ಅಂಕೋಲಾ: ವಿವಾದ ಎದ್ದು ತಿಂಗಳು ಕಳೆದರೂ ಪಠ್ಯಪುಸ್ತಕ ಪರಿಷ್ಕರಣೆ ಇನ್ನೂ ಬಗೆಹರಿದಿಲ್ಲ. 1 ರಿಂದ 10ನೇ ತರಗತಿಗಳ ಭಾಷೆ ಮತ್ತು ಸಮಾಜ ವಿಜ್ಞಾನ ಪಠ್ಯಪುಸ್ತಕಗಳಲ್ಲಿ ಆಗಿರುವ ಬಹುತೇಕ ಬದಲಾವಣೆಗಳು ಲೋಪದೋಷಗಳಿಂದ ಕೂಡಿರುವುದು ಮತ್ತು ಅಲ್ಲಿನ ತಪ್ಪುಗಳು ಸಾರ್ವಜನಿಕವಾಗಿ ಬಹು ಚರ್ಚಿತವಾಗಿದೆ.
ಈ ಸಂಬಂಧ ಜಾಗೃತ ನಾಗರಿಕರು, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ತಹಶೀಲ್ದಾರ ಕಛೇರಿ ಮುಂಭಾಗ ಎಲ್ಲಾ ವಿವಾದಗಳು ಕೊನೆಗೊಳ್ಳುವವರೆಗೂ ಹಳೆಯ ಪಠ್ಯಪುಸ್ತಕಗಳನ್ನು ಮುಂದುವರಿಸಬೇಕು ಎಂದು ಪ್ರತಿಭಟನೆ ನಡೆಸಿದರು.
ಈಗಾಗಲೇ, ಶಿಕ್ಷಣ ಸಚಿವರು ಪರಿಷ್ಕೃತ ಪಠ್ಯಪುಸ್ತಕಗಳಲ್ಲಿ ಕೆಲವು ತಪ್ಪುಗಳಾಗಿವೆ ಎಂದು ಒಪ್ಪಿಕೊಂಡಿದ್ದಾರೆ ಮತ್ತು ಇತರೆ ತಪ್ಪುಗಳಾಗಿದ್ದರೂ ಸಹ ಆಕ್ಷೇಪ ಸಲ್ಲಿಸಿ, ಎಲ್ಲವನ್ನೂ ಪರಿಗಣಿಸಿ ತಿದ್ದುಪಡಿ ಮಾಡುತ್ತೇವೆ ಎಂದಿದ್ದಾರೆ. ಸಾರ್ವಜನಿಕವಾಗಿ ಹಲವಾರು ವಿಷಯಗಳು, ವಿವಾದಗಳಾಗಿಯೂ ಚರ್ಚೆಯಲ್ಲಿವೆ. ಸರಕಾರದ ಆದೇಶಗಳೆಂಬಂತೆ ಹಲವು ಪತ್ರಗಳೂ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಹೀಗಿರುವಾಗ ಸಹಜವಾಗಿಯೇ ವಿವಾದವಾಗಿರುವ ವಿಚಾರಗಳನ್ನು ತುರ್ತಾಗಿ ಸರಿಪಡಿಸಬೇಕಾಗ ಕರ್ತವ್ಯ ಸರ್ಕಾರದ ಮೇಲಿದೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಹಿಂದಿನ ಶಿಕ್ಷಣ ಸಚಿವ ಸುರೇಶ್ ಕುಮಾರ್ 6ನೇ ತರಗತಿಯ ‘ಹೊಸ ಧರ್ಮಗಳ ಉದಯ’ ಪಠ್ಯ ಕುರಿತಂತೆ ಬಂದ ಆಕ್ಷೇಪಣೆಗಳನ್ನು ಕೇಳಲಾಗಿತ್ತು ಎಂದಿದ್ದಾರೆ. ಆದರೆ, ಹಾಗೆ ಕೇಳುವಾಗ ಅಧಿಕೃತ ಆದೇಶವಿತ್ತೇ ಎನ್ನುವ ಪ್ರಶ್ನೆಯೂ ಇದೆ. ಅದರ ಜೊತೆಯೇ ರೋಹಿತ್ ಚಕ್ರತೀರ್ಥ ಸಮಿತಿ 1 ರಿಂದ 10ನೇ ತರಗತಿ ಎಲ್ಲಾ ಪಠ್ಯಗಳನ್ನು ಪರಿಷ್ಕರಿಸಿ ವರದಿ ಕೊಟ್ಟಿರುತ್ತಾರೆ ಎಂಬ ಚರ್ಚೆ ಚಾಲ್ತಿಯಲ್ಲಿದೆ. ಹಾಗೆ ಮಾಡಲು ಅವರಿಗೆ ಅದ್ಯಾದೇಶಗಳಿರಲಿಲ್ಲ, ಘಟನೋತ್ತರ ಆದೇಶ ನೀಡುವ ವಾಗ್ದಾನವಿತ್ತೆಂದೂ ಮಾಧ್ಯಮಗಳ ವರದಿಗಳಿಂದ ತಿಳಿದುಬಂದಿದೆ. ಅಂತಹ ಒಂದು ಅವಕಾಶ ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿ ಇದೆಯೇ? ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.
ಕರ್ನಾಟಕ ಸರಕಾರ ಜನ ವಿರೋಧದ ನಡುವೆಯೂ ವಿಧಾನಸಭೆಯಲ್ಲಿ ಚರ್ಚೆ ಮಾಡದೆ, ಏಕಪಕ್ಷೀಯವಾಗಿ ಈಗಾಗಲೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಉನ್ನತ ಶಿಕ್ಷಣದಲ್ಲಿ ತರಾತುರಿಯಲ್ಲಿ ಜಾರಿ ಮಾಡಿದೆ. ಅದರಿಂದಾಗುತ್ತಿರುವ ತೊಂದರೆಗಳು ಈಗಾಗಲೇ ಜಗಜ್ಜಾಹೀರಾಗುತ್ತಿವೆ. ಅದನ್ನೀಗ ಪ್ರಾಥಮಿಕ ಶಿಕ್ಷಣಕ್ಕೂ ಅನ್ವಯಿಸಲು ಯಾವ ಚರ್ಚೆಗಳೂ ಇಲ್ಲದೆಯೇ ಸಮಿತಿಯನ್ನು ನೇಮಕ ಮಾಡಿದೆ. ಅದರ ಶಿಫಾರಸ್ಸುಗಳಿಗೆ ಅನುಗುಣವಾಗಿದೆ. ಇದರಿಂದಾಗುವ ಖರ್ಚು ಅಧಿಕ ಮತ್ತು ಮಾಡಿದ ಹಣದಿಂದ ಸಾರ್ವಜನಿಕ ಬೊಕ್ಕಸಕ್ಕೆ ಆದ ನಷ್ಟಕ್ಕೆವೂ ಅಧಿಕವಾಗುತ್ತದೆ ಎಂದು ವಿರೋಧ ವ್ಯಕ್ತಪಡಿಸಿದರು.
ತಹಶೀಲ್ದಾರ್ ಮೂಲಕ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಜಾಗೃತ ನಾಗರಿಕರು, ಅಂಕೋಲಾ ಪರವಾಗಿ ಶಾಂತಾರಾಮ ನಾಯಕ ಹಿಚಕಡ, ಡಾ. ಆರ್.ಜಿ. ಗುಂದಿ, ಮಹಾಂತೇಶ ರೇವಡಿ, ಶಾಂತಾರಾಮ ನಾಯಕ ಅಗಸೂರು, ಪ್ರೊ. ಮೋಹನ ಹಬ್ಬು, ಗೋಪಾಲಕೃಷ್ಣ ನಾಯಕ ವಾಸರೆ, ಕೃಷ್ಣಾ ನಾಯಕ ಹಿಚಕಡ, ನಾಗೇಂದ್ರ ನಾಯಕ ತೊರ್ಕೆ, ನಾಗರಾಜ ಮಂಜಗುಣಿ, ರಮೇಶ ಗೌಡ ಶಿರೂರು, ಶ್ರೀಪಾದ ನಾಯ್ಕ, ಮಂಜಗುಣಿ, ಸಂತೋಷ ನಾಯ್ಕ ಬಾಳೆಗುಳಿ, ಬೋಳಾ ಗೌಡ, ಬೇಲೇಕೇರಿ, ಎಚ್.ಬಿ. ನಾಯಕ, ಕೆ. ರಮೇಶ, ವಸಂತ ನಾಯಕ ಸೂರ್ವೆ, ಸುರೇಶ ಎಸ್. ನಾಯ್ಕ ಅಸ್ಲೆಗದ್ದೆ, ರಾಜೇಶ ಮಿತ್ರಾ ನಾಯ್ಕ ಮುಂತಾದವರು ಹಾಜರಿದ್ದರು.