ಹಂಪಿ ಕನ್ನಡ ವಿವಿಗೆ 20 ಕೋಟಿ ರೂಪಾಯಿ ಬಿಡುಗಡೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ವಿಜಯನಗರ: ಕಲ್ಯಾಣ ಕರ್ನಾಟಕ ಅಭಿವೃದ್ಧಿಯ ಮುಖ್ಯಮಂತ್ರಿಗಳ ವಿವೇಚನಾ ನಿಧಿಯಿಂದ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಕೂಡಲೇ 20 ಕೋಟಿ ರೂಪಾಯಿ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.

ಶನಿವಾರ(ಏಪ್ರಿಲ್‌ 16) ನಡೆದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಆವರಣದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಕಟ್ಟಡಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೆ.ಕೆ.ಆರ್.ಡಿ.ಬಿ ವಿವೇಚನಾ ನಿಧಿಯಿಂದ 80 ಕೋಟಿ ರೂ.ಗಳ ಬೇಡಿಕೆಯಲ್ಲಿ ಉಳಿದ ಮೊತ್ತವನ್ನು ಹಂತ ಹಂತವಾಗಿ ನೀಡಲಾಗುವುದು ಎಂದರು. 2 ರಿಂದ 3 ವಿಭಾಗಗಳನ್ನು ಮಾಡಿ ಅವುಗಳನ್ನು ಪೂರೈಸುವುದಾಗಿ ಭರವಸೆ ನೀಡಿದರು.

ವಿಶ್ವವಿದ್ಯಾಲಯಗಳು ಕ್ಯಾಂಪಸ್ಸಿಗೆ ಮಾತ್ರ ಸೀಮಿತವಾಗಿರಬಾರದು. ಕಾಲ ಬದಲಾವಣೆಯಾಗಿದೆ, ಜಾಗತೀಕರಣ, ಉದಾರೀಕರಣವಾಗಿದೆ. ಕನ್ನಡ ಮುಚ್ಚಿಡುವ ವಸ್ತು ಅಲ್ಲ, ಬಿಚ್ಚಿಡುವ ವಸ್ತುವಾಗಿದೆ. ಬಹಳಷ್ಟು ಜನ ಸಾಹಿತಿಗಳು ಅದನ್ನು ಮುಚ್ಚಿಡುವ ಪ್ರಯತ್ನದಲ್ಲಿಯೇ ಬಂಡಾಯ ಸಾಹಿತ್ಯ ಹುಟ್ಟಿರುವುದು. ತುಳಿತಕ್ಕೆ ಒಳಗಾದವರ ಧ್ವನಿ ಬಂಡಾಯ ಸಾಹಿತ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯ ಹೇಳಿದರು.

ಹಂಪಿ ವಿಶ್ವವಿದ್ಯಾಲಯಲ್ಲಿ ಭಾಷೆ ಮತ್ತು ಸಂಸ್ಕೃತಿ ಎರಡೂ ಬೆಸೆದುಕೊಂಡು ಸಂಶೋಧನೆ ನಡೆಯಬೇಕು. ವಿಭಿನ್ನ ವಿಚಾರಣೆಗಳ ಬಗ್ಗೆ ಸಂಶೋಧನೆಗಳು ನಡೆಯಬೇಕು. ಸ್ಥಾಪಿತವಾಗಿರುವ ಹಾದಿಯ ಮೂಲಕ ಯಾವುದೇ ಬದಲಾವಣೆ ತರಲು ಸಾಧ್ಯವಿಲ್ಲ. ಹೊಸ ಚಿಂತನೆಯ ವಿಭಿನ್ನ ಧ್ವನಿಗಳಿಗೂ ಅವಕಾಶವಿರಬೇಕು. ಈ ವಿಶ್ವವಿದ್ಯಾಲಯ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಬೇಕು ಎಂದರು.

ಎಂ.ಪಿ.ಪ್ರಕಾಶ ಕೊಡುಗೆ ಅಪಾರ

ಕನ್ನಡ ವಿಶ್ವವಿದ್ಯಾಲಯ ಸ್ಥಾಪನೆಗೆ ಮಾಜಿ ಸಚಿವ ಎಂ.ಪಿ.ಪ್ರಕಾಶ್ ಬಹಳಷ್ಟು ಪರಿಶ್ರಮ ಪಟ್ಟಿದ್ದಾರೆ. ಸುಮಾರು ಏಳೆಂಟು ವರ್ಷ ಚಿಂತನೆ ಮಾಡಿ, ಈ ಸ್ಥಳ ಇಷ್ಟು ಸುಂದರವಾಗಿ ನಿರ್ಮಿಸಲು ಪರಿಕಲ್ಪನೆ ಹುಟ್ಟಿತು. ಚಂದ್ರಶೇಖರ ಕಂಬಾರರು ಕನ್ನಡ ವಿವಿ ಮೊದಲ ಕುಲಪತಿಗಳು ನನಗೆ ಮಾರ್ಗದರ್ಶಕರೂ ಆತ್ಮೀಯರೂ ಹೌದು. ಕನ್ನಡ ಹಲವಾರು ಆಯಾಮಗಳಲ್ಲಿವೆ. ಜಾನಪದದಲ್ಲಿ, ದಾಸ ಸಾಹಿತ್ಯ, ವಚನ ಸಾಹಿತ್ಯ, ಹಳೆಗನ್ನಡ, ನವಗನ್ನಡ,ವೈಚಾರಿಕ, ವ್ಯವಹಾರಿಕ, ಬಂಡಾಯ ಮುಂತಾದ ಪ್ರಕಾರಗಳಲ್ಲಿದೆ. ಇವೆಲ್ಲವೂ ವಿವಿಯ ಒಂದು ಪ್ರಮುಖ ಅಂಗವಾಗಬೇಕು. ಆಗ ಇಡೀ ವಿಶ್ವಕ್ಕೆ ವಿವಿಯ ಚಟುವಟಿಕೆ ಪರಿಚಯವಾಗುತ್ತದೆ. ಕನ್ನಡ ನಾಡಿನಲ್ಲಿ ಜಾನಪದ, ಕನ್ನಡ ಸಂಗೀತ, ಸಾಂಸ್ಕೃತಿಕ ವಿಶ್ವವಿದ್ಯಾಲಯವಿದೆ. ವಿವಿಗೆ ದೊಡ್ಡ ಶಕ್ತಿಯನ್ನು ತುಂಬುವ ಅವಕಾಶ ಒದಗಿ ಬಂದಿದೆ ಎಂದರು.

Donate Janashakthi Media

Leave a Reply

Your email address will not be published. Required fields are marked *