ಜನರ ನೀರಸ ಪ್ರತಿಕ್ರಿಯೆ; ʻಹಂಪಿ ಉತ್ಸವʼದಲ್ಲಿ ಖಾಲಿ ಕುರ್ಚಿಗಳಿಗೆ ಮುಖ್ಯಮಂತ್ರಿ ಭಾಷಣ

ವಿಜಯನಗರ: ಹಂಪಿ ಉತ್ಸವಕ್ಕೆ ಜನರು ನೀರಸ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ಮೂರು ದಿನಗಳ ‘ಹಂಪಿ ಉತ್ಸವ’ಕ್ಕೆ ಚಾಲನೆ ದೊರೆತಿದ್ದಾದರೂ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖಾಲಿ ಕುರ್ಚಿಗಳ ಮುಂದೆ ಭಾಷಣ ಮಾಡಿರುವ ಪ್ರಸಂಗ ಎದುರಾಯಿತು.

ಹಂಪಿ ಉತ್ಸವದ ಪ್ರಧಾನ ವೇದಿಕೆ ಗಾಯತ್ರಿ ಪೀಠದಲ್ಲಿ ಉದ್ಘಾಟನಾ ಕಾರ್ಯಕ್ರಮಕ್ಕೆ ಮೀಸಲಾಗಿದ್ದ ಅತಿ ಗಣ್ಯರು, ಗಣ್ಯರು ಹಾಗೂ ಸಾರ್ವಜನಿಕರಿಗೆ ಹಾಕಿದ್ದ ಬಹುತೇಕ ಕುರ್ಚಿಗಳೆಲ್ಲ ಖಾಲಿ ಇದ್ದವು. ಉಳಿದ ಮೂರು ವೇದಿಕೆ ಬಳಿಯೂ ಜನರು ಸುಳಿಯಲಿಲ್ಲ. ವೇದಿಕೆಗಳಲ್ಲಿ ಸಾಮಾನ್ಯ ಜನರಿಗಿಂತ ಕಲಾವಿದರು ಹಾಗೂ ಪೊಲೀಸರೇ ಇದ್ದಿದ್ದು ಕಂಡಿ ಬಂದಿದೆ.

ಉದ್ಘಾಟನಾ ಸಮಾರಂಭದಲ್ಲಿ ಅಶಿಸ್ತಿನಿಂದ ವರ್ತಿಸಿರುವ ಘಟನೆಯೂ ನಡೆದಿದೆ. ರಾಜಕೀಯ ನಾಯಕರ ಬೆಂಬಲಿಗರು, ಭದ್ರತಾ ಸಿಬ್ಬಂದಿಯೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಕೆಲವರು ಬೇಕಾಬಿಟ್ಟಿ ವೇದಿಕೆಯಲೆಲ್ಲಾ ನಿಂತಿದ್ದರು. ಉದ್ಘಾಟನಾ ಸಮಾರಂಭದ ಕೊನೆಯ ಗಳಿಗೆವರೆಗೂ ಸಿದ್ಧತಾ ಕೆಲಸಗಳು ನಡೆಯುತ್ತಲೇ ಇದ್ದವು. ಭುವನೇಶ್ವರಿ ದೇವಿ ಉತ್ಸವ ಮೂರ್ತಿ ಕೂರಿಸಿ, ಅದರಡಿ ಕಸ ಗುಡಿಸಲಾಗುತ್ತಿತ್ತು. ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉಪಸ್ಥಿತರಿದ್ದರು.

ಉತ್ಸವದಲ್ಲಿ ನಾಲ್ಕು ವೇದಿಕೆಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದರೊಂದಿಗೆ, ಪುಸ್ತಕ, ಫಲಪುಷ್ಪ ಪ್ರದರ್ಶನ, ಮತ್ಸ್ಯ ಮೇಳ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಎದುರು ಬಸವಣ್ಣ ವೇದಿಕೆ ಬಳಿ ನಡೆಯುತ್ತಿದೆ.

ಉತ್ಸವಕ್ಕೆ ಜನರ ನೀರಸ ಪ್ರತಿಕ್ರಿಯೆ ಬಗ್ಗೆ ಮಾಧ್ಯಮಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಪ್ರಶ್ನಿಸಿದಾಗ, ಜನರು ಈ ಉತ್ಸವವನ್ನು ಜನೋತ್ಸವವಾಗಿ ಮಾಡುತ್ತಿದ್ದಾರೆ. ಈಗಷ್ಟೆ ವೇದಿಕೆ ಕಾರ್ಯಕ್ರಮ ಆರಂಭವಾಗಿದ್ದು, ಜನರು ಬೇರೆ, ಬೇರೆ ಹಳ್ಳಿಗಳಿಂದ ಬರಬೇಕಿದೆ. ಹೀಗಾಗಿ ಜನರು ಸ್ವಲ್ಪ ಕಡಿಮೆ ಇದ್ದಾರೆ ಎಂದರು.

ಈ ನಡುವೆ ಸಚಿವರಾದ ಆನಂದ್‌ ಸಿಂಗ್‌ ಹಾಗೂ ಶಶಿಕಲಾ ಜೊಲ್ಲೆ ಅವರ ನಡುವಿನ ವೈಮನಸ್ಸಿನಿಂದಾಗಿ ಉತ್ಸವದ ಪ್ರಚಾರ ಹಾಗೂ ಕಾರ್ಯಗಳಲ್ಲಿಯೂ ಅಡೆತಡೆ ಎದುರಾಗಿತ್ತು ಎನ್ನಲಾಗುತ್ತಿದೆ.

 

Donate Janashakthi Media

Leave a Reply

Your email address will not be published. Required fields are marked *