ವರದಿ: ಕರಡಿಗೋಡು ಕೃಷ್ಣ.
ಕೊಡಗು : ಕರೆಂಟ್ ಇಲ್ಲದಿದ್ದರೂ ಕರೆಂಟ್ ಬಿಲ್ ತಪ್ಪದೆ ಬರುತ್ತೆ, ಒಂದಲ್ಲ, ಎರಡಲ್ಲ ಬರೋಬ್ಬರಿ ಸಾವಿರ ಸಾವಿರ ರೂಪಾಯಿ. ಈ ಗ್ರಾಮಕ್ಕೆ ವಿದ್ಯುತ್ ಸಂಪರ್ಕವನ್ನೇ ಕಲ್ಪಿಸಿಲ್ಲ. ಆದರೂ 39 ಫಲಾನುಭವಿಗಳಿಗೂ ಪ್ರತೀ ತಿಂಗಳು ಕನಿಷ್ಠ 800 ರೂಪಾಯಿಯಿಂದ ಸಾವಿರಾರು ರೂಪಾಯಿ ಬಿಲ್ ಬರುತ್ತೆ. ಅದು ಹೇಗೆ ಅಂತೀರಾ, ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಹಾಡಿಜನ ಕರೆಂಟ್ ಬಳಸದೆ ಬಿಲ್ ಕಟ್ಟುವ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.
ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನಲ್ಲಿ. ಚೆನ್ನಯ್ಯನ ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡರೇಷ್ಮೆ, ಚಿಕ್ಕರೇಷ್ಮೆ, ದಿಡ್ಡಳ್ಳಿ, ಕೆಸವಿನಕೆರೆ ಸೇರಿದಂತೆ 7 ಕ್ಕೂ ಹೆಚ್ಚು ಹಾಡಿಗಳ ಆದಿವಾಸಿ ಬುಡಕಟ್ಟು ಸಮುದಾಯದ 39 ಫಲಾನುಭವಿಗಳಿಗೆ ಇಂತಹ ದುಃಸ್ಥಿತಿ ಎದುರಾಗಿದೆ.
ಕೆಸವಿನಕೆರೆಯ ಮೋಟ ಎಂಬ ಫಲಾನುಭವಿಗೆ ಇದೀಗ 9216 ರೂಪಾಯಿ ಒಟ್ಟು ವಿದ್ಯುತ್ ಶುಲ್ಕ ಬಾಕಿ ಇದ್ದು ನಿತ್ಯ ಕೂಲಿ ಕೆಲಸ ಮಾಡಿ ಬದುಕುವ ಆದಿವಾಸಿ ಸಮುದಾಯದ ಮೋಟ ಅವರಿಗೆ ಇದನ್ನು ಬರಿಸುವುದಾದರೂ ಹೇಗೆ ಎನ್ನೋ ಚಿಂತೆ ಎದುರಾಗಿದೆ. ಇದೇ ಹಾಡಿಯ ಮತ್ತೊಬ್ಬ ಮಲ್ಲ ಎಂಬುವರ ಸ್ಥಿತಿಯೂ ಇದೆ. ಮಲ್ಲ ಅವರಿಗೆ ಬರೋಬ್ಬರಿ 11302 ರೂಪಾಯಿ ವಿದ್ಯುತ್ ಬಿಲ್ಲು ಬಂದಿದೆ. ದಿಡ್ಡಳ್ಳಿಯ ಮುತ್ತಮ್ಮ ಎಂಬುವರಿಗೂ 10620 ರೂಪಾಯಿ ವಿದ್ಯುತ್ ಬಿಲ್ಲು ಬಂದಿದೆ.
ವಿದ್ಯುತ್ ಸಂಪರ್ಕವೇ ಇಲ್ಲ ಅಂದ ಮೇಲೆ ಬಿಲ್ ಹೇಗೇ ಬರುತ್ತೆ ಅಂತೀರಾ, ಅಸಲಿ ಕಥೆ ಬೇರೆಯೆ ಇದೆ. ದಲಿತ, ಹಿಂದುಳಿದ ರೈತರ ಅಭಿವೃದ್ಧಿಗೆಂದೇ ರಾಜ್ಯದಲ್ಲಿ ಗಂಗಾ ಕಲ್ಯಾಣ ಯೋಜನೆ ಜಾರಿಗೆ ತರಲಾಗಿದೆ. ಅರ್ಹ ಫಲಾನುಭವಿಗಳನ್ನು ಗುರುತಿಸಿ ಮೂರು ವರ್ಷಗಳ ಹಿಂದೆಯೇ ಕೊಳವೆ ಬಾವಿ ಕೊರೆಯಲಾಗಿದೆ. ನಾಮಕಾವಸ್ಥೆಗೆ ಮೋಟರ್ ಇಳಿಸಲಾಗಿದ್ದು, ವಿದ್ಯುತ್ ಸಂಪರ್ಕವನ್ನೇ ಕಲ್ಪಿಸಿಲ್ಲ. ಆದರೂ 39 ಫಲಾನುಭವಿಗಳಿಗೂ ಪ್ರತೀ ತಿಂಗಳು ಕನಿಷ್ಠ 600 ರೂಪಾಯಿಯಿಂದ 1 ಸಾವಿರ ರೂಪಾಯಿ ಬಿಲ್ ಬರುತ್ತಿದೆ. ಕಳೆದ ಮೂರು ವರ್ಷಗಳಿಂದ ಇದೇ ರೀತಿಯಾಗಿದ್ದು ಇದೀಗ ಬಿಲ್ಲಿನ ಮೊತ್ತ 9 ರಿಂದ 11 ಸಾವಿರಕ್ಕೆ ಬಂದು ನಿಂತಿದೆ. ಇದು ‘ನಾವು ಏತಕ್ಕಾದರೂ ಸರ್ಕಾರದ ಸೌಲಭ್ಯವನ್ನು ಪಡೆದುಕೊಂಡೆವೋ’ ಎಂದು ಗಂಗಾಕಲ್ಯಾಣ ಯೋಜನೆಯ ಫಲಾನುಭವಿ ಜೆ.ಕೆ ಮುತ್ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ವಿದ್ಯುತ್ ಸಂಪರ್ಕವೇ ಇಲ್ಲದಿದ್ದರೂ ವಿದ್ಯುತ್ ಬಿಲ್ಲು ಕೊಡುತ್ತಿರುವುದು ಹಾಡಿಗಳ ಜನರನ್ನು ಸಿಟ್ಟಿಗೇಳುವಂತೆ ಮಾಡಿದೆ. ಮೂರು ವರ್ಷದ ಹಿಂದೆ ಯೋಜನೆಯ ಫಲಾನುಭವಿಗಳನ್ನು ಆಯ್ಕೆ ಮಾಡಿ ಕೊಳವೆ ಬಾವಿಗಳನ್ನು ಕೊರೆಯಲಾಗಿತ್ತು. ಕೆಲವು ತಿಂಗಳಲ್ಲೇ ಮೋಟರ್ ಅಳವಡಿಸಲಾಯಿತು. ಅದು ಬಿಟ್ಟರೆ ಇದುವರೆಗೆ ವಿದ್ಯುತ್ ಲೈನ್ ಎಳೆದಿಲ್ಲ, ಮೀಟರ್ ಬೋರ್ಡ್ ಕೂಡ ಅಳವಡಿಸಿಲ್ಲ. ಒಂದೆರಡು ಎಕರೆ ಜಮೀನು ಹೊಂದಿರುವ ನಾವು ನೀರಾವರಿ ವ್ಯವಸ್ಥೆಯಾದಲ್ಲಿ ಏನಾದರೂ ಬೆಳೆಗಳನ್ನು ಬೆಳೆದು ನಮ್ಮ ಬದುಕನ್ನು ಉತ್ತಮಪಡಿಸಿಕೊಳ್ಳೋಣ ಎಂಬ ನಿರೀಕ್ಷೆಯಲ್ಲಿದ್ದವರಿಗೆ ಅಧಿಕಾರಿಗಳು ಮತ್ತು ಸರ್ಕಾರಗಳು ಸೇರಿ ಗಾಯದ ಮೇಲೆ ಬರೆ ಎಳೆದಂತೆ ಮಾಡಿದ್ದಾರೆ. ನಮ್ಮನ್ನು ಮುಖ್ಯವಾಹಿನಿಗೆ ತರುತ್ತೇವೆ ಎಂದು ಇಂತಹ ಶಿಕ್ಷೆ ಕೊಡುತ್ತಿರುವುದು ಸರಿಯೇ ಎಂದು ಸಿದ್ದಪ್ಪ ಪಿಕೆ ಪ್ರಶ್ನಿಸಿದ್ದಾರೆ.
ಇನ್ನಾದರೂ ಸರಕಾರ ಇಂತಹ ಅವಘಡಗಳನ್ನು ನಿಲ್ಲಿಸಿ, ಹಾಡಿ ಜನರ ಹಕ್ಕುಗಳನ್ನು ಕಾಪಾಡಬೇಕಿದೆ. ಮೂರು ವರ್ಷದಿಂದ ಕಟ್ಟಿರುವ ವಿದ್ಯುತ್ ಬಿಲ್ ನ್ನು ಹಾಡಿ ಜನರಿಗೆ ವಾಪಸ್ ನೀಡಬೇಕು. ಹಾಗೂ ಕೂಡಲೆ ಈ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಮುಂದಾಗಬೇಕಿದೆ.