ಹಗರಣಗಳ “ಸುಳಿಯಲ್ಲಿ” ಸರಕಾರ

ಗುರುರಾಜ ದೇಸಾಯಿ

ರಾಜ್ಯದಲ್ಲಿ ಬಯಲಾಗುತ್ತಲೇ ಇವೆ ಹಗರಣಗಳು, ಸಾಲು ಸಾಲು ಹಗರಣಗಳ ನಡುವೆ ಮತ್ತೊಂದು ಹಗರಣ ಬಗಯಲಿಗೆ ಬಂದಿದೆ. ಹೌದು, ರಾಜ್ಯ ಸರ್ಕಾರಕ್ಕೆ ಎಫ್‌ಡಿಎ ನೇಮಕಾತಿಯ ಹಗ್ಗ ಸುತ್ತಿಕೊಂಡಿದೆ. ಕಳೆದ ಆರು ತಿಂಗಳಲ್ಲಿ ಸಾಲು ಸಾಲು ನೇಮಕಾತಿ ಹಗರಣಗಳು ಬಯಲಾಗುತ್ತಿವೆ.

ಪಿಎಸ್ಐ ನೇಮಕಾತಿ ಹಗರಣ ಹೊರಬಂದ ಬಳಿಕ ಅನೇಕ ಸರ್ಕಾರಿ ನೌಕರಿಗಳ ನೇಮಕಾತಿಯಲ್ಲಿ ನಡೆದ ಅಕ್ರಮಗಳು ಕೂಡ ಒಂದೊಂದಾಗಿಯೇ ಹೊರ ಬರ್ತಿದೆ. ಕೆಪಿಎಸ್ಸಿ ವತಿಯಿಂದ ನಡೆದಿದ್ದ ಪ್ರಥಮ ದರ್ಜೆ ಸಹಾಯಕರ ಪರೀಕ್ಷೆಗೆ ಅಭ್ಯರ್ಥಿ ಜತೆ ಡೀಲ್ ನಡೆಸಿದ್ದ ಆರೋಪ ಮೇಲೆ ಸಂಚಾರ ವಿಭಾಗದ ಪಿಎಸ್‌ಐ ಅಶ್ವಿನಿ ಅನಂತಪುರ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ಸಂಗಮೇಶ ಜಲಕಿ ಎಂಬ ಅಭ್ಯರ್ಥಿ ಜೊತೆ PSI ಅಶ್ವಿನಿ ಮಾತನಾಡುವ ಆಡಿಯೋ ಸಂಭಾಷಣೆ! ಸಾಕಷ್ಟು ವೈರಲ್‌ ಆಗಿದೆ.

ಇದಿಷ್ಟು‌ ಅಭ್ಯರ್ಥಿ ಸಂಗಮೇಶ್ ಮತ್ತು ಪಿಎಸ್‌ಐ ಅಶ್ವಿನಿ ನಡುವೆ ನಡೆದ ಆಡಿಯೋ ಸಂಭಾಷಣೆಯಾಗಿತ್ತು,  ಈ ಆಡಿಯೋವನ್ನು ಬಯಲು ಮಾಡಿದ್ದು,  ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರು. ಲಕ್ಷ್ಮಣ್‌ ಅವರು ದಾಖಲೆಗಳ ಸಮೇತ ಆರೋಪ ಮಾಡಿದದರು. ವಾಟ್ಸಾಪ್​ ಚಾಟಿಂಗ್, ಬ್ಯಾಂಕ್ ವಿವರಗಳನ್ನು ಬಹಿರಂಗಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ವಿಚಾರಣೆ ಬಾಕಿ ಇರಿಸಿ, ತಕ್ಷಣ ಜಾರಿಗೆ ಬರುವಂತೆ ಅಮಾನತು ಮಾಡಿ ಆದೇಶ ಹೊರಡಿಸಿದ್ಧಾರೆ. ಈಗ ಪಿಎಸ್‌ಐ ಅಶ್ವಿನಿ ಅಮಾನತ್ತಾಗಿದ್ದಾರೆ.

ಈ ಹಗರಣಗಳು ನೇಮಕಾತಿ ವ್ಯವಸ್ಥೆಯ ಮೇಲೆ ಉದ್ಯೋಗಾಕಾಂಕ್ಷಿಗಳ ನಂಬಿಕೆಯನ್ನೇ ಬುಡಮೇಲು ಮಾಡಲಾಗುತ್ತಿದೆ. ಹೀಗೆ ಹಗರಣಗಳು ನಡೀತಾ ಹೋದ್ರೆ ನಮಗೆ ಉದ್ಯೋಗ ಕೊಡುವವರು ಯಾರು ಎಂದು ಅಭ್ಯರ್ಥಿಗಳು ಪ್ರೀಡಂಪ್ರಾರ್ಕ್‌ ಬಳಿ ಧರಣಿಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ : ಬಿರುಗಾಳಿ ಎಬ್ಬಿಸಿದ ಬಿಟ್ ಕಾಯಿನ್ ಹಗರಣ, ಸಿಎಂ ಮೇಲೆ ತೂಗುಕತ್ತಿ

ಇನ್ನೂ ರಾಜ್ಯದಲ್ಲಿ ಕಳೆದ ಐದು ತಿಂಗಳಲ್ಲಿ ಏಳು ಹಗರಣಗಳು ನಡೆದಿವೆ. ಶಿಕ್ಷಣ ಇಲಾಖೆ, ಗೃಹ ಇಲಾಖೆ, ಕೆಪಿಎಸ್‌ಸಿ, ಕೆಪಿಟಿಸಿಎಲ್‌, ಕೆಲಸ ಮಾಡಿಕೊಡಲು ಕಮೀಷನ್‌ ಹೀಗೆ ಸಾಲು ಸಾಲು ಹಗರಣಗಳು ಬೆಳಕಿಗೆ ಬರುತ್ತಿವೆ. ಒಬ್ಬ ಅಭ್ಯರ್ಥಿಯಿಂದ 50 ಲಕ್ಷದಿಂದ 2 ಕೋಟಿಯವರೆಗೆ ಹಣವನ್ನು ಪಡೆಯಲಾಗಿದೆ ಎಂಬೆಲ್ಲ ಆರೋಪಗಳು ಕೇಳಿ ಬರ್ತಾಇವೆ. ಒಂದೊಂದು ಹುದ್ದೆಗೆ ಒಂದೊಂದು ದರವನ್ನು ನಿಗದಿ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಈ ಹಗರಣಗಳಿಂದಾಗಿ, ರಾಜ್ಯದ ಮರ್ಯಾದೆ  ಮೂರುಕಾಸಿಗೆ ಹರಾಜಾಗುತ್ತಿದೆ. 40% ಸಿಎಂ ಗೆ ಸ್ವಾಗತ ಅಂತೆಲ್ಲ ಹೊರ ರಾಜ್ಯದವರು ಸಿಎಂ ಕಾಲೆಳೆಯುತ್ತಿದ್ದಾರೆ.  ಇಷ್ಟೆಲ್ಲ ಅವಮಾನ ಆಗ್ತಾ ಇದ್ರು, ಸರಕಾರ ಮಾತ್ರ ಏನೂ ಆಗಿಯೇ ಇಲ್ಲ ಎಂಬಂತಿದೆ. ಬೇರೆಯರ ಕಾಲದಲ್ಲಿ ಆಗಿಲ್ಲವಾ? ಎಂದು ತನ್ನನ್ನು ತಾನು ಸಮರ್ಥಿಸಿಕೊಳ್ಳುತ್ತಿದೆ. ದಾಖಲೆಗಳಿದ್ದರೆ ಕೊಡಿ ಎಂದು ತಪ್ಪಿಸಿಕೊಳ್ಳುವ ಕೆಲಸ ಮಾಡುತ್ತಿದೆ. ಮಾತೆತ್ತಿದರೆ ನಮ್ಮದು ಶುದ್ಧ ಕೈ ನಾವು ತಿನ್ನಲ್ಲ, ಯಾರನ್ನು ತಿನ್ನೋಕೆ ಬಿಡಲ್ಲ ಅಂತಾ ಹೇಳಿದವರು ದಾಖಲೆ ಯಾಕೆ ಕೇಳ್ತಿದ್ದಾರೆ ಗೊತ್ತಾಗುತ್ತಿಲ್ಲ.

ಒಂದ ಹಗರಣದ ಬಗ್ಗೆ ಆರೋಪಗಳು ಬಂದಾಗ ಅದರ ಬಗ್ಗೆ ತನಿಖೆ ನಡೆಸಿ ಸಂಪೂರ್ಣವಾದ ವರದಿಯನ್ನು ಜನತೆಯ ಮುಂದೆ ಇಡಬೇಕಾದದ್ದು ರಾಜ್ಯ ಸರಕಾರದ ಜವಾಬ್ದಾರಿ ಎನ್ನುವದನ್ನು ಸರಕಾರ ಮರೆಯುತ್ತಿದೆ. ಅಧಿಕಾರಿಗಳನ್ನು ಅಮಾನತ್ತು ಮಾಡುತ್ತಿರುವುದು ಸರಿ ಆದರೆ ಆ ಅಧಿಕಾರಿ ಅಷ್ಟು ದೈರ್ಯವಾಗಿ ಹಗರಣಗಳನ್ನು ನಡೆಸುತ್ತಾರೆ ಎಂದಾದರೆ ಅದರ ಹಿಂದೆ ಯಾರದ್ದಾದರೂ ಶ್ರೀರಕ್ಷೆ ಇರಲಬೇಕು.

ಅದು ಆಡಳಿತ ಪಕ್ಷದ ನಾಯಕರಾಗಿರಲಿ, ಅಥವಾ ವಿರೋಧ ಪಕ್ಷದ ನಾಯಕರೇ ಈ ಹಗರಣದಲ್ಲಿ ಭಾಗಿಯಾಗಿರಲಿ ಅವರ ವಿರುದ್ಧ ಕ್ರಮ ಜರುಗಿಸಿ ಕೋಳ ತೊಡಿಸುವ ಕೆಲಸವನ್ನು ಸರಕಾರ ಮಾಡಬೇಕಿದೆ.  ಆ ನಿಟ್ಟಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿವರು ಯಾವ ರೀತಿ ಹೆಜ್ಜೆ ಇಡಬಹುದು ಕಾದು ನೋಡೋಣ.

 

Donate Janashakthi Media

Leave a Reply

Your email address will not be published. Required fields are marked *