ದಕ್ಷಿಣ ಕನ್ನಡ: ಆರ್.ಟಿ.ಐ. ಕಾರ್ಯಕರ್ತ ವಿನಾಯಕಾ ಬಾಳಿಗಾ ಹತ್ಯೆ ನಡೆದು 7 ವರುಷ ಸಂದಿದೆ. ಆದರೆ ಬಿಜೆಪಿ ಸರಕಾರದ ಒಬ್ಬನೇ ಒಬ್ಬ ಜನಪ್ರತಿನಿಧಿ ಈವರೆಗೂ ಬಾಳಿಗಾ ಮನೆಗೆ ಭೇಟಿ ನೀಡಲಿಲ್ಲ, ಸಹೋದರಿಯರಿಗೆ ಧೈರ್ಯ ತುಂಬಲಿಲ್ಲ. ಸರಕಾರದಿಂದ ಕನಿಷ್ಟ ಪರಿಹಾರವನ್ನೂ ಒದಗಿಸಿಕೊಡಲಿಲ್ಲ. ಇತ್ತೀಚೆಗೆ ಹರ್ಷ ಮತ್ತು ಪ್ರವೀಣ್ ನೆಟ್ಟಾರ್ ಸಾವಿಗೆ ಸ್ಪಂದಿಸಿದ ಸಂಘಪರಿವಾರ, ಬಿಜೆಪಿ ಸರಕಾರ ತಮ್ಮದೇ ಸಂಘಟನೆಯ ಕಾರ್ಯಕರ್ತ ವಿನಾಯಕ ಬಾಳಿಗಾ ಸಾವಿಗೆ ಯಾಕಾಗಿ ಸ್ಪಂದಿಸಿಲ್ಲ ಎಂದು ಪ್ರೋ ನರೇಂದ್ರನಾಯಕ್ ಪ್ರಶ್ನಿಸಿದರು.
ಇದನ್ನು ಓದಿ: ವಿನಾಯಕ ಬಾಳಿಗಾ ಹತ್ಯೆ ಪ್ರಕರಣ ಎಸ್ಐಟಿ ತನಿಖೆಯಾಗಲಿ: ಬೃಂದಾ ಕಾರಟ್
ಅವರು, ಆರ್.ಟಿ.ಐ ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆಗೆ ಏಳು ವರುಷ ಸಂದ ದಿನದಂದು ವೆಂಕಟರಮಣ ದೇವಸ್ಥಾನದಿಂದ ವಿನಾಯಕಾ ಬಾಳಿಗಾ ಮನೆಯವರೆಗೆ ನಡೆದ ಮೆರವಣೆಗೆ, ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಹಿಂದುತ್ವದ ಹೆಸರಲ್ಲಿ ಅಧಿಕಾರಕ್ಕೇರಿದ ಬಿಜೆಪಿ ಸರಕಾರ ಹಿಂದುಗಳಿಗೆ ಏನೇ ಅನ್ಯಾಯವಾದರೂ ಸಹಿಸೋದಿಲ್ಲ ಎಂದು ರೋಷ ವ್ಯಕ್ತಪಡಿಸುವ ಆ ಹೆಸರಲ್ಲಿ ಅರಾಜಕತೆ ಸೃಷ್ಟಿಸುವ ಸಂಘಪರಿವಾರ ಮತ್ತದರ ಬಿಜೆಪಿಯ ನಾಯಕರಿಗೆ ಬಾಳಿಗಾ ಸಾವಿಗೆ ನ್ಯಾಯ ಒದಗಿಸುವ ರೋಷ ಯಾಕೆ ಹುಟ್ಟಲೇ ಇಲ್ಲ?. ಅದೇ ಸಮುದಾಯದ ಸ್ಥಳೀಯ ಶಾಸಕ ವೇದವ್ಯಾಸ ಕಾಮತ್ ಅವರು ಬಾಳಿಗಾ ಮನೆಗೆ ಈವರೆಗೂ ಭೇಟಿ ನೀಡದೆ, ಸಹೋದರಿಯನ್ನು ಸಂತೈಸುವುದಾಗಲಿ, ಪರಿಹಾರ ಕ್ರಮಕ್ಕೆ ಒತ್ತಾಯಿಸುವಂತಹ ಯಾವುದೇ ಕಾರ್ಯವನ್ನು ಮಾಡದೇ ಪರೋಕ್ಷವಾಗಿ ಕೊಲೆಗಟುಕರ ಪರವಾಗಿ ನಿಂತಿರುವಂತಹ ಅನುಮಾನಗಳು ಸಾರ್ವಜನಿಕರಲ್ಲಿ ಬಲವಾಗಿ ಮೂಡುತ್ತಿದೆ ಎಂದರು.
ಇದನ್ನು ಓದಿ: ಶರಣ್ ಪಂಪ್ ವೆಲ್ ಬಂಧನಕ್ಕೆ ಡಿವೈಎಫ್ಐ ಆಗ್ರಹ
ಸಭೆಯನ್ನು ಉದ್ದೇಶಿಸಿ ಖ್ಯಾತ ಮನೋವೈದ್ಯ ಪಿ.ವಿ ಭಂಡಾರಿ, ನಾಗರಿಕ ಸೇವಾಟ್ರಸ್ಟ್ ನ ಸೋಮನಾಥ ನಾಯಕ್ , ಡಿಎಸ್ಎಸ್ ಹಿರಿಯ ಮುಖಂಡ ಎಂ.ದೇವದಾಸ್ ಮಾತನಾಡಿದರು.
ಈ ವೇಳೆ ವಿನಾಯಕ ಬಾಳಿಗಾರ ಸಹೋದರಿಯರಾದ ಅನುರಾಧ ಬಾಳಿಗ, ಹರ್ಷ ಬಾಳಿಗ, ಮಾಜಿ ಉಪಮೇಯರ್ ಮಹಮ್ಮದ್ ಕುಂಜತ್ತಬೈಲ್, ಮಾಜಿ ಕಾರ್ಪೊರೇಟರ್ ಗಳಾದ ಪ್ರಕಾಶ್ ಸಾಲ್ಯಾನ್, ಪದ್ಮನಾಭ ಅಮೀನ್, ಸಾಮರಸ್ಯ ಬಳಗದ ಮಂಜುಳಾ ನಾಯಕ್, ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್(ಡಿವೈಎಫ್ಐ) ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಜ್, ಸಿಐಟಿಯು ಮುಖಂಡ ಸುನೀಲ್‌ಕುಮಾರ್ ಬಜಾಲ್, ಡಿಎಸ್ಎಸ್ ಮುಖಂಡ ರಘು ಎಕ್ಕಾರ್, ಸರೋಜಿನಿ, ಡಿವೈಎಫ್ಐ ಮುಖಂಡರಾದ ನವೀನ್ ಕೊಂಚಾಡಿ, ಜಗದೀಶ್ ಬಜಾಲ್, ಪ್ರಮೀಳಾ ಶಕ್ತಿನಗರ, ಆಶಾ ಬೋಳೂರು, ಮಹಿಳಾ ಮುಖಂಡರಾದ ಅಸುಂತ ಡಿಸೋಜ, ಪ್ರಮೀಳಾ ದೇವಾಡಿಗ, ಭಾರತ ವಿದ್ಯಾರ್ಥಿ ಫೆಡರೇಶನ್(ಎಸ್‌ಎಫ್‌ಐ) ನ ರೇವಂತ್ ಕದ್ರಿ, ವಿನೀತ್ ದೇವಾಡಿಗ, ಸಾಮಾಜಿಕ ಕಾರ್ಯಕರ್ತರಾದ ಸಂಜನಾ ಛಲವಾದಿ, ಜೆರಾಲ್ಡ್ ಟವರ್, ನೀರಜ್ ಪಾಲ್, ಟಿ. ಸಿ. ಗಣೇಶ್, ಯುವ ವಕೀಲರಾದ ನಿತಿನ್ ಕುತ್ತಾರ್, ಸಮುದಾಯ ಸಂಘಟನೆಯ ವಾಸುದೇವ ಉಚ್ಚಿಲ್ ಮುಂತಾದವರು ಉಪಸ್ಥಿತರಿದ್ದರು.
ಸಭೆಯ ನೇತೃತ್ವವನ್ನು ವಹಿಸಿದ ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ ಬಜಾಲ್ ಪ್ರಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ