ಎನ್.ಕೆ. ವಸಂತ್ ರಾಜ್
ಅಕ್ಟೋಬರ್ 7 ರಂದು ಗಾಜಾ ಪಟ್ಟಿಯಲ್ಲಿ ನೆಲೆಸಿರುವ ಹಮಾಸ್ ಗೆರಿಲ್ಲಾ ಪಡೆ ಇಸ್ರೇಲ್ ಮೇಲೆ ನೂರಾರು ಕ್ಷಿಪಣಿಗಳ ಮೂಲಕ ಮತ್ತು ತೋಪು ಮಶಿನ್‌ಗನ್ ಗಳ ಮೂಲಕ ಭೂದಾಳಿ ಸೇರಿದಂತೆ ಮಿಂಚಿನ ದಾಳಿ ನಡೆಸಿ ದಕ್ಷಿಣ ಇಸ್ರೇಲಿನ ಕೆಲವು ಪ್ರದೇಶಗಳನ್ನು ವಶಪಡಿಸಿಕೊಂಡಿತು. ದಾಳಿಯಲ್ಲಿ ನೂರಾರು ನಾಗರಿಕರು ಸತ್ತರು, ತೀವ್ರವಾಗಿ ಗಾಯಗೊಂಡರು. ಹಲವು ನಾಗರಿಕರನ್ನು ಒತ್ತೆಯಾಳುಗಳನ್ನಾಗಿ ತೆಗೆದುಕೊಳ್ಳಲಾಯಿತು. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಗಾಜಾ ಪಟ್ಟಿ ಮೇಲೆ ಬಾಂಬರ್ ಕ್ಷಿಪಣಿಗಳ ಮೂಲಕ ತೀವ್ರ ದಾಳಿ ನಡೆಸಿದೆ. ಗಾಜಾ ಪಟ್ಟಿಯ ಮೇಲೆ ಪೂರ್ಣ ದಿಗ್ಬಂಧನ ಹೇರಿದೆ. ನೂರಾರು ನಾಗರಿಕರು ಸತ್ತಿದ್ದಾರೆ. ಸಾವಿರಾರು ಗಾಯಗೊಂಡಿದ್ದಾರೆ. ಹಮಾಸ್ ಆಕ್ರಮಿಸಿಕೊಂಡಿದ್ದ ಪ್ರದೆಶಗಳನ್ನು ವಾಪಸು ಪಡೆದುಕೊಂಡಿದೆ. ಈ ಯುದ್ಧದ ಸಂದರ್ಭದಲ್ಲಿ ಹಲವು ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಅಂತಹ ಕೆಲವು ಪ್ರಶ‍್ನೆಗಳಿಗೆ ಉತ್ತರ ಇಲ್ಲಿದೆ.
ಗಾಜಾ ಒಂದು ದೇಶವೇ? ಹಮಾಸ್ ಯಾರು ?
ಗಾಜಾ ಪ್ಯಾಲೆಸ್ತೀನ್ ಜನತೆಯ ಕನಸಿನ ತಾಯ್ನಾಡಿನ ಒಂದು ಭಾಗ. ಇದು ಮೆಡಿಟರೇನಿಯನ್ ಸಮುದ್ರದ ಪೂರ್ವ ಕರಾವಳಿಯಲ್ಲಿರುವ ಪ್ರದೇಶ. ಪೂರ್ವ ಮತ್ತು ಉತ್ತರಕ್ಕೆ ಇಸ್ರೇಲ್, ನೈಋತ್ಯಕ್ಕೆ ಈಜಿಪ್ಟ್ ಇದೆ. ಇದು ಪಟ್ಟಿಯಂತೆ ಇದ್ದು 41 ಕಿ ಮಿ ಉದ್ದ 6012 ಕಿಮಿ ಅಗಲ ಮತ್ತು ಕೇವಲ 345 ಚದರ ಕಿ.ಮಿ ಇರುವ ಪ್ರದೇಶ. ಆದರೆ ಇದರ ಜನಸಂಖ್ಯೆ 23 ಲಕ್ಷವಾಗಿದ್ದು ಇದು ಜಗತ್ತಿನ ಮೂರನೇ ಅತಿ ಜನದಟ್ಟಣೆಯ ಪ್ರದೇಶ. ಗಾಜಾ ಪಟ್ಟಿ 1947ರ ಮೊದಲು ಬ್ರಿಟಿಷ್ ಆಡಳಿತಕ್ಕೆ ಒಳಪಟ್ಟಿದ್ದು, 1948ರ ಅರಬ್-ಇಸ್ರೇಲಿ ಯುದ್ಧದ ನಂತರ ಈಜಿಪ್ಟ್‌ನ ಆಡಳಿತದಲ್ಲಿತ್ತು. 1967ರ ಅರಬ್-ಇಸ್ರೇಲಿ ಯುದ್ಧದ ನಂತರ ಇಸ್ರೇಲಿನ ಆಡಳಿತಕ್ಕೆ ಒಳಪಟ್ಟಿತು. 1967-93 ಅವಧಿಯಲ್ಲಿ ಇದು ಹೆಚ್ಚು ಕಡಿಮೆ ಪ್ಯಾಲೆಸ್ತೀನರ ನಿರಾಶ‍್ರಿತರ ದೊಡ್ಡ ಕ್ಯಾಂಪ್ ಪ್ರದೇಶವಾಗಿತ್ತು. 1993ರ ಒಸ್ಲೊ ಒಪ್ಪಂದದ ನಂತರ ಜ್ಯೂ ವಲಸಿಗರ ಕಾಲೋನಿಗಳ ಜತೆಗೆ ಪ್ಯಾಲೆಸ್ತೀನ್ ಪ್ರಾಧಿಕಾರದ ಭಾಗವಾಯಿತು. 2006 ರಿಂದ ಸ್ವತಂತ್ರ ಪ್ಯಾಲೆಸ್ತೀನ್ ಪ್ರದೇಶವಾಗಿದೆ. 2006 ರಿಂದ ಈ ವರೆಗಿನ ಅವಧಿಯಲ್ಲಿ ಇಸ್ರೇಲ್‌ನ ಹಲವು ಭೀಕರ ಆಕ್ರಮಣಕ್ಕೆ ಮತ್ತು 2010ರಿಂದ ದಿಗ್ಬಂಧನಕ್ಕೆ ಒಳಗಾಗಿದೆ.
ಹಮಾಸ್ ಪ್ಯಾಲೆಸ್ತೀನ್ ವಿಮೋಚನಾ ಚಳುವಳಿಯ ಭಾಗವಾದ ಒಂದು ಸಂಘಟನೆ. 1987-1993 ಅವಧಿಯಲ್ಲಿ ಇಸ್ರೇಲಿನ ಆಕ್ರಮಿತ ಪ್ರದೇಶಗಳಲ್ಲಿ ‘ಇಂತಿಫದಾ’ ಎಂದು ಕರೆಯಲಾದ ಸಾಮೂಹಿಕ ದಂಗೆಗಳ ಸಂದರ್ಭದಲ್ಲಿ ಹುಟ್ಟಿದ ಸಂಘಟನೆ. ಪ್ಯಾಲೆಸ್ತೀನ್ ವಿಮೋಚನೆ ಸಶಸ್ತ್ರ ಹೋರಾಟದಿಂದ ಮಾತ್ರ ಸಾಧ‍್ಯ ಎಂದು ನಂಬಿದ್ದ ಇಸ್ಲಾಮಿಕ ಉಗ್ರಗಾಮಿ ಸಂಘಟನೆ. ಪ್ಯಾಲೆಸ್ತೀನ್ ಸ್ವಾತಂತ್ರ್ಯ ಅದರ ಮುಖ್ಯ ಗುರಿ. 1950ರ ದಶಕದಿಂದ ಸೆಕ್ಯುಲರ್ ಆಗಿದ್ದ ಪ್ಯಾಲೆಸ್ತೀನ್ ವಿಮೋಚನಾ ಚಳುವಳಿಯ ಮುಖ್ಯ ಐಕ್ಯ ಸಂಘಟನೆ ಪಿ.ಎಲ್.ಒ ಮತ್ತು ಅದರ ಮುಖ್ಯ ಸಂಘಟನೆ ಫತಾಹ್ ಹಲವು ಕಾರಣಗಳಿಂದ ಜನತೆಯ ನಾಯಕತ್ವ, ವಿಶ್ವಾಸ ಕಳೆದುಕೊಳ್ಳುತ್ತಿದ್ದಂತೆ ಹುಟ್ಟಿದ ಸಂಘಟನೆ. ಗಾಜಾ ಪಟ್ಟಿ, ಪಶ್ಚಿಮ ದಂಡೆ ಮುಂತಾದ ಪ್ಯಾಲೆಸ್ತೀನ್ ಪ್ರದೇಶಗಳಲ್ಲಿ ನೆಲೆ ಹೊಂದಿದ್ದು ಗಾಜಾ ಪಟ್ಟಿಯಲ್ಲಿ ಪ್ರಬಲವಾಗಿತ್ತು. 1993-2006 ಫತಾಹ್ ಜತೆ ಐಕ್ಯತೆ-ಸಂಘರ್ಷಗಳ ದೀರ್ಘ ಇತಿಹಾಸ ಹೊಂದಿದ್ದ ಹಮಾಸ್ 2006ರಲ್ಲಿ ಗಾಜಾ ಚುನಾವಣೆಯಲ್ಲಿ ಬಹುಮತ ಪಡೆಯಿತು. ಅಂದಿನಿಂದ ಅಲ್ಲಿ ಆಡಳಿತ ನಡೆಸುತ್ತಿದೆ. ಹಮಾಸ್ ಪ್ರಬಲ ಗೆರಿಲ್ಲಾ ಪಡೆ ಹೊಂದಿದ್ದು ಇಸ್ರೇಲಿನ ದಮನಕ್ಕೆ ತೀವ್ರ ಪ್ರತಿರೋಧ ಒಡ್ಡಿದೆ.
ಹಮಾಸ್ ದಾಳಿ ಖಂಡನಾರ್ಹ ಭಯೋತ್ಪಾದಕ ಕೃತ್ಯ ಅಲ್ಲವೇ ?
ಅಕ್ರೋಬರ್ 7ರಂದು ಹಮಾಸ್ ಇಸ್ರೇಲ್ ಮೇಲೆ ಮಾಡಿದ ದಾಳಿಯ ಹಿಂದಿನ ದೀರ್ಘ ಹಿನ್ನೆಲೆ ಪರಿಗಣಿಸದೆ ಈ ಕುರಿತು ಯಾರೇ ಆದರೂ ‘ ಸರಳ ತೀರ್ಪು’ ಕೊಡುವುದು ಅರ್ಥಹೀನ. ಹಮಾಸ್ ಗಾಜಾ ಪಟ್ಟಿಯಲ್ಲಿ ಚುನಾಯಿತ ಸರಕಾರ ನಡೆಸುತ್ತಿದೆ. ಅದನ್ನು ಇಸ್ರೇಲ್ ಮಾನ್ಯ ಮಾಡಿಲ್ಲ. ಹಮಾಸ್ ಇಸ್ರೇಲ್ ಪ್ಯಾಲೆಸ್ತೀನ್ ಆಕ್ರಮಿಸಿಕೊಂಡ ಶಕ್ತಿ ಎಂದು ಪರಿಗಣಿಸುತ್ತದೆ. ಪ್ಯಾಲೆಸ್ತೀನ್ನರ ತಾಯ್ನಾಡು ನಿರಾಕರಿಸಿದ, ವಿಶ್ವಸಂಸ್ಥೆ ಮತ್ತು ಜಾಗತಿಕ ಸಂಸ್ಥೆಗಳ ಹಲವಾರು ನಿರ್ಣಯಗಳು ಇಸ್ರೇಲ್ ಪ್ರಭುತ್ವದ ವಿರುದ್ಧ ಸಶಸ್ತ್ರ ಹೋರಾಟ ತನ್ನ ಹಕ್ಕು ಎಂದು ಭಾವಿಸುತ್ತದೆ. ಇಸ್ರೇಲ್ ಹಮಾಸ್‌ನ್ನು ನಾಶ ಮಾಡಿದರೆ ತನ್ನ ನಿರಂಕುಶ ಪ್ರಭುತ್ವಕ್ಕೆ ಸವಾಲು ಇರುವುದಿಲ್ಲವೆಂದು ಅದರ ಜತೆ ಸತತ ಸಂಘರ್ಷದಲ್ಲಿದೆ.
ಹೀಗಾಗಿ ಇಸ್ರೇಲ್ ಗಾಜಾ ಪಟ್ಟಿಯ ಮೇಲೆ ಕನಿಷ್ಠ ಹತ್ತು ಬಾರಿ ಹಲವು ದಿನ/ವಾರಗಳ ಕಾಲ ದಾಳಿ ಮಾಡಿ ಅದರ ಮೂಲಸೌಕರ್ಯಗಳನ್ನು ಪದೇ ಪದೇ ಧ್ವಂಸ ಮಾಡಿದೆ. 2006ರಿಂದ ಈಚೆಗೆ (ಅಗಸ್ಟ್ 2022, 2023 ಮೇ ಸೇರಿದಂತೆ ) ಕನಿಷ್ಠ ಹತ್ತು ಪ್ರಮುಖ ದಾಳಿಗಳು ನಡೆದಿವೆ. ಈ ಪ್ರತಿಯೊಂದು ದಾಳಿಗೂ ಇಸ್ರೇಲ್ ಸೈನ್ಯದ ನಿರ್ದಿಷ್ಟ ಹೆಸರುಗಳನ್ನು (ಉದಾ ನವೆಂಬರ್ 2019ರ ‘ಆಪರೇಶನ್ ಬ್ಲಾಕ್ ಬೆಲ್ಟ್ ) ಇಡಲಾಗಿದೆ. ಅಂದರೆ 2014ರಲ್ಲಿ 53 ದಿನಗಳ ಕಾಲ ನಡೆದ ಭೀಕರ ದಾಳಿಯಲ್ಲಿ 2 ಸಾವಿರಕ್ಕೂ ಹೆಚ್ಚು ಜನ ಸತ್ತರು. 10 ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡರು. ಈ ಎಲ್ಲಾ ದಾಳಿಗಳಲ್ಲಿ ಸಾವಿರಾರು ಜನ ಸತ್ತಿದ್ದಾರೆ. ಲಕ್ಷಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. 2010ರಿಂದ ಗಾಜಾ ಪಟ್ಟಿ ಸತತವಾಗಿ ವಾಯು, ಭೂ ಮತ್ತು ಸಾಗರ ಮಾರ್ಗಗಳ ಮೂಲಕ ಸಾಗಾಣಿಕೆ, ವ್ಯಾಪಾರ ಗಳ ಮೇಲೆ ತೀವ್ರ ದಿಗ್ಬಂಧನವನ್ನು ಇಸ್ರೇಲ್ ವಿಧಿಸಿದೆ. ಹಮಾಸ್ ಈ ದಾಳಿಗಳಿಗೆ ಪ್ರತಿರೋಧ ಒಡ್ಡುವುದು ತನ್ನ ಹಕ್ಕು ಎಂದು ಭಾವಿಸುತ್ತದೆ. ಮಾತ್ರವಲ್ಲ ನೇತನ್ಯಾಹು ಪ್ರಧಾನಿಯಾಗಿ ಅತ್ಯಂತ ಬಲಪಂಥೀಯ ಉಗ್ರಗಾಮಿ ಸರಕಾರ ಬಂದಾಗಿಂದ ಪ್ಯಾಲೆಸ್ತೀನ್ನರ ವಿರುದ್ಧ ಇಸ್ರೇಲಿ ವಲಸೆಗಾರರ ಪ್ರಚೋದಕ ಹಿಂಸಾಚಾರ ವಿಪರೀತವಾಗಿ ಏರಿದೆ.
ಇದನ್ನೂ ಓದಿ: ಪ್ಯಾಲೆಸ್ಟೈನ್ ಇಸ್ರೇಲ್ ಘರ್ಷಣೆಯನ್ನು ವಸಾಹತುಶಾಹಿ ನೆಲೆಯಲ್ಲಿಯೇ ನೋಡಬೇಕು
ಇತ್ತೀಚಿನ ಹಮಾಸ್ ದಾಳಿಯನ್ನು ಮತ್ತು ಈಗ ಆರಂಭವಾಗಿರುವ ಯುದ್ಧವನ್ನು ಈ ಹಿನ್ನೆಲೆಯಲ್ಲಿ ನೋಡಬೇಕು. ಮೇಲೆ ಹೇಳಿದ ಸನ್ನಿವೇಶ ಪರಿಗಣಿಸಿದರೂ ಹಮಾಸ್ ಇಸ್ರೇಲ್ ಗಡಿ ಪ್ರದೇಶದಲ್ಲಿ ನಾಗರಿಕರ ಮೇಲೆ ನಡೆಸಿದ ದಾಳಿ, ಹತ್ಯೆ, ಒತ್ತೆಯಾಳುಗಳಾಗಿ ತೆಗೆದುಕೊಂಡದ್ದು ಖಂಡಿತ ಖಂಡನಾರ್ಹವಾಗಿದೆ. ಎರಡೂ ಕಡೆ ಈಗಲೂ ಹಿಂದೆಯೂ ನಾಗರಿಕರ ಮೇಲೆ ನಡೆದ ಅಮಾನವೀಯ. ದಾಳಿಗಳು ಖಂಡನಾರ್ಹ, ಮಾತ್ರವಲ್ಲ, ಯುದ್ಧಾಪರಾಧವೆಂದು ಪರಿಗಣಿತವಾಗುತ್ತದೆ. ಆದರೆ ಅದನ್ನು ಭಯೋತ್ಪಾದಕ ಕೃತ್ಯ ವೆಂದು ಕರೆಯುವುದು ಸೂಕ್ತವಲ್ಲ. ಏಕೆಂದರೆ ಅಂತರ್ರಾಷ್ಟ್ರೀಯ ಕಾನೂನುಗಳು, ಒಪ್ಪಂದಗಳ ಪ್ರಕಾರ ಆಕ್ರಾಮಕ ಪ್ರಭುತ್ವದ ವಿರುದ್ಧ ಸ್ವಯಂ-ನಿರ್ಣಯದ ಹಕ್ಕಿಗೆ ಹೋರಾಡುವುದು ಕಾನೂನುಬಾಹಿರವಲ್ಲ, ಭಯೋತ್ಪಾದನೆಯಲ್ಲ. 1949 ಜಿನೇವಾ ಒಪ್ಪಂದದ ಹೆಚ್ಚುವರಿ ಪ್ರೊಟೊಕಾಲ್ 1, ವಿಶ್ವಸಂಸ್ಥೆ ಸಾಮಾನ್ಯ ಸಭೆ ನಿರ್ಣಯ 3314(1974), ನಿರ್ಣಯ 37/43 (1982) ಗಳು ಇದನ್ನು ಪ್ರತಿಪಾದಿಸಿವೆ. 1982ರ ವಿಶ್ವಸಂಸ್ಥೆ ಸಾಮಾನ್ಯ ಸಭೆ ನಿರ್ಣಯ 37/43 “ ವಸಾಹತುಶಾಹಿ ಮತ್ತು ವಿದೇಶಿ ಅಧಿಪತ್ಯದಿಂದ ವಿಮೋಚನೆ ಮತ್ತು ಸ್ವಾತಂತ್ರ್ಯ, ಪ್ರಾದೇಶಿಕ ಅಖಂಡತೆ, ರಾಷ್ಟ್ರೀಯ ಐಕ್ಯತೆಗಾಗಿ ಯಾವುದೇ ಜನತೆಯ ಹೋರಾಟದ ಕಾನೂನುಬದ್ಧತೆಯನ್ನು ಮತ್ತೆ ಒತ್ತಿ ಹೇಳುತ್ತೇವೆ’ ಎಂದು ಹೇಳುತ್ತದೆ.
ಆಕ್ರಮಣಕ್ಕೆ ಒಳಗಾಗಿರುವ ಇಸ್ರೇಲ್‌ಗೆ ಸ್ವ-ರಕ್ಷಣೆಯ ಹಕ್ಕು ಇಲ್ಲವೇ?
ಅಕ್ಟೋಬರ್ 7 ರಂದು ಹಮಾಸ್ ದಾಳಿ ನಂತರ ಆಕ್ರಮಿಸಿಕೊಂಡ ಇಸ್ರೇಲ್ ಪ್ರದೇಶಗಳನ್ನು ವಾಪಸು ಪಡೆಯಲು ಮಿಲಿಟರಿ ಕಾರ್ಯಾಚರಣೆಯ ಹಕ್ಕು ಖಂಡಿತ ಇದೆ. ಆದರೆ ಈ ದಾಳಿಯ ನಂತರ ಪ್ರತಿದಾಳಿಯ ಕುರಿತು ಇಸ್ರೇಲಿ ಪ್ರಧಾನಿ, ರಕ್ಷಣಾ ಸಚಿವ, ಮಿಲಿಟರಿ ಮುಖ್ಯಸ್ಥರು ನೀಡಿದ ಹೇಳಿಕೆಗಳು ಸ್ವ-ರಕ್ಷಣೆಯ ಹಕ್ಕುಗಳ ವ್ಯಾಪ್ತಿಗೆ ಬರುವುದಿಲ್ಲ. “ನಾವು ಗಾಜಾಗೆ ವಿದ್ಯುತ್, ಇಂಧನ ಸೇರಿದಂತೆ ಎಲ್ಲಾ ಸರಕುಗಳ ಸಾಗಾಣಿಕೆ ಮೇಲೆ ನಿರ್ಬಂಧ ಹಾಕಿದ್ದೇವೆ”, ಹಮಾಸ್ ನಾಶ ಮಾಡುತ್ತೇವೆ, ಆಗ ನಾಗರಿಕರು ಸತ್ತರೆ ಸಂಕಷ್ಟಕ್ಕೆ ಒಳಗಾದರೆ ನಾವು ಜವಾಬ್ದಾರರಲ್ಲ ಎಂಬ ಇಸ್ರೇಲಿ ಪ್ರಧಾನಿ ಮತ್ತಿತರರ ಹೇಳಿಕೆಗಳು ಸ್ವ-ರಕ್ಷಣೆಯ ಹಕ್ಕುಗಳು ಮಾತ್ರವಲ್ಲ. ‘ಸಾಮೂಹಿಕ ಶಿಕ್ಷೆ”ಯ ವ್ಯಾಪ್ತಿಗೆ ಬರುತ್ತವೆ. ಮಿಲಿಟರಿ ಹೋರಾಟದಲ್ಲಿ ಮಿಲಿಟರಿ ಕಾರ್ಯಾಚರಣೆಗಳಿಗಾಗಿ ಇಡೀ ಪ್ರದೇಶದ ಜನರ ಮೇಲೆ ದಾಳಿಯ ಬೆದರಿಕೆ, ದಾಳಿ ಮೂಲಕ ಸಾವು-ನೋವು ಉಂಟು ಮಾಡುವುದು. ‘ಸಾಮೂಹಿಕ ಶಿಕ್ಷೆ”ಯಾಗುತ್ತದೆ. ಒಂದು ದೇಶದ ಸರಕಾರ ಯಾವುದೇ ಪ್ರದೇಶದ ಮೇಲೆ ‘ಸಾಮೂಹಿಕ ಶಿಕ್ಷೆ” ವಿಧಿಸುವುದು ಜಿನೇವಾ ಒಪ್ಪಂದದ ಪ್ರಕಾರ ‘ಯುದ್ಧಾಪರಾಧ’ವಾಗುತ್ತದೆ. ಗಾಜಾ ಮೇಲೆ 2021 ರ ದಾಳಿಯ ಸಂದರ್ಭದಲ್ಲಿ ಇಸ್ರೇಲ್ ವಿರುದ್ಧ ‘ಸಾಮೂಹಿಕ ಶಿಕ್ಷೆ” ವಿಧಿಸಿದ ‘ಯುದ್ಧಾಪರಾಧ’ ಕುರಿತು ಅಂತರರಾಷ್ಟ್ರೀಯ ಕೋರ್ಟು ವಿಚಾರಣೆ ಈಗಾಗಲೇ ನಡೆಸುತ್ತಿದೆ.
ಮಾತ್ರವಲ್ಲ, ಪ್ಯಾಲೆಸ್ಟೀನ್ ಸಮಸ್ಯೆಗೆ ವಿಶ್ವಸಂಸ್ಥೆ 1947ರಲ್ಲಿ ನಿರ್ಣಯ 181 ರ ಮೂಲಕ ಪ್ರಸ್ತಾವಿಸಿದ ಎರಡು-ದೇಶಗಳ ಪರಿಹಾರವನ್ನು ಒಪ್ಪಿಕೊಂಡು ಜಾರಿ ಮಾಡಲು ನಿರಾಕರಿಸಿದೆ. 1967 ಅರಬ್-ಇಸ್ರೇಲಿ ಯುದ್ಧದ ನಂತರ ಆಕ್ರಮಿತ ಪ್ರದೇಶಗಳಿಂದ ಇಸ್ರೇಲ್ ಹಿಂತೆಗೆಯಬೇಕು ಎಂಬ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯ 242ನ್ನು ಸಹ ಉಲ್ಲಂಘಿಸುತ್ತಾ ಬಂದಿದೆ. ಆ ಮೇಲೆ ಪ್ಯಾಲೆಸ್ಟೀನ್ ಪ್ರದೇಶಗಳಲ್ಲಿ ಅಕ್ರಮ ವಲಸೆಹಗಾರರ ಕಾಲೋನಿ ಸ್ಥಾಪಿಸುವ ವಿರುದ್ಧ, ಈ ಪ್ರದೇಶಗಳಲ್ಲಿ ಎತ್ತರದ ಗೋಡೆ ಕಟ್ಟುವ, ಪ್ಯಾಲೆಸ್ಟೀನ್ ಜನರ ದಿನನಿತ್ಯದ ಓಡಾಟಕ್ಕೆ ನಿರ್ಬಂಧ ವಿಧಿಸುವ, ಮಾನವ ಹಕ್ಕು ದಮನ ಮಾಡುವ ಇಸ್ರೇಲಿ ಪ್ರಭುತ್ವದ ಕೃತ್ಯಗಳ ವಿರುದ್ಧ ವಿಶ್ವಸಂಸ್ಥೆ, ಮಾನವ ಹಕ್ಕು ಮಂಡಳಿಯ ಹಲವು ನಿರ್ಣಯಗಳ ಜಾರಿ ಮಾಡದೆ ಉಲ್ಲಂಘಿಸುವ ಮೂಲಕ ಇಸ್ರೇಲಿ ಸರಕಾರ “ಪ್ರಭುತ್ವ ಭಯೋತ್ಪಾದನೆ”ಯಲ್ಲಿ ತೊಡಗಿದೆ ಎನ್ನಬಹುದು. ಇವನ್ನು “ಭಯೋತ್ಪಾದಕರ ಸ್ವ-ರಕ್ಷಣೆಯ ಕ್ರಮಗಳು” ಎಂದು ಸಮರ್ಥಿಸಿಕೊಳ್ಳುವುದು ಸಾಧ್ಯವಿಲ್ಲ.
ಹಮಾಸ್ ಇಸ್ರೇಲ್ ಮೇಲೆ ಏಕೆ ಈಗ ಏಕೆ ದಾಳಿ ಮಾಡಿದೆ ?
ನೇತನ್ಯಾಹು ಪ್ರಧಾನಿಯಾಗಿ ಅತ್ಯಂತ ಬಲಪಂಥೀಯ ಉಗ್ರಗಾಮಿ ಸರಕಾರ ಬಂದಾಗಿಂದ ಪ್ಯಾಲೆಸ್ತೀನ್ನರ ವಿರುದ್ಧ ಇಸ್ರೇಲಿ ವಲಸೆಗಾರರ ಪ್ರಚೋದಕ ಹಿಂಸಾಚಾರ ವಿಪರೀತವಾಗಿ ಏರಿದೆ. ನಿರ್ದಿಷ್ಟವಾಗಿ ಇತ್ತೀಚಿನ ಜೆರೂಸಲೆಂ ನಲ್ಲಿರುವ ಅಲ್ ಅಕ್ಸಾ ಮಸೀದಿಗೆ ಭೇಟಿ ಕೊಡುತ್ತಿದ್ದವರ ಮೇಲೆ ನಿರ್ಬಂಧ, ದಾಳಿ, ಧಾರ್ಮಿಕ ಭಾವನೆಗಳಿಗೆ ಘಾಸಿ ಮಾಡುವ ಪ್ರಚೋದನಕಾರಿ ಕೃತ್ಯಗಳನ್ನು ಜ್ಯೂ ವಲಸೆಗರರು, ಪೋಲಿಸರು ಮಾಡಿದ್ದು ತಕ್ಷಣದ ಪ್ರಚೋದನೆಯಾಗಿರಬಹುದು. ಪ್ಯಾಲೆಸ್ತೀನ್ ಪ್ರದೇಶಗಳಲ್ಲಿ (ಗಾಜಾ, ಪಶ್ಚಿಮ ದಂಡೆ ಎರಡರಲ್ಲೂ) ಇಸ್ರೇಲಿ ದಮನದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ವಿಶೇ಼ಷವಾಗಿ ಯುವಜನರು ಕುದಿಯುತ್ತಿದ್ದು ಇನ್ನೂ ಹೆಚ್ಚಿನ ಉಗ್ರಗಾಮಿಯೆಂದು ಪೋಸ್ ಕೊಡುತ್ತಿರುವ ಐಸಿಸ್ ನಂತಹ ಮೂಲಭೂತ ಇಸ್ಲಾಮಿಕ್ ಗುಂಪುಗಳತ್ತ ವಾಲುತ್ತಿರುವುದನ್ನು ತಪ್ಪಿಸಲು ಸಹ ಹಮಾಸ್ ಈ ದಾಳಿಯನ್ನು ಯೋಜಿಸಿರಬಹುದು.
ಇಸ್ರೇಲ್ ತೀವ್ರ ರಾಜಕೀಯ ಬಿಕ್ಕಟ್ಟು ಎದುರಿಸುತ್ತಿದ್ದು ಮಿಲಿಟರಿ ಸೇರಿದಂತೆ ಅದರ ಪ್ರಭುತ್ವ ಸಂಸ್ಥೆಗಳಲ್ಲಿ ತೀವ್ರ ಅನೈಕ್ಯತೆ, ಗೊಂದಲದ ಸಂದರ್ಭ ಬಳಸಿಕೊಳ್ಳಬಹುದು ಎಂದೂ ಹಮಾಸ್ ಲೆಕ್ಕಾಚಾರ ಇದ್ದಂತಿದೆ.
ಪರಸ್ಪರ ಎದುರಾಳಿಗಳು ಹೆಚ್ಚು ಕಡಿಮೆ ವೈರಿಗಳಂತೆ ಇದ್ದ ಇರಾನ್ ಹಾಗೂ ಸೌದಿ ಅರೇಬಿಯಗಳ ಮತ್ತು ಕೊಲ್ಲಿ ರಾಜಪ್ರಭುತ್ವಗಳ ನಡುವೆ ಚೀನಾ ಮಧ್ಯಸ್ತಿಕೆಯಲ್ಲಿ ಶಾಂತಿ ಒಪ್ಪಂದ, ಯೆಮೆನ್ ಸಂಘರ್ಷದ ಕೊನೆ ಇತ್ಯಾದಿ ಪಶ್ಚಿಮ ಏಶ್ಯಾದಲ್ಲಿ ವ್ಯೂಹಾತ್ಮಕ ಸಂಬಂಧಗಳಲ್ಲಿ ಮೂಲಭೂತ ಬದಲಾವಣೆಯಾಗಿದೆ. ಸೌದಿ ಅರೇಬಿಯ ಯು.ಎಸ್ ಗಳ ನಡುವೆ ಚೀನಾದ ಜತೆ ಸಂಬಂಧ, ತೈಲ ಬೆಲೆ ಇತ್ಯಾದಿಗಳ ಬಗ್ಗೆ ಭಿನ್ನಾಭಿಪ್ರಾಯ ಸೇರಿದಂತೆ, ವಿಶೇಷವಾಗಿ ಉಕ್ರೇನ್ ಯುದ್ಧದ ಸಂದರ್ಭದಲ್ಲಿ ರಷ್ಯಾದ ಮೇಲೆ ದಿಗ್ಬಂಧನ ಹೇರಲು ಈ ಪ್ರದೇಶದ ಎಲ್ಲ ದೇಶದ ನಿರಾಕರಣೆಗಳ ಮೂಲಕ ಯು.ಎಸ್ ಈ ಪ್ರದೇಶದ ಮೇಲೆ ಹಿಡಿತ ಕಳೆದುಕೊಂಡಿದೆ. ಇಸ್ರೇಲಿನ ದೊಡ್ಡ ಸಹಚರ ಮತ್ತು ದೊಡ್ಡಣ್ಣನ ಶಕ್ತಿ ದುರ್ಬಲವಾಗಿರುವ ಈ ಸಂದರ್ಭದಲ್ಲಿ ಇಸ್ರೇಲ್ ಮೇಲೆ ದಾಳಿ ಸಫಲವಾಗಬಹುದು ಅಥವಾ ಕನಿಷ್ಠ ಶಾಕ್ ಪರಿಣಾಮ ಬೀರಬಹುದು ಎಂಬ ಲೆಕ್ಕಾಚಾರ ಇದ್ದಂತಿದೆ. ಇದಲ್ಲದೆ ಇಸ್ರೇಲ್ ದೇಶಗಳ ಜತೆ ಸೌದಿ ಅರೇಬಿಯ, ಸಂಬಂಧ ಸಾಮಾನ್ಯಗೊಳಿಸುವ ಅಬ್ರಹಾಂ ಒಪ್ಪಂದಗಳನ್ನು ಮಾಡುವತ್ತ ಹೋಗುತ್ತಿರುವುದನ್ನು ತಡೆಯುವ ಪರಿಸ್ಥಿತಿ ಉಂಟು ಮಾಡುವುದೂ ಉದ್ದೇಶವೆಂದು ಹೇಳಲಾಗಿದೆ.
ಹಮಾಸ್‌ಗೆ ಪರೋಕ್ಷ ಬೆಂಬಲ ನೀಡುತ್ತಿರುವ ಇರಾನ್ ಈ ಪ್ರದೇಶದ ಹೊಸ ಶಕ್ತಿಯಾಗಿ ಉದಯಿಸುತ್ತಿರುವುದು ಸಹ ಈ ಹಮಾಸ್ ನಿರ್ಣಯಕ್ಕೆ ಬಲ ಕೊಟ್ಟಿರಬಹುದು. ಇರಾನ್ ಯು.ಎಸ್-ಯುರೋ ಕೂಟದ ದಿಗ್ಬಂಧನ ತಾಳಿಕೊಂಡಿರುವುದು, ಬ್ರಿಕ್ಸ್ ಸದಸ್ಯ ದೇಶವಾಗಿರುವುದು, ಅಣ್ವಸ್ತ್ರ ಸಜ್ಜಿತವಾಗುವ ಹೊಸ್ತಿಲಲ್ಲಿ ಇರುವುದು, ಯೆಮೆನ್ ಸಿರಿಯಾ ಮುಂತಾದ ಪ್ರಾದೇಶಿಕ ಸಂಘರ್ಷಗಳು ಪರಿಹಾರವಾಗಿ ಸೌದಿ ಅರೇಬಿಯ ಜತೆ ಸಂಬಂಧ ಸಾಮಾನ್ಯಗೊಳಿಸಿ ಪ್ರದೇಶದ ಇಸ್ಲಮಿಕ್ ದೇಶಗಳ ಗುಂಪಿನಿಂದ ಏಕಾಂಗಿತನ ನೀಗಿಸಿಕೊಂಡು ತನ್ನ ಪಾತ್ರ ವಹಿಸಲು ಆರಂಭಿಸಿರುವುದು ಹಮಾಸ್ ಯೋಜನೆಗೆ ಕುಮ್ಮಕ್ಕು ಕೊಟ್ಟಿರಬಹುದು.
ಇದಕ್ಕೆ ಅಂತರ್ರಾಷ್ಟ್ರೀಯ ಪ್ರತಿಕ್ರಿಯೆ ಏನು?
ಹಮಾಸ್ ದಾಳಿಯನ್ನು ಇಸ್ರೇಲ್ ಮತ್ತು ಅದರ ಬೆಂಬಲಿಗರಾದ ಯು.ಎಸ್ ಮತ್ತು ಯುರೋ ಕೂಟದ ಸರಕಾರಗಳು ‘ಭಯೋತ್ಪಾದಕ ದಾಳಿ’ ‘ಇಸ್ರೇಲಿನ 9/11 ಕ್ಷಣ’ ಎಂದೆಲ್ಲ ಖಂಡಿಸಿ, ಇಸ್ರೇಲ್ ಸ್ವ-ರಕ್ಷಣೆಯ ಹಕ್ಕಿನ ಭಾಗವಾಗಿ ಗಾಜಾ ಮೇಲಿನ ಬರ್ಬರ ದಾಳಿಯನ್ನು ಸಮರ್ಥಿಸಿವೆ. ಗಾಜಾ ಮೇಲಿನ ಇಸ್ರೇಲಿನ ‘ಅಮಾನವೀಯ ಬಾಂಬ್ ದಾಳಿಯನ್ನು ಖಂಡಿಸುತ್ತಿಲ್ಲ. ಮಾತ್ರವಲ್ಲ, ಇಸ್ರೇಲ್ ಜತೆ ನಾವಿದ್ದೇವೆ, ಅದಕ್ಕೆ ಬೇಕಾದ ಮಿಲಿಟರಿ ನೆರವು ನೀಡುತ್ತೇವೆ ಎಂದು ಹೇಳಿವೆ. ಯು.ಎಸ್ ತನ್ನ ಯುದ್ಧನೌಕೆಯನ್ನು ಮತ್ತು ಇನ್ನಷ್ಟು ಶಸ್ತ್ರಾಸ್ತ್ರಗಳನ್ನುಇಸ್ರೇಲ್ ಬೆಂಬಲಾರ್ಥ ಕಳಿಸಿದೆ. ಜಾಗತಿಕ ಕಾರ್ಪೊರೆಟ್ ಮಾಧ್ಯಮಗಳು ಈ ನಿಲುವನ್ನು ಎತ್ತಿಹಿಡಿದು ಪ್ರಚಾರ ಮಾಡುತ್ತಿವೆ. ಆದರೆ ಈ ಸಂಘರ್ಷ ಉಕ್ರೇನ್ ಯುದ್ಧದಂತೆ ಯುರೋ ಕೂಟದ ದೇಶಗಳಲ್ಲಿ ಆತಂಕ, ಭಿನ್ನಾಭಿಪ್ರಾಯ ಮೂಡಲು ಕಾರಣವಾಗಿದೆ. ಪ್ಯಾಲೆಸ್ತೀನ್ ಸರಕಾರಕ್ಕೆ ನೆರವು ನಿಲ್ಲಿಸುವ ಘೋಷಣೆ ಮಾಡಿದ ಯುರೋ ಕೂಟ ಕೆಲವೇ ಗಂಟೆಗಳಲ್ಲಿ ಅದನ್ನು ವಾಪಸು ತೆಗೆದುಕೊಂಡಿದೆ.
ಆದರೆ ಈ ದೇಶಗಳ ಹಲವಾರು ನಾಗರಿಕ ಸಂಘಟನೆಗಳು, ಶಾಂತಿ ಚಳುವಳಿಗಳು ಯುದ್ಧ ತಡೆಗೆ ಒತ್ತಾಯಿಸಿವೆ. ಎರಡೂ ಕಡೆಯ ನಾಗರಿಕರ ಮೇಲಿನ ಅಮಾನವೀಯ ದಾಳಿಗಳನ್ನು ನಿಲ್ಲಿಸಬೇಕು. ಈ ಎಲ್ಲಾ ಸಂಘರ್ಷಗಳಿಗೆ ಕಾರಣವಾದ ಪ್ಯಾಲೆಸ್ತೀನ್ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಒತ್ತಡ ಹಾಕಬೇಕು ಎಂದು ಒತ್ತಾಯಿಸಿವೆ. ಇದೇ ರೀತಿಯ ನಿಲುವನ್ನು ಜಾಗತಿಕ ಶಾಂತಿ ಸಂಘಟನೆಗಳು ತೆಗೆದುಕೊಂಡಿವೆ. ಯು.ಎಸ್ ಮತ್ತು ಯುರೋಪಿನ ಹಲವು ನಗರಗಳಲ್ಲಿ ಇಂತಹ ಬೃಹತ್ ಪ್ರದರ್ಶನಗಳು ನಡೆದಿವೆ. ಜಿ7 ದೇಶಗಳಲ್ಲಿ ಒಂದಾದ ಜಪಾನ್ ಯು.ಎಸ್ ಮತ್ತು ಯುರೋ ಕೂಟದ ಸರಕಾರಗಳ ನಿಲುವಿಗೆ ವಿರುದ್ಧವಾಗಿ ಯುದ್ಧ ನಿಲುಗಡೆ ಪ್ಯಾಲೆಸ್ತೀನ್ ಸಮಸ್ಯೆಯ ಪರಿಹಾರಕ್ಕೆ ಒತ್ತಾಯಿಸಿದೆ.
ಅರಬ್ ದೇಶಗಳು ಸೇರಿದಂತೆ ಜಾಗತಿಕ ದಕ್ಷಿಣದ (ಜಗತ್ತಿನ ಅಭಿವೃದ್ಧಿಶೀಲ) ದೇಶಗಳ ಸರಕಾರಗಳು, ನಾಗರಿಕರು ಹೆಚ್ಚು ಕಡಿಮೆ ಸಾರ್ವತ್ರಿಕವಾಗಿ ಯುದ್ಧ ನಿಲುಗಡೆ, ನಾಗರಿಕರ ಮೇಲೆ ಅಮಾನವೀಯ ದಾಳಿಗೆ ಖಂಡನೆಮ ಪ್ಯಾಲೆಸ್ತೀನ್ ಜನತೆಯ ತಯ್ನಾಡಿನ ಹಕ್ಕು ಸಾಧಿಸುವತ್ತ ಕ್ರಮಕ್ಕೆ ಒತ್ತಾಯಿಸಿವೆ. ಜಿ20 ದೇಶದ ಈಗಿನ ಅಧ್ಯಕ್ಷ ಬ್ರೆಜಿಲ್ ಮತ್ತು ಆಫ್ರಿಕನ್ ಕೂಟ ಇದೇ ನಿಲುವು ವ್ಯಕ್ತ ಪಡಿಸಿವೆ.
ಇದನ್ನೂ ಓದಿ: ಹಮಾಸ್-ಇಸ್ರೇಲ್ ಯುದ್ಧದ ಹಿನ್ನೆಲೆ ಏನು?
ಹಮಾಸ್ ದಾಳಿಯನ್ನು ನಿರೀಕ್ಷಿಸುವಲ್ಲಿ ಕುಖ್ಯಾತ ಇಸ್ರೇಲಿ ಬೇಹುಗಾರ ಸಂಸ್ಥೆ ಮೊಸಾದ್ ವೈಫಲ್ಯ, ಹಮಾಸ್ ದಾಳಿಗೆ ಪ್ರತಿರೋಧ ಒಡ್ಡುವಲ್ಲಿ ಇಸ್ರೇಲಿ ರಕ್ಷಣಾ ಪಡೆಗಳ ವೈಫಲ್ಯಕ್ಕೆ ಮಾಧ‍್ಯಮಗಳೂ, ಸರಕಾರಗಳೂ ಆಶ್ಚರ್ಯ ವ್ಯಕ್ತಪಡಿಸಿವೆ. ಈಜಿಪ್ಟ್ ಇಂತಹ ಭಾರೀ ದಾಳಿ ಬಗ್ಗೆ ಇಸ್ರೇಲ್‌ಗೆ ಎಚ್ಚರಿಕೆ ಕೊಟ್ಟಿದ್ದು, ಇದು ನಿಜವೆಂದು ಇಸ್ರೇಲಿ ವಕ್ತಾರರೊಬ್ಬರು ಒಪ್ಪಿಕೊಂಡಿದ್ದು ಇನ್ನಷ್ಟು ಆಶ್ಚರ್ಯ ತಂದಿದೆ.
ಗಾಜಾ ವಿರುದ್ಧ, ಇಸ್ರೇಲಿನ ಭೂ ಯುದ್ಧ, ಲೆಬನಾನ್‌ನಲ್ಲಿ ನೆಲೆಸಿರುವ ಹೆಜಬೊಲ್ಲಾ ಗೆರಿಲ್ಲಾ ಪಡೆ ಯುದ್ಧ ಆರಂಭಿಸುವ ಸಾಧ‍್ಯತೆಯಿದ್ದು ಇದು ಪ್ರಾದೇಶಿಕ ಸಂಘರ್ಷವಾಗುವ ಎಲ್ಲ ಅಪಾಯಗಳನ್ನೂ ಹೊಂದಿದೆ.
ಉಕ್ರೇನ್ ಯುದ್ಧದ ನಂತರ ಈ ಸಂಘರ್ಷ ಸಹ ಪಶ್ಚಿಮ ಏಶ್ಯಾ ಮಾತ್ರವಲ್ಲ, ಇಡೀ ಜಗತ್ತಿನ ಭೂ-ವ್ಯೂಹಾತ್ಮಕ ಸಂಬಂಧಗಳಲ್ಲಿ ತೀವ್ರ ಬದಲಾವಣೆಗಳ ಪ್ರತೀಕ, ಇದು ಯು.ಎಸ್ ಅಧಿಪತ್ಯಕ್ಕೆ ಹೊಸ ಜಾಗತಿಕ ಸವಾಲು ಆಗಬಹುದು.
ವಿಡಿಯೋ ನೋಡಿ: ದೇಶವನ್ನು ಆಳವಾಗಿ ಘಾಸಿಗೊಳಿಸಿದ ಎರಡು ಘಟನೆಗಳು Janashakthi Media