ಮತಾಂಧತೆ ಮತ್ತು ಆಳವಾದ ಧ್ರುವೀಕರಣ ಪಾಕಿಸ್ತಾನವನ್ನು ಅಧಃಪತನದತ್ತ ಹೇಗೆ ಕೊಂಡೊಯ್ಯುತ್ತಿದೆ ಎಂಬುದರ ನಿಜವಾದ ಚಿತ್ರವನ್ನು ಪ್ರಸ್ತುತಪಡಿಸಲು ಪ್ರಯತ್ನಿಸುವ ಬದಲು, ಮತೀಯ ಪ್ರಭುತ್ವದ ಅಪಾಯಗಳನ್ನು ವಿಮರ್ಶೆ ಮಾಡುವ ಬದಲು, ಭಾರತದಲ್ಲಿಯೂ ಪಾಕಿಸ್ತಾನದಂತೆ ಒಂದು ಪ್ರತಿಗಾಮಿ ಹಿಂದುತ್ವ ಭಾರತ ಹೊರಹೊಮ್ಮುವ ಅಪಾಯವನ್ನು ಮರೆಮಾಚುವುದೇ ವಾಸಿ ಎಂದು ನಮ್ಮ ಮಾಧ್ಯಮಗಳು ಬಗೆದಿವೆಯೇ? ಸಮಕಾಲೀನ ರಾಜಕೀಯದಲ್ಲಿ ಪ್ರಸ್ತುತವಾದ ಪ್ರಶ್ನೆಯೆಂದರೆ, ಅರ್ಥವ್ಯವಸ್ಥೆಯನ್ನು ಬಲಪಡಿಸುವ ಮೂಲಕ ನಮಗೆ ಬೆದರಿಕೆಯೊಡ್ಡುತ್ತಿರುವ ನಿರುದ್ಯೋಗ ಮತ್ತು ಹಣದುಬ್ಬರವನ್ನು ಪರಿಹರಿಸಬೇಕೆ ಅಥವಾ ಪಾಕಿಸ್ತಾನದಂತೆ ಗುಂಡಿನ ಚಕಮಕಿಯಲ್ಲಿ ಹಿಂಸಾಚಾರದ ದಾರಿಯಲ್ಲಿ ಸಾಗಬೇಕೇ?
ಜಾನ್ ಬ್ರಿಟ್ಟಾಸ್
(ಕನ್ನಡಕ್ಕೆ- ಸಿ.ಸಿದ್ದಯ್ಯ)
ತೀವ್ರಗಾಮಿ ರಾಷ್ಟ್ರವಾದದ ಬಗ್ಗೆ ಹಲವು ವಿವರಣೆಗಳು ಮತ್ತು ಉಲ್ಲೇಖಗಳಿವೆ. ಸಮಾಜವೊಂದು ‘ಒಂದು ಕಣ್ಣಿಗೆ ಒಂದು ಕಣ್ಣು’ ಎನ್ನುವ ಮಟ್ಟಕ್ಕೆ ಹೋದರೆ ಅದು ಜಗತ್ತನ್ನು ಸಂಪೂರ್ಣ ಕತ್ತಲೆಯತ್ತ ಕೊಂಡೊಯ್ಯುತ್ತದೆ ಎಂದು ಮಹಾತ್ಮ ಗಾಂಧಿ ಒಂದೊಮ್ಮೆ ಎಚ್ಚರಿಸಿದ್ದರು. ಪಹಲ್ಗಾಮ್ ಭಯೋತ್ಪಾದಕ ದಾಳಿ, ಆಪರೇಷನ್ ಸಿಂಧೂರ್, ಗಡಿ ಸಂಘರ್ಷ ಮತ್ತು ನಂತರದ ಕದನ ವಿರಾಮ ದೇಶವನ್ನು ವಿಚಾರಮಂಥನದ ಕಲವು ದಾರಿಯಲ್ಲಿ ತಂದು ನಿಲ್ಲಿಸಿವೆ.. ‘ಯುದ್ಧವು ಪರಿಹಾರಗಳಿಗಿಂತ ಹೆಚ್ಚಾಗಿ ಬಿಕ್ಕಟ್ಟುಗಳನ್ನು ಸೃಷ್ಟಿಸುತ್ತದೆ’ ಎಂಬ ನಾಣ್ಣುಡಿಯ ಬೆಳಕಿನಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮವನ್ನು ನೋಡಬೇಕು. ಎರಡೂ ದೇಶಗಳ ಜನರ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗೆ ಶಾಂತಿ ಅತ್ಯಗತ್ಯ ಎಂಬುದನ್ನು ಯಾರೂ ಅಲ್ಲಗಳೆಯುವುದಿಲ್ಲ. ಅದೇ ಸಮಯದಲ್ಲಿ, ಭಾರತವನ್ನು ನಿರಂತರವಾಗಿ ಕೆಣಕುತ್ತಿರುವ ಪಾಕಿಸ್ತಾನದ ಭಯೋತ್ಪಾದನೆಯನ್ನು ಹೇಗೆ ಎದುರಿಸುವುದು ಎಂಬುದು ಸಹ ಪ್ರಸ್ತುತವಾದ ಪ್ರಶ್ನೆಯಾಗಿದೆ.
ಸಮಸ್ಯೆಗೆ ಪರಿಹಾರ ಒಂದು ಸೂಕ್ಷ್ಮ ಮತ್ತು ಬಹುಮುಖಿ ನಿಲುವಿನ ಮೂಲಕವಲ್ಲ, ಬದಲಾಗಿ ಫಿರಂಗಿಯ ನಳಿಕೆಯ ಮೂಲಕ ಮಾತ್ರ ಬರಬಹುದು ಎಂಬ ತೀವ್ರಗಾಮಿ ರಾಷ್ಟ್ರವಾದಿ ಸಿದ್ದಾಂತದ ವಿರುದ್ಧ ಹೋರಾಡುವ ಸಮಯ ಇದು. ಪಾಕಿಸ್ತಾನಿ ಭಯೋತ್ಪಾದಕರು ಪಹಲ್ಗಾಮ್‌ನಲ್ಲಿ 26 ಅಮಾಯಕ ಜನರನ್ನು ಹತ್ಯೆ ಮಾಡಿದ್ದಾರೆ ಎಂಬುದನ್ನು ಕೇವಲ ಮತೀಯ ಕನ್ನಡಕದಿಂದ ನೋಡುವ ಪ್ರವೃತ್ತಿಗೆ ಸವಾಲು ಹಾಕಬೇಕಾಗಿದೆ. ಕಲ್ಮಾ ಅಥವ ಅಲ್ಲಾನ ಉಲ್ಲೇಖ ಮತಾಂಧತೆಯ ಆಧಾರದ ಮೇಲೆ ಸೃಷ್ಟಿಯಾದ ಮತ್ತು ಧಾರ್ಮಿಕ ಉಗ್ರವಾದದತ್ತ ಸಾಗುತ್ತಿರುವ ದೇಶವಾದ ಪಾಕಿಸ್ತಾನದ ದ್ದೇಷಪೂರಿತ ರಣತಂತ್ರದ ಭಾಗವೇ ಆಗಿದೆ, ಅದಕ್ಕೆ ಪ್ರತಿಯಾಗಿ ನಮ್ಮ ಕಡೆಯಿಂದ ಯುದ್ಧೋನ್ಮಾದ , ನಮ ವಿಮರ್ಶಾತ್ಮಕ ಯೋಚನೆಗಳನ್ನು ಮುಳುಗಿಸಿ ಬಿಡುತ್ತದೆ.
‘ಒಂದು ದೇಶವನ್ನು ನಾಶಮಾಡಲು ಅತ್ಯಂತ ಸುಲಭವಾದ ಮಾರ್ಗವೆಂದರೆ ತೀವ್ರಗಾಮಿ ರಾಷ್ಟ್ರವಾದ ಮತ್ತು ಮತ್ತು ಯುದ್ಧಕೋರತೆ ಎಂದು ನಾಜಿ ಜರ್ಮನಿ ಸೇರಿದಂತೆ ಹಲವು ಐತಿಹಾಸಿಕ ದಾಖಲೆಗಳು ಹೇಳುತ್ತವೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮದಿಂದ ನಿರಾಸೆಗೊಂಡು, ಆಘಾತಕಾರಿ ಕಮೆಂಟ್‌ಗಳನ್ನು ಪೋಸ್ಟ್ ಮಾಡುವ ಬಲಪಂಥೀಯ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ವಿಷವುಗುಳುವ ಚರ್ಚೆಗಳನ್ನು ನೋಡಿದರೆ, ನಮ್ಮ ಮೇಲೆ ಆವರಿಸಿರುವ ಅಪಾಯದ ಒಂದು ನೋಟವನ್ನು ನಾವು ಪಡೆಯಬಹುದು.
‘ಆಪರೇಷನ್ ಸಿಂಧೂರ್’ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕರೆದಿದ್ದ ಸರ್ವಪಕ್ಷ ಸಭೆಯಲ್ಲಿ ಸಿಪಿಐ(ಎಂ) ಒಂದು ಸ್ಪಷ್ಟ ನಿಲುವನ್ನು ತೆಗೆದುಕೊಂಡಿತು: ಯುದ್ಧ ಅಪೇಕ್ಷಣೀಯವಲ್ಲ, ಸಂಘರ್ಷವನ್ನು ಶಮನಗೊಳಿಸುವುದು ಅಗತ್ಯ. ಭಾರತವು ಒಂದು ಪ್ರಜಾಪ್ರಭುತ್ವ ರಾಷ್ಟ್ರವಾಗಿ ಮತ್ತು ಜಗತ್ತಿಗೆ ಮಾದರಿಯಾಗಿ, ಶಾಂತಿಯನ್ನು ಅನುಸರಿಸುವ ಸಾಮರ್ಥ್ಯವನ್ನೂ ಹೊಂದಿದೆ, ಹೊಣೆಯನ್ನೂ ಹೊಂದಿದೆ. ಭಾರತವು ಕದನ ವಿರಾಮದತ್ತ ಹೆಜ್ಜೆ ಇಟ್ಟಿರುವುದರಿಂದ, ಸಿಪಿಐ(ಎಂ)ನ ನಿಲುವಿನ ವಿಶ್ವಾಸಾರ್ಹತೆ ಮತ್ತು ಬಲವನ್ನು ಗುರುತಿಸಬೇಕಾಗಿದೆ..
‘ಸೂಪರ್ ಮಧ್ಯಸ್ಥಿಕೆದಾರ’ನಾಗಿ ಅಮೆರಿಕ
ಎರಡೂ ದೇಶಗಳು ಶಾಂತಿಗೆ ಮರಳುತ್ತಿರುವಂತೆಯೇ, ಸಂಘರ್ಷದ ನಂತರದಲ್ಲಿ ಹಲವು ಅನುಮಾನಗಳು ಮತ್ತು ಪ್ರಶ್ನೆಗಳು ಹಾಗೆಯೇ ಉಳಿದಿವೆ. ಇವುಗಳಲ್ಲಿ ಮುಖ್ಯವಾದದ್ದು ಒಂದು ಸೂಪರ್ ಮಧ್ಯಸ್ಥಿಕೆದಾರರಾಗಿ ಬಂದ ಅಮೆರಿಕದ ಪಾತ್ರಕ್ಕೆ ಸಂಬಂಧಿಸಿದೆ
ಕದನ ವಿರಾಮವನ್ನು ಅಧಿಕೃತವಾಗಿ ಘೋಷಿಸುವ ಮೊದಲೇ,, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡೂ ದೇಶಗಳು ಶಾಂತಿಗೆ ಮರಳುವಂತೆ ಆಗ್ರಹಿಸಿದ್ದೇನೆ ಮತ್ತು ಆ ಬಗ್ಗೆ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿಕೊಂಡಿದ್ದರು. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರ ವಿವರವಾದ ಹೇಳಿಕೆ ಕಸಿವಿಸಿಯನ್ನು ಮತ್ತಷ್ಟು ಹೆಚ್ಚಿಸಿತು. ತನ್ನ ನೆತೃತ್ವದಲ್ಲಿ ಭಾರತ-ಪಾಕಿಸ್ತಾನ ವಿಷಯದ ಕುರಿತು ನಡೆದ ಸಮಾಲೋಚನೆಗಳ ಸಾರಾಂಶವನ್ನೇ ಅವರು ಪ್ರಸ್ತುತಪಡಿಸಿದರು.ಇದು ಹೊರಗಣ ಹಸ್ತಕ್ಷೇಪದ ಬಗ್ಗೆ ಮತ್ತಷ್ಟು ಪ್ರಶ್ನೆಗಳನ್ನು ಎಬ್ಬಿಸಿತು
“ನಾನು ಮಧ್ಯಸ್ಥಿಕೆ ವಹಿಸಿದೆ” “ನಾನು ಯುದ್ಧ ನಿಲ್ಲಿಸಿದೆ” “ನಾನು ಅದಕ್ಕೆ ವ್ಯಾಪಾರವನ್ನು ಬಳಸಿದೆ”
ವ್ಯಂಗ್ಯಚಿತ್ರ: ಅಲೋಕ್ ನಿರಂತರ್ @ಫೇಸ್‍ಬುಕ್
ರೂಬಿಯೊ ತಮ್ಮ ಕದನ ವಿರಾಮದ ಪ್ರಯತ್ನಗಳನ್ನು ವಿವರಿಸಲು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ವಿದೇಶಾಂಗ ಸಚಿವ ಎಸ್. ಜಯಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಪಾಕಿಸ್ತಾನದ ಪ್ರಧಾನ ಮಂತ್ರಿ ಶೆಹಬಾಸ್ ಷರೀಫ್, ಪಾಕಿಸ್ತಾನ ವಿದೇಶಾಂಗ ಸಚಿವ ಮೊಹಮ್ಮದ್ ಇಶಾಕ್, ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರ ಹೆಸರುಗಳನ್ನು ಉಲ್ಲೇಖಿಸಿದರು.
ಇಂತಹ ಹೇಳಿಕೆಗಳು ಕಾಶ್ಮೀರ ಸೇರಿದಂತೆ ಪಾಕಿಸ್ತಾನದೊಂದಿಗಿನ ವಿವಾದಗಳ ಕುರಿತು ಭಾರತದ ದೀರ್ಘಕಾಲೀನ ನಿಲುವಿಗೆ ತದ್ವಿರುದ್ಧವಾದವುಗಳು ಎಂಬುದನ್ನು ಕಾಣಬೇಕು. 1972 ರ ಶಿಮ್ಲಾ ಒಪ್ಪಂದದ ಮೂಲ ಉದ್ದೇಶ ದ್ವಿಪಕ್ಷೀಯ ಮಾತುಕತೆಗಳ ಮೂಲಕ ಸಮಸ್ಯೆಗಳನ್ನು ಪರಿಹರಿಸುವುದಾಗಿತ್ತು. ಹಲವು ವಿದೇಶಗಳು ವಿವಿಧ ಹಂತಗಳಲ್ಲಿ ಮಧ್ಯಸ್ಥಿಕೆಯ ಹಸ್ತಗಳನ್ನು ಚಾಚಿದರೂ, ಭಾರತ ಅವೆಲ್ಲವನ್ನೂ ದೃಢವಾಗಿ ತಿರಸ್ಕರಿಸಿತು. ಐ.ಕೆ. ಗುಜ್ರಾಲ್ ಅವರು ಪ್ರಧಾನಿಯಾಗಿದ್ದಾಗ ಬ್ರಿಟನ್ ಇಂತಹದೊಂದು ಹೆಜ್ಜೆ ಮುಂದಿಟ್ಟಾಗ ಇಂತಹ ನೆರವು ನೀಡುವುದಾಗಿ ಹೇಳಲು ಬ್ರಿಟನ್ ‘ಆರೋಗ್ಯ’ ಎಂತಹದ್ದು ಎಂದು ವ್ಯಂಗ್ಯವಾಗಿ ಹೇಳಿದ್ದು ಹೊರಗಣ ಹಸ್ತಕ್ಷೇಪದ ವಿರುದ್ಧ ಭಾರತದ ಅಚಲ ವಿರೋಧವನ್ನು ಸಾರಿ ಹೇಳಿತ್ತು.
ಇದೊಂದು ಸಕಾರಣವಾದ ಕಳವಳವನ್ನು ಎತ್ತಿದೆ: ಪ್ರಧಾನ ಮಂತ್ರಿ ಮೋದಿಯವರ ಧೋರಣೆಯು ಅವರಿಗೆ ಅರಿವಿಲ್ಲದೆಯೇ ಕಾಶ್ಮೀರ ಸಮಸ್ಯೆಯನ್ನು ಅಂತರಾಷ್ಟ್ರೀಯಗೊಳಿಸಲು ದಾರಿ ಮಾಡಿಕೊಟ್ಟಿತೇ? ಇದು ಮುಂದಿನ ದಿನಗಳಲ್ಲಿ ಇನ್ನಷ್ಟು ಗಟ್ಟಿಗೊಳ್ಳಬಹುದಾದ ಪ್ರಶ್ನೆ. ಅದಕ್ಕಿಂತಲೂ ಹೆಚ್ಚು ಕಾಡುವ ಪ್ರಶ್ನೆ-‘ನನ್ನ ಸ್ನೇಹಿತ ಟ್ರಂಪ್’’ ಎಂದು ಕೈಚಾಚುವ ಭರದಲ್ಲಿ ಭಾರತದ ಬಹುಕಾಲದ ಕಾರ್ಯವ್ಯೂಹವನ್ನು ಬಿಟ್ಟುಕೊಡುವಂತಾಗಿದೆಯೇ ಎಂಬುದು.
ಮಾಧ್ಯಮಗಳ ಕುರುಡು ಕಥನಗಳು
ಸಂಘರ್ಷದ ಸಮಯದಲ್ಲಿ ಮುಖ್ಯವಾಹಿನಿಯ ಮಾಧ್ಯಮಗಳು ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಗಂಭೀರ ಪರೀಕ್ಷಣೆಗೆ ಒಳಪಡಿಸಬೇಕು. ನಮ್ಮ ಮಾಧ್ಯಮಗಳು ಯುದ್ಧೋನ್ಮಾದದ ಅತ್ಯಂತ ಅಪಾಯಕಾರಿ ಮಾದರಿಯನ್ನು ಅನಾವರಣಗೊಳಿಸಿವೆ. ಸಂಕುಚಿತ ದೇಶಭಕ್ತಿಯ ವಿಷಯದಲ್ಲಿ ಭಾರತದ ಮಾಧ್ಯಮಗಳು ಪಾಕಿಸ್ತಾನದ ಮಾಧ್ಯಮಗಳೊಂದಿಗೆ ಪೈಪೋಟಿ ನಡೆಸಿದವು. ಪಾಕಿಸ್ತಾನವನ್ನು ಚಚ್ಚಿ ಹಾಕಲು ಭಾರತಕ್ಕೆ ಇದು ಒಂದು ಸುವರ್ಣಾವಕಾಶ ಎಂಬುದು ಮಾಧ್ಯಮ ಚರ್ಚೆಯ ಮುಖ್ಯ ಸಂದೇಶವಾಗಿತ್ತು.
ಈ ಅಸಂಬದ್ಧತೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಟ್ವೀಟ್ ವ್ಯಂಗ್ಯವಾಗಿ ಹೀಗೆ ಸೆರೆ ಹಿಡಿದೆ::
“ಝೀ ಟಿವಿ ಕರಾಚಿಯನ್ನು ವಶಪಡಿಸಿಕೊಂಡಿತು, ಎನ್‌ಡಿಟಿವಿ ಇಸ್ಲಾಮಾಬಾದನ್ನು ವಹಿಸಿಕೊಂಡಿತು,, ರಿಪಬ್ಲಿಕ್ ಟಿವಿ ರಾವಲ್ಪಿಂಡಿಯನ್ನು ಹಿಡಿಯಿತು.”
ವ್ಯಂಗ್ಯಚಿತ್ರ: ಸತೀಶ ಆಚಾರ್ಯ, ಸೌತ್ ಫಸ್ಟ್
ಈ ಮಾಧ್ಯಮಗಳು ಉದ್ರೇಕಕಾರಿ ಕಥೆಗಳೊಂದಿಗೆ ಪ್ರೇಕ್ಷಕರನ್ನು ಆಕರ್ಷಿಸಲು ಮತ್ತು ಅವರ ಗಮನವನ್ನು ಸೆಳೆಯಲು ನವೀನತಂತ್ರಗಳನ್ನು ರೂಪಿಸಿಕೊಂಡವು.
ಸಾಮಾನ್ಯವಾಗಿ, ಸರಕಾರ-ಪರ ಮಾಧ್ಯಮಗಳು ಧ್ರುವೀಖರಣಗೊಂಡ ರಾಜಕೀಯ ಸಂಸದೇಶಗಳನ್ನು ಇನ್ನಷ್ಟು ಹಿಗ್ಗಿಸಿ ಪಸರಿಸಬೇಕು ಎಂದು ಆಳುವವರು ನಿರೀಕ್ಷಿಸುತ್ತಾರೆ. ಆದರೆ ಈ ಬಾರಿ ಮಾಧ್ಯಮಗಳ ಮೇರೆ ಮೀರಿದ ಹುರುಪು ಕಂಡು ಕೇಂದ್ರ ಸರಕಾರವೂ ಅವಾಕ್ಕಾದಂತೆ ಕಾಣುತ್ತದೆ. ಈ ಸಂದರ್ಭದಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಮಧ್ಯಪ್ರವೇಶಿಸಿ ಮಾಧ್ಯಮಗಳು ಸಂಯಮ ವಹಿಸುವಂತೆ ಒಂದಲ್ಲ ಹಲವು ಬಾರಿ ಸಲಹೆ ನೀಡಬೇಕಾಯಿತು.
ಪಾಕಿಸ್ತಾನದ ಅಧಃಪತನದ ಮಾರ್ಗ-“ಮೂರು ದಶಕಗಳ ಹೊಲಸು ಕೆಲಸ”
ಮತಾಂಧತೆ ಮತ್ತು ಆಳವಾದ ಧ್ರುವೀಕರಣ ಪಾಕಿಸ್ತಾನವನ್ನು ಅಧಃಪತನದತ್ತ ಹೇಗೆ ಕೊಂಡೊಯ್ಯುತ್ತಿದೆ ಎಂಬುದರ ನಿಜವಾದ ಚಿತ್ರವನ್ನು ಪ್ರಸ್ತುತಪಡಿಸಲು ನಮ್ಮ ಮಾಧ್ಯಮಗಳು ಒಮ್ಮೆಯೂ ಪ್ರಯತ್ನಿಸಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಮತೀಯ ಪ್ರಭುತ್ವದ ಅಪಾಯಗಳನ್ನು ವಿಮರ್ಶೆ ಮಾಡುವ ಬದಲು, ಭಾರತದಲ್ಲಿ ಪಾಕಿಸ್ತಾನದಂತೆ ಒಂದು ಪ್ರತಿಗಾಮಿ ಹಿಂದುತ್ವ ಭಾರತ ಹೊರಹೊಮ್ಮುವ ಅಪಾಯವನ್ನು ಮರೆಮಾಚುವುದೇ ವಾಸಿ ಎಂದು ಅವರು ಬಗೆದಿದ್ದಾರೆ..
ಆರಂಭಿಕ ದಿನಗಳಲ್ಲಿ, ಪಾಕಿಸ್ತಾನಿಗಳು ಮತ್ತು ಭಾರತೀಯರ ತಲಾ ಆದಾಯ ಬಹುತೇಕ ಸಮಾನವಾಗಿತ್ತು. ಇಂದು, ಅದು ಮಾಯವಾಗಿದೆ. ಪಾಕಿಸ್ತಾನದ ಸರಾಸರಿ ಮಲೆಯಾಳಿ ವ್ಯಕ್ತಿಯ ಆದಾಯದ ಅರ್ಧದಷ್ಟು ಮಾತ್ರ. ಭಾರತದ ಆರ್ಥಿಕತೆಯು ಈಗ ಪಾಕಿಸ್ತಾನದ ಆರ್ಥಿಕತೆಗಿಂತ 11 ಪಟ್ಟು ದೊಡ್ಡದಾಗಿದೆ. ಏತನ್ಮಧ್ಯೆ, ಭಾರತದ ಪ್ರಜೆಯ ತಲಾ ಆದಾಯವು ಚೀನಿಯರ ತಲಾ ಆದಾಯದ ಐದನೇ ಒಂದು ಭಾಗ ಮಾತ್ರ.
ಸಮಕಾಲೀನ ರಾಜಕೀಯದಲ್ಲಿ ಪ್ರಸ್ತುತವಾದ ಪ್ರಶ್ನೆಯೆಂದರೆ, ಅರ್ಥವ್ಯವಸ್ಥೆಯನ್ನು ಬಲಪಡಿಸುವ ಮೂಲಕ ನಮಗೆ ಬೆದರಿಕೆಯೊಡ್ಡುತ್ತಿರುವ ನಿರುದ್ಯೋಗ ಮತ್ತು ಹಣದುಬ್ಬರವನ್ನು ಪರಿಹರಿಸಬೇಕೆ ಅಥವಾ ಪಾಕಿಸ್ತಾನದಂತೆ ಗುಂಡಿನ ಚಕಮಕಿಯಲ್ಲಿ ಹಿಂಸಾಚಾರದ ದಾರಿಯಲ್ಲಿ ಸಾಗಬೇಕೇ ಎಂಬುದು.
ಸರ್ವಪಕ್ಷ ಸಭೆಯ ನಂತರ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ನಾಯಕ ರಾಮ್ ಗೋಪಾಲ್ ಯಾದವ್ ಹೇಳಿದ್ದು ಕಿವಿಯಲ್ಲಿ ಗುಯ್ ಗುಡುತ್ತಿದೆ. ಗಡಿಯಲ್ಲಿ ನಡೆಯುವ ಪ್ರತಿಯೊಂದು ಗುಂಡಿನ ದಾಳಿಯೂ ಉತ್ತರ ಪ್ರದೇಶದ ಹಳ್ಳಿಗಳಲ್ಲಿ ಕಾಳಧನಿಕರಿಗೆ ಪಟಾಕಿ ಸಿಡಿಸಿದಂತೆ ಎಂದು ರಾಮ್ ಗೋಪಾಲ್ ಯಾದವ್ ಹೇಳಿದರು. ಸಂಘರ್ಷದ ನಂತರ ಗಡಿಯಾಚೆಗೆ ಪಲಾಯನ ಮಾಡಿದ ಸಾವಿರಾರು ಜನರ ಬಗ್ಗೆಯಾಗಲಿ, ಅವರ ಜೀವನದ ಅನಿಶ್ಚಿತತೆಯ ಬಗ್ಗೆಯಾಗಲಿ ಯುದ್ಧಕೋರರಿಗೆ ಕಳವಳವೇ ಇಲ್ಲ.
ಪಾಕಿಸ್ತಾನ ಸರ್ಕಾರವು ದೇಶದ ಮೇಲೆ ಕೇವಲ ನಾಮಮಾತ್ರದ ನಿಯಂತ್ರಣವನ್ನು ಹೊಂದಿದೆ. ಅಲ್ಲಿ ನಿಜವಾದ ಅಧಿಕಾರ ಸೇನೆಯದ್ದೇ. ಪಾಕಿಸ್ತಾನವನ್ನು ಚಚ್ಚಿ ಹಾಕಬೇಕೆಂದು ಹೇಳುತ್ತಿರುವವರು, ಪರಮಾಣು ಶಸ್ತ್ರಸಜ್ಜಿತ ದೇಶವೊಂದು ಸಂಪೂರ್ಣವಾಗಿ ಭಯೋತ್ಪಾದಕ ಸಂಘಟನೆಗಳ ಕೈಗೆ ಬಿದ್ದರೆ ಉಂಟಾಗುವ ದುರಂತದ ಬಗ್ಗೆ ಒಂದು ಕ್ಷಣವೂ ಯೋಚಿಸಿಲ್ಲ.
ಪಾಕಿಸ್ತಾನದ ರಕ್ಷಣಾ ಸಚಿವ ಆಸಿಫ್ ಖ್ವಾಜಾ ಯುಎಸ್‍ನ ಸ್ಕೈ ಟಿವಿಗೆ ನೀಡಿದ ಸಂದರ್ಶನ ಸನ್ನಿವೇಶದ ಮೇಲೆ ಬೆಳಕು ಚೆಲ್ಲುತ್ತದೆ.. “.ಅಫ್ಘಾನಿಸ್ತಾನದಲ್ಲಿ ಸೋವಿಯತ್ ಬೆಂಬಲಿತ ಸರ್ಕಾರವನ್ನು ಉರುಳಿಸಲು ಭಯೋತ್ಪಾದಕ ಗುಂಪುಗಳನ್ನು ರಚಿಸುವಂತೆ ನಮಗೆ ಹೇಳಿದ್ದು ಅಮೆರಿಕ ಮತ್ತು ಬ್ರಿಟನ್. ಆದ್ದರಿಂದ ನಮ್ಮ ನೆಲದಲ್ಲಿ ಭಯೋತ್ಪಾದಕರು ಪ್ರವರ್ಧಮಾನಕ್ಕೆ ಬಂದರು. ಅವರಿಗೆ ಹಣ ಮತ್ತು ಶಸ್ತ್ರಾಸ್ತ್ರಗಳನ್ನು ಒದಗಿಸಿದ್ದು ಅಮೆರಿಕ. ಅಂತಿಮವಾಗಿ, ಅವರು ಅಫ್ಘಾನಿಸ್ತಾನದಲ್ಲಿ ಸೋವಿಯತ್ ಬೆಂಬಲಿತ ಸರ್ಕಾರವನ್ನು ಉರುಳಿಸಿದರು. ಅದರ ನಂತರ, ಆ ಎಲ್ಲಾ ಭಯೋತ್ಪಾದಕ ಗುಂಪುಗಳು ನಮ್ಮ ನೆಲದಲ್ಲಿ ನೆಲೆಗಳನ್ನು ಸ್ಥಾಪಿಸಿದವು. ನಾವು ಮೂರು ದಶಕಗಳಿಂದ ಯುಎಸ್ ಗಾಗಿ ಹೊಲಸು ಕೆಲಸವನ್ನು ಮಾಡುತ್ತಿದ್ದೇವೆ, ಮತ್ತು ಬ್ರಿಟನ್ ಸೇರಿದಂತೆ ಪಾಶ್ಚಿಮಾತ್ಯರಿಗಾಗಿಯೂ. ಅದೊಂದು ತಪ್ಪು. ಅದರಿಂದಾಗಿ ನರಳುತ್ತಿದ್ದೇವೆ ..” ಎಂದು ಅವರು ಕೇಳಿದರು.
ಮೌನದ ಪರದೆ ಸರಿಯಬೇಕು
ಗುಂಡಿನ ಸದ್ದುಗಳು ಮೌನವಾಗುವ ವೇಳೆಗೆ ಹೊಸ ಪ್ರಶ್ನೆಗಳು ಉದ್ಭವಿಸುತ್ತವೆ. ಪಹಲ್ಗಾಮ್ ಮತ್ತೊಮ್ಮೆ ಚರ್ಚೆಯ ಕೇಂದ್ರಕ್ಕೆ ಬರುತ್ತದೆಸೇರಿದೆ. ಯುದ್ಧದಂತಹ ಉದ್ವಿಗ್ನತೆಯ ಸಮಯದಲ್ಲಿ ವಿರೋಧ ಪಕ್ಷಗಳು ಒಗ್ಗಟ್ಟನ್ನು ಕಾಯ್ದುಕೊಳ್ಳುವ ದು ಮೌನ ವಹಿಸಿದ್ದವು. 26 ಅಮಾಯಕರ ಜೀವಗಳನ್ನು ಬಲಿತೆಗೆದುಕೊಂಡ ಕೇಂದ್ರ ಸರ್ಕಾರದ ಗಂಭೀರ ಭದ್ರತಾ ಮತ್ತು ಗುಪ್ತಚರ ವೈಫಲ್ಯಗಳನ್ನು ಮೌನದ ಪರದೆಯ ಹಿಂದೆ ಅಡಗಿಸಿಡಲು ಸಾಧ್ಯವಿಲ್ಲ.
ಕಳೆದ ಸಂಸತ್ತಿನ ಅಧಿವೇಶನದಲ್ಲಿ ಗೃಹ ಸಚಿವರು ಭಾರಿ ಧೈರ್ಯದಿಂದ ದಾವೆಗಳನ್ನು ಪ್ರಸ್ತುತ ಪಡಿಸಿದರು. ಇದೆಲ್ಲವೂ ಸಂಸತ್ತಿನ ದಾಖಲೆಗಳಲ್ಲಿದೆ: “ಕಾಶ್ಮೀರದಿಂದ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗಿದೆ; ಯಾವುದೇ ಭಯೋತ್ಪಾದಕನು ದೇಶಕ್ಕೆ ಪ್ರವೇಶಿಸಿದರೆ, ನಾವು ಅವನ ಕಣ್ಣುಗಳ ನಡುವೆ ಗುಂಡಿಕ್ಕುತ್ತೇವೆ” – ಇವು ಅಮಿತ್ ಷಾ ಅವರ ಮಾತುಗಳು. ಇದು ನಿಜವಾಗಿದ್ದರೆ, ಭಯೋತ್ಪಾದಕರು ಭಾರತದ ನೆಲವನ್ನು ಪ್ರವೇಶಿಸಲು, ಮುಕ್ತವಾಗಿ ಸುತ್ತಾಡಲು,ಎದುರು ನಿಂತೇ ಗುಂಡು ಹಾರಿಸಲು ಮತ್ತು ನಂತರ ತಪ್ಪಿಸಿಕೊಳ್ಳಲು ಏಕೆ ಸಾಧ್ಯವಾಯಿತು? ಇದಕ್ಕೆ ಒಬ್ಬನೇ ಒಬ್ಬ ವ್ಯಕ್ತಿಯನ್ನೂ ಇದಕ್ಕೆ ಹೊಣೆಗಾರನಾಗಿ ಮಾಡಿಲ್ಲ, ಕರ್ತವ್ಯಚ್ಯುತಿಗೆ ಬೆಲೆ ತೆರುವಂತಾಗಿಲ್ಲ.
ವ್ಯಂಗ್ಯಚಿತ್ರ: ಸಜಿತ್ ಕುಮಾರ್, ಡೆಕ್ಕನ್ ಹೆರಾಲ್ಡ್
ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ನಡೆದ 2008 ರ ಮುಂಬೈ ಭಯೋತ್ಪಾದಕ ದಾಳಿಯನ್ನು ಉಲ್ಲೇಖಿಸುವ ಸಮಯ ಇದು. ಆಗ ಗೃಹ ಸಚಿವ ಶಿವರಾಜ್ ಪಾಟೀಲ್, ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ್ ರಾವ್ ದೇಶಮುಖ್ ಮತ್ತು ಉಪಮುಖ್ಯಮಂತ್ರಿ ಸಿ.ಆರ್. ಪಾಟೀಲ್ ಹೊಣೆಗಾರರಾದರು. ಮುಂಬೈನಲ್ಲಿ ನಡೆದ ದುರದೃಷ್ಟಕರ ದಾಳಿಯಿಂದಾಗಿ ಆಗಿನ ಕೇಂದ್ರ ಗೃಹ ಸಚಿವರು ತಮ್ಮ ಹುದ್ದೆಯನ್ನು ಕಳೆದುಕೊಂಡರೆ, ಈಗ ದೇಶ ಅಮಿತ್ ಷಾ ಅವರನ್ನು ಅದರ ಬಗ್ಗೆ ಕೇಳುವ ಜವಾಬ್ದಾರಿಯನ್ನು ಹೊಂದಿದೆ. ಪ್ರಶ್ನೆಗಳನ್ನು ಎತ್ತುವ ಮೂಲಭೂತ ಜವಾಬ್ದಾರಿಯನ್ನು ಹೊಂದಿರುವ ಒಂದೇ ಒಂದು ಮಾಧ್ಯಮವೂ ಅದನ್ನು ಎತ್ತಿಲ್ಲ ಎಂಬುದು ಗಮನಾರ್ಹ.
ಬಿಜೆಪಿ ಹೊರತುಪಡಿಸಿ ಉಳಿದೆಲ್ಲಾ ರಾಜಕೀಯ ಪಕ್ಷಗಳು ದೌರ್ಬಲ್ಯದ ಸಂಕೇತಗಳು ಎಂದು ನರೇಂದ್ರ ಮೋದಿ ಯಾವಾಗಲೂ ಪ್ರಚಾರ ಮಾಡಿದ್ದಾರೆ. ಪಾಕಿಸ್ತಾನದ ನೆಲದಿಂದ ನಡೆಯುವ ಹಲವಾರು ಭಯೋತ್ಪಾದನಾ ಕೃತ್ಯಗಳ ಹಿಂದೆ, ಜಗತ್ತು ನಂಬುವ ಯಾರಾದರೂ ಇದ್ದರೆ, ಆತ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಸ್ಥಾಪಕ ಮೌಲಾನಾ ಮಸೂದ್ ಅಜರ್. ವಿಶ್ವಸಂಸ್ಥೆಯಿಂದ ಭಯೋತ್ಪಾದಕ ಎಂದು ಘೋಷಿಸಲ್ಪಟ್ಟ ಮೇಲೆ ಮಸೂದ್ ಬಗ್ಗೆ ಸಾಕಷ್ಟು ಚರ್ಚೆ ನಡೆಯಿತು. ಆದರೆ ಇನ್ನೂ ಉತ್ತರ ಕಾಣದ ಪ್ರಶ್ನೆಯೆಂದರೆ, 1999 ರಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಭಯೋತ್ಪಾದಕರು ಅಪಹರಿಸಿದ ಇಂಡಿಯನ್ ಏರ್ ಲೈನ್ಸ್ ವಿಮಾನದ ಒತ್ತೆಯಾಳುಗಳಿಗೆ ಬದಲಾಗಿ ಭಾರತ ಬಿಡುಗಡೆ ಮಾಡಿದ ಅತ್ಯಂತ ಕುಪ್ರಸಿದ್ಧ ಭಯೋತ್ಪಾದಕರಲ್ಲಿ ಮಸೂದ್ ಅಜರ್ ಒಬ್ಬ. ಇದೊಂದು ಬಹು ಮಹತ್ವದ ಪ್ರಶ್ನೆ. ಆದರೆ ಬಿಜೆಪಿ ಸರಕಾರದ ಆ ವಿವಾದಾತ್ಮಕ ನಿರ್ಧಾರವನ್ನು ಸಾಮಾನ್ಯವಾಗಿ ಮರೆಮಾಚಲಾಗಿದೆ. ಬೇರೆ ಯಾವುದೇ ಸರ್ಕಾರ ಮಸೂದ್ ನನ್ನು ಬಿಡುಗಡೆ ಮಾಡಿದ್ದರೆ, ಮಸೂದ್ ನ ಬಿಡುಗಡೆ ಬಹಳಷ್ಟು ಚರ್ಚೆಗೊಳಗಾಗುವ ವಿಷಯವಾಗುತ್ತಿತ್ತು.
ಪಹಲ್ಗಾಮ್, ಸಂಘರ್ಷ ಮತ್ತು ಕದನ ವಿರಾಮವನ್ನು ಅರ್ಥಪೂರ್ಣ ಚರ್ಚಾ ವಿಷಯವನ್ನಾಗಿ ಮಾಡುವ ಮೂಲಕ ಮಾತ್ರ ಪ್ರಜಾಪ್ರಭುತ್ವ ಭಾರತ ಮುಂದುವರಿಯಲು ಸಾಧ್ಯ. ಯುದ್ಧೋನ್ಮಾದವಾಗಲೀ, ಮಾಧ್ಯಮಗಳು ಹರಡಿರುವ ಕ್ಷಿಪಣಿ ಭೀತಿಗಳಗಲೀ ಭಾರತವನ್ನು ಮುಂದೊಯ್ಯಲಾರದು, ಜನಗಳ ವಿಚಾರಪೂರ್ಣ ಒಳಹೊಳಹುಗಳಿಗೆ ಮಾತ್ರವೇ ದೇಶ ಗಮನ ನೀಡಬೇಕಾಗಿದೆ.
(ಮೂಲ ಲೇಖನ ಕೃಪೆ: ದಿ ಫೆಡರಲ್, ಮೇ 13)