ಪ್ರಕಾಶ್ ಕಾರಟ್
ಹೊಸ ಮೂಲಸೌಕರ್ಯ ಪರಿಯೋಜನೆಗಳಲ್ಲಿ ಹೂಡಿಕೆಗಾಗಿ ಸಂಪನ್ಮೂಲಗಳನ್ನು ಕ್ರೋಡೀಕರಿಸಲಿಕ್ಕೆಂದು ಸರಕಾರ ಸಮರ್ಥಿಸಿಕೊಳ್ಳುವ ಈ ನಾಣ್ಯೀಕರಣ ಪ್ರಕ್ರಿಯೆಯು, ದೊಡ್ಡ ಉದ್ಯಮಪತಿಗಳ ಕಾರ್ಯಕ್ಷೇತ್ರವನ್ನು ವಿಸ್ತಾರಗೊಳಿಸಿ, ಅವರು ಗ್ರಾಹಕರಿಂದ ಅಥವಾ ಸರ್ಕಾರದ ಬೊಕ್ಕಸದಿಂದ ಭಾರಿ ಪ್ರತಿಫಲಗಳನ್ನು ಗಳಿಸಿಕೊಳ್ಳುವ ಒಂದು ಪರಿಯೋಜನೆಯಲ್ಲದೆ ಬೇರೇನೂ ಅಲ್ಲ. ಸಂಪತ್ತಿನ ಪಿರಮಿಡ್‌ನ ಶಿಖರದಲ್ಲಿರುವವರಿಗೆ ಆದಾಯ ಮತ್ತು ಸಂಪತ್ತನ್ನು ವರ್ಗಾಯಿಸುವಂತೆ ಮಾಡುವ ಇದು ಯೋಜನೆ ಎಂದು ಪ್ರದರ್ಶಿಸುವ ಒಂದು ಹಗರಣ.
ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ‘ಕುತ್ತು ತಪ್ಪಿಸಿದ ಆಸ್ತಿಗಳ ನಾಣ್ಯೀಕರಣ’ ಎಂಬ ಪಾರಿಭಾಷಿಕ ಮಾತುಗಳ ವೇಷ ತೊಡಿಸಿ ಭಾರತದ ಸಾರ್ವಜನಿಕ ವಲಯವನ್ನು ಮಾರಾಟ ಮಾಡುವ ತನ್ನ ಯೋಜನೆಯನ್ನು ಪ್ರಕಟಿಸಿದೆ. ರಸ್ತೆಗಳು, ಬಂದರುಗಳು, ವಿಮಾನ ನಿಲ್ದಾಣಗಳು, ರೈಲ್ವೆ ಹಳಿಗಳು ಹಾಗೂ ಸ್ಟೇಷನ್‌ಗಳಿಂದ ಹಿಡಿದು ಇಂಧನ ಪೈಪ್‌ಲೈನ್, ದೂರಸಂಪರ್ಕ ಟವರ್, ಆಪ್ಟಿಕಲ್ ಫೈಬರ್ ಕೇಬಲ್ (ಒಎಫ್‌ಸಿ) ಹಾಕುವಿಕೆ, ಗೋದಾಮುಗಳು ಮತ್ತು ಕ್ರೀಡಾಂಗಳ ವರೆಗೆ ದೇಶದ ಎಲ್ಲ ಬಗೆಯ ಆಸ್ತಿಗಳನ್ನು ದೊಡ್ಡ ದೊಡ್ಡ ಖಾಸಗಿ ಹೂಡಿಕೆದಾರರಿಗೆ ಹಸ್ತಾಂತರಿಸುವ ಯೋಜನೆ ಇದು. ಇದಕ್ಕೆ ಪ್ರತಿಯಾಗಿ, 2015ಕ್ಕೆ ಅಂತ್ಯವಾಗುವ ಹಣಕಾಸು ವರ್ಷದವರೆಗೆ ನಾಲ್ಕು ವರ್ಷಗಳ ಅವಧಿಯಲ್ಲಿ ಸುಮಾರು ಆರು ಲಕ್ಷ ಕೋಟಿ ರೂಪಾಯಿ ಹಣವನ್ನು ಮುಂಗಡವಾಗಿ ಅಥವ ಕಂತುಗಳಲ್ಲಿ ಸರ್ಕಾರ ಪಡೆಯಲಿದೆ. ಆ ಹಣವನ್ನು ಹೊಸ ಮೂಲಸೌಕರ್ಯಗಳನ್ನು ಸೃಷ್ಟಿಸಲು ಬಳಸಲಾಗುವುದೆಂದು ಸರ್ಕಾರ ಆಶ್ವಾಸನೆ ನೀಡಿದೆ.
ಇದು ಖಾಸಗೀಕರಣ ಅಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಾದಿಸುತ್ತಾರೆ. ಮೂಲಸೌಕರ್ಯ ಕ್ಷೇತ್ರದಲ್ಲಿ ಈಗ ಅಸ್ತಿತ್ವದಲ್ಲಿರುವ ಮತ್ತು ಕಾರ್ಯನಿರ್ವಹಿಸುತ್ತಿರುವ ಸಾರ್ವಜನಿಕ ಕ್ಷೇತ್ರದ ಮೂಲರಚನೆಗಳ ಯೋಜನೆಗಳ ವರಮಾನಗಳ ಹರಿವಿನ ಹಕ್ಕುಗಳನ್ನು ತಾತ್ಕಾಲಿಕವಾಗಿ ವರ್ಗಾಯಿಸುವುದಷ್ಟೇ ಈ ಯೋಜನೆಯ ಉದ್ದೇಶ. ಖಾಸಗಿ ವಲಯದವರಿಗೆ ನಿರ್ದಿಷ್ಟ ಅವಧಿಗೆ ಅದನ್ನು ವರ್ಗಾಯಿಸಲಾಗುತ್ತದೆ, ಮಾಲಿಕತ್ವ ಸರ್ಕಾರದ ಬಳಿಯೇ ಇರುತ್ತದೆ. ಆದರೆ ಬಳಕೆಯ ಹಕ್ಕುಗಳು ಮತ್ತು ವರಮಾನಗಳನ್ನು ಹೂಡಿಕೆದಾರರಿಗೆ ನಿರ್ದಿಷ್ಟ ಶುಲ್ಕಕ್ಕೆ ವಹಿಸಲಾಗುತ್ತದೆ ಎಂದವರು ಹೇಳುತ್ತಾರೆ.
ಇಲ್ಲಿ ನಾಲ್ಕು ವಿಚಾರಗಳನ್ನು ಬಹಳ ಅವರ ಅನುಕೂಲದಂತೆ ಬದಿಗೆ ಸರಿಸಲಾಗಿದೆ. ಮೊದಲನೆಯದಾಗಿ, ಸರ್ಕಾರದ ಕೈಗಳಲ್ಲಿರುವ ‘ನಿಷ್ಕ್ರಿಯ ಆಸ್ತಿಗಳ ಮೌಲ್ಯದ ಬೀಗವನ್ನು ತೆಗೆಯುವುದು’ ಸರ್ಕಾರದ ಯೋಜನೆಯಾದ್ದರಿಂದ, ಒಮ್ಮೆ ನಾಣ್ಯೀಕರಿಸಿದ ಆಸ್ತಿಗಳು ಸರ್ಕಾರಕ್ಕೆ ವಾಪಸಾದಾಗ ಅವುಗಳನ್ನು ಮತ್ತೆ ಮುಂದಿನ ಸುತ್ತುಗಳ ನಾಣ್ಯೀಕರಣಕ್ಕೆ ಮಾರುಕಟ್ಟೆಗೆ ಹಿಂದಿರುಗಿಸಲಾಗುತ್ತದೆ. ಸರ್ಕಾರ ತಾನೇ ಮಾಲಿಕ ಎಂದು ಭಾವಿಸಬಹುದು. ಆದರೆ ಅದು ಎಂದಿಗೂ ಈ ಆಸ್ತಿಗಳನ್ನು ನಿರ್ವಹಿಸುವುದಿಲ್ಲ ಮತ್ತು ಅವುಗಳು ಕೊಡುವ ಸೇವೆಗಳನ್ನು ಒದಗಿಸುವುದಿಲ್ಲ. ಅದು ಈ ಆಸ್ತಿಗಳ ಕಲ್ಪಿತ ಮೌಲ್ಯಗಳನ್ನು ನಗದಾಗಿ ಪಡೆಯುತ್ತದೆ ಅಷ್ಟೇ. ಈ ಹಿಂದಿನ ಅನುಭವದಿಂದ ಹೇಳುವುದಾದರೆ, ಈ ಮೌಲ್ಯವನ್ನು ಹೂಡಿಕೆದಾರರನ್ನು ಆಕರ್ಷಿಸುವುದಕ್ಕಾಗಿ ಕೆಳಮಟ್ಟದಲ್ಲೇ ಇಡಲಾಗುತ್ತದೆ. ನಿರೀಕ್ಷಿತ ಮುಂಗಡ ಪಾವತಿಯನ್ನು ಬಿಡ್ಡಿಂಗ್ ಆರಂಭಕ್ಕೂ ಮುಂಚೆಯೇ ಪ್ರಕಟಿಸಿರುವುದರಿಂದ ನಿಜವಾದ ಮಾರಾಟ ಬೆಲೆ ತುಂಬಾ ಹೆಚ್ಚಾಗಿರುವ ಸಂಭವವಿಲ್ಲ.
ಎರಡನೆಯದಾಗಿ, ಖಾಸಗಿ ವಲಯ ಮೂಲಸೌಕರ್ಯಗಳನ್ನು ತಾನು ಹೊಂದಿ, ನಿರ್ವಹಿಸುವ ಮತ್ತು ನಡೆಸುವ ಅವಧಿಯಲ್ಲಿ ಸೇವೆಗಳ ಮಾರಾಟದಿಂದ ಬರುವ ಆದಾಯಗಳು ತನ್ನ ಹೂಡಿಕೆಯನ್ನು ತುಂಬಿಕೊಂಡು, ಅದಕ್ಕೆ ಆಕರ್ಷಕ ಪ್ರತಿಫಲವೂ ಬರುವ ಬಗ್ಗೆ ಖಾತರಿ ಬಯಸುತ್ತದೆ. ಸರ್ಕಾರವೇ ಮಾಲಿಕನಾಗಿ ಉಳಿದರೂ, ಬೆಲೆ ವಾಣಿಜ್ಯ ದೃಷ್ಟಿಯಿಂದಲೇ ನಿಗದಿಯಾಗಬೇಕು ಹಾಗೂ ಬರುವ ಪ್ರತಿಫಲಗಳು ಆಕರ್ಷಕವಾಗಿರಬೇಕು. ಇದೊಂದು ಸಮಸ್ಯೆಯಾಗುವ ಸಂಭವವಿದೆ. ಒಂದು ಧನಾತ್ಮಕ ನಿವ್ವಳ ವರಮಾನಗಳ ಹರಿವು ಇರಬಹುದಾದ ಕ್ಷೇತ್ರಗಳಲ್ಲಿಯೂ ಅದು ಖಾಸಗಿ ವಲಯದ ನಿರೀಕ್ಷೆಗೆ ತಕ್ಕಷ್ಟಿರಲಾರದು. ಆಗ ಬಳಕೆದಾರರಿಂದ ಹೆಚ್ಚಿನ ಬಳಕೆ ಶುಲ್ಕಗಳ ವಸೂಲಿ ಬೇಕಾಗುತ್ತದೆ, ಇಲ್ಲವೇ ಆ ಅಂತರವನ್ನು ತುಂಬಲು ಸರಕಾರದಿಂದ ಮೊತ್ತದ ವರ್ಗಾವಣೆ ನಡೆಯಬೇಕಾಗುತ್ತದೆ. ವರಮಾನದ ಹರಿವು ಇಲ್ಲದಿರುವಲ್ಲಿ ಅಥವಾ ಸೀಮಿತವಾಗಿರುವಲ್ಲಿ ಸರ್ಕಾರದ ಇಂತಹ ವಂತಿಗೆಗಳು ಗಣನೀಯವಾಗಿ ಹೆಚ್ಚಿರಬೇಕಾಗುತ್ತದೆ. ಸರ್ಕಾರಕ್ಕೆ ಸಂಪನ್ಮೂಲ ಕ್ರೋಡೀಕರಿಸಲು ನೆರವಾಗಬೇಕಾದ ಒಂದು ಪ್ರಕ್ರಿಯೆಯೇ ದೊಡ್ಡ ಮೊತ್ತಗಳನ್ನು ಹೀರುವಂತಾಗಬಹುದು.
ಮೂರನೆಯದಾಗಿ, ಹೆಚ್ಚು ಲಾಭವನ್ನು ಖಾತರಿಪಡಿಸುವ ಸಲುವಾಗಿ ವೆಚ್ಚ ಕಡಿಮೆ ಮಾಡಲು ತನಗೆ ಸ್ವಾತಂತ್ರ್ಯವಿರಬೇಕೆಂದು ಖಾಸಗಿ ಕ್ಷೇತ್ರ ಒತ್ತಾಯಿಸುತ್ತದೆ. ವೇತನ ಕಡಿತ ಹಾಗೂ ರಿಟ್ರೆಂಚ್‍ಮೆಂಟ್ ಅಥವಾ ಇವೆರಡೂ ಸೇರಿದಂತೆ ಕಾರ್ಮಿಕ ವೆಚ್ಚದಲ್ಲಿ ಇಳಿಕೆ ಈ ವೆಚ್ಚ ಇಳಿಕೆಯ ಕ್ರಮದಲ್ಲಿ ಸೇರಿರುತ್ತದೆ. ಸಂಘಟಿತ ಕಾರ್ಮಿಕ ಮಾರುಕಟ್ಟೆಗೆ ಒಂದು ಮಾನದಂಡ ಸ್ಥಾಪಿಸಿದ್ದ ಸಾರ್ವಜನಿಕ ವಲಯದ ಪಾತ್ರವನ್ನು ಇದು ದುರ್ಬಲಗೊಳಿಸಬಹುದು.
ಅಂತಿಮವಾಗಿ, ಆಸ್ತಿಗಳ ಖಾಸಗಿ ನಿರ್ವಾಹಕರು ಸ್ವೀಕಾರಾರ್ಹ ಗುಣಮಟ್ಟದ ಸೇವೆಯನ್ನು ಒದಗಿಸುವುದನ್ನು ಸರ್ಕಾರ ಹೇಗೆ ಖಾತರಿಪಡಿಸುತ್ತದೆ ಎನ್ನುವುದಕ್ಕೆ ಯಾವುದೇ ಸ್ಪಷ್ಟತೆಯಿಲ್ಲ. ಈ ಉದ್ದೇಶಕ್ಕಾಗಿ ಒಂದು ನಿಯಂತ್ರಣ ವ್ಯವಸ್ಥೆಯನ್ನು ರೂಪಿಸುವುದು ದುಬಾರಿ ಹಾಗೂ ಸಮಯ ತಿನ್ನುವ ಪ್ರಕ್ರಿಯೆಯಾಗಬಹುದು. ಇದರಿಂದಾಗಿ ಹೆಚ್ಚು ದುಬಾರಿ ಸೇವೆಗಳ ಗುಣಮಟ್ಟದಲ್ಲಿ ಕುಸಿತವಾಗುತ್ತದೆ ಹಾಗೂ ನಿರ್ಲಕ್ಷ್ಯವೂ ಉಂಟಾಗಬಹುದು.
ಒಟ್ಟಿನಲ್ಲಿ ಹೇಳುವುದಾದರೆ, ಹೊಸ ಮೂಲಸೌಕರ್ಯ ಪರಿಯೋಜನೆಗಳಲ್ಲಿ ಹೂಡಿಕೆಗಾಗಿ ಸಂಪನ್ಮೂಲಗಳನ್ನು ಕ್ರೋಡೀಕರಿಸಲಿಕ್ಕೆಂದು ಸರಕಾರ ಸಮರ್ಥಿಸಿಕೊಳ್ಳುವ ಈ ನಾಣ್ಯೀಕರಣ ಪ್ರಕ್ರಿಯೆಯು, ದೊಡ್ಡ ಉದ್ದಿಮೆದಾರರ ಕಾರ್ಯಕ್ಷೇತ್ರವನ್ನು ವಿಸ್ತಾರಗೊಳಿಸಿ, ಅವರು ಗ್ರಾಹಕರಿಂದ ಅಥವಾ ಸರ್ಕಾರದ ಬೊಕ್ಕಸದಿಂದ ಭಾರಿ ಪ್ರತಿಫಲಗಳನ್ನು ಗಳಿಸಿಕೊಳ್ಳುವ ಒಂದು ಪರಿಯೋಜನೆಯಲ್ಲದೆ ಬೇರೇನೂ ಅಲ್ಲ. ಸಂಪತ್ತಿನ ಪಿರಮಿಡ್‌ನ ಶಿಖರದಲ್ಲಿರುವವರಿಗೆ ಆದಾಯ ಮತ್ತು ಸಂಪತ್ತನ್ನು ವರ್ಗಾಯಿಸುವಂತೆ ಮಾಡುವ ಒಂದು ಯೋಜನೆ ಇದಾಗಿದೆ.
ಆಘಾತಕಾರೀ ಸಂಗತಿಯೆಂದರೆ, ಆಯ್ದ ಉದ್ಯಮಪತಿಗಳನ್ನು ಕೊಬ್ಬಿಸಲು ಸಾರ್ವಜನಿಕ ಸಂಪತ್ತನ್ನು ಅಡವಿಡುವ ಈ ಹಗರಣಕಾರಿ ಯೋಜನೆಯು ಹೊಸ ಆಸ್ತಿಗಳ ಸೃಷ್ಟಿಗೆ ಯಾವುದೇ ಗಮನಾರ್ಹ ಕೊಡುಗೆಗಳನ್ನು ನೀಡುವುದಿಲ್ಲ. ತಥಾಕಥಿತ ‘ನ್ಯಾಷನಲ್ ಇನ್‌ಫ್ರಾಸ್ಟ್ರಕ್ಚರ್ ಪೈಪ್‌ಲೈನ್ (ರಾಷ್ಟ್ರೀಯ ಮೂಲಸೌಕರ್ಯ ಕ್ರಮ ಸರಣಿ)ನಲ್ಲಿ ಸೇರಿರುವ ಪ್ರಾಜೆಕ್ಟ್ ಗಳಲ್ಲಿ ಐದು ವರ್ಷಗಳಲ್ಲಿ 111 ಲಕ್ಷ ಕೋಟಿ ರೂಪಾಯಿಗಳನ್ನು ಹೂಡಲಾಗುತ್ತದೆ ಎಂದು ಸರ್ಕಾರ ಕೊಚ್ಚಿಕೊಳ್ಳುತ್ತಿದೆ. ಈಗ ಪ್ರಕಟಿಸಿರುವ ಆಸ್ತಿ ನಾಣ್ಯೀಕರಣದಿಂದ ಬರುವಂಥ 6 ಲಕ್ಷ ಕೋಟಿ ರೂಪಾಯಿಯು 111 ಲಕ್ಷ ಕೋಟಿಯ ಕೇವಲ ಐದು ಶೇಕಡದಷ್ಟಾಗುತ್ತದೆ.
ಮೋದಿ ಸರ್ಕಾರ, ಮುಂಬರುವ ಐದು ವರ್ಷಗಳಲ್ಲಿ ಯೋಜಿತ ಮೂಲಸೌಕರ್ಯ ಹೂಡಿಕೆಗಳ ಕೇವಲ ಐದು ಶೇಕಡಾದಷ್ಟನ್ನು ಮಾತ್ರ ಪಡೆಯಲು, ಹಲವು ದಶಕಗಳಿಂದ ಸಾರ್ವಜನಿಕ ಹಣದಿಂದ ಸೃಷ್ಟಿಸಿದ ಸಂಪತ್ತನ್ನು ದೊಡ್ಡ ಉದ್ಯಮಪತಿಗಳಿಗೆ ಹಸ್ತಾಂತರಿಸುವುದನ್ನು ಸಮರ್ಥಿಸಿಕೊಳ್ಳುತ್ತಿದೆ. ಇದೊಂದು ಯೋಜನೆ ಎಂದು ಪ್ರದರ್ಶಿಸುವ ಹಗರಣವಲ್ಲದೆ ಇನ್ನೇನೂ ಅಲ್ಲ.
ಅನು: ವಿಶ್ವ