ಪೇಜಾವರ ಸ್ವಾಮಿಗಳ ದಲಿತರ ಮನೆಗಳ ಭೇಟಿಯನ್ನೂ, ಕರ್ನಾಟಕದ ವಿವಿಧ ಮಂತ್ರಿಗಳ ಗ್ರಾಮ ವಾಸ್ತವ್ಯಗಳನ್ನು ‘ಬೂಟಾಟಿಕೆ’ ಎಂದು ಕರೆದು ಮೈಸೂರಿನ ಸಭೆಯೊಂದರಲ್ಲಿ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ವ್ಯಂಗ್ಯದ ಮಾತುಗಳನ್ನು ಆಡಿದ್ದಾರೆ ಎಂದು ವರದಿಯಾಗಿದೆ. ಅವರ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಪರ-ವಿರೋಧ ಚರ್ಚೆಗೆ ಕಾರಣವಾಗಿದ್ದು ಪೇಜಾವರ ಸ್ವಾಮಿಗಳನ್ನು ಟೀಕಿಸಿದ್ದಕ್ಕಾಗಿ ಅವರು ತೀವ್ರ ನಿಂದನೆಗೆ ಒಳಗಾಗಿದ್ದಾರೆ. ಪ್ರಮುಖ ಬಿಜೆಪಿ ಮತ್ತು ಸಂಘಪರಿವಾರದ ನಾಯಕರು ಬೆಂಬಲಿಗರು ಅವರ ವಿರುದ್ಧ ಹರಿಹಾಯ್ದಿದ್ದಾರೆ. ಸಂಸದ ಪ್ರತಾಪ ಸಿಂಹ ಅದಕ್ಕೆ ಅವರ ಮೆಚ್ಚಿನ ಹವ್ಯಾಸವಾದ ‘ಆಹಾರ ರಾಜಕಾರಣ’ದ ‘ದಲಿತ-ಮುಸ್ಲಿಂ ದ್ವೇಷ ಪ್ರಚಾರ’ದ ತಿರುವು ಕೊಡುವ ಪ್ರಯತ್ನ ಮಾಡಿದ್ದಾರೆ. ಈ ಟೀಕೆಗಳಿಂದ ನೊಂದ ಹಂಸಲೇಖ ಕ್ಷಮೆಯಾಚಿಸಿದ್ದಾರೆ. ಈ ಕ್ಷಮೆಯಾಚನೆಯ ಪರ-ವಿರೋಧ ಚರ್ಚೆಗಳು ತೀವ್ರವಾಗಿ ಮುಂದುವರೆದಿವೆ.
ಇದೇ ವಿಷಯದ ಬಗ್ಗೆ ಸಮುದಾಯ ಕರ್ನಾಟಕದ ಸಂಘಟನೆಯ ರಾಜ್ಯ ಅಧ್ಯಕ್ಷ ಅಚ್ಯುತ ಅವರು ʻʻಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆಗಳನ್ನು ತೊಡೆದು ಹಾಕುವಲ್ಲಿ ‘ದಲಿತರ ಕೇರಿಗೆ ಭೇಟಿ’ಯಂತಹ ನಮ್ಮ ಧಾರ್ಮಿಕ ರಾಜಕೀಯ ನಾಯಕರ ತೋರಿಕೆಯ ಕ್ರಮಗಳು ವಿಡಂಬನೆಗೆ ಟೀಕೆಗೆ ಅರ್ಹವಾದವುಗಳೇ. ಅದರಲ್ಲೂ ಮಡೆಸ್ನಾನ ಪಂಕ್ತಿಬೇಧ ದಂತಹ ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆಗಳ ಸಿದ್ಧಾಂತ-ಆಚರಣೆಗಳನ್ನು ಈಗಲೂ ಎತ್ತಿ ಹಿಡಿಯುವ, ಕನಕದಾಸರಂತಹ ಭಕ್ತರನ್ನೇ ಹೊರಗಿಟ್ಟ, ಮತಧರ್ಮವನ್ನು ರಾಜಕಾರಣಕ್ಕೆ ದುರ್ಬಳಕೆ ಮಾಡುವುದರಲ್ಲಿ ಅಗ್ರ ಪಂಕ್ತಿಯಲ್ಲಿದ್ದ ಉಡುಪಿಯ ಪೇಜಾವರ ಸ್ವಾಮಿಗಳ ಇಂತಹ ತೋರಿಕೆಯ ಕ್ರಮಗಳು ಬರಿಯ ‘ಬೂಟಾಟಿಕೆ’ಯಲ್ಲ. ಜನರ ಕಣ್ಣಿಗೆ ಮಣ್ಣೆರಚುವ ವಂಚನೆ ಸಹ. ಅಪ್ರಾಮಾಣಿಕವಾದ ನಿಜವಾದ ಬದಲಾವಣೆಯತ್ತ ಯಾವುದೇ ಕೊಡುಗೆ ನೀಡದ ಜನಮರುಳು ಕ್ರಮಗಳು. ಸತತವಾಗಿ ಮುಂದುವರೆಯುತ್ತಿರುವ ದುರ್ಭರ ಗ್ರಾಮೀಣ ಪರಿಸ್ಥಿತಿಯ ಸನ್ನಿವೇಶದಲ್ಲಿ ಅದರ ಕುರಿತು ಯಾವುದೇ ಕ್ರಮಗಳನ್ನು ಕೈಗೊಳ್ಳದೆ ‘ಗ್ರಾಮವಾಸ್ತವ್ಯ’ ಮಾಡುವ ಸಚಿವರುಗಳ ಕ್ರಮಗಳಷ್ಟೇ ವಂಚನೆಯ ಜನಮರುಳು ಕ್ರಮಗಳು. ಇವನ್ನು ಹಂಸಲೇಖ ಅವರು ಟೀಕಿಸಿದ್ದು ಸರಿಯಾಗಿಯೇ ಇದೆʼʼ ಎಂದು ಹೇಳಿದ್ದಾರೆ.
ಹಂಸಲೇಖ ಅವರಿಗೆ ಅಥವಾ ಯಾರಿಗಾದರೂ ಇಂತಹ ಅಭಿಪ್ರಾಯಗಳನ್ನು ಹೊಂದುವ ಅದನ್ನು ಹೇಳುವ ಹಕ್ಕು, ಸ್ವಾತಂತ್ರ್ಯ ಇದೆ. ಹಂಸಲೇಖ ಅವರು ಸಂಗೀತದ ಜಗತ್ತಿನ ಸಾಧಕರು ಮಾತ್ರವಲ್ಲ, ಹಲವಾರು ದಲಿತ ವಿದ್ಯಾರ್ಥಿಗಳ ಶಿಕ್ಷಣಕ್ಕೆ, ಅವರು ಆತ್ಮವಿಶ್ವಾಸದಿಂದ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡಿದವರು ಎಂದು ತಿಳಿದುಬಂದಿದೆ. ಈ ಕ್ರಮಗಳು ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆಗಳಲ್ಲಿ ತೊಡೆಯುವ ನಿಟ್ಟಿನಲ್ಲಿ ಸ್ವಲ್ಪವಾದರೂ ಬದಲಾವಣೆ ತರುವ ಪ್ರಾಯೋಗಿಕ ಕ್ರಮಗಳಾಗಿದ್ದು, ಹಂಸಲೇಖ ಅವರಿಗೆ ಇಂತಹ ಹೇಳಿಕೆ ಕೊಡುವ ಪೂರ್ಣ ನೈತಿಕ ಹಕ್ಕು ಸಹ ಇದೆ.
ಸಮುದಾಯ ಕರ್ನಾಟಕದ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ದೇವೇಂದ್ರ ಗೌಡ ಅವರು ‘ಹಂಸಲೇಖ ಪೇಜಾವರ ಸ್ವಾಮಿಗಳನ್ನು ಟೀಕಿಸಿದ್ದು ಸರಿಯಾಗಿದೆ. ಅವರು ಕ್ಷಮೆ ಕೇಳುವ ಅಗತ್ಯವಿರಲಿಲ್ಲ. ಅವರು ಹಾಗೆ ಮಾಡುವ ಸ್ಥಿತಿ ನಮ್ಮ ದೇಶ ಮತ್ತು ರಾಜ್ಯದಲ್ಲಿ ಇರುವುದು ನಮ್ಮ ದುರಂತ’ ಎಂದು ತಿಳಿಸಿದ್ದಾರೆ. ನಾಡಿನ ದೊಡ್ಡ ಸಾಧಕರಾಗಿರುವ ಹಂಸಲೇಖ ಅವರ ತಮ್ಮದೇ ಅಭಿಪ್ರಾಯ ಹೊಂದುವ ಮತ್ತು ಅದನ್ನು ಅಭಿವ್ಯಕ್ತಿಸುವ ಸ್ವಾತಂತ್ರ್ಯವನ್ನು ಹರಣ ಮಾಡುವ ನಿಂದನೆಗಳನ್ನು ಖಂಡಿಸುತ್ತದೆ. ಹಂಸಲೇಖ ಅವರ ಬೆಂಬಲಕ್ಕೆ ನಿಲ್ಲುವಂತೆ, ಸತ್ಯವನ್ನು ಹೇಳಿದವರು ಕ್ಷಮೆ ಕೇಳುವ ಸ್ಥಿತಿ ಬಾರದಂತೆ, ಅಭಿಪ್ರಾಯ ಮತ್ತು ಅದರ ಅಭಿವ್ಯಕ್ತಿಯ ಸ್ವಾತಂತ್ರ್ಯದ ಮೇಲೆ ಇಂತಹ ಸತತ ಹಲ್ಲೆಗಳ ವಿರುದ್ಧ ತೀವ್ರವಾಗಿ ಪ್ರತಿಭಟಿಸಬೇಕು ಎಂದು ಸಮುದಾಯ ಕರ್ನಾಟಕ ಕರೆ ನೀಡಿದೆ.
ಅದೇ ಸಮಯದಲ್ಲಿ ನಟಿ ಕಂಗನಾ ರಾವುತ್ “1947ರಲ್ಲಿ ದೇಶಕ್ಕೆ ಸಿಕ್ಕಿದ್ದು ಭಿಕ್ಷೆ, 2014ರಲ್ಲಿ ಮಾತ್ರ ನಮಗೆ ಸ್ವಾತಂತ್ರ‍್ಯ ಸಿಕ್ಕಿದ್ದು’ ಎಂಬ ಹೇಳಿಕೆ ನೀಡಿದ್ದು ಅಚಾರಿತ್ರಿಕ ಹಸಿಸುಳ್ಳು ಮಾತ್ರವಲ್ಲ, ಅಭಿವ್ಯಕ್ತಿ ಸ್ವಾತಂತ್ರ್ಯದ ಅತ್ಯಂತ ಹೇಸಿಗೆ ಹುಟ್ಟಿಸುವ ದುರ್ಬಳಕೆ. ಕೂಡಾ. ಹಿಂದೆನೂ ಇಂತಹ ಹಸಿಸುಳ್ಳು ಹೇಳಿಕೆಗಳನ್ನು ನೀಡಿರುವ ಇಂತಹ ವ್ಯಕ್ತಿಗೆ ಕೊಟ್ಟಿರುವ ಪದ್ಮಶ್ರೀ ಪ್ರಶಸ್ತಿ ಇಂತಹ ಹೇಳಿಕೆಗಳನ್ನು ಕೊಡಲು ಪ್ರೋತ್ಸಾಹವೇ ಅಥವಾ ಲೈಸೆನ್ಸೇ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಬೇಕು. ಪದ್ಮಶ್ರೀ ಪ್ರಶಸ್ತಿ ವಾಪಸು ಪಡೆದು, ಕೇಸು ದಾಖಲಿಸಬೇಕು ಎಂದು ಸಮುದಾಯ ಕರ್ನಾಟಕ ಒತ್ತಾಯಿಸಿದೆ.
ಸತ್ಯ ಹೇಳಿದವರು ಕ್ಷಮೆ ಕೇಳುವ, ಹಸಿ ಸುಳ್ಳು ಹೇಳಿದವರು ಪದ್ಮಪ್ರಶಸ್ತಿ ಪಡೆಯುವ ದುಸ್ಥಿತಿಯ ವಿರುದ ದೀರ್ಘಕಾಲೀನ ನಿರಂತರ ಸಾಮಾಜಿಕ ಸಾಂಸ್ಕತಿಕ ಕ್ರಮಗಳನ್ನು ಕೈಗೊಳ್ಳುವಲ್ಲಿ ಕೈಜೋಡಿಸಬೇಕೆಂದು ಎಲ್ಲ ಪ್ರಜಾಸತ್ತಾತ್ಮಕ ಶಕ್ತಿಗಳಿಗೆ ಸಮುದಾಯ ಕರ್ನಾಟಕ ಕರೆ ನೀಡಿದೆ.