ರೈತರ ಸಮಸ್ಯೆಗಳ ಪರಿಹಾರಕ್ಕೆ ಪ್ರಧಾನಿಗೆ ಪತ್ರ ಬರೆದ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ

ಬೆಂಗಳೂರು: ಕೊರೊನಾ ವೈರಸ್‌ನ ಸಂಕಷ್ಟದಿಂದಾಗಿ ಕೃಷಿ ಉತ್ಪನ್ನಗಳ ಬೆಲೆ ತೀವ್ರವಾಗಿ ಕುಸಿತ ಕಂಡಿದೆ. ಹೀಗಾಗಿ ರೈತರ ನೆರವಿಗೆ ಧಾವಿಸಬೇಕೆಂದು ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಪತ್ರವೊಂದನ್ನು ಬರೆದಿದ್ದಾರೆ.

ಇದನ್ನು ಓದಿ: ಮೇ 26ರ ರೈತರ ಪ್ರತಿಭಟನೆಗೆ 12 ಪ್ರತಿಪಕ್ಷಗಳ ಬೆಂಬಲ

ಭಾರತದಲ್ಲಿ ಕೊರೊನಾ ಸಾಂಕ್ರಾಮಿಕ ರೋಗದ ಪರಿಣಾಮವಾಗಿ ದೇಶದೆಲ್ಲೆಡೆ ದೊಡ್ಡ ಸಮಸ್ಯೆಯಾಗಿದ್ದು ಕೇಂದ್ರ, ರಾಜ್ಯ ಹಾಗೂ ಸ್ಥಳೀಯ ಆಡಳಿತಗಳ ಸಂಪೂರ್ಣವಾಗಿ ಗಂಭೀರವಾಗಿ ಗಮನಹರಿಸಬೇಕಾದ ಅನಿವಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇಂಥ ಪರಿಸ್ಥಿಯಲ್ಲಿ ಅದು ಅನಿವಾರ್ಯವೂ ಆಗಿದೆ. ಇದೇ ಸಂದರ್ಭದಲ್ಲಿ ಗ್ರಾಮೀಣ ಭಾಗದ ಜನರಿಗೆ ಮತ್ತೊಂದು ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು ಮುಂದಿನ ಕೆಲ ತಿಂಗಳುಗಳಲ್ಲಿ ಇದು ದೊಡ್ಡ ಸಮಸ್ಯೆಯಾಗಿ ಕಾಡಲಿದೆ. ಗ್ರಾಮೀಣ ಭಾಗದಲ್ಲಿ ಕೊರೊನಾ ವೈರಸ್ ಕಾಡುತ್ತಿರುವಂತೆಯೇ ತೋಟಗಾರಿಕಾ ಉತ್ಪನ್ನಗಳ ಬೆಲೆ ಕುಸಿತ ಪರಿಣಾಮವಾಗಿ ಎರಡೆರಡು ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂದಿದೆ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಈ ಪತ್ರದಲ್ಲಿ ತಿಳಿಸಿದ್ದಾರೆ.

ಕೃಷಿ ಉತ್ಪನ್ನಗಳಿಗೆ ಬೆಲೆ ಕುಸಿತದಿಂದಾಗಿ ರೈತರು ಬೆಳೆದ ತಮ್ಮ ಬೆಳೆಗಳನ್ನು ನಾಶಪಡಿಸುತ್ತಿರುವ ವಿಚಾರವನ್ನು ದೇವೇಗೌಡರು ಪತ್ರದಲ್ಲಿ ಬರೆದಿದ್ದಾರೆ. ಕರ್ನಾಟಕದ ಕೋಲಾರದಲ್ಲಿ ಟೊಮೆಟೋ ಬೆಳೆಗಾರರು ಉತ್ತಮ ಬೆಲೆ ದೊರೆಯದ ಕಾರಣ ರಸ್ತೆಗೆ ಚೆಲ್ಲಿರುವ ಘಟನೆಯನ್ನು ಈ ಪತ್ರದಲ್ಲಿ ವಿವರಿಸಿದ್ದಾರೆ. ಅದೇ ರೀತಿಯಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿಯೂ ಇದೇ ರೀತಿಯ ಸಂಕಷ್ಟಗಳನ್ನು ರೈತರು ಅನುಭವಿಸುತ್ತಿರುವ ಬಗ್ಗೆ ಪತ್ರದಲ್ಲಿ ತಿಳಿಸಿದ್ದಾರೆ.

ಇದನ್ನು ಓದಿ: ರೈತ ಕಿಸಾನ್ ಮೋರ್ಚಾ ಹೋರಾಟಕ್ಕೆ ಕೂಲಿಕಾರ ಸಂಘಟನೆ ಬೆಂಬಲ

ಕೊರೊನಾ ವೈರಸ್‌ನ ಕಾರಣದಿಂದಾಗಿ ಲಾಕ್‌ಡೌನ್ ಮಾಡಿರುವ ಕಾರಣದಿಂದಾಗಿ ಸಂಪರ್ಕಗಳು ಕಡಿತವಾಗಿದೆ. ಇದು ಕೃಷಿ ಮಾರುಕಟ್ಟೆಗಳ ಮೇಲೆಯೂ ಗಾಢ ಪರಿಣಾಮ ಬೀರಿದೆ. ಹಾಗಾಗಿ ರೈತರು ಬೆಳೆದ ಬೆಳೆಗಳಿಗೆ ಬೆಲೆ ದೊರೆಯದೆ ನಷ್ಟವಾಗುತ್ತಿದೆ. ಇನ್ನು ಈ ಎಲ್ಲಾ ಕೃಷಿ ಉತ್ಪನ್ನಗಳು ಕೊಳೆತು ಹೋಗಬಲ್ಲವಾದರಿಂದ ಸಂಗ್ರಹಿಸಿಡಲು ಶೀತಲ ಘಟಕಗಳ ವ್ಯವಸ್ಥೆಯೂ ಇಲ್ಲವಾಗಿದೆ. ಅದೇ ರೀತಿ ಇವುಗಳಿಗೆ ಕನಿಷ್ಠ ಬೆಂಬಲ ವ್ಯವಸ್ಥೆಗೂ ಒಳಪಡುತ್ತಿಲ್ಲ ಎಂದು ರೈತರು ಅನುಭವಿಸುತ್ತಿರುವ ಸವಾಲುಗಳನ್ನು ದೇವೇಗೌಡರು ಪತ್ರದಲ್ಲಿ ತೆರೆದಿಟ್ಟಿದ್ದಾರೆ.

ಇದೇ ಸಂದರ್ಭದಲ್ಲಿ ರೈತರಿಗೆ ನೆರವಾಗಲು ಕೆಲ ಸಲಹೆಗಳನ್ನು ನೀಡುವ ದೇವೇಗೌಡರು ರೈತರು ಎದುರಿಸುತ್ತಿರುವ ಸಮಸ್ಯೆಗೆ ಸೂಕ್ತವಾಗಿ ಸ್ಪಂದಿಸದಿದ್ದರೆ ಕೊರೊನಾ ಸಾಂಕ್ರಾಮಿಕ ರೋಗದಿಂದ ಪಾರಾದರು ಕೂಡ ಬದುಕು ಸಾಗಿಸಲು ಏನೂ ಇಲ್ಲದಂತಾ ಪರಿಸ್ಥಿತಿ ಉಂಟಾಗಬಹುದು ಎಂದು ಪತ್ರದಲ್ಲಿ ವಿವರಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *