ಬೆಂಗಳೂರು: ತುಮಕೂರು ಮೂಲದ 26 ವರ್ಷ ವಯಸ್ಸಿನ ಎಸ್.ದೀಪಕ್ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೆದುಳು ನಿಷ್ಕ್ರಿಯಗೊಂಡಿದ್ದರಿಂದ ಅವರ ಪೋಷಕರು ಮಗನ ಅಂಗಾಂಗ ದಾನ ಮಾಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಗಂಗೊಂಡನಹಳ್ಳಿಯ ದೀಪಕ್ ಸೆ.25 ರಂದು ನೈಸ್ ರಸ್ತೆಯಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ನಿಂತಿದ್ದ ಕ್ಯಾಂಟರಿಗೆ ದೀಪಕ್ ಅವರು ಚಲಾಯಿಸುತ್ತಿದ್ದ ಕಾರು ಡಿಕ್ಕಿ ಹೊಡೆದಿತ್ತು. ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ದೀಪಕ್ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತಾದರೂ ಅವರ ಮೆದುಳು ನಿಷ್ಕ್ರಿಯಗೊಂಡಿದೆ.
ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆಯಲ್ಲಿ ದೀಪಕ್ ಅವರ ಅಂಗಾಂಗಗಳನ್ನು ದಾನ ಮಾಡಲು ಅವರ ಕುಟುಂಬಸ್ಥರು ಮುಂದಾಗಿದ್ದಾರೆ. ಕಿಡ್ನಿ, ಕಣ್ಣು, ಚರ್ಮ ಸೇರಿದಂತೆ ದೇಹದ ಇತರ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದಾರೆ. ಪೋಷಕರ ಈ ನಿರ್ಧಾರಕ್ಕೆ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಮೆಚ್ಚುಗೆ ಸೂಚಿಸಿದ್ದಾರೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಡಾ. ಕೆ ಸುಧಾಕರ್, ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಎಸ್.ದೀಪಕ್ ಹಾಗೂ ಅವರ ಪೋಷಕರಿಗೆ ಅನಂತ ವಂದನೆಗಳು. ದೀಪಕ್ ಅವರ ದೇಹದಿಂದ ಯಕೃತ್ತು, ಕಿಡ್ನಿ, ಹೃದಯದ ಕವಾಟ, ಕಾರ್ನಿಯಾ ಹಾಗೂ ಚರ್ಮವನ್ನು ಕಸಿ ಮಾಡಲಾಗಿದ್ದು, ಅನೇಕರಿಗೆ ಜೀವದಾನ ನೀಡಲಿದೆ ಎಂದು ಹೇಳಿದ್ದಾರೆ.
ಸತ್ತ ಮೇಲೂ ಜೀವಿಸಲು ಸಾಧ್ಯವಾಗಿಸುವ ಅಂಗಾಂಗ ದಾನ ಅತ್ಯಂತ ಶ್ರೇಷ್ಠವಾದುದು. ನಾನು ಈಗಾಗಲೇ ಅಂಗಾಂಗ ದಾನ ಮಾಡುವ ಪ್ರತಿಜ್ಞೆ ಮಾಡಿದ್ದೇನೆ. ನೀವು ಕೂಡ ಅಂಗಾಂಗ ದಾನ ಮಾಡಲು ಮುಂದಾಗಿ ಎಂದು ಅವರು ಮನವಿ ಮಾಡಿದ್ದಾರೆ.