ವಿಜಯಪುರ : ಹೊಸಬರಿಗೆ ಟಿಕೆಟ್ ನೀಡಲು ಸಲಹೆ ನೀಡಿದವರನ್ನು ನೇಣಿಗೆ ಹಾಕಿ, ಇಲ್ವೇ ಕಾಲು ತೆಗೆದು ಹಾಕಿ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ. ಈ ಬಗ್ಗೆ ವಿಜಯಪುರದಲ್ಲಿ ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ವಿಧಾನಸಭಾ ಚುನಾವಣೆಯಲ್ಲಿ ನಮ್ಮಿಂದ ತಪ್ಪು ಆಗಿದೆ. ವಿಧಾನಸಭಾ ಚುನಾವಣೆಯಲ್ಲಿ 70 ಟಿಕೆಟ್ ಹೊಸಬರಿಗೆ ನೀಡಲಾಗಿತ್ತು, ಇದರಿಂದ ಬಿಜೆಪಿಗೆ ಸೋಲಾಗಿದೆ ಎಂದು ಪರೋಕ್ಷವಾಗಿ ಬಿಜೆಪಿ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ :ವಿಜಯಪುರ ಫಲಿತಾಂಶ; ಕಾಂಗ್ರೆಸ್ ಮುಸ್ಲಿಂ ಪಕ್ಷ ಅಲ್ಲ – ಬಿಜೆಪಿ ಹಿಂದೂ ಪಕ್ಷ ಅಲ್ಲ
ಟಿಕೆಟ್ ಹಂಚಿಕೆ ಕುರಿತು ಮಾತನಾಡಿ, ನಮ್ಮ ಪಕ್ಷ ಅತಿಹೆಚ್ಚು ಹೊಸಬರಿಗೆ ಟಿಕೆಟ್ ಕೊಟ್ಟಿದ್ದು ಇನ್ನೊಂದು ತಪ್ಪು. ಯಾಕಾಯ್ತು ಅನ್ನೋದು ನಿಮಗೂ ಗೊತ್ತಿರ್ತದ, ನಮಗೂ ಗೊತ್ತಿರ್ತದ. 70 ಮಂದಿ ಹೊಸಬರಿ ಟಿಕೆಟ್ ಕೊಡುವ ಅವಶಯಕತೆ ಏನಿತ್ತಪ್ಪ? ಹೊಸಬರಿಗೆ ಕೊಡಬೇಕು, ಕೊಡಬಾರದು ಎಂದು ನಾ ಅನ್ನಲ್ಲ. 70 ಜನರಿಗೆ ಕೊಟ್ಟೆವು, ಗೆದ್ದೆವ? 70 ರಲ್ಲಿ 10 ಸೀಟ್ ಗೆದ್ರಾ? ಮತ್ತೆ ನೀವು ಈ 70 ಸೀಟನ್ನ ಹಳಬರಿಗೆ ಕೊಟ್ಟಿದ್ರೆ ಕನಿಷ್ಠ 30 – 35 ಸೀಟು ಬರ್ತಿದ್ದವು. ಇದು ಎರಡನೇಯ ತಪ್ಪು ಎಂದರು.
ಯಾರು..? ಯಾರು ಇದಕ್ಕೆ ಸಲಹೆ ಮಾಡ್ಯಾರೋ ಅವರಿಗೇ ಬಿಟ್ಟದ್ದು. ಅವರಿಗೇ ಏನ್ ಮಾಡ್ತೀರಿ ಮಾಡ್ರಿ. ನೇಣು ಬೇಕಾದ್ರೆ ಹಾಕಿ, ಕಾಲು ಬೇಕಾದ್ರೆ ತೆಗೀರಿ, ನನಗೇನು ಸಂಬಂಧ ಇಲ್ಲ ಎಂದು ಹೊಸಬರಿಗೆ ಟಿಕೆಟ್ ನೀಡಿದ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬರಲು ಕಾಂಗ್ರೆಸ್ ಗ್ಯಾರಂಟಿಗಳೇ ಕಾರಣ, ಗ್ಯಾರಂಟಿಗಳಿಂದ ಕಾಂಗ್ರೆಸ್ ಗೆ ಬಹುಮತ ಸಿಕ್ಕಿದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೊರಗಡೆಗೆ ಹೋಗಿದ್ದು ಪಕ್ಷಕ್ಕೆ ಸ್ವಲ್ಪ ಹಾನಿ ಆಗಿದೆ ಎಂದು ಹೇಳಿದ್ದಾರೆ.