ಬೆಂಗಳೂರು :ರಂಗ ಸಂಘಟಿಕ, ಚಿಂತಕ, ನಿವೃತ್ತ ಪ್ರಾಂಶುಪಾಲ ಎಚ್. ವಿ.ವೇಣುಗೋಪಾಲ್ ರವರು ಇಂದು ತೀವ್ರ ಹೃದಯಾಘಾತದಿಂದ ಬೆಂಗಳೂರಿನ ಸ್ವ ಗೃಹದಲ್ಲಿ ನಿಧನರಾಗಿದ್ದಾರೆ.
ಬೆಂಗಳೂರಿನ ಪ್ರತಿಷ್ಟಿತ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಬಹಳ ಕಾಲ ಉಪನ್ಯಾಸಕರಾಗಿ ಮತ್ತು ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ಸಮುದಾಯ ಸಾಂಸ್ಕೃತಿಕ ಸಂಘಟನೆಯಲ್ಲಿ ಸಕ್ರಿಯರಾಗಿದ್ದ ಅವರು ಸಮುದಾಯ ವಾರ್ತಾಪತ್ರದ ಜವಾಬ್ದಾರಿ ವಹಿಸಿಕೊಂಡು ನಡೆಸಿದ್ದರು. ಗೌರಿಬಿದನೂರಿನಲ್ಲಿ ಸಮುದಾಯ ಘಟಕದ ಆರಂಭಕ್ಕೆ ಅವರು ಕಾರಣಕರ್ತರಾಗಿದ್ದವರು. ಸಂಸ್ಕೃತ ಪ್ರಾಧ್ಯಾಪಕರಾಗಿದ್ದ ಅವರು ನಾಟಕಗಳನ್ನು ರಚಿಸಿದ್ದರು. ಸಿನಿಮಾದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಅವರು ಮನೆಯಲ್ಲಿ ಸಿನಿಮಾ ಪ್ರದರ್ಶನ ಚರ್ಚೆಗಳನ್ನು ಆಯೋಜಿಸುತ್ತ ಎಲ್ಲರಿಗೂ ಸಿನಿಮಾ ಆಸಕ್ತಿ ಮೂಡಿಸಿದವರು.
ಎಡ ಪ್ರಗತಿಪರ ಚಿಂತನೆಯನ್ನು ಹೊಂದಿದ್ದ ಅವರ ಹಠಾತ್ ನಿಧನಕ್ಕೆ ಸಮುದಾಯ ಕರ್ನಾಟಕ ಕಂಬನಿ ಮಿಡಿದಿದೆ. ಅನೇಕ ಗಣ್ಯರು ಇವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಡಾ. ಹೆಚ್ ವಿ ವೇಣುಗೋಪಾಲ್ ನಿಧನಕ್ಕೆ ಸಿನೆಮಾ ವಿಮರ್ಶಕ, ಚಿಂತಕ ಮುರಳಿ ಕೃಷ್ಣ ಕಂಬನಿ ಮಿಡಿದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ನಾವು ನಿಕಟ ಗೆಳೆಯರಾಗಿದ್ದೆವು. ಅವರು ನ್ಯಾಷನಲ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸುಮಾರು ಐದು ವರ್ಷಗಳ ಹಿಂದೆ ನಿವೃತ್ತರಾದರು. ಸಂಸ್ಕೃತದ ಪ್ರಾಧ್ಯಾಪಕರಾಗಿದ್ದರು. ನಿವೃತ್ತರಾದ ತರುವಾಯ ತಮ್ಮ ಮನೆಯ ಬೇಸ್ಮೆಂಟಿನಲ್ಲಿ ‘ಉನ್ನತಿ’ ಸಾಂಸ್ಕೃತಿಕ ಕೇಂದ್ರವನ್ನು ಸ್ಥಾಪಿಸಿ, ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿದರು. ಒಂದರ್ಥದಲ್ಲಿ, ನಮ್ಮೀರ್ವರ ಸ್ನೇಹವನ್ನು ಬೆಸೆದಿದ್ದು ನಮಗಿರುವ ಚಲಪಚಿತ್ರಗಳ ಬಗೆಗಿನ ತೀವ್ರಾಸಕ್ತಿ ಎಂದು ವೇಣುಗೋಪಾಲ್ ರವರ ಒಡನಾಟವನ್ನು ಸ್ಮರಸಿಕೊಂಡಿದ್ದಾರೆ.
‘ಉನ್ನತಿ’ಯಲ್ಲಿ ಪ್ರತಿ ಶನಿವಾರ ಚಲನಚಿತ್ರವನ್ನು ತೋರಿಸುತ್ತಿದ್ದರು. ಇದಕ್ಕೆ ಮತ್ತು ಇತರ ಕಾರ್ಯಕ್ರಮಗಳಿಗೆ ಅಪಾರ ಮೊತ್ತದ ತಮ್ಮ ಸ್ವಂತ ಹಣವನ್ನು ಬಳಸಿ ಸುಸಜ್ಜಿತವಾದ ಸಣ್ಣ ಸಭಾಂಗಣವನ್ನು ಕಟ್ಟಿಸಿದ್ದರು. ಅವರಿಗೆ ಒಳ್ಳೆಯ ಸಿನಿಮಾ ಸಂಸ್ಕೃತಿಯನ್ನು ಬೆಳೆಸಬೇಕೆಂಬ ಆಶಯವಿತ್ತು; ಈ ನಿಟ್ಟಿನಲ್ಲಿ, ಅರ್ಥಪೂರ್ಣ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು.
ಸುಮಾರು ನಾಲ್ಕು ದಶಕಗಳಿಗೂ ಹೆಚ್ಚು ಸಮಯ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ಅನೇಕ ನಾಟಕಗಳನ್ನು ನಿರ್ದೇಶಿಸಿದ್ದರು. ಸಮುದಾಯ ಸಂಘಟನೆಗೂ ಶ್ರಮಿಸಿದ್ದರು. ಪ್ರಸ್ತುತ ಅವರು ಬೆಂಗಳೂರಿನ ಸುಚಿತ್ರಾ ಫಿಲ್ಮ್ ಸೊಸೈಟಿಯ ಕಾರ್ಯಕಾರಿ ಸಮಿತಿಯಲ್ಲಿ ನನ್ನ ಸಹವರ್ತಿಯಾಗಿದ್ದರು. ಅನೇಕ ಸಮಾಜಮುಖಿ, ವೈಚಾರಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು.
ಅವರ ಅಕಾಲಿಕ ಮರಣ ನನ್ನನ್ನು ಗಾಢವಾಗಿ ಅಲುಗಾಡಿಸಿದೆ. ಅವರಿಗೆ ಭಾವಪೂರ್ಣ ನಮನಗಳು.ಅವರ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ಮುರಳಿ ಕೃಷ್ಣ ಫೆಸ್ಬುಕ್ ನಲ್ಲಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.