– ಎಚ್.ಆರ್.ನವೀನ್ ಕುಮಾರ್, ಹಾಸನ
ಪ್ರಸ್ತುತ ಚಿತ್ರರಂಗದಲ್ಲಿ ಚರ್ಚೆಯಾಗುತ್ತಿರುವ ಒಂದು ಪ್ರಮುಖ ವಿಷಯವೆಂದರೆ ಅದು ಚಿತ್ರ ಎಷ್ಟು ಕೋಟಿಯ ಬಜೆಟ್, ಅದರ ಹಿರೋ ಯಾರು?, ಹಿರೋಯಿನ್ ಯಾರು?, ಅದರ ನಿರ್ದೇಶಕರು ಯಾರು?, ಉಳಿದದ್ದೆಲ್ಲಾ ನಂತರದ ಚರ್ಚೆ. ಆದರೆ ಇವುಗಳು ಇಲ್ಲದೆಯೇ ಕಥೆಯನ್ನೇ ತನ್ನ ನಾಯಕ ನಾಯಕಿಯನ್ನಾಗಿಸಿ ಅತ್ಯಂತ ಪ್ರಭಲ ದೃಶ್ಯ ಮಾಧ್ಯಮವಾದ ಸಿನಿಮಾ ಮೂಲಕ ಅಷ್ಟೇ ಪರಿಣಾಮಕಾರಿಯಾದ ಸಂದೇಶವನ್ನು ಸಮಾಜಕ್ಕೆ ನೀಡಲು ಪ್ರಯತ್ನಿಸಿರುವ ಒಂದು ಅತ್ಯುತ್ತಮ ಸದಭಿರುಚಿಯ ಕನ್ನಡ ಚಿತ್ರ ಹದಿನೇಳೆಂಟು.
ಕಾಲೇಜಿನಲ್ಲಿ ಓದುವ ಹದಿಹರೆಯದ ಹುಡುಗ ಹುಡುಗಿ ತಮ್ಮ ಜವಾಬ್ದಾರಿಗಳನ್ನು ಮರೆತು ಆಡುವ ಆಟಗಳು ಏನೆಲ್ಲಾ ಅವಾಂತರಗಳನ್ನು ಸೃಷ್ಠಿಸುತ್ತವೆ. ಹೆತ್ತ ತಂದೆ ತಾಯಿಗಳನ್ನು ಯಾವ ಸಂಕಷ್ಟಕ್ಕೆ ಒಳಪಡಿಸುತ್ತವೆ, ಮತ್ತು ಇಂತಹ ಸಮಸ್ಯೆಗಳನ್ನು ಸಮಾಜ ಹೇಗೆ ನೋಡುತ್ತದೆ. ಇದನ್ನು ಪರಿಹರಿಸುವಾಗ ಪರಿಗಣಿಸಲ್ಪಡುವ ನಮ್ಮ ಸಾಮಾಜಿಕ ಹಿನ್ನೆಲೆ ಅಂದರೆ ಜಾತಿಯ ಪ್ರಶ್ನೆ ಹೇಗೆ, ಯಾವಯಾವ ಹಂತಗಳಲ್ಲಿ ಕೆಲಸ ಮಾಡುತ್ತದೆ. ಜೊತೆಗೆ ಇಬ್ಬರೂ ಒಂದೇ ರೀತಿಯ ತಪ್ಪು ಮಾಡಿದ್ದರೂ ಅದನ್ನು ನೋಡುವಾಗ ಬಡವ-ಶ್ರೀಮಂತ ಮತ್ತು ಜಾತಿ ಎಷ್ಟು ಪ್ರಧಾನವಾಗುತ್ತದೆ. ಎಂಬುದನ್ನು ಅತ್ಯಂತ ಸಹಜವಾಗಿ ತೆರೆಯ ಮೇಲೆ ತರುವ ಪ್ರಾಮಾಣಿಕ ಪ್ರಯತ್ನವನ್ನು ನಿರ್ದೇಶಕರಾದ ಪೃಥ್ವಿ ಕೊಣನೂರು ಮಾಡಿದ್ದಾರೆ.
ಇದನ್ನೂ ಓದಿ : ನಾಟಕ ವಿಮರ್ಶೆ | “ಗೋರ್ ಮಾಟಿ”
ಇವರು ನಿರ್ದೇಶಿಸಿದ್ದ ‘ಪಿಂಕಿ ಎಲ್ಲಿ’ ಸಿನಿಮಾವೂ ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನು ಕೊಡುವ ಸಿನಿಮಾವಾಗಿತ್ತು. ಎಷ್ಟೇ ಕಷ್ಟಪಟ್ಟು ಉತ್ತಮ ಕಥೆ ಮಾಡಿ, ಕ್ರೌಡ್ ಫಂಡಿಂಗ್ ಮಾಡಿ ಸಿನಿಮಾ ಮಾಡಿದರೂ ಅದನ್ನು ಇಂದಿನ ಸಿನಿಮಾ ಮಾರುಕಟ್ಟೆಯಲ್ಲಿ ಪ್ರದರ್ಶಿಸಲು ಸ್ಥಳಾವಕಾಶ ಸಿಗುವುದಿಲ್ಲ. ಇನ್ನು ಮಾರಾಟವಾಗುವ ಪ್ರಶ್ನೆ ದೂರವೇ ಆಯ್ತು. ಈ ಮಾರುಕಟ್ಟೆಯ ಮಾನದಂಡವೇ ಬೇರೆ.
ಎಲ್ಲೆಡೆ ಪ್ರಯತ್ನಿಸಿ ಚಪ್ಪಲಿ ಸವೆಸಿ ಅಂತಿಮವಾಗಿ ತನ್ನ ಕನಸಿ ಕೂಸನ್ನ ಯೂಟ್ಯೂಬ್ ನಲ್ಲಿ ಬಿಡುವ ತೀರ್ಮಾನಕ್ಕೆ ಬಂದಿರುವ ಪೃಥ್ವಿ ಕೊಣನೂರು ಅಂತಹ ನಿರ್ದೇಶಕರುಗಳಿಗೆ ಅವಕಾಶಗಳು ದೊರೆಯಬೇಕು. ಮಾತ್ರವಲ್ಲ ಮಾರುಕಟ್ಟೆಯಲ್ಲಿ ಸೋತ ನಿನಿಮಾವನ್ನ ಜನ ಗೆಲ್ಲಿಸಬೇಕಿದೆ.
ಹದಿನೇಳೆಂಟು ಸಿನಿಮಾವನ್ನು ರಾಜ್ಯದ ಎಲ್ಲಾ ಕಾಲೇಜುಗಳಲ್ಲಿ ಪ್ರದರ್ಶಿಸುವಂತಾಗಬೇಕು. ಇದರಿಂದ ಇಂದಿನ ಯುವ ಪೀಳಿಗೆ ತಮಗೇ ಅರಿವಿಲ್ಲದಂತೆ ಮೈಗೂಡಿಸಿಕೊಂಡಿರುವ ತಪ್ಪು ತಿಳುವಳಿಕೆಗಳನ್ನು ತಿದ್ದಿಕೊಳ್ಳಲು ಸಾಧ್ಯವಾಗುತ್ತದೆ. ಮಾತ್ರವಲ್ಲ ಸಮಾಜದಲ್ಲಿ ಅಂಟಿರುವ ಜಾತಿ ತಾರತಮ್ಯದ ಪ್ರಶ್ನೆಗೆ ತಿಳುವಳಿಕೆ ನೀಡಲು ಸಾಧ್ಯವಾಗುತ್ತದೆ.
ಈ ಲಿಂಕ್ ಬಳಸಿ ಸಿನಿಮಾ ನೋಡಿ, ಪ್ರೋತ್ಸಾಹಿಸಿ : ಹದಿನೇಳೆಂಟು