ಬೆಳಗಾವಿ : ಭವಿಷ್ಯನಿಧಿ-ಪಿಂಚಣಿ, ವಸತಿ ಯೋಜನೆಗಾಗಿ ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆ ವಾಪಸ್ಸಾತಿಗಾಗಿ ಆಗ್ರಹಿಸಿ ಅಸಂಘಟಿತ ಹಮಾಲಿ ಕಾರ್ಮಿಕರು ಇಂದು ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್ (ಸಿಐಟಿಯು) ನೇತೃತ್ವದಲ್ಲಿ ಬೆಳಗಾವಿ ಚಲೋ ನಡೆಸುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ.
ಬೆಳಗಾವಿಯ ಸುವರ್ಣಸೌಧ ಮುಂಭಾಗ ನಡೆದ ಪ್ರತಿಭಟನೆ ಉದ್ದೇಶಿಸಿ ಸಂಘಟನೆಯ ರಾಜ್ಯಾಧ್ಯಕ್ಷ ಕೆ.ಮಹಾಂತೇಶ್ ಮಾತನಾಡುತ್ತಾ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಸ್ಥಾಪನೆಯಾಗಿ ದಶಕಗಳೇ ಕಳೆದರೂ ಮಂಡಳಿಯಿಂದ ಕನಿಷ್ಟ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ನೀಡಲು ಸಾಧ್ಯವಾಗಿಲ್ಲ. ಮಂಡಳಿಗೆ ಸರಕಾರ ಹಣಕಾಸಿನ ನೇರವು ನೀಡುತ್ತಿಲ್ಲ ಇನ್ನೊಂದಡೆ ಮಂಡಳಿಯೂ ಹಣಕಾಸಿನ ಸಂಪನ್ಮೂಲ ಕ್ರೋಢಿಕರಿಸಿ ಸೌಲಭ್ಯಗಳನ್ನು ಜಾರಿಮಾಡಲು ಮುಂದಾಗುತ್ತಿಲ್ಲ. ಅಸಂಘಟಿತ ಕಾರ್ಮಿಕರನ್ನು ಗುರುತಿಸಲು ನೀಡಲಾಗುತ್ತಿರುವ ಅಂಬೇಡ್ಕರ ಸಹಾಯ ಹಸ್ತ ಸ್ಮಾರ್ಟ್ ಕಾರ್ಡುಗಳನ್ನು ಸಮರ್ಪಕವಾಗಿ ವಿತರಿಸಲು ಸಾಧ್ಯವಾಗುತ್ತಿಲ್ಲ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ದೇಶದ ಎಲ್ಲಾ ಅಸಂಘಟಿತ ಕಾರ್ಮಿಕರ ನೋಂದಣಿಗಾಗಿ ಡಾಟಾಬೇಸ್ ಪೋರ್ಟಲ್ ಇ-ಶ್ರಮ ಕಾರ್ಡು ನೀಡಲಾಗುತ್ತಿದೆ ಅಷ್ಟೇ ಆದರೇ ಈ ಅಂಬೇಡ್ಕರ ಸಹಾಯ ಹಸ್ತ ಸ್ಮಾರ್ಟ್ ಕಾರ್ಡುಗಳನ್ನು ಹಾಗೂ ಇ-ಶ್ರಮ ಕಾರ್ಡು ಹೊಂದಿದವರಿಗೆ ಕೂಡಲೇ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಜಾರಿಮಾಡುವುದು ತುರ್ತು ಅಗತ್ಯವಾಗಿದೆ ಎಂದು ಆಗ್ರಹಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಪತ್ತಾರ ಮಾತನಾಡಿ, “ಹಮಾಲಿ ಕಾರ್ಮಿಕರಿಗೆ ವಸತಿ ಯೋಜನೆ ಜಾರಿಮಾಡಬೇಕು. ಎಪಿಎಂಸಿ ಕಾಯಕ ನಿಧಿ ಅಡಿ ನಿವೃತ್ತಿ ಪರಿಹಾರ ನೀಡಬೇಕು, ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿಂದ ಈಗಾಗಲೇ ಸರಕಾರದ ಮುಂದಿರುವ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಭವಿಷ್ಯನಿಧಿ ಯೋಜನೆಯನ್ನು ಮತ್ತು ಪಿಂಚಣಿ ಸೌಲಭ್ಯವನ್ನು ಜಾರಿಮಾಡಬೇಕು, ಲೋಡಿಂಗ್ ಅನ್‌ಲೋಡಿಂಗ್ ಉದ್ಯಿಮೆಗೆ ಕನಿಷ್ಟ ವೇತನ ಜಾರಿಮಾಡಿ ಹಮಾಲಿ ಕೂಲಿಗಳನ್ನು ನಿಗದಿಗೊಳಿಸಲಾಗಿದ್ದು ಎಲ್ಲಾ ವಿಭಾಗದಲ್ಲಿ ಕನಿಷ್ಟ ವೇತನ ಜಾರಿಯಾಗುವಂತೆ ಕಾರ್ಮಿಕ ಇಲಾಖೆ ಮುತುವರ್ಜಿ ವಹಿಸಬೇಕೆಂದು ನಮ್ಮ ಆಗ್ರಹವಾಗಿದೆ. ತೀವ್ರ ಸಂಕಷ್ಟದಲ್ಲಿರುವ ಹಮಾಲಿ ಕಾರ್ಮಿಕರು ಸೇರಿದಂತೆ ಅಸಂಘಟಿತರ ಕಾರ್ಮಿಕರ ನೆರವಿಗೆ ಬರಲು ಹೆಚ್ಚಿನ ಅನುಧಾನವನ್ನು ಸರಕಾರ ಘೋಷಿಸಬೇಕು ಮತ್ತು ಹಮಾಲಿ ಕಾರ್ಮಿಕರ ಪ್ರತ್ಯೇಕ ಮಂಡಳಿ ರಚಿಸಿ ಅಗತ್ಯ ಸೌಲಭ್ಯಗಳನ್ನು ಜಾರಿಮಾಡಬೇಕೆಂದು ಒತ್ತಾಯುಸಿದರು.
ರಾಜ್ಯದ ಎಪಿಎಂಸಿ, ಮಿಲ್-ಗೋಡೌನ್-ವೇರಹೌಸ್, ನಗರ ಗ್ರಾಮೀಣ ಬಜಾರ, ಬಸ್ ಸ್ಟ್ಯಾಂಡ್, ಬಂದರು ಮತ್ತು ಸರಕಾರದ ವಿವಿಧ ನಿಗಮಗಳಾದ ಕೆಎಸ್‌ಬಿಸಿಎಲ್, ಕೆಎಸ್‌ಸಿಎಫ್‌ಸಿ ಸಾವಿರಾರು ಹಮಾಲಿ ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.