ಮೈಸೂರು: ಶಾಸಕಾಂಗ ಹಾಗೂ ಕಾರ್ಯಾಂಗದಲ್ಲಿ ಉನ್ನತವಾದ ಸ್ಥಾನವನ್ನು ಅಲಂಕರಿಸಿಕೊಂಡಿರುವವವರ ನಡುವಿನ ಆರೋಪ ಪ್ರತ್ಯಾರೋಪಗಳ ಬಗ್ಗೆ ದಿನಕ್ಕೊಂದು ಘಟನೆಗಳು ವ್ಯಕ್ತವಾಗುತ್ತಿರುವಾಗಲೇ, ಮೈಸೂರು ಜಿಲ್ಲೆಯಿಂದ ಈಗಷ್ಟೇ ವರ್ಗಾವಣೆಗೊಂಡಿರುವ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಭೂ ಅಕ್ರಮಗಳ ತನಿಖೆಯನ್ನು ಕೈಗೊಳ್ಳಲು ವಿಶೇಷಾಧಿಕಾರಿಯನ್ನಾಗಿ ನೇಮಕ ಮಾಡಬೇಕೆಂದು ಬಿಜೆಪಿ ಪಕ್ಷದ ವಿಧಾನ ಪರಿಷತ್ ಸದಸ್ಯರಾದ ಎಚ್ ವಿಶ್ವನಾಥ್ ಅವರು ಹೇಳಿದ್ದಾರೆ.
ಇಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಎಚ್ ವಿಶ್ವನಾಥ್ ಅವರು ʻʻಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಮೈಸೂರು ನಗರದ ಆಸುಪಾಸುಗಳಲ್ಲಿ ನಡೆದಿರುವ ಭೂ ಅಕ್ರಮಗಳ ದಾಖಲೆಗಳನ್ನು ಪರಿಶೀಲಿಸಿ ಕೆಲವೊಂದು ಆದೇಶಗಳನ್ನು ಮಾಡಿದ್ದಾರೆ. ಆದರೆ ಇದಷ್ಟೇ ಅಲ್ಲ, ಇನ್ನೂ ಅನೇಕ ಕಡೆಗಳಲ್ಲಿ ಭೂ ಅಕ್ರಮ ಆಗಿದೆ. ಹಾಗಾಗಿ ಈ ಎಲ್ಲಾ ಅಕ್ರಮಗಳ ತನಿಖೆಯಾಗಬೇಕಾಗಿದ್ದು, ಅದಕ್ಕೆ ರೋಹಿಣಿ ಸಿಂಧೂರಿ ಅವರನ್ನೇ ವಿಶೇಷಾಧಿಕಾರಿಯನ್ನಾಗಿ ನೇಮಕ ಮಾಡಬೇಕು ಎಂದು ಮನವಿ ಪತ್ರವನ್ನು ಸಲ್ಲಿಸುವ ಮೂಲಕ ಒತ್ತಾಯಿದ್ದಾರೆ.
ಇದನ್ನು ಓದಿ: ಸಿನಿಮಾ ಆಗುತ್ತಿದೆ ರೋಹಿಣಿ ಸಿಂಧೂರಿ ಬಯೋಪಿಕ್
ನಾನು ಮೈಸೂರಿನವನೇ ಆಗಿದ್ದು, ಮೂಲತಃ ವಕೀಲಿಕೆ ಅನುಭವವಿರುವವನು ಇದೇ ಜಿಲ್ಲೆಯವನಾಗಿ ನಾನು ಹೇಳುವುದು ಮೈಸೂರು ಸಾಂಸ್ಕೃತಿಕ, ಪರಂಪರೆ ಇರುವ ಜಿಲ್ಲೆ. ಅಂತಹುದರಲ್ಲಿ ಇಂದು ರಾಜಕಾರಣಿಗಳು ಮೈಸೂರಿನ ಸಾಂಸ್ಕೃತಿಕ ಆಡಳಿತವನ್ನು ಹಾಳು ಮಾಡುತ್ತಿದ್ದಾರೆ. ಕೊರೋನಾ ಓಡಿಸಿ ಎಂದರೆ ಇಲ್ಲಿನ ರಾಜಕಾರಣಿಗಳು ತಮ್ಮ ಸ್ವ ಹಿತಾಸಕ್ತಿಗೆ ಜಿಲ್ಲಾಧಿಕಾರಿಗಳನ್ನೇ ಓಡಿಸಿಬಿಟ್ಟಿದ್ದಾರೆ. ಎಂದ ಅವರು ಜಿಲ್ಲಾಧಿಕಾರಿಗೆ ಸಲ್ಲಿದ ಮನವಿಯಲ್ಲಿ ಮೈಸೂರಿನಲ್ಲಿ ನಡೆದಿರುವ ಭೂ ಅಕ್ರಮದ ಬಗ್ಗೆ ಮಾಡಿರುವ ಆದೇಶಗಳ ತುರ್ತು ನಿಗದಿತ ಸಮಯದಲ್ಲಿ ಜಾರಿಗೊಳಿಸಬೇಕು ಎಂದು ತಿಳಿಸಿದ್ದಾರೆ.
ಉತ್ತಮ ಅಧಿಕಾರಿಯಾಗಿ ಕಾರ್ಯನಿವರ್ಹಿಸುತ್ತಿದ್ದ ರೋಹಿಣಿ ಸಿಂಧೂರಿ ಅವರು ಮೈಸೂರಿನಲ್ಲಿ ನಡೆದಿರುವ ಭೂ ಅಕ್ರಮಗಳ ಬಗ್ಗೆ ತನಿಖೆ ನಡೆಸುತ್ತಿರುವ ವೇಳೆ ಕೆಲವರು ಷಡ್ಯಂತ್ರ ಮಾಡಿ ಅವರನ್ನು ವರ್ಗಾವಣೆ ಮಾಡಿಸಿದ್ದಾರೆ. ಸದ್ಯ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಾಗಿರುವ ರೋಹಿಣಿ ಸಿಂಧೂರಿ ಅವರ ವ್ಯಾಪ್ತಿಗೆ ಮೈಸೂರಿನ ಚಾಮುಂಡಿ ಬೆಟ್ಟವು ಒಳಪಡಲಿದೆ. ಚಾಮುಂಡಿ ಬೆಟ್ಟದ ಸುತ್ತಲೂ ಭೂ ಅಕ್ರಮ ನಡೆದಿರುವ ಬಗ್ಗೆ ಸಾಕಷ್ಟು ಅನುಮಾನಗಳಿವೆ. ಮೈಸೂರಿನ ಭೂ ಅಕ್ರಮಗಳ ಬಗ್ಗೆ ಅವರಿಗೆ ಅರಿವಿರುವುದರಿಂದ ಅವರನ್ನೇ ವಿಶೇಷಾಧಿಕಾರಿಯನ್ನಾಗಿ ನೇಮಿಸಿ ತನಿಖೆ ಮಾಡಬೇಕೆಂದು ಹೇಳಿದರು. ಸುಪ್ರೀಂ ಕೋರ್ಟ್ ಆದೇಶದನ್ವಯ ಬಫರ್ ಜೋನ್ ಇರುವ ಕಡೆ ಯಾವುದೇ ಮನೆ ಕೈಗಾರಿಕೆ ಬರುವಂತಿಲ್ಲ. ಇಲ್ಲಿ ಬಫರ್ ಜೋನ್‌ನಲ್ಲಿ ಅಕ್ರಮ ನಡೆಸಲಾಗುತ್ತಿದೆ. ಇದರ ಬಗ್ಗೆ ನಿಗದಿತ ಅವಧಿಯಲ್ಲಿ ಕ್ರಮಕೈಗೊಳ್ಳಬೇಕಿದೆ ಎಂದರು.
ಇದನ್ನು ಓದಿ: ನನ್ನ ವರ್ಗಾವಣೆ ಹಿಂದೆ ಭೂಮಾಫಿಯಾ ಪಿತೂರಿ ಇದೆ – ರೋಹಿಣಿ ಸಿಂಧೂರಿ
ಈ ಸಂಬಂಧ ಶೀಘ್ರದಲ್ಲಿ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ ಮತ್ತು ಕಂದಾಯಾಧಿಕಾರಿಗಳಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದರು. ಈಗ ರಿಯಲ್ ಎಸ್ಟೇಟ್ ಇಂಡಸ್ಟ್ರಿಯಾಗಿದೆ. ಸಾ.ರಾ ಮಹೇಶ್ ಯಾವ ಇಂಡಸ್ಟ್ರಿಲಿಯಸ್ಟ್. ಮುಡಾ ಅಧ್ಯಕ್ಷ ಯಾವ ಇಂಡಸ್ಟ್ರಿ ಮಾಡಿದ್ದಾರೆ. ಎಷ್ಟು ಜನಕ್ಕೆ ಉದ್ಯೋಗ ನೀಡಿದ್ದಾರೆ ಎಂದು ಪ್ರಶ್ನಿಸಿದ ಅವರು, ಶಿಲ್ಪಾನಾಗ್ ಇಲ್ಲಿ ಬಲಿಪಶುವಾಗಿದ್ದಾರೆ ಎಂದು ಹೇಳಿದರು.
ರಾಜ ಕಾಲುವೆ ಮೇಲೆ ಕಲ್ಯಾಣ ಮಂಟಪ ನಿರ್ಮಾಣ ಆಗಿದೆ. ಒಂದು ಗುಂಟೆ ಅಲ್ಲ ಸಾವಿರಾರು ಎಕರೆ ಹೋಗಿದೆ. ಎಲ್ಲಾ ಜನಪ್ರತಿನಿಧಿಗಳು ಒಟ್ಟಾಗಿ ಸೇರಿ ಕೊರೊನಾ ಓಡಿಸುವ ಬದಲು ಐಎಎಸ್ ಅಧಿಕಾರಿಯನ್ನು ಓಡಿಸಿದರು. ಸಾ.ರಾ.ಚೌಲ್ಟ್ರಿಯೂ ಸಹ ರಾಜಕಾಲುವೆ ಮೇಲೆ ನಿರ್ಮಾಣ ಮಾಡಲಾಗಿದೆ ಎಂದು ರೋಹಿಣಿ ಆದೇಶ ಮಾಡಿದ್ದಾರೆ. ಹಾಗಿದ್ದ ಮೇಲೆ ಸಾ.ರಾ.ಮಹೇಶ್ ಪತ್ನಿಗೆ ಈ ಜಾಗ ಹೇಗೆ ಬಂತು ಎಂಬುದನ್ನು ತಿಳಿಸಬೇಕು ಎಂದು ಆಗ್ರಹಿಸಿದರು. ಸಾ.ರಾ.ಮಹೇಶ್ ದಿಢೀರ್ ಎಂದು ಇಷ್ಟು ದೊಟ್ಟ ಮಟ್ಟಕ್ಕೆ ಬೆಳೆಯಲು ಇವರೇನು ಕೈಗಾರಿಕೆ ನಡೆಸುತ್ತಿದ್ದಾರಯೇ ಎಂದ ಅವರು, ಸಾ.ರಾ.ಮಹೇಶ್, ರಾಜೀವ್ ಸೇರಿದಂತೆ ಅನೇಕರೆಲ್ಲರೂ ರಿಯಲ್ ಎಸ್ಟೇಟ್ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.