ವಾರಣಾಸಿ: ಜ್ಞಾನವಾಪಿ ಮಸೀದಿ ಆವರಣದಲ್ಲಿ ಪತ್ತೆಯಾಗಿದ್ದ ಶಿವಲಿಂಗ ರೂಪದ ಆಕೃತಿಯ ವೈಜ್ಞಾನಿಕ ಪರೀಕ್ಷೆ ಕೋರಿ ನಾಲ್ವರು ಮಹಿಳೆಯರು ಸಲ್ಲಿಸಿದ್ದ ಅರ್ಜಿಯನ್ನು ಜಿಲ್ಲಾ ನ್ಯಾಯಾಲಯ ವಜಾ ಮಾಡಿದೆ. ಸುಪ್ರೀಂ ಕೋರ್ಟ್ ಆದೇಶ ಹಿನ್ನಲೆ ಕಾರ್ಬನ್ ಡೇಟಿಂಗ್ ಪರೀಕ್ಷೆ ನಡೆಸುವಂತಿಲ್ಲ ಎಂದು ತಿಳಿಸಿದೆ.
ಪ್ರಕರಣ ವಿಚಾರಣೆ ನಡೆಸಿದ್ದ ಉತ್ತರ ಪ್ರದೇಶದ ವಾರಾಣಸಿ ಜಿಲ್ಲಾ ನ್ಯಾಯಾಲಯದ ನ್ಯಾಯಮೂರ್ತಿ ಅಜಯ್ ಕೃಷ್ಣ ವಿಶ್ವೇಶಾ ಎರಡು ಬಾರಿ ಆದೇಶವನ್ನು ಮುಂದೂಡಿಸಿದ್ದರು. ಇಂದು ಆದೇಶ ಪ್ರಕಟಿಸಿದ ಅವರು ಮೇ 16 ರಂದು ಸುಪ್ರೀಂ ಕೋರ್ಟ್ ಶಿವಲಿಂಗ ಪತ್ತೆಯಾದ ಸ್ಥಳವನ್ನು ಸೀಲಿಂಗ್ ಮಾಡಲು ಆದೇಶಿಸಿದ್ದರಿಂದ ವೈಜ್ಞಾನಿಕ ಪರೀಕ್ಷೆ ನಡೆಸಬೇಕೆಂದು ಮಾಡಲಾದ ಮನವಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ಅದೇಶದಲ್ಲಿ ತಿಳಿಸಿದ್ದಾರೆ.
ನ್ಯಾಯಾಲಯದಲ್ಲಿ ವಾದ-ಪ್ರತಿವಾದಗಳು ಮಂಗಳವಾರ ಪೂರ್ಣಗೊಂಡಿದ್ದು, ತನ್ನ ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು. ಮೇ 16ರಂದು ಜ್ಞಾನವಾಪಿ ಮಸೀದಿಯ ಆವರಣದಲ್ಲಿ ವಿಡಿಯೋ ಸಮೀಕ್ಷೆ ನಡೆಸಲಾಗಿತ್ತು. ಮುಸ್ಲಿಮರು ನಮಾಜ್ಗೂ ಮೊದಲು ಬಳಸುತ್ತಿದ್ದ ಕೊಳದ ಬಳಿ ಶಿವಲಿಂಗದ ಆಕೃತಿ ಪತ್ತೆಯಾಗಿದೆ ಎಂದು ಹೇಳಲಾಗಿತ್ತು. ಆ ಆಕೃತಿಯನ್ನು ಕಾರ್ಬನ್ ಡೇಟಿಂಗ್ಗೆ ಒಳಪಡಿಸಬೇಕೆಂದು ಅರ್ಜಿದಾರರು ಮನವಿ ಮಾಡಿದ್ದರು.
ಜ್ಞಾನವಾಪಿ ಮಸೀದಿ ಆವರಣದಲ್ಲಿರುವ ಶಿವಲಿಂಗವು ಸೂಟ್ ಆಸ್ತಿಯ ಭಾಗವಾಗಿದೆಯೇ ಅಥವಾ ಇಲ್ಲವೇ? ಆಪಾದಿತ ರಚನೆಯ ‘ವೈಜ್ಞಾನಿಕ ತನಿಖೆ’ಗೆ ನಿರ್ದೇಶಿಸಲು ನ್ಯಾಯಾಲಯಕ್ಕೆ ಅಧಿಕಾರವಿದೆಯೇ? ಎನ್ನುವ ಎರಡು ಪ್ರಶ್ನೆಗಳನ್ನು ಮುಂದಿಟ್ಟು ಮೊದಲು ಈ ಬಗ್ಗೆ ವಿಚಾರಣೆ ನಡೆಯಬೇಕು ಎಂದು ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿ ಪರ ವಕೀಲರು ವಾದಿಸಿದ್ದರು.
ಇದಕ್ಕೆ ಪ್ರತಿವಾದ ಮಂಡಿಸಿದ್ದ ವಕೀಲ ವಿಷ್ಣು ಶಂಕರ್ ಜೈನ್, ಶಿವಲಿಂಗವು ಸೂಟ್ ಆಸ್ತಿಯ ಒಂದು ಭಾಗವಾಗಿದೆ. ಸಿವಿಲ್ ಪ್ರೊಸೀಜರ್ ಕೋಡ್ 1908 ರ ಆದೇಶ 26 ನಿಯಮ 10A ರ ಪ್ರಕಾರ, ಸಮೀಕ್ಷೆಯ ಸಮಯದಲ್ಲಿ ಜ್ಞಾನವಾಪಿ ಮಸೀದಿ ಆವರಣದಲ್ಲಿ ಕಂಡುಬಂದಿರುವ ಶಿವಲಿಂಗದ ‘ವೈಜ್ಞಾನಿಕ ತನಿಖೆ’ಗೆ ನಿರ್ದೇಶಿಸಲು ನ್ಯಾಯಾಲಯಕ್ಕೆ ಅಧಿಕಾರವಿದೆ ಎಂದು ವಾದಿಸಿದ್ದರು.
ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ಸುಪ್ರೀಂ ಕೋರ್ಟ್ ಹಳೆಯ ತೀರ್ಪಿನ ಅಂಶವನ್ನು ಗಮನದಲ್ಲಿಟ್ಟುಕೊಂಡು ತೀರ್ಪು ನೀಡಿದೆ. ಇದನ್ನು ಪ್ರಶ್ನಿಸಿ ಮಹಿಳೆಯರು ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ಮೊರೆ ಹೋಗುವ ಸಾಧ್ಯತೆಯಿದೆ.