ಹರ್ಷ ಭೀಕರ ಹತ್ಯೆ ಪ್ರಕರಣ: ಮತ್ತಿಬ್ಬರು ಆರೋಪಿಗಳ ಬಂಧನ

ಶಿವಮೊಗ್ಗ: ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು ಅವರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮೂವರು ಆರೋಪಿಗಳನ್ನು ನಿನ್ನೆ ಬಂಧಿಸಲಾಗಿತ್ತು. ಇದುವರೆಗೆ ಈ ಪ್ರಕರಣದಲ್ಲಿ 5 ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ಬಂಧಿತರಿಬ್ಬರೂ ಶಿವಮೊಗ್ಗ ಮೂಲದವರಾಗಿದ್ದಾರೆಂದು ಮೂಲಗಳು ಮಾಹಿತಿ ನೀಡಿವೆ. ಶಿವಮೊಗ್ಗ ನಗರದ ಭಾರತಿನಗರದಲ್ಲಿ ಭಾನುವಾರ ರಾತ್ರಿ ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳ ಗುಂಪೊಂದು ಬಜರಂಗದಳ ಕಾರ್ಯಕರ್ತ ಹರ್ಷ ಎಂಬುವವರ ಬರ್ಬರ ಹತ್ಯೆ ಮಾಡಿದ್ದರು. ಈ ಪ್ರಕರಣ ಹಿನ್ನೆಲೆಯಲ್ಲಿ ನೆನ್ನೆ(ಫೆ.21) ಇಡೀ ಶಿವಮೊಗ್ಗದಲ್ಲಿ ಗಂಭೀರವಾದ ವಾತಾವರಣ ನಿರ್ಮಾಣವಾಗಿತ್ತು.

ಹರ್ಷ ಕೊಲೆ ಪ್ರಕರಣದಲ್ಲಿ 7 ಮಂದಿಯ ಕೈವಾಡವಿರುವ ಬಗ್ಗೆ ಪೊಲೀಸರು ಶಂಕಿಸಿದ್ದಾರೆ. ‘ಬಂಧಿತರ ರಾಜಕೀಯ ಮತ್ತು ಸಾಮಾಜಿಕ ಸಂಪರ್ಕಗಳನ್ನು ಪತ್ತೆ ಹಚ್ಚಲು ತನಿಖೆ ಚುರುಕುಗೊಳಿಸಲಾಗಿದೆ’ಎಂದು ಮೂಲಗಳು ತಿಳಿಸಿವೆ.

ನಗರದಲ್ಲಿ ನಿನ್ನೆ ಏರ್ಪಟ್ಟಿದ್ದ ಉದ್ವಿಗ್ನ ವಾತಾವರಣವನ್ನು ಮನಗಂಡು ಶಿವಮೊಗ್ಗ ನಗರದ ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದ್ದು, ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಉದ್ರಿಕ್ತ ಗುಂಪುಗಳು ಕಂಡ ಕಂಡಲ್ಲಿ ಆಸ್ತಿಪಾಸ್ತಿಗಳ ಮೇಲೆ ಕಲ್ಲು ತೂರಿ, ವಾಹನಗಳು, ಅಂಗಡಿಗಳಿಗೆ ಬೆಂಕಿ ಹಚ್ಚುವ ಮೂಲಕ ಹಿಂಸಾಚಾರಕ್ಕಿಳಿದಿದ್ದು, ಈ ವೇಳೆ 25ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ನಿಷೇಧಾಜ್ಞೆ ನಡುವೆಯೇ ನಡೆದ ಈ ಭಾರೀ ಹಿಂಸಾಚಾರ ನಿಯಂತ್ರಣ ಮಾಡಲು ಪೊಲೀಸರು ಹರಸಾಹಸ ಪಡುವಂತಾಗಿತ್ತು. ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಸಿಡಿಸಿ ಹಾಗೂ ಗಾಳಿಯಲ್ಲಿ ಗುಂಡು ಹಾರಿಸಿ ಗುಂಪು ಚದುರಿಸಿದರು.

ಇದೇ ವೇಳೆ ಘಟನೆ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದಲ್ಲಿ ನಿಷೇಧಾಜ್ಞೆಯನ್ನು ಎರಡು ದಿನ ವಿಸ್ತರಿಸಲಾಗಿದೆ.  ಸೋಮವಾರ ರಾತ್ರಿ 10ರಿಂದ ಬುಧವಾರ ಬೆಳಿಗ್ಗೆ 6ರವರೆಗೆ ಕರ್ಫ್ಯೂವನ್ನೂ ಘೋಷಿಸಲಾಗಿದೆ.

Donate Janashakthi Media

Leave a Reply

Your email address will not be published. Required fields are marked *