ಗುತ್ತಿಗೆದಾರರಿಗೆ 1600 ಕೋಟಿ ಬಾಕಿಯಿದ್ದರೂ 5510 ಕೋಟಿ ಮೊತ್ತದ ಕಾಮಗಾರಿಗೆ ಅನುಮೋದನೆ

ಜಿ. ಮಹಂತೇಶ್‌
ಕೃಪೆ : ದಿಫೈಲ್‌.ಇನ್‌

ಬೆಂಗಳೂರು; ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯಲ್ಲಿ 1,600 ಕೋಟಿ ರು. ಮೊತ್ತದ ಬಿಲ್‌ಗಳು ಪಾವತಿಗೆ ಬಾಕಿ ಇದ್ದರೂ ಇನ್ನೂ 5,510 ಕೋಟಿಗೂ ಹೆಚ್ಚು ಮೊತ್ತದ ಕಾಮಗಾರಿಗಳಿಗೆ ತರಾತುರಿಯಲ್ಲಿ ಅನುಮೋದಿಸಿರುವುದು ಇದೀಗ ಬಹಿರಂಗವಾಗಿದೆ. ಈ ಬಗ್ಗೆ ದಿ ಫೈಲ್‌ ವೆಬ್‌ ತಾಣವು ವಿಸ್ತೃತ ವರದಿಯನ್ನು ಪ್ರಕಟಿಸಿದೆ. ಅದರ ಪೂರ್ಣ ಲೇಖನವನ್ನು ಯತಾವತ್ತಾಗಿ ಹಾಗೆಯೇ ಈ ಕೆಳಗೆ ನೀಡಲಾಗಿದೆ.

ವಿವಿಧ ಕಾಮಗಾರಿಗಳನ್ನು ಪೂರ್ಣಗೊಳಿಸಿರುವ ಗುತ್ತಿಗೆದಾರರಿಗೆ ಬಾಕಿ ಬಿಲ್‌ ಪಾವತಿಸಲು ಶೇ. 40ರಷ್ಟು ಲಂಚಕ್ಕೆ ಬೇಡಿಕೆ ಇಡುತ್ತಿರುವ ಬಗ್ಗೆ ದೂರುಗಳು ವ್ಯಾಪಕವಾಗಿ ಕೇಳಿ ಬರುತ್ತಿರುವ ನಡುವೆಯೇ 1,600 ಕೋಟಿಗೂ ಮೊತ್ತದ ಬಿಲ್‌ಗಳು ಪಾವತಿಗೆ ಬಾಕಿ ಇರುವುದು ಮತ್ತು 5,510 ಕೋಟಿಗೂ ಹೆಚ್ಚು ಮೊತ್ತದ ಕಾಮಗಾರಿಗಳಿಗೆ ತರಾತುರಿಯಲ್ಲಿ ಅನುಮೋದಿಸಿರುವುದು ಮುನ್ನೆಲೆಗೆ ಬಂದಿದೆ.

ಅಲ್ಲದೇ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳುವ ಸಂಬಂಧ ಹಲವು ಶಾಸಕರು ಇದೀಗ ಅನುಷ್ಠಾನ ಇಲಾಖೆಯನ್ನು ಬದಲಿಸಲು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ.ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್ ಇಲಾಖೆಯು ಈಗಾಗಲೇ ಅಂದಾಜು ಪಟ್ಟಿ ತಯಾರಿಸಿದೆಯಲ್ಲದೆ ಟೆಂಡರ್‌ ಕರೆದಿದ್ದರೂ ಸಹ ಶಾಸಕರು ಇದೀಗ ಕ್ರಿಡಿಲ್ ಮೂಲಕ ಈ ಕಾಮಗಾರಿಗಳನ್ನು ಅನುಷ್ಠಾನಗೊಳಿಸಬೇಕು ಎಂಬ ಬೇಡಿಕೆಯನ್ನು ಇಡುತ್ತಿದ್ದಾರೆ. ಈ ಸಂಬಂಧ ಕೆಲ ದಾಖಲೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

5,510 ಕೋಟಿಗೂ ಹೆಚ್ಚು ಅನುಮೋದಿಸಲಾಗಿರುವ ಕಾಮಗಾರಿಗಳ ಕಾರ್ಯಭಾರವಿದ್ದರೂ ಹಲವು ಶಾಸಕರು ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಒಳಚರಂಡಿ ಸೇರಿದಂತೆ ಇನ್ನಿತರೆ ಕಾಮಗಾರಿಗಳಿಗೆ ಅನುಮೋದನೆ ಪಡೆಯಲು ಮುಖ್ಯಮಂತ್ರಿ ಬಳಿಗೆ ದಾಂಗುಡಿಯಿಡುತ್ತಿದ್ದಾರೆ.

‘ಪ್ರಸಕ್ತ ಆಡಳಿತ ಇಲಾಖೆಯಲ್ಲಿ 1,600 ಕೋಟಿ ರು. ಮೊತ್ತದ ಬಿಲ್‌ಗಲು ಪಾವತಿಗೆ ಬಾಕಿ ಇರುತ್ತವೆ. ಮತ್ತು ಅನುಮೋದಿಸಲಾದ ಕಾಮಗಾರಿಗಳ ಅಧಿಕ ಕಾರ್ಯಭಾರವಿದೆ. ಶಾಸಕರುಗಳು ಸಲ್ಲಿಸುತ್ತಿರುವ ಪ್ರಸ್ತಾವನೆಗಳಿಗೆ ಸಹಮತಿ ನೀಡಿದಲ್ಲಿ ಕಾಮಗಾರಿಗಳ ಕಾರ್ಯಭಾರ ಇನ್ನು ಹೆಚ್ಚಾಗಿ ಅಧಿಕವಾಗಿ ಬಾಕಿ ಬಿಲ್‌ಗಳ ಪಾವತಿಗೆ ತೀವ್ರ ಒತ್ತಡ ಉಂಟಾಗುತ್ತದೆ. ಅಲ್ಲದೇ 5,510 ಕೋಟಿಗೂ ಹೆಚ್ಚು ಅನುಮೋದಿಸಲಾದ ಕಾಮಗಾರಿಗಳ ಕಾರ್ಯಭಾರವಿದೆ. ಆದ್ದರಿಂದ ಪ್ರಸ್ತಾಪಿತ ಕಾಮಗಾರಿಗಳನ್ನು ಸದ್ಯಕ್ಕೆ ಮುಂದೂಡಬೇಕು,’ ಎಂದು ಆಡಳಿತ ಇಲಾಖೆಗೆ ತಿಳಿಸಬಹುದು ಎಂದು ಆರ್ಥಿಕ ಇಲಾಖೆಯು ತಿಳಿಸಿರುವುದು ಲಭ್ಯವಿರುವ ದಾಖಲೆಯಿಂದ ತಿಳಿದು ಬಂದಿದೆ.

ಆದರೂ ಪಟ್ಟು ಬಿಡದ ಶಾಸಕರುಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಅನುಮೋದನೆ ಪಡೆದುಕೊಳ್ಳುತ್ತಿದ್ದಾರಲ್ಲದೇ ಹಣಕಾಸು ಬಿಡುಗಡೆ ಸಂಬಂಧ ಆರ್ಥಿಕ ಇಲಾಖೆಗೆ ಕದ ತಟ್ಟುತ್ತಿದ್ದಾರೆ. ಹೀಗಾಗಿ ಆರ್ಥಿಕ ಇಲಾಖೆಯು ಬೇರೆ ದಾರಿಯಿಲ್ಲದೆಯೇ ತಲೆ ಮೇಲೆ ಕೈ ಹೊತ್ತು ಕುಳಿತಿದೆ.

ಮಾಯಕೊಂಡ ಮತ್ತು ಟಿ ನರಸೀಪುರ ಶಾಸಕರು ಅನುಷ್ಟಾನ ಇಲಾಖೆಯನ್ನು ಬದಲಿಸಲು ಪ್ರಸ್ತಾವನೆ ಸಲ್ಲಿಸಿದ್ದಾರೆ. 2021-22ನೇ ಸಾಲಿಗೆ ಲೆಕ್ಕಶೀರ್ಷಿಕೆ 5054ರ ಅಡಿ ದಾವಣಗೆರೆ ಜಿಲ್ಲೆ ಮಾಯಕೊಂಡ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು 24.70 ಕೋಟಿ ರು.ಗಳ ಮೊತ್ತದಲ್ಲಿ ಕೈಗೊಳ್ಳಲು ಪಂಚಾಯತ್‌ರಾಜ್‌ ಇಂಜಿನಿಯರಿಂಗ್‌ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದರು. ಇದರ ಪ್ರಕಾರ ಇಲಾಖೆಯು ಈಗಾಗಲೇ ಅಂದಾಜು ಪಟ್ಟಿ ತಯಾರಿಸಿ ಟೆಂಡರ್ ಪ್ರಕ್ರಿಯೆ ಆರಂಭಿಸಿದೆ.

ಆದರೀಗ ಸ್ಥಳೀಯ ಸಾರ್ವಜನಿಕರ ಒತ್ತಾಯ ಎಂದು ನೆಪ ಮುಂದಿರಿಸಿರುವ ಶಾಸಕ ಎನ್‌ ಲಿಂಗಣ್ಣ ಅವರು ಅನುಷ್ಠಾನ ಇಲಾಖೆಯನ್ನೇ ಬದಲಿಸಲು ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ. ಈ ಸಂಬಂಧ 2022ರ ಸೆ.8ರಂದು ದಾವಣಗೆರೆ ಜಿಲ್ಲಾ ಪಂಚಾಯತ್‌ನ ಇಂಜಿನಿಯರಿಂಗ್‌ ವಿಭಾಗದ ಕಾರ್ಯಪಾಲಕ ಅಭಿಯಂತರರು ಮತ್ತು ಗ್ರಾಮೀಣಾಭಿವೃದ್ದಿ ಪಂಚಾಯತ್‌ರಾಜ್‌ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರವನ್ನು ಬರೆದಿದ್ದಾರೆ.

‘ಮಾಯಕೊಂಡ ವಿಧಾನಸಭೆ ಕ್ಷೇತ್ರದ ಕಾಮಗಾರಿಗಳನ್ನು ಪಂಚಾಯತ್‌ರಾಜ್‌ ಇಂಜಿನಿಯರಿಂಗ್‌ ವಿಭಾಗದಿಂದ ಅನುಷ್ಠಾನಗೊಳಿಸಲು ಟೆಂಡರ್‌ ಹಾಗೂ ಇತರೆ ಕಾರಣಗಳಿಂದ ವಿಳಂಬವಾಗುತ್ತಿದೆ. ಪ್ರಸ್ತುತ ಮಳೆಯಿಂದ ರಸ್ತೆಗಳು ಹಾಗೂ ಚರಂಡಿಗಳು ತುಂಬಾ ಹಾಳಾಗಿವೆ. ಹೀಗಾಗಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಕೈಗೆತ್ತಿಕೊಳ್ಳಬೇಕಾಗಿರುವುದರಿಂದ ಪಂಚಾಯತ್‌ರಾಜ್‌ ಇಂಜಿನಿಯರಿಂಗ್‌ ವಿಭಾಗಕ್ಕೆ ನೀಡಿದ ಆದೇಶವನ್ನು ಹಿಂಪಡೆದು ಕೆಆರ್‌ಐಡಿಎಲ್‌ ಮೂಲಕ ಅನುಷ್ಠಾನಗೊಳಿಸಲು ಆದೇಶಿಸಬೇಕು,’ ಎಂದು ಪತ್ರವನ್ನು ಬರೆದಿದ್ದಾರೆ.

ಅದೇ ರೀತಿ ಟಿ ನರಸೀಪುರ ಶಾಸಕ ಅಶ್ವಿನ್‌ ಕುಮಾರ್‌ ಅವರು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಸಾಮಾನ್ಯ ಜನರು ವಾಸಿಸುವ ಕಾಲೋನಿಯಲ್ಲಿ 31 ರಸ್ತೆ ಮತ್ತು ಚರಂಡಿ ಕಾಮಗಾರಿ ನಿರ್ಮಾಣ ಮಾಡಲು 999.95 ಲಕ್ಷ ರು. ಅನುದಾನವನ್ನು (ಲೆಕ್ಕ ಶೀರ್ಷಿಕೆ 3054 ಅಡಿ) ಬಿಡುಗಡೆ ಮಾಡಬೇಕು ಮತ್ತು ಕೆಆರ್‌ಐಡಿಎಲ್‌ ಮೂಲಕ ಅನುಷ್ಠಾನಗೊಳಿಸಬೇಕು ಎಂದು ಮುಖ್ಯಮಂತ್ರಿಗೆ ಕೋರಿದ್ದಾರೆ. ಈಗಾಗಲೇ ಟಿ ನರಸೀಪುರ ಕ್ಷೇತ್ರಕ್ಕೆ 66.9 ಕೋಟಿ ರು.ಗಳ ಅನುದಾನವನ್ನು ವಿವಿಧ ಇಲಾಖೆಯಡಿ ಒದಗಿಸಲಾಗಿದೆ.

Donate Janashakthi Media

Leave a Reply

Your email address will not be published. Required fields are marked *