ಹರಿದ್ವಾರ: ಮುಸ್ಲಿಮರ ವಿರುದ್ಧ ದ್ವೇಷಪೂರಿತ ಭಾಷಣ-ಪ್ರಕರಣ ದಾಖಲು

ಹರಿದ್ವಾರ: ಉತ್ತರಾಖಂಡ ರಾಜ್ಯದ ಹರಿದ್ವಾರದಲ್ಲಿ ಧರ್ಮ ಸಂಸದ್ ಧಾರ್ಮಿಕ ಸಭೆಯಲ್ಲಿ ಮುಸ್ಲಿಮರ ವಿರುದ್ಧ ಹಿಂಸಾಚಾರವನ್ನು ಪ್ರಚೋಧಿಸುವ  ಹಾಗೂ ಹಿಂದೂ ರಾಷ್ಟ್ರಕ್ಕಾಗಿ ಹೋರಾಡುವುದಾಗಿ ಪ್ರತಿಜ್ಞೆ ಮಾಡುವ ಭಾಷಣಗಳ ವಿಡಿಯೋಗಳು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಧಾರ್ಮಿಕ ಸಭೆಯೊಂದರಲ್ಲಿ ಭಾಗವಹಿಸಿದ್ದ ಹಲವರು ಮುಸ್ಲಿಮರನ್ನು ಹತ್ಯೆಗೈಯ್ಯಲು ಹಾಗೂ ಶಸ್ತ್ರ ಕೈಗೆತ್ತಿಕೊಳ್ಳಲು ಕರೆ ನೀಡಿ ಮಾಡಿದ ಭಾಷಣದ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆ ನಡೆದು ನಾಲ್ಕು ದಿನಗಳ ನಂತರ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

ಹರಿದ್ವಾರದಲ್ಲಿ ಡಿಸೆಂಬರ್ 17 ರಿಂದ 19 ರವರೆಗೆ ಧರ್ಮ ಸಂಸದ್ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿತೇಂದ್ರ ನಾರಾಯಣ ತ್ಯಾಗಿ ಮುಸ್ಲಿಂ ಸಮುದಾಯದ ಬಗ್ಗೆ ವಿವಾದಾತ್ಮಕ ಭಾಷಣ ಮಾಡಿದ್ದಾರೆ ಎನ್ನಲಾಗಿದೆ. ಕಾರ್ಯಕ್ರಮದಲ್ಲಿ ಅನೇಕ ಸಂತರಲ್ಲದೆ, ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಕೂಡ ಭಾಗವಹಿಸಿದ್ದರು.

ಹಲವು ವೀಡಿಯೋಗಳ ಒಂದರಲ್ಲಿ ಪ್ರಭೋದಾನಂದ ಗಿರಿ ಭಾಷಣ ಮಾಡುತ್ತಾ “ಮ್ಯಾನ್ಮಾರ್‍ನಂತೆ ನಮ್ಮ ಪೊಲೀಸರು, ರಾಜಕಾರಣಿಗಳು ನಮ್ಮ ಸೇನೆ ಮತ್ತು ಪ್ರತಿಯೊಬ್ಬ ಹಿಂದು ಶಸ್ತ್ರಗಳನ್ನು ಕೈಗೆತ್ತಿಕೊಂಡು ಸಫಾಯಿ ಅಭಿಯಾನ್ ನಡೆಸಬೇಕು, ಬೇರೆ ಆಯ್ಕೆಯಿಲ್ಲ” ಎಂದು ಹೇಳುವುದು ಕೇಳಿಸುತ್ತದೆ.

ಇನ್ನೊಂದು ವೀಡಿಯೋದಲ್ಲಿ ಪೂಜಾ ಶಕುನ್ ಪಾಂಡೆ ಆಲಿಯಾಸ್ ಸಾಧ್ವಿ ಅನ್ನಪೂರ್ಣ ಮಾತನಾಡುತ್ತಾ “ಅವರನ್ನು ಮುಗಿಸಬೇಕೆಂದಿದ್ದರೆ, ಕೊಂದು ಬಿಡಿ. ಆ 20 ಲಕ್ಷ ಮಂದಿಯನ್ನು ಕೊಂದು ಜಯ ಗಳಿಸಲು ನಮಗೆ 100 ಸೈನಿಕರ  ಅಗತ್ಯವಿದೆ” ಎಂದು ಹೇಳಿದ್ದಾರೆ.

“ಭಾರತದ ಸಂವಿಧಾನ ತಪ್ಪು. ಭಾರತೀಯರು ನಾಥೂರಾಂ ಗೋಡ್ಸೆಗೆ ಪ್ರಾರ್ಥನೆ ಸಲ್ಲಿಸಬೇಕು. ನಾನು ಪೊಲೀಸರಿಗೆ ಭಯಪಡುವುದಿಲ್ಲ” ಎಂದು ಸುದ್ದಿ ಸಂಸ್ಥೆಯೊಂದರ ಜತೆ ಮಾತನಾಡುತ್ತಾ ಆಕೆ ಹೇಳಿದ್ದಾರೆ.

ಮುಸ್ಲಿಮರ ವಿರುದ್ಧ ದ್ವೇಷಪೂರಿತ ಭಾಷಣದ ವಿರುದ್ಧ ಹರಿದ್ವಾರ ಕೊತ್ವಾಲಿಯಲ್ಲಿ ಗುಲ್ಬಹಾರ್ ಎಂಬ ಯುವಕನಿಂದ ಈ ಪ್ರಕರಣ ದಾಖಲಾಗಿದೆ. ಇದೀಗ ಪೊಲೀಸರು ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ.

ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಡಾ.ಶಾಮಾ ಮೊಹಮ್ಮದ್ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಮುನವ್ವರ್ ಫಾರೂಕಿ ಅವರು ಮಾಡದ ಅಪಹಾಸ್ಯಕ್ಕೆ ನಿರಂತರವಾಗಿ ಶಿಕ್ಷೆ ಅನುಭವಿಸುತ್ತಿದ್ದರು, ಆದರೆ ವಿವಾದಾತ್ಮಕ ಮಾತುಗಳನ್ನು ಆಡಿದ ಧರ್ಮಗಳ ಸಂಸತ್ತಿನ ಸದಸ್ಯರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಈ ಸಮಾವೇಶಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಆರ್‌ಟಿಐ ಕಾರ್ಯಕರ್ತ ಮತ್ತು ತೃಣಮೂಲ ಕಾಂಗ್ರೆಸ್‌ನ ಸಾಕೇತ್ ಗೋಖಲೆ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ್ದು, ಜ್ವಾಲಾಪುರ ಪೊಲೀಸ್ ಠಾಣೆಯಲ್ಲಿ ಎಸ್‌ಎಚ್‌ಒಗೆ ದೂರು ನೀಡಿದ್ದೇನೆ ಎಂದು ಹೇಳಿದ್ದಾರೆ. 24 ಗಂಟೆಗಳ ಒಳಗೆ ಸಂಘಟಕರು ಮತ್ತು ಭಾಷಣಕಾರರ ವಿರುದ್ಧ ಎಫ್‌ಐಆರ್ ದಾಖಲಿಸದಿದ್ದರೆ, ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ ಎಂದು ಬರೆದಿದ್ದಾರೆ.

ಸ್ವರಾ ಭಾಸ್ಕರ್‌ ಅವರು ಟ್ವೀಟ್‌ ಮಾಡಿದ್ದು, ಭಾರತೀಯ ದಂಡ ಸಂಹಿತೆಯ ಕಾಯ್ದೆ 153ಎ ಅಡಿಯಲ್ಲಿ ಧರ್ಮ, ಜನಾಂಗ, ಹುಟ್ಟಿದ ಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ಅಸಂಗತತೆ, ದ್ವೇಷ ಅಥವಾ ದ್ವೇಷದ ಭಾವನೆಗಳನ್ನು ಹುಟ್ಟಿಸುವ ಅಪರಾಧವಾಗುತ್ತದೆ ಎಂದಿದ್ದಾರೆ.

ಈ ಸಮಾವೇಶವು ಯತಿ ನರಸಿಂಹಾನಂದರು ಆಯೋಜಿಸಿದ್ದರು. ಹಿಂದೂ ರಕ್ಷಣಾ ಸೇನೆಯ ಅಧ್ಯಕ್ಷ ಸ್ವಾಮಿ ಪ್ರಮೋದಾನಂದ ಗಿರಿ, ಸ್ವಾಮಿ ಆನಂದಸ್ವರೂಪ್, ಸಾಧ್ವಿ ಅನ್ನಪೂರ್ಣ ಮುಂತಾದವರು ಈ ಸಮಾವೇಶದಲ್ಲಿ ಭಾಷಣಕಾರರಾಗಿ ಭಾಗವಹಿಸಿದ್ದರು. ಸಮಾವೇಶದಲ್ಲಿ ಪಾಲ್ಗೊಂಡಿದ್ದ ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಅವರ ಮೇಲೂ ಆರೋಪ ಕೇಳಿಬರುತ್ತಿದೆ.

Donate Janashakthi Media

Leave a Reply

Your email address will not be published. Required fields are marked *