ಹಾಲಿನ ದರ ರೂ.3 ಹೆಚ್ಚಳಕ್ಕೆ ಕೆಎಂಎಫ್ ನಿರ್ಧಾರ!

ಬೆಂಗಳೂರು: ಹಾಲಿನ ದರ ಹೆಚ್ಚಳ ಮಾಡುವಂತೆ ಕಳೆದ 8 ತಿಂಗಳಿಂದ ರಾಜ್ಯ ಹಾಲು ಮಹಾಮಂಡಳ (ಕೆಎಂಎಫ್‌) ವತಿಯಿಂದ ಸರ್ಕಾರಕ್ಕೆ ಮನವಿ ಮಾಡಿಕೊಂಡರೂ ರಾಜ್ಯ ಸರ್ಕಾರ ಈ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ. ಹಾಲಿನ ದರ ಹೆಚ್ಚಳಕ್ಕೆ ತಾನೇ ಮುಂದಾಗಿರುವ ಕೆಎಂಎಫ್‌ ನಂದಿನಿ ಹಾಲಿನ ದರವನ್ನು 3 ರೂ.ಗೆ ಹೆಚ್ಚಳ ಮಾಡಲು ನಿರ್ಧರಿಸಿದೆ.

ರೈತರು ಹಾಗೂ ಕೆಎಂಎಫ್‍ನ ಜಿಲ್ಲಾ ಹಾಲು ಒಕ್ಕೂಟಗಳಿಂದ ಹಾಲಿನ ದರ ಹೆಚ್ಚಳಕ್ಕೆ ಒತ್ತಡ ಹೆಚ್ಚಾಗಿದೆ. ಹೀಗಾಗಿ ತನಗಿರುವ ಇರುವ ಅಧಿಕಾರವನ್ನು ಬಳಸಿಕೊಂಡು ತಾನೇ ಹಾಲಿನ ದರವನ್ನು ಏರಿಸಲು ಮುಂದಾಗಿದೆ ಎನ್ನಲಾಗಿದೆ.

ಕೆಎಂಎಫ್‌ನ ವಾರ್ಷಿಕ ಸಭೆಯಲ್ಲಿ ಹಾಲಿನ ಮಾರಾಟ ದರ ಹೆಚ್ಚಿಸುವ ಸಂಬಂಧ ಸರ್ವಾನುಮತದ ನಿರ್ಣಯ ಅಂಗೀಕರಿಸಲಾಗಿದ್ದು, ಸಭೆಯಲ್ಲಿ ಪಾಲ್ಗೊಂಡಿದ್ದ ರಾಜ್ಯದ 14 ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು ದರ ಏರಿಕೆಗೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ನಗರದ ಖಾಸಗಿ ಹೋಟೆಲ್‍ನಲ್ಲಿ ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಸರ್ವ ಸಭೆಯಲ್ಲಿ ಭಾಗವಹಿಸಿದ ವಿವಿಧ ಜಿಲ್ಲೆಗಳ ಹಾಲು ಒಕ್ಕೂಟದವರು ಹಾಲಿನ ದರ ಹೆಚ್ಚಳ ಮಾಡುವುದಕ್ಕೆ ಬೆಂಬಲ ನೀಡಿದ್ದಾರೆ. ಹೆಚ್ಚಳ ಮಾಡಲಾಗುವ ದರವನ್ನು ಹಾಲು ಉತ್ಪಾದಕ ರೈತರಿಗೆ ವರ್ಗಾಯಿಸಲಾಗುವುದು ಎಂದು ಹೇಳಲಾಗಿದೆ.

ಸರಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದರೂ ಮುಖ್ಯಮಂತ್ರಿಗಳಿಂದ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ರೈತರ ಅನುಕೂಲಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಈ ಕುರಿತು ಸರಕಾರದ ಅನುಮತಿ ಬಾಕಿ ಇದೆ.

Donate Janashakthi Media

Leave a Reply

Your email address will not be published. Required fields are marked *