣ್ಣು! Janashakthi Media

Donate Janashakthi Media

Leave a Reply

Your email address will not be published. Required fields are marked *