ಬೆಂಗಳೂರು ಜ 24 : ಸದ್ಯ ರಾಜ್ಯದಲ್ಲಿ ನಿದ್ದೆ ಹಾಗೂ ಮರುವಿನ ಕಾಯಿಲೆಯ ರಾಜಕಾರಣ ಶುರುವಾಗಿದೆ. ಹಾಲಿ ವರ್ಸಸ್ ಮಾಜಿ ಸಿಎಂ ನಡುವೆ ನಿದ್ದೆ, ಮರುವಿನಾ ಜಟಾಪಟಿ ನಡೆಯುತ್ತಿದೆ.
ಜನವರಿ 20 ರಂದು ಕೃಷಿ ಕಾಯಿದೆಗಳನ್ನು ವಿರೋಧಿಸಿ ಕಾಂಗ್ರೆಸ್ ನಾಯಕರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಅಲ್ಲದೆ ಕೇಂದ್ರ ಸರ್ಕಾರದ ರೈತ ವಿರೋಧಿ ಹಾಗೂ ಕೃಷಿ ವಿರೋಧಿ ನೀತಿಗಳ ವಿರುದ್ದ ಸಮರ ಸಾರಿದರು. ಕಾಂಗ್ರೆಸ್ ನಾಯಕರು ನಡೆಸಿದ ಹೋರಾಟಕ್ಕೆ ಪ್ರತಿಕ್ರಿಯೆ ನೀಡಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕಾಂಗ್ರೆಸ್ ಪಕ್ಷ ಜೀವಂತವಾಗಿದೆ ಎಂದು ತೋರಿಸಿಕೊಳ್ಳಲು ಹೋರಾಟ ಮಾಡಿದೆ. ಇಷ್ಟು ದಿನ ನಿದ್ದೆ ಮಾಡುತ್ತಿತ್ತು ಎಂದು ಕಾಂಗ್ರೆಸ್ ಹೋರಾಟವನ್ನು ವ್ಯಂಗ್ಯ ಮಾಡಿದ್ದರು.
ಸಿಎಂ ಹೇಳಿಕೆಗೆ ಫುಲ್ ಗರಂ ಆಗಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮ ದಾಟಿಯಲ್ಲಿ ಮುಖ್ಯಮಂತ್ರಿಗಳಿಗೆ ಟಾಂಗ್ ಕೊಟ್ಟಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಪ ಸಿಎಂ ಬಿ.ಎಸ್.ಯಡಿಯೂರಪ್ಪ ನಿನ್ನೆ ನಡೆದಿದ್ದನ್ನ ಇವತ್ತಿಗೆ ಮರೆತುಬಿಡ್ತಾರೆ. ಮರುವಿನ ಕಾರಣಕ್ಕೆ ಆ ರೀತಿ ಹೇಳಿಕೆ ನೀಡಿರಬೇಕು. ಈಗಾಗಲೇ ಕೇಲವರಿಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಯಡಿಯೂರಪ್ಪ ಅವರಿಗೆ ಮಾತು ತಪ್ಪದ ನಾಯಕ ಎಂದು ಹೇಳುತ್ತಿದ್ದರು. ಈಗ ನಾಲಿಗೆ ಇಲ್ಲದ ನಾಯಕ ಯಡಿಯೂರಪ್ಪ ಯಡಿಯೂರಪ್ಪ ಯಡಿಯೂರಪ್ಪ ಎಂದು ನಟನೆ ಮಾಡಿ ಟಾಂಗ್ ಕೊಟ್ಟರು.
ಇದನ್ನೂ ಓದಿ : ಮುಖ್ಯಮಂತ್ರಿ ಬದಲಾವಣೆ ಖಚಿತ : ಪುನರುಚ್ಚರಿಸಿದ ಸಿದ್ಧರಾಮಯ್ಯ
ಇದೇ ವೇಳೆ ಹಂಪಾ ನಾಗರಾಜಯ್ಯ ಬಂಧನ ವಿಚಾರದ ಬಗ್ಗೆ ಪ್ರಸ್ತಾಪಿಸಿ ಸಿದ್ದರಾಮಯ್ಯ, ನಾನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದ್ದೇನೆ ಅನ್ನೋದು ಡೌಟ್ ಬರುತ್ತಿದೆ. ಅವರವರ ಅಭಿಪ್ರಾಯ ಹೇಳೋದು ಪ್ರತಿಯೊಬ್ಬರ ಹಕ್ಕು. ಹಂಪ ನಾಗರಾಜಯ್ಯ ಯಾವ ಪಕ್ಷಕ್ಕೆ ಸೇರಿದವರು ಅಲ್ಲ. ಅವರು ಹಿರಿಯ ಬರಹಗಾರ, ಅವರ ಹಕ್ಕನ್ನು ನೀವು ಕಸಿಯೋಕೆ ಆಗುತ್ತಾ ಎಂದು ಸರ್ಕಾರವನ್ನು ಪ್ರಶ್ನಿಸಿದರು. ಯಾರೋ ಇಬ್ಬರು ದೂರು ಕೊಡ್ತಾರೆ ? ಅವರನ್ನು ವಿರುದ್ದ ಪ್ರಕರಣ ದಾಖಲೆ ಮಾಡ್ತಾರೆ ಅಂದ್ರೆ ಏನರ್ಥ ? ಎನ್ ಸಿ ಆರ್ ಹಾಕಬಹುದಿತ್ತು. ಅದನ್ನು ಬಿಟ್ಟು ಸ್ಟೇಷನ್ ಗೆ ಕರೆದು ಅವಮಾನ ಮಾಡಿದ್ದಾರೆ. ಪ್ರಜಾ ಪ್ರಭುತ್ವದ ಮೇಲೆ ಸಿಎಂಗೆ ನಂಬಿಕೆ ಇದ್ದರೆ, ಹಂಪ ನಾಗರಾಜಯ್ಯ ಅವರನ್ನು ಬಂಧಿಸಿದ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಿ ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.
ಇದನ್ನೂ ಓದಿ : ಪೊಲೀಸ್ ಠಾಣೆಗೆ ಕರೆಯಿಸಿ ಹಂಪನಾ ವಿಚಾರಣೆಗೆ ವ್ಯಾಪಕ ಖಂಡನೆ