ಬೆಂಗಳೂರು: ಮಂಡ್ಯ ಹಾಲು ಒಕ್ಕೂಟದ ಮೇಲೆ ವಂಚನೆ ಆರೋಪ ಕೇಳಿ ಬಂದಿದ್ದು ಒಕ್ಕೂಟವೇ ಹಾಲಿಗೆ ನೀರು ಬೆರೆಸಿ ವಂಚಿಸುತ್ತಿದ್ದ ಪ್ರಕರಣವನ್ನು ಸಿಐಡಿ ತನಿಖೆಗೆ ಒಳಪಡಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಪ್ರಕರಣದ ಸಂಬಂಧಿಸಿದಂತೆ ಐವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಮತ್ತು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರನ್ನು ಬದಲಾವಣೆ ಮಾಡಿ ಹೊಸ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಿಸಿದ್ದೇವೆ. ಅಕ್ರಮದ ಬಗ್ಗೆ ವಿಚಾರಣೆ ನಡೆಯುತ್ತಿದ್ದು, ಹೆಚ್ಚಿನ ತನಿಖೆಗಾಗಿ ಸಿಐಡಿಗೆ ವಹಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದರು.
ಇದನ್ನು ಓದಿ: ಸೋಂಕಿನಿಂದ ಮೃತಪಟ್ಟ ವಯಸ್ಕರ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ: ಸಿಎಂ ಯಡಿಯೂರಪ್ಪ
ಹಾಲಿಗೆ ನೀರನ್ನು ಬೆರೆಸಿ ವಂಚಿಸುತ್ತಿರುವ ಬಗ್ಗೆ ಮೇ 31ರಂದು ಪತ್ತೆಯಾಗಿ ಜಿಲ್ಲಾದ್ಯಂತ ತೀವ್ರವಾದ ಚರ್ಚೆಗೊಳಪಟ್ಟಿದ್ದವು. ಹಾಲು ಸಾಗಿಸುವ ಗುತ್ತಿಗೆ ಪಡೆದಿರುವವರೇ ನಿತ್ಯ ಸಾವಿರಾರು ಲೀಟರ್ ಹಾಲಿಗೆ ನೀರನ್ನು ಬೆರೆಸಿ ವಿತರಣೆ ಮಾಡುತ್ತಿದ್ದು, ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗೆಜ್ಜಲಗೆರೆಯಲ್ಲಿ ಸಿಕ್ಕಿಬಿದ್ದಿತ್ತು. ಶಿಥಿಲೀಕರಣ ಕೇಂದ್ರಗಳಿಂದ ಒಕ್ಕೂಟಕ್ಕೆ ಸಾಗಿಸುವ ಹಾಲಿಗೆ ನೀರು ಮಿಶ್ರಣ ಮಾಡಿ ವಂಚಿಸಲಾಗುತ್ತಿದ್ದು, ಹಾಲಿನ ಪರೀಕ್ಷೆ ಮುಗಿದ ಬಳಿಕ ನೀರನ್ನು ಬೆರೆಸಲಾಗುತ್ತಿತ್ತು ಎಂದು ಹೇಳಲಾಗಿತ್ತು.
ನೀರು ಮಿಶ್ರಿತ ಹಾಲು ಬರುವಂತೆ ಟ್ಯಾಂಕರ್ ವಿನ್ಯಾಸಗೊಳಿಸಿ ಟ್ಯಾಂಕರ್ ಒಳಭಾಗದಲ್ಲಿ ನೀರು ತುಂಬಲು ಪ್ರತ್ಯೇಕ ವಿಭಾಗ ರೂಪಿಸಿದ್ದರು. ಅನುಮಾನಗೊಂಡು ಒಕ್ಕೂಟದ ಅಧ್ಯಕ್ಷ ರಾಮಚಂದ್ರು ನೇತೃತ್ವದಲ್ಲಿ ತಪಾಸಣೆ ನಡೆಸಿದಾಗ ವಂಚನೆಯ ಜಾಲ ಬಯಲಾಗಿದೆ. ವಂಚನೆ ನಡೆಸಲು ಬಳಸಿದ ತಂತ್ರಕ್ಕೆ ನಿಬ್ಬೆರಗಾಗುವಂತೆ ಮಾಡಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ 6 ಟ್ಯಾಂಕರ್ಗಳನ್ನು ವಶಕ್ಕೆ ಪಡೆದ ಮದ್ದೂರು ಪೊಲೀಸರು ತನಿಖೆ ನಡೆಸಿದ್ದರು. ಇದೀಗ ಈ ಪ್ರಕರಣವನ್ನು ಸಿಐಡಿಗೆ ವಹಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಹಾಲಿಗೆ ನೀರು ಸೇರಿಸಿ ವಂಚಿಸಿದ ಪ್ರಕರಣ ಬೆಳಕಿಗೆ ಬಂದ ಕೂಡಲೇ ಸಚಿವ ನಾರಾಯಣಗೌಡ ಡೈರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಒಕ್ಕೂಟದ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಸದಸ್ಯರು ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಎಲ್ಲರ ಸಮ್ಮುಖದಲ್ಲಿ ಹಾಲು ಸಾಗಿಸುವ ವಾಹನದಲ್ಲಿ ನೀರು ಬೆರೆಕೆ ಮಾಡುತ್ತಿದ್ದ ಬಗೆಯನ್ನು ಸಚಿವರು ವೀಕ್ಷಸಿದರು.
ಪ್ರಕರಣವನ್ನೂ ಮುಚ್ಚಿಹಾಕುವುದು ಬೇಡ: ಕುಮಾರಸ್ವಾಮಿ ಟೀಕೆ
ಮನ್‌ಮುಲ್‌ನಲ್ಲಿ ಹಾಲಿಗೆ ನೀರು ಸೇರಿಸಿ ವಂಚಿಸಿದ್ದ ಪ್ರಕರಣದ ಕುರಿತು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ವರಿಷ್ಠ ಎಚ್.ಡಿ. ಕುಮಾರಸ್ವಾಮಿಯವರು ಮಂಡ್ಯ ತಾಲೂಕಿನ ಹನಕೆರೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ʻʻಹಾಲಿಗೆ ನೀರು ಬೆರೆಸಿ ವಂಚಿಸುತ್ತಿದ್ದ ಈ ಪ್ರಕರಣವನ್ನೂ ಮುಚ್ಚಿಹಾಕುವುದು ಬೇಡ. ಹಣ ಲೂಟಿ ಮಾಡಿದವರ ವಿರುದ್ಧ ಸರ್ಕಾರ ಕ್ರಮಕೈಗೊಳ್ಳಬೇಕು. ಈ ಹಿಂದೆಯೂ ಮಂಡ್ಯದ ಮೂಡಾದಲ್ಲಿ ನಡೆದಿದ್ದ 5 ಕೋಟಿ ಹಗರಣ ನಂತರ ಏನಾಗಿದೆ ಎಂಬುದು ನಿಮಗೂ ತಿಳಿದಿದೆ. ನಾನಾಗಲಿ ಅಥವಾ ನನ್ನ ಪಕ್ಷವಾಗಲಿ ಜನರ ದುಡ್ಡು ತಿನ್ನಲು ಅವಕಾಶ ಕೊಡುವುದಿಲ್ಲ. ಮನ್ ಮುಲ್‌ನಲ್ಲಿ ನಡೆದಿದೆ ಎನ್ನಲಾದ ಹಗರಣದ ಹಿಂದೆ ಯಾರಿದ್ದಾರೆ ಎಂಬುದು ನಿಮಗೂ ಗೊತ್ತಿದೆ ಎಂದು ಟೀಕಿಸಿದರು.