ಹಾನಗಲ್‌ ಉಪಚುನಾವಣಾ ಫಲಿತಾಂಶ-ಬಿಜೆಪಿಗೆ ಆಘಾತ

ನಿತ್ಯಾನಂದಸ್ವಾಮಿ

ಭಾರೀ ಕುತೂಹಲಕ್ಕೆ ಕಾರಣವಾದ ಹಾನಗಲ್ ಮತ್ತು ಸಿಂದಗಿ ವಿಧಾನಸಭಾ ಕ್ಷೇತ್ರಗಳಲ್ಲಿ ಹಾನಗಲ್ ಉಪಚುನಾವಣೆಯ ಫಲಿತಾಂಶ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿಗೆ ಆಘಾತವನ್ನುಂಟು ಮಾಡಿದೆ. ಎರಡೂ ಕ್ಷೇತ್ರಗಳಲ್ಲಿ ಗೆಲ್ಲುವ ನಿರೀಕ್ಷೆ ಅವರದಾಗಿತ್ತು. ಸಿಂದಗಿಯಲ್ಲಿ ಸುಮಾರು 31 ಸಾವಿರ ಮತಗಳ ಅಂತರದಿಂದ ಬಿಜೆಪಿ ಗೆದ್ದಿದೆ. ಆದರೆ ಹಾನಗಲ್‌ನಲ್ಲಿ ಆಗಿರುವ ಸೋಲು ಬಿಜೆಪಿಗೆ ಮಂಕು ಕವಿದಿದೆ. ಈ ಆಘಾತಕಾರಿ ಸೋಲನ್ನು ಅವರು ನಿರೀಕ್ಷಿಸಲಿರಲಿಲ್ಲ.

ಹಾವೇರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ತವರು ಜಿಲ್ಲೆ. ಅವರೇ ಪ್ರತಿನಿಧಿಸುವ ಶಿಗ್ಗಾಂವಿ ಕ್ಷೇತ್ರದ ಮಗ್ಗುಲಿನಲ್ಲೇ ಇರುವ ಕ್ಷೇತ್ರ ಹಾನಗಲ್. ಇದು ಬೊಮ್ಮಾಯಿಯವರ ಪ್ರತಿಷ್ಠೆಯ ಕ್ಷೇತ್ರ. ಬಿಜೆಪಿಯ ಹಿರಿಯ ನಾಯಕ ಸಿ.ಎಂ. ಉದಾಸಿ ನಿಧಾನದಿಂದ ತೆರವಾಗಿದ್ದ ಕ್ಷೇತ್ರ. ಕಳೆದ ಬಾರಿ ಇಲ್ಲಿ ಸುಮಾರು 7 ಸಾವಿರ ಮತಗಳ ಅಂತರದಿಂದ ಬಿಜೆಪಿ ಗೆಲುವು ಸಾಧಿಸಿತ್ತು. ಈ ಸಲ ಭಾರೀ ಬಹುಮತದಿಂದ ಹಾನಗಲ್ ಕ್ಷೇತ್ರವನ್ನು ಗೆಲ್ಲಲೇಬೇಕೆಂಬ ಪಣತೊಟ್ಟು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ಕ್ಷೇತ್ರದಲ್ಲೇ ಮೊಕ್ಕಾಂ ಹೂಡಿದ್ದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಮಂತ್ರಿಗಳು, ಶಾಸಕರ ದಂಡೇ ಹಾನಗಲ್ ಕ್ಷೇತ್ರದ ಪ್ರಚಾರದಲ್ಲಿ ತೊಡಗಿತ್ತು. ಆದರೆ ಮತದಾರರು ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿಯನ್ನು ತಿರಸ್ಕರಿಸಿ ಶಾಕ್ ನೀಡಿದ್ದಾರೆ.

ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿ ಸೋಲಿಗೆ ಕಾರಣಗಳು ಬೇರೆ ಬೇರೆ ಇರಬಹುದು. ಆದರೆ ಸೋತಿರುವ ಬಿಜೆಪಿಯ ಅಭ್ಯರ್ಥಿ ಶಿವರಾಜ ಸಜ್ಜನರ ವಿಶ್ಲೇಷಿಸಿದ್ದು ಹೀಗೆ: “ಅತಿಯಾದ ಆತ್ಮವಿಶ್ವಾಸವೇ ನಮಗೆ ಮುಳುವಾಯಿತು” ನರೇಂದ್ರ ಮೋದಿ ಅವರ ಹೆಸರಿನಲ್ಲಿ ತಮಗೆ ಜಯ ಸಿಕ್ಕೇ ಸಿಗುತ್ತದೆ ಎಂಬುವುದು ಬಿಜೆಪಿಗರ ಮೂಢನಂಬಿಕೆ. ಆ ಕಾಲ ಮುಗಿಯುತ್ತಿರುವಂತೆ ಕಾಣುತ್ತದೆ. ಮೋದಿ ಹೆಸರಿನ ಚಮತ್ಕಾರದಿಂದ ಬಿಜೆಪಿಯಿಂದ ಟಿಕೆಟ್ ಪಡೆದು ಸ್ಪರ್ಧಿಸುವವರು ಎಲ್ಲರೂ ಗೆದ್ದೇ ಗೆಲ್ಲುತ್ತಾರೆ ಎಂಬ ಅತಿಯಾದ ವಿಶ್ವಾಸ. ಮೋದಿ ಎಂಬ ನಾಣ್ಯ ಈಗ ಚಲಾವಣೆ ಇಲ್ಲದ ನಾಣ್ಯವಾಗತೊಡಗಿದೆ.ʼʼ

ಕರ್ನಾಟಕದ ಉಪಚುನಾವಣೆಯಲ್ಲಿ ಮಾತ್ರವಲ್ಲ ದೇಶದ ಸುಮಾರು 30 ವಿಧಾನಸಭಾ ಮತ್ತು 3 ಲೋಕಸಭಾ ಉಪಚುನಾವಣೆಯ ಫಲಿತಾಂಶ ಬಿಜೆಪಿಗೆ ಮುಖಭಂಗ ಉಂಟುಮಾಡಿದೆ. ಒಟ್ಟು 14 ರಾಜ್ಯಗಳ 30 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಕೇವಲ 7 ವಿಧಾನಸಭಾ ಕ್ಷೇತ್ರಗಳನ್ನು ಗೆದ್ದಿದೆ. ಉಳಿದ 23 ಕ್ಷೇತ್ರಗಳಲ್ಲಿ ಬಿಜೆಪಿಗೆ ಸೋಲಾಗಿದೆ. ಉಪಚುನಾವಣೆ ನಡೆದ 3 ಲೋಕಸಭಾ ಕ್ಷೇತ್ರಗಳ ಪೈಕಿ ಮಧ್ಯಪ್ರದೇಶದ ಖಾಂಡ್ವ ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಜಯಗಳಿಸಿದ್ದು ಇನ್ನುಳಿದ ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಅದು ಸೋಲನ್ನು ಅನುಭವಿಸಿದೆ. ಈ ಬೆಳವಣಿಗೆ ಕೇವಲ ಉಪ ಚುನಾವಣೆಗೆ ಸೀಮಿತವಾಗಿಲ್ಲ. ಕಳೆದ ಎಪ್ರಿಲ್-ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ 4 ರಾಜ್ಯಗಳ ಜನತೆ ಬಿಜೆಪಿಯನ್ನು ಸಾರಾಸಗಟಾಗಿ ತಿರಸ್ಕರಿಸಿದ್ದನ್ನು ನಾವು ಮರೆಯುವಂತಿಲ್ಲ. ಈ ಎಲ್ಲಾ ಬೆಳವಣಿಗೆಗಳನ್ನು ವಿಶ್ಲೇಷಿಸುತ್ತಾ ದೇಶದಲ್ಲಿ ಬಿಜೆಪಿಯ ಅವನತಿ ಪ್ರಾರಂಭವಾಗಿದೆ ಎಂದು ಪ್ರತಿಪಾದಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ.

2014ರ ಆರಂಭ ಕಾಲದಿಂದಲೂ ಮೋದಿ ಎಂಬ ಭ್ರಮೆ ಹುಟ್ಟಿಸಿ, ಚುನಾವಣೆಗಳಲ್ಲಿ ಬಿಜೆಪಿ ಗೆಲ್ಲುತ್ತಿತ್ತು. ಆದರೆ ಈಗ ಆ ಕಾಲ ಇಲ್ಲ. ಜನ ನರೇಂದ್ರ ಮೋದಿಯವರಲ್ಲಿ ಭ್ರಮನಿರಸನಗೊಂಡಿದ್ದಾರೆ. ಈಗ ಕೇವಲ ಮೋದಿ ಹೆಸರು ಹೇಳಿ ಗೆಲ್ಲಲಾಗದು ಎಂಬ ಸತ್ಯ ವ್ಯಕ್ತವಾಗತೊಡಗಿದೆ. ಕೆಲಕಾಲ ಜನರನ್ನು ಕತ್ತಲಲ್ಲಿ ಇಡಬಹುದು. ಅವರ ದಾರಿ ತಪ್ಪಿಸಬಹುದು. ಆದರೆ ಇದು ಶಾಶ್ವತವಲ್ಲ. ಈ ವಂಚನೆ ಬಹುದಿನ ಬಯಲಾಗದೆ ಇರಲಾರದು.

ದೇಶದ ಅಭಿವೃದ್ಧಿ ದೇಶದ ಕಾರ್ಪೊರೇಟೀಕರಣವನ್ನು ಅವಲಂಭಿಸಿದೆ ಎಂದು ನರೇಂದ್ರ ಮೋದಿಯವರು ಬಿಂಬಿಸುತ್ತಿದ್ದಾರೆ. ಇದನ್ನು ಕಾರ್ಮಿಕರು, ರೈತರು, ಯುವಜನರು ಪ್ರಶ್ನಿಸಲಾರಂಭಿಸಿದ್ದಾರೆ. ಇದರಿಂದಾಗಿ ಮೋದಿಯವರ ಮುಖವಾಡ ಕಳಚಿ ಬೀಳ ತೊಡಗಿದೆ. ಹಾನಗಲ್ ಕ್ಷೇತ್ರದಲ್ಲಿ ಮೋದಿ ಹೆಸರಿನ ಮೋಡಿ ಕೆಲಸ ಮಾಡಲಿಲ್ಲ. ಪಕ್ಷದಲ್ಲಿ ಏನೇ ಭಿನ್ನಾಭಿಪ್ರಾಯಗಳಿದ್ದರೂ ಜನ ಮೋದಿಯವರ ಪಕ್ಷಕ್ಕೆ ಮತ ನೀಡಿ ಗೆಲ್ಲಿಸುತ್ತಾರೆ ಎಂದು ಕೊಳ್ಳಲಾಗಿತ್ತು. ಜನ ಮೋದಿಯವರನ್ನು ತಿರಸ್ಕರಿಸಲು ಹಿಂಜರಿಯಲಿಲ್ಲ. ಹಣದ ಆಮಿಷ, ಜಾತಿ ಆಕರ್ಷಣೆ, ಎಲ್ಲವನ್ನು ತಿರಸ್ಕರಿಸಿ ಹಾನಗಲ್ ಮತದಾರರು ತಮಗೆ ಸರಿಕಂಡವರನ್ನು ಆಯ್ಕೆ ಮಾಡಿದ್ದಾರೆ. ಆ ಮೂಲಕ ಬಿಜೆಪಿ ಪಕ್ಷಕ್ಕೆ ಸೇರಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನೂ ತಿರಸ್ಕರಿಸಿದ್ದಾರೆ. ಮುಂದಿನ ಚುನಾವಣೆಗಳಿಗೆ ಇದು ಒಂದು ಪ್ರಖರವಾದ ಮುನ್ಸೂಚನೆಯಾಗಿ ಜನ ಬಿಜೆಪಿಯನ್ನು ಅಧಿಕಾರದಿಂದ ತೊಲಗಿಸಿದರೆ ಅದೇನು ಆಶ್ಚರ್ಯಪಡಬೇಕಾದ ಸಂಗತಿ ಆಗಲಾರದು.

Donate Janashakthi Media

Leave a Reply

Your email address will not be published. Required fields are marked *