ಹುಬ್ಬಳ್ಳಿ: ಭವಿಷ್ಯನಿಧಿ-ಪಿಂಚಣಿ, ವಸತಿ ಯೋಜನೆಗಾಗಿ ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆ ವಾಪಸ್ಸಾತಿಗಾಗಿ ಅಸಂಘಟಿತ ಹಮಾಲಿ ಕಾರ್ಮಿಕರ ಪ್ರಮುಖ ಬೇಡಿಕೆಗಳಿಗಾಗಿ ಇದೇ 20 ಡಿಸೆಂಬರ್ 2021ರಂದು ಬೆಳಗಾವಿ ಸುವರ್ಣಸೌಧ ಚಲೋ ನಡೆಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್(ಸಿಐಟಿಯು) ತಿಳಿಸಿದೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದ ಸಂದರ್ಭದಲ್ಲಿ ರಾಜ್ಯದ ಎಪಿಎಂಸಿ, ಮಿಲ್-ಗೋಡೌನ್-ವೇರಹೌಸ್, ನಗರ ಗ್ರಾಮೀಣ ಬಜಾರ, ಬಸ್ ಸ್ಟ್ಯಾಂಡ್, ಬಂದರು ಮತ್ತು ಸರಕಾರದ ವಿವಿಧ ನಿಗಮಗಳಾದ ಕೆಎಸ್‌ಬಿಸಿಎಲ್, ಕೆಎಸ್‌ಸಿಎಫ್‌ಸಿ ಸಾವಿರಾರು ಹಮಾಲಿ ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ.
ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಸ್ಥಾಪನೆಯಾಗಿ ದಶಕಗಳೇ ಕಳೆದರೂ ಮಂಡಳಿಯಿಂದ ಕನಿಷ್ಟ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ನೀಡಲು ಸಾಧ್ಯವಾಗಿಲ್ಲ. ಮಂಡಳಿಗೆ ಸರಕಾರ ಹಣಕಾಸಿನ ನೇರವು ನೀಡುತ್ತಿಲ್ಲ ಇನ್ನೊಂದಡೆ ಮಂಡಳಿಯೂ ಹಣಕಾಸಿನ ಸಂಪನ್ಮೂಲ ಕ್ರೋಢಿಕರಿಸಿ ಸೌಲಭ್ಯಗಳನ್ನು ಜಾರಿಮಾಡಲು ಮುಂದಾಗುತ್ತಿಲ್ಲ. ಅಸಂಘಟಿತ ಕಾರ್ಮಿಕರನ್ನು ಗುರುತಿಸಲು ನೀಡಲಾಗುತ್ತಿರುವ ಅಂಬೇಡ್ಕರ ಸಹಾಯ ಹಸ್ತ ಸ್ಮಾರ್ಟ್ ಕಾರ್ಡುಗಳನ್ನು ಸಮರ್ಪಕವಾಗಿ ವಿತರಿಸಲು ಸಾಧ್ಯವಾಗುತ್ತಿಲ್ಲ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ದೇಶದ ಎಲ್ಲಾ ಅಸಂಘಟಿತ ಕಾರ್ಮಿಕರ ನೋಂದಣಿಗಾಗಿ ಡಾಟಾಬೇಸ್ ಪೋರ್ಟಲ್ ಇ-ಶ್ರಮ ಕಾರ್ಡು ನೀಡಲಾಗುತ್ತಿದೆ ಅಷ್ಟೇ ಆದರೇ ಈ ಅಂಬೇಡ್ಕರ ಸಹಾಯ ಹಸ್ತ ಸ್ಮಾರ್ಟ್ ಕಾರ್ಡುಗಳನ್ನು ಹಾಗೂ ಇ-ಶ್ರಮ ಕಾರ್ಡು ಹೊಂದಿದವರಿಗೆ ಕೂಡಲೇ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಜಾರಿಮಾಡುವುದು ತುರ್ತು ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.
ಹಮಾಲಿ ಕಾರ್ಮಿಕರಿಗೆ ವಸತಿ ಯೋಜನೆ ಜಾರಿಮಾಡಬೇಕು. ಎಪಿಎಂಸಿ ಕಾಯಕ ನಿಧಿ ಅಡಿ ನಿವೃತ್ತಿ ಪರಿಹಾರ ನೀಡಬೇಕು, ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿಂದ ಈಗಾಗಲೇ ಸರಕಾರದ ಮುಂದಿರುವ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಭವಿಷ್ಯನಿಧಿ ಯೋಜನೆಯನ್ನು ಮತ್ತು ಪಿಂಚಣಿ ಸೌಲಭ್ಯವನ್ನು ಜಾರಿಮಾಡಬೇಕು, ಲೋಡಿಂಗ್ ಅನ್‌ಲೋಡಿಂಗ್ ಉದ್ಯಿಮೆಗೆ ಕನಿಷ್ಟ ವೇತನ ಜಾರಿಮಾಡಿ ಹಮಾಲಿ ಕೂಲಿಗಳನ್ನು ನಿಗದಿಗೊಳಿಸಲಾಗಿದ್ದು ಎಲ್ಲಾ ವಿಭಾಗದಲ್ಲಿ ಕನಿಷ್ಟ ವೇತನ ಜಾರಿಯಾಗುವಂತೆ ಕಾರ್ಮಿಕ ಇಲಾಖೆ ಮುತುವರ್ಜಿ ವಹಿಸಬೇಕೆಂದು ನಮ್ಮ ಆಗ್ರಹವಾಗಿದೆ. ತೀವ್ರ ಸಂಕಷ್ಟದಲ್ಲಿರುವ ಹಮಾಲಿ ಕಾರ್ಮಿಕರು ಸೇರಿದಂತೆ ಅಸಂಘಟಿತರ ಕಾರ್ಮಿಕರ ನೆರವಿಗೆ ಬರಲು ಹೆಚ್ಚಿನ ಅನುಧಾನವನ್ನು ಸರಕಾರ ಘೋಷಿಸಬೇಕು ಮತ್ತು ಹಮಾಲಿ ಕಾರ್ಮಿಕರ ಪ್ರತ್ಯೇಕ ಮಂಡಳಿ ರಚಿಸಿ ಅಗತ್ಯ ಸೌಲಭ್ಯಗಳನ್ನು ಜಾರಿಮಾಡಬೇಕೆಂದು ಒತ್ತಾಯುಸುತ್ತಿದ್ದಾರೆ.
ಈ ಹಿನ್ನಲೆಯಲ್ಲಿ ಹಮಾಲಿ ಕಾರ್ಮಿಕರ ಬೇಡಿಕೆಗಳ ಕುರಿತು ಸರಕಾರದ ಗಮನ ಸೆಳೆಯಲು ಸಹಕಾರ ಇಲಾಖೆ, ಕಾರ್ಮಿಕ ಇಲಾಖೆ ಮತ್ತು ವಸತಿ ಇಲಾಖೆ ಸಚಿವರುಗಳ ಗಮನಕ್ಕೆ ತರಲು ಈ ಹೋರಾಟ ನಡೆಸಲಾಗುತ್ತಿದೆ ಎಂದಿದ್ದಾರೆ.